More

    ಕೆಲಸ ರಸ್ತೆಯದು ಸಮಸ್ಯೆ ನೀರಿನದು!, ಮೂರು ತಿಂಗಳಿಂದ ಜೀವಜಲವಿಲ್ಲದೆ ಸೊರಗಿದ ಗ್ರಾಮಸ್ಥರು

    ಅನ್ಸಾರ್ ಇನೋಳಿ ಉಳ್ಳಾಲ

    ರಸ್ತೆ ಸಮಸ್ಯೆಗೆ ಮುಕ್ತಿ ಬಯಸಿದ್ದ ಜನ, ಅದಕ್ಕಾಗಿ ಸಾಕಷ್ಟು ಮನವಿ ಸಲ್ಲಿಸಿದ ಬಳಿಕ ತಮ್ಮ ಸಮಸ್ಯೆಗೆ ಪರಿಹಾರ ಸಿಗುವ ಖುಷಿಯಲ್ಲಿದ್ದರೂ, ಮೂರು ತಿಂಗಳಿಂದ ಕುಡಿಯಲು ನೀರಿಲ್ಲದೆ ಪರಿತಪಿಸುತ್ತಿದ್ದಾರೆ.

    ಇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಕೆಂಜಿಲ, ಸಜಿಪನಡು ಮತ್ತು ಸುತ್ತಮುತ್ತಲಿನ ಪ್ರದೇಶದ ಜನ ಹಲವಾರು ವರ್ಷಗಳಿಂದ ರಸ್ತೆ ನಿರ್ಮಾಣಕ್ಕಾಗಿ ಜನಪ್ರತಿನಿಧಿಗಳಲ್ಲಿ ಹಲವು ಬಾರಿ ಮನವಿ ಮಾಡಿಕೊಂಡಿದ್ದರು. ಕೊನೆಗೂ ಸಂಸದರ ವಿಶೇಷ ಅನುದಾನ ಲಭಿಸಿದ್ದು, ಮೂರು ತಿಂಗಳ ಹಿಂದೆ ರಸ್ತೆ ಅಭಿವೃದ್ಧಿ ಕೆಲಸ ಆರಂಭಿಸಲಾಗಿತ್ತು. ಕಾಮಗಾರಿ ಹಿನ್ನೆಲೆಯಲ್ಲಿ ರಸ್ತೆ ಬದಿ ಹಾಕಲಾಗಿದ್ದ ನೀರಿನ ಪೈಪ್‌ಗಳನ್ನು ಕಡಿತಗೊಳಿಸಿದ್ದು, ವಾರದ ಮಟ್ಟಿಗೆ ಮಾತ್ರ ಸಂಪರ್ಕ ಕಡಿತ ಎಂದು ಇರಾ ಗ್ರಾಮ ಪಂಚಾಯಿತಿಯಿಂದ ತಿಳಿಸಲಾಗಿತ್ತು.

    ಆದರೆ ರಸ್ತೆ ಕೆಲಸ ಕುಂಟುತ್ತ ಸಾಗುತ್ತಿದ್ದು, ಪಂಚಾಯಿತಿ ನೀಡಿದ್ದ ವಾರದ ಭರವಸೆ ಈಡೇರಿಲ್ಲ. ಕೆಂಜಿಲ, ಸಜಿಪನಡು ಮೂಲಕ ಇರಾ ಕುಂಡಾವು ಸಂಪರ್ಕಿಸುವ ಈ ರಸ್ತೆ ಆರು ಕಿ.ಮೀ. ಇದ್ದು, ಇದುವರೆಗೆ ಕೇವಲ ಎರಡು ಕಿ.ಮೀ. ತನಕವಷ್ಟೇ ಡಾಂಬರು ಹಾಕಲಾಗಿದೆ. ಕುಂಟುತ್ತ ಸಾಗುತ್ತಿರುವ ಕೆಲಸದಿಂದ ಮೂರು ತಿಂಗಳಿಂದ ಪೈಪ್‌ಲೈನ್ ಕಡಿತಗೊಂಡಿದ್ದರಿಂದ ಪೈಪ್ ನೀರನ್ನೇ ನಂಬಿದ್ದ ಜನ ನೀರಿಗಾಗಿ ಪರಿತಪಿಸುವಂತಾಗಿದೆ. ಬಿರು ಬಿಸಿಲಿನಿಂದ ಕೆಲವು ಬಾವಿಗಳಲ್ಲಿ ನೀರು ಬತ್ತುತ್ತಿರುವುದರಿಂದ ಸಮಸ್ಯೆ ಉಲ್ಬಣಗೊಂಡಿದೆ.

    ನೀರಿನ ವಿಷಯದಲ್ಲಿ ಸ್ಥಳೀಯರು ಅಧಿಕಾರಿಗಳಿಗೆ ಕರೆ ಮಾಡಿದರೆ, ಟ್ಯಾಂಕರ್‌ನಲ್ಲಿ ನೀರಿನ ವ್ಯವಸ್ಥೆ ಮಾಡಿದ್ದೇವೆ ಎನ್ನುತ್ತಾರೆ. ಆದರೆ ಟ್ಯಾಂಕರ್ ನೀರು ಮುಖ್ಯರಸ್ತೆಯಲ್ಲಿ ಯಾವಾಗ ಬರುತ್ತದೆ, ಹೋಗುತ್ತದೆ ಎಂದು ಗೊತ್ತೇ ಆಗುವುದಿಲ್ಲ ಎನ್ನುತ್ತಾರೆ ಸ್ಥಳೀಯರು. ಮುಖ್ಯರಸ್ತೆಯಲ್ಲಿ ಬರುವ ಟ್ಯಾಂಕರ್‌ಗೆ ಸಮಯವೂ ಇರುವುದಿಲ್ಲ, ಟ್ಯಾಂಕರ್ ಬಂದಿರುವುದು ಗೊತ್ತಾದರೂ ದೂರದ ಏರಿಳಿತ ಇರುವ ಪ್ರದೇಶದಿಂದ ಟ್ಯಾಂಕರ್ ಬಳಿ ಬಂದರೂ ಒಂದೆರೆಡು ತಂಬಿಗೆ ನೀರು ಮಾತ್ರ ಸಿಗುತ್ತದೆ. ಈ ವಿಚಾರದಲ್ಲಿ ಸ್ಥಳೀಯ ಪ್ರತಿನಿಧಿಗಳೂ ಮಾತನಾಡುತ್ತಿಲ್ಲ.

    ರಸ್ತೆ ಕೆಲಸ ನಡೆಯುತ್ತಿರುವುದರಿಂದ ನೀರಿನ ಪೈಪ್ ತೆಗೆದಿದ್ದು, ಸ್ಥಳೀಯರಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಮತ್ತೆ ಪೈಪ್ ಜೋಡಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಆ ಕೆಲಸ ಅವರು ಮಾಡುತ್ತಾರೆ.

    ಸುಶೀಲಾ
    ಗ್ರಾಪಂ ಅಭಿವೃದ್ಧಿ ಅಧಿಕಾರಿ

    ಕಾಮಗಾರಿ ಸಂದರ್ಭ ರಸ್ತೆ ಬದಿ ಜಾಗವಿಲ್ಲದ ಕಾರಣ ಪೈಪ್ ತೆಗೆಯಲಾಗಿತ್ತು, ಈ ಸಂದರ್ಭ ಸ್ಥಳೀಯರಿಗೆ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಆದರೆ ಕೆಲವು ಮನೆಗಳಿಗೆ ಟ್ಯಾಂಕರ್ ಹೋಗದ ಕಾರಣ ಮತ್ತು ಕೆಲವೊಮ್ಮೆ ಟ್ಯಾಂಕರ್ ಕೈಕೊಟ್ಟು ಸಮಸ್ಯೆಯಾಗಿದೆ. ಒಂದು ವಾರದಲ್ಲಿ ರಸ್ತೆ ಕೆಲಸ ಮುಗಿದು ನೀರು, ವಿದ್ಯುತ್ ಸಮಸ್ಯೆಯೂ ಇತ್ಯರ್ಥಗೊಳ್ಳಲಿದೆ.

    ಸುಧಾಕರ್ ಕೆ.ಟಿ.
    ಪಂಚಾಯಿತಿ ಸದಸ್ಯ

    ರಸ್ತೆ ಕಾಮಗಾರಿ ಮುಗಿಯಲು ಎಷ್ಟು ಸಮಯ ಬೇಕಾಗುತ್ತದೆ ಎನ್ನುವುದು ಪಂಚಾಯಿತಿ ಅಧಿಕಾರಿಗಳು ತಿಳಿದುಕೊಳ್ಳಬೇಕು. ಅದು ಬಿಟ್ಟು ವಾರದ ಮಟ್ಟಿಗೆಂದು ಪೈಪ್ ಕಡಿತಗೊಳಿಸಿ ಮೂರು ತಿಂಗಳಿಂದ ನೀರಿಲ್ಲದಂತೆ ಮಾಡಿರುವುದು ಸರಿಯಲ್ಲ. ಒಂದು ವೇಳೆ ಗುತ್ತಿಗೆದಾರ ಸುಳ್ಳು ಮಾಹಿತಿ ನೀಡಿದ್ದರೆ ಅವರ ವಿರುದ್ಧ ಅಧಿಕಾರಿ ಕ್ರಮ ಕೈಗೊಳ್ಳಲಿ, ಟ್ಯಾಂಕರ್ ನೀರು ಎಷ್ಟು ಮಂದಿಗೆ ಸಿಗುತ್ತಿದೆ ಎನ್ನುವುದನ್ನು ಅಧಿಕಾರಿ ಪರಿಶೀಲಿಸಲಿ.

    ದಿತೇಶ್ ಪೂಜಾರಿ
    ಸ್ಥಳೀಯ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts