More

    ಕಾಡಂಚಿನ ಗ್ರಾಮಗಳಲ್ಲಿ ಹೆಚ್ಚಿದ ಆನೆ ದಾಳಿ:2 ಹಿಂಡುಗಳಲ್ಲಿ ಬೀಡುಬಿಟ್ಟಿರುವ ಆನೆಗಳು

    ಹಾರೋಹಳ್ಳಿ: ಕನಕಪುರ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಇತ್ತೀಚೆಗೆ ಆನೆಗಳ ಹಾವಳಿ ಹೆಚ್ಚಿದೆ. ರೈತರ ಹೊಲ,ಗದ್ದೆ ಹಾಗೂ ತೋಟಗಳಿಗೆ ನುಗ್ಗಿ ಬೆಳೆ ಹಾಗೂ ಕೊಳವೆ ಬಾವಿಗಳನ್ನು ನಾಶ ಮಾಡುತ್ತಿವೆ.

    ರಾಗಿ, ಭತ್ತ, ಜೋಳ, ತೊಗರಿ, ತೆಂಗು, ಬಾಳೆ ಸೇರಿ ಹಲವು ಬೆಳೆಗಳು ನಾಶವಾಗುತ್ತಿವೆ. ಉಯ್ಯಂಬಳ್ಳಿ ಹೋಬಳಿಯ ಯಡಮಾರನಹಳ್ಳಿ, ಮರಳೆ, ಸಾತನೂರು ಹೋಬಳಿಯ ಸಾಸಲಾಪುರ, ಭೂಹಳ್ಳಿ, ಅಚ್ಚಲು, ವಡ್ಡೇಗೌಡನದೊಡ್ಡಿ ಹಾಗೂ ಕನಕಪುರ ತಾಲೂಕಿನ ಕೂನೂರು, ಹುಲಿಬೆಲೆ, ಮರಳವಾಡಿ ಹೋಬಳಿಯ ತಟ್ಟೆಕೆರೆ ಮತ್ತಿತರ ಗ್ರಾಮಗಳಲ್ಲಿ ಆನೆಗಳ ಹಿಂಡು ಬೀಡುಬಿಟ್ಟು ಜಮೀನಿಗೆ ನುಗ್ಗಿ ಬೆಳೆ ನಾಶ ಮಾಡಿವೆ.

    ಫಸಲು ಬಂದಿರುವ ರೈತರು ಇಡೀ ರಾತ್ರಿ ಬೆಳೆ ಕಾಯುತ್ತಿದ್ದಾರೆ. ತಮಟೆ ಬಾರಿಸುವುದು, ಪಟಾಕಿ ಸಿಡಿಸಿ ಆನೆಗಳನ್ನು ಬೆದರಿಸಿ ಅಟ್ಟುತ್ತಿದ್ದಾರೆ. ಬೆದರಿಕೆಯಿಂದ ತೆರಳುವ ಆನೆಗಳು ಒಂದೆರಡು ದಿನ ಬಿಟ್ಟು ಮತ್ತೆ ಪ್ರತ್ಯಕ್ಷವಾಗುತ್ತಿವೆ.

    ಆನೆಗಳ ಹಾವಳಿ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಹಾನಿಗೊಳಗಾದ ಜಮೀನುಗಳಿಗೂ ಅರಣ್ಯ ಇಲಾಖೆ ಅಧಿಕಾರಿಗಳು ಬರುವುದಿಲ್ಲ. ಆನೆ ಹಾನಿ ಮಾಡಿರುವ ಬೆಳೆಗಳ ಫೋಟೋವನ್ನು ನೀವೇ ತಂದು ಕೊಡಿ ಪರಿಹಾರ ನೀಡುತ್ತೇವೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಹೀಗಾಗಿ ಕಾಡಂಚಿನ ಗ್ರಾಮಗಳ ರೈತರಿಗೆ ಅರಣ್ಯ ಇಲಾಖೆ ಅಧಿಕಾರಿಗಳ ಬಗ್ಗೆ ಆಕ್ರೋಶ ಇದೆ. ಆನೆ ದಾಳಿ ಮಾಡಿ ಬೆಳೆ ನಾಶವಾದ ಜಮೀನುಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಪರಿಹಾರ ಕೊಡಿಸಬೇಕು ಎಂಬುದು ರೈತರ ಆಗ್ರಹವಾಗಿದೆ.

    ಆನೆಗಳ ಹಾವಳಿ ಅತಿಯಾಗಿದೆ. ಬೆಳೆ ನಾಶ ಮಾಡಿದ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಸರಿಯಾಗಿ ಸ್ಪಂದಿಸುವುದಿಲ್ಲ.

    | ಜಯರಾಮರಾಜೇ ಅರಸ್​ರೈತ

    ಕನಕಪುರ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ 2 ಹಿಂಡುಗಳಲ್ಲಿ 11 ಆನೆಗಳು ಬೀಡುಬಿಟ್ಟಿವೆ. ಇವುಗಳಲ್ಲಿ ಒಂದು ಹಿಂಡನ್ನು ಕಬ್ಬಾಳು ಅರಣ್ಯಕ್ಕೆ ಅಟ್ಟಲಾಗಿದೆ. ಇನ್ನೊಂದು ಹಿಂಡು ಕೂನೂರು ಬಳಿ ಇದೆ. ಇಲಾಖೆ ರೈತರ ಪರವಾಗಿ ಇದೆ.

    | ಕೃಷ್ಣಅರಣ್ಯಾಧಿಕಾರಿ, ಸಾತನೂರು ಉಪವಲಯ

    ಜಯರಾಮ ನಾಯಕ್ ಎಲ್.ಜಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts