More

    ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 13 ವರ್ಷ ಪೂರೈಸಿದ ವಿರಾಟ್ ಕೊಹ್ಲಿ

    ನವದೆಹಲಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬುಧವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 13 ವರ್ಷ ಪೂರೈಸಿದರು. 2008ರ ಆಗಸ್ಟ್ 18ರಂದು ಶ್ರೀಲಂಕಾ ವಿರುದ್ಧ ಡಂಬುಲಾದಲ್ಲಿ ಏಕದಿನ ಪಂದ್ಯ ಆಡುವ ಮೂಲಕ 19 ವರ್ಷದ ಯುವ ಬ್ಯಾಟ್ಸ್‌ಮನ್ ಆಗಿ ಅವರು ಭಾರತ ತಂಡದ ಪರ ಪದಾರ್ಪಣೆ ಮಾಡಿದ್ದರು.

    ಮೊದಲ ಪಂದ್ಯದಲ್ಲಿ ಆರಂಭಿಕನಾಗಿ ಗೌತಮ್ ಗಂಭೀರ್ ಜತೆಗೆ ಇನಿಂಗ್ಸ್ ಆರಂಭಿಸಿದ್ದ ಕೊಹ್ಲಿ ಕೇವಲ 12 ರನ್ ಗಳಿಸಿದ್ದರು. ಭಾರತ ತಂಡ 146 ರನ್‌ಗೆ ಆಲೌಟ್ ಆಗಿದ್ದ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಸೋಲು ಕಂಡಿತ್ತು.

    ಇದನ್ನೂ ಓದಿ: ಲಾರ್ಡ್ಸ್ ಟೆಸ್ಟ್ ಪಂದ್ಯದ ಭರ್ಜರಿ ಗೆಲುವಿನ ಗುಟ್ಟು ಬಿಚ್ಚಿಟ್ಟ ವಿರಾಟ್ ಕೊಹ್ಲಿ

    ಕಳೆದ 13 ವರ್ಷಗಳಲ್ಲಿ ವಿಶ್ವದ ಸ್ಟಾರ್ ಬ್ಯಾಟ್ಸ್‌ಮನ್ ಆಗಿ ಬೆಳೆದಿರುವ ಕೊಹ್ಲಿ, ಹಲವಾರು ದಾಖಲೆಗಳ ಒಡೆಯರಾಗಿದ್ದಾರೆ. ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ರನ್ ಪ್ರವಾಹವನ್ನೇ ಹರಿಸಿದ್ದಾರೆ. 13 ವರ್ಷಗಳಲ್ಲಿ 438 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿ 22,937 ರನ್ ಸಿಡಿಸಿರುವ ಕೊಹ್ಲಿ ಸಾಧನೆಗೆ ಬಿಸಿಸಿಐ ಕೂಡ ಟ್ವಿಟರ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದೆ.

    2008ರಲ್ಲಿ 19 ವಯೋಮಿತಿ ತಂಡದ ನಾಯಕರಾಗಿ ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟಿದ್ದ ಕೊಹ್ಲಿ, 2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರೂ ಆಗಿದ್ದಾರೆ. ಆದರೆ ಕಳೆದ 7 ವರ್ಷಗಳಿಂದ ಭಾರತ ತಂಡದ ನಾಯಕರಾಗಿದ್ದರೂ ಒಂದೂ ಐಸಿಸಿ ಟ್ರೋಫಿ ಗೆಲ್ಲದ ಕೊರತೆ ಅವರನ್ನು ಕಾಡುತ್ತಿದೆ. ಇದಲ್ಲದೆ ಕಳೆದ 21 ತಿಂಗಳಿನಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಸಿಡಿಸದ ಬರವನ್ನೂ ಎದುರಿಸುತ್ತಿದ್ದಾರೆ. ಇದು ಸಚಿನ್ ತೆಂಡುಲ್ಕರ್ 100 ಶತಕಗಳ ದಾಖಲೆ ಮುರಿಯುವ ಧಾವಂತಕ್ಕೂ ಹಿನ್ನಡೆ ತಂದಿದೆ.

    ಕೊಹ್ಲಿ ಇದುವರೆಗೆ 94 ಟೆಸ್ಟ್, 254 ಏಕದಿನ ಮತ್ತು 90 ಟಿ20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 7609, 12169 ಮತ್ತು 3159 ರನ್ ಬಾರಿಸಿದ್ದಾರೆ. ಟೆಸ್ಟ್‌ನಲ್ಲಿ 27 ಮತ್ತು ಏಕದಿನದಲ್ಲಿ 43 ಸಹಿತ ಒಟ್ಟು 70 ಶತಕ ಸಿಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts