ಸಚಿನ್​ ತೆಂಡುಲ್ಕರ್ ಹೆಸರಿನಲ್ಲಿದ್ದ ಮತ್ತೊಂದು ದಾಖಲೆ ಮುರಿದ ವಿರಾಟ್ ಕೊಹ್ಲಿ

Virat Sachin
Published on

ಮುಂಬೈ: ಕ್ರಿಕೆಟ್​ ಲೋಕದ ರನ್​ ಮೆಷಿನ್​ ಎಂದೇ ಖ್ಯಾತಿ ಪಡೆದಿರುವ ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ, ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ಗುರುವಾರ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಕ್ರಿಕೆಟ್​ ಪಂದ್ಯದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ.

2023ರ ಕ್ಯಾಲೆಂಡರ್​ ವರ್ಷದಲ್ಲಿ ಏಕದಿನ ಕ್ರಿಕೆಟ್​ನಲ್ಲಿ 1 ಸಾವಿರ ರನ್ ಪೂರೈಸುವ ಮೂಲಕ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​ ಹೆಸರಿನಲ್ಲಿದ್ದ ಸಾರ್ವಕಾಲಿಕ ಶೇಷ್ಠ ದಾಖಲೆಯನ್ನು ಮುರಿಯುವಲ್ಲಿ ವಿರಾಟ್​ ಕೊಹ್ಲಿ ಯಶಸ್ವಿಯಾಗಿದ್ದಾರೆ.

ಗುರುವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಈ ದಾಖಲೆ ಬರೆದರು. ಕ್ಯಾಲೆಂಡರ್‌ ವರ್ಷಗಳಲ್ಲಿ ಅತಿ ಹೆಚ್ಚು ಬಾರಿ 1000 ಒಡಿಐ ರನ್‌ ಗಳಿಸಿದ ಮೊದಲ ಬ್ಯಾಟ್ಸ್‌ಮನ್‌ ಎಂಬ ಸಾಧನೆ ಮಾಡುವ ಮೂಲಕ ಕಿಂಗ್‌ ಕೊಹ್ಲಿ, ಸಚಿನ್‌ ತೆಂಡುಲ್ಕರ್‌ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ.

ವಿರಾಟ್‌ ಕೊಹ್ಲಿ ಎಂಟು ಕ್ಯಾಲೆಂಡರ್‌ ವರ್ಷಗಳಲ್ಲಿ (2011, 2012, 2013, 2014, 2017, 2018, 2019 ಹಾಗೂ 2023) 1000ಕ್ಕೂ ಹೆಚ್ಚು ರನ್‌ಗಳನ್ನು ಏಕದಿನ ಕ್ರಿಕಟ್​ನಲ್ಲಿ ದಾಖಲಿಸಿದ್ದಾರೆ. ಸಚಿನ್‌ ತೆಂಡೂಲ್ಕರ್ ಅವರು ಏಳು ಕ್ಯಾಲೆಂಡರ್‌ ವರ್ಷಗಳಲ್ಲಿ 1000ಕ್ಕೂ (1994, 1996, 1997, 1998, 2000, 2003 ಹಾಗೂ 2007)ರ ವರ್ಷಗಳಲ್ಲಿ ಏಕದಿನ ಕ್ರಿಕೆಟ್​ನಲ್ಲಿ 1000 ರನ್‌ಗಳನ್ನು ದಾಖಲಿಸಿದ್ದರು. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ವಿರಾಟ್​ ಕೊಹ್ಲಿ 34 ರನ್​ ಗಳಿಸಿದ ವೇಳೆ ಈ ಸಾಧನೆ ಮಾಡಿದ್ದಾರೆ.

ಒಟ್ಟಾರೆ ಮೂರನೇಯವರು

ಶುಭಮನ್ ಗಿಲ್‌ ಹಾಗೂ ರೋಹಿತ್‌ ಶರ್ಮಾ ಬಳಿಕ ಕೊಹ್ಲಿ ಪ್ರಸಕ್ತ ವರ್ಷದಲ್ಲಿ 1000 ಏಕದಿನ ರನ್‌ ಗಳಿಸಿದ ಮೂರನೇ ಭಾರತೀಯ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಇದರ ಜೊತೆಗೆ ಒಟ್ಟಾರೆ ಪ್ರಸಕ್ತ ವರ್ಷದಲ್ಲಿ ಈ ಸಾಧನೆ ಮಾಡಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ ನಾಲ್ಕನೇ ಬ್ಯಾಟರ್‌ ಆಗಿದ್ದಾರೆ. ಗಿಲ್‌ ಮತ್ತು ರೋಹಿತ್‌ ಜೊತೆಗೆ ಶ್ರೀಲಂಕಾದ ಪಾತುಮ್‌ ನಿಸಾಂಕ ಏಕದಿನ ಕ್ರಿಕೆಟ್​ನಲ್ಲಿ ಈ ವರ್ಷ 1000 ಒಡಿಐ ರನ್‌ಗಳನ್ನು ಗಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net