More

    ಲಾರ್ಡ್ಸ್ ಟೆಸ್ಟ್ ಪಂದ್ಯದ ಭರ್ಜರಿ ಗೆಲುವಿನ ಗುಟ್ಟು ಬಿಚ್ಚಿಟ್ಟ ವಿರಾಟ್ ಕೊಹ್ಲಿ

    ಲಂಡನ್: ಲಾರ್ಡ್ಸ್ ಟೆಸ್ಟ್ ಪಂದ್ಯದ 4ನೇ ದಿನದಾಟದಲ್ಲಿ ಸೋಲಿನ ಭೀತಿ ಎದುರಿಸಿದ್ದ ಭಾರತ ತಂಡ ಅಂತಿಮ ದಿನ ಅದನ್ನು ಗೆಲುವಾಗಿ ಪರಿವರ್ತಿಸುವ ಮೂಲಕ ಅಮೋಘ ಸಾಧನೆ ತೋರಿತು. ಇಂಗ್ಲೆಂಡ್ ಆಟಗಾರರ ವಿರುದ್ಧ ಮೈದಾನದಲ್ಲಿ ನಡೆದ ಮಾತಿನ ಚಕಮಕಿಗಳು ಈ ಗೆಲುವಿಗೆ ಪ್ರೇರಣೆ ತುಂಬಿದವು ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

    ‘ಇಡೀ ತಂಡದ ಬಗ್ಗೆ ಹೆಮ್ಮೆಯಾಗುತ್ತಿದೆ. ನಾವು ನಮ್ಮ ಯೋಜನೆಯಂತೆಯೇ ಆಡಿದೆವು. 2ನೇ ಇನಿಂಗ್ಸ್‌ನಲ್ಲಿ ನಮ್ಮ ಆಟ ಅಮೋಘವಾಗಿತ್ತು. ಜಸ್‌ಪ್ರೀತ್ (ಬುಮ್ರಾ) ಮತ್ತು ಶಮಿ ಅದ್ಭುತ ಆಟವಾಡಿದರು. ಇಂಗ್ಲೆಂಡ್ ತಂಡವನ್ನು 60 ಓವರ್‌ಗಳಲ್ಲಿ ಕಟ್ಟಿಹಾಕುವ ವಿಶ್ವಾಸ ನಮಗಿತ್ತು. 2ನೇ ಇನಿಂಗ್ಸ್ ವೇಳೆ ಮೈದಾನದಲ್ಲಿ ನಡೆದ ಮಾತಿನ ಚಕಮಕಿಗಳೂ ನಮಗೆ ನೆರವಾದವು’ ಎಂದು ಕೊಹ್ಲಿ 151 ರನ್ ಗೆಲುವಿನ ಬಳಿಕ ನುಡಿದರು. ಅಂತಿಮ ದಿನದ ಬಾಕಿ ಉಳಿದ 60 ಓವರ್‌ಗಳಲ್ಲಿ 272 ರನ್ ಗಳಿಸುವ ಸವಾಲಿಗೆ ಪ್ರತಿಯಾಗಿ ಇಂಗ್ಲೆಂಡ್ ತಂಡ 51.5 ಓವರ್‌ಗಳಲ್ಲಿ 120 ರನ್‌ಗೆ ಆಲೌಟ್ ಆಗಿತ್ತು.

    ಇದನ್ನೂ ಓದಿ: ಲಾರ್ಡ್ಸ್‌ನಲ್ಲಿ ಕಪಿಲ್ ದೇವ್ ದಾಖಲೆ ಮುರಿದ ಮೊಹಮದ್ ಸಿರಾಜ್

    ಪಂದ್ಯದ ವೇಳೆ ಉಭಯ ತಂಡಗಳ ಆಟಗಾರರ ನಡುವೆ ಹಲವು ಬಾರಿ ಮಾತಿನ ಚಕಮಕಿ ಏರ್ಪಟ್ಟಿತ್ತು. 3ನೇ ದಿನದಾಟದಲ್ಲಿ ಬುಮ್ರಾರನ್ನು ಆಂಡರ್‌ಸನ್ ನಿಂದಿಸಿದ್ದರೆ, 4ನೇ ದಿನದಾಟದಲ್ಲಿ ಆಂಡರ್‌ಸನ್‌ರನ್ನು ಕೊಹ್ಲಿ ನಿಂದಿಸಿದ್ದರು. ಅಂತಿಮ ದಿನ ಬುಮ್ರಾ-ಬಟ್ಲರ್ ನಡುವೆ ವಾಗ್ವಾದ ಏರ್ಪಟ್ಟಿತ್ತು. ಬಳಿಕ ರಾಬಿನ್‌ಸನ್‌ರನ್ನು ಕೊಹ್ಲಿ ಸ್ಲೆಡ್ಜ್ ಮಾಡಿದ್ದರು.

    ಸ್ಲೆಡ್ಜ್‌ಗೆ ತಿರುಗೇಟು ನೀಡುತ್ತೇವೆ
    ಎದುರಾಳಿ ಆಟಗಾರರು ನಮ್ಮ ಒಬ್ಬ ಆಟಗಾರನನ್ನು ಸ್ಲೆಡ್ಜ್ ಮಾಡಿದರೆ, ತಂಡದ ಉಳಿದೆಲ್ಲ ಆಟಗಾರರು ಒಟ್ಟಾಗಿ ತಿರುಗೇಟು ನೀಡುತ್ತೇವೆ. ಲಾರ್ಡ್ಸ್‌ನಲ್ಲಿ ಅದುವೇ ನಡೆಯಿತು ಎಂದು ಕನ್ನಡಿಗ ಕೆಎಲ್ ರಾಹುಲ್ ಹೇಳಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದ ರಾಹುಲ್ ಪಂದ್ಯಶ್ರೇಷ್ಠ ಪ್ರಶಸ್ತಿಯ ಗೌರವಕ್ಕೂ ಪಾತ್ರರಾದರು. ‘ತಂಡ ಆಟಗಾರರ ನಡುವೆ ಉತ್ತಮ ಬಾಂಧವ್ಯವಿದೆ. ಹೀಗಾಗಿ ಒಬ್ಬ ಆಟಗಾರನನ್ನು ನಿಂದಿಸಿದರೆ, ಉಳಿದ 10 ಆಟಗಾರರು ತಿರುಗೇಟು ನೀಡಲು ಮುಂದಾಗುತ್ತಾರೆ. ನಮ್ಮ ಆಟಗಾರರು ಎದುರಾಳಿಗೆ ಮಾತಿನ ಚಾಟಿ ಬೀಸಲು ಯಾವುದೇ ಹಿಂದೇಟು ಹಾಕುವುದಿಲ್ಲ’ ಎಂದು ರಾಹುಲ್ ಹೇಳಿದ್ದಾರೆ.

    ಎಡವಟ್ಟು ಒಪ್ಪಿಕೊಂಡ ರೂಟ್
    ಭಾರತ ತಂಡದ ಕೆಳ ಕ್ರಮಾಂಕವನ್ನು ಕೀಳಂದಾಜಿಸುವ ಮೂಲಕ ಎಡವಟ್ಟು ಮಾಡಿಕೊಂಡೆವು ಎಂದು ಇಂಗ್ಲೆಂಡ್ ನಾಯಕ ಜೋ ರೂಟ್ ಒಪ್ಪಿಕೊಂಡಿದ್ದಾರೆ. ಈ ಮೂಲಕ ಶಮಿ-ಬುಮ್ರಾ ನಡುವಿನ ಅಮೋಘ ಜತೆಯಾಟದಿಂದ ತಮ್ಮ ತಂಡಕ್ಕೆ ಸೋಲಾಯಿತು ಎಂದು ರೂಟ್ ಅಭಿಪ್ರಾಯಪಟ್ಟಿದ್ದಾರೆ. ‘ನಮ್ಮ ಕಾರ್ಯತಂತ್ರಗಳಲ್ಲಿ ಎಡವಟ್ಟಾಯಿತು. ನಿರ್ಣಾಯಕ ಹಂತದಲ್ಲಿ ಬಂದ ಶಮಿ-ಬುಮ್ರಾ ಜತೆಯಾಟ ಪಂದ್ಯವನ್ನು ನಮ್ಮಿಂದ ಕಸಿಯಿತು. ಭಾರತ ತಂಡದ 2ನೇ ಇನಿಂಗ್ಸ್‌ಗೆ ಬೇಗನೆ ಕಡಿವಾಣ ಹಾಕುವಲ್ಲಿ ಎಡವಿದೆವು’ ಎಂದು ರೂಟ್ ಬೇಸರಿಸಿದರು.

    ಈ ಬಾರಿ ರಕ್ಷಾ ಬಂಧನಕ್ಕೆ ಪ್ರಧಾನಿ ಮೋದಿ ಬಯಸಿರುವ ಉಡುಗೊರೆ ಏನು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts