More

    ಸಿಎಂ ಅವರೇ ಇಲ್ನೋಡಿ-ನಮಗೊಂದು ಸೇತುವೆ ಮಾಡ್ಕೊಡಿ

    ಕಾರವಾರ: “ಎರಡು ವರ್ಷದ ಹಿಂದಿನ ಪ್ರವಾಹದಲ್ಲಿ ನಮ್ಮೂರ ಸೇತುವೆ ಕೊಚ್ಚಿ ಹೋಯ್ತು, ಆಗಿನ ಸಿಎಂ ಬಸವರಾಜ ಬೊಮ್ಮಾಯಿ ಬಂದು ನೋಡಿ ಹೋದ್ರು, ನಂತರ ನೀವೂ ಬಂದು ನೋಡಿಕೊಂಡು ಹೋಗಿದ್ರಿ, ಆದರೆ, ಸೇತುವೆ ಮಾತ್ರ ಮಂಜೂರಾಗಿಲ್ಲ. ಈಗ ನೀವೇ ಸಿಎಂ ಆಗಿದ್ದೀರಿ ನಮಗೊಂದು ಸೇತುವೆ ಮಾಡಿಕೊಡಿ”.

    ಗಂಗಾವಳಿ ನದಿಯ ಎಡದಂಡೆಯ ಹತ್ತಾರು ಗ್ರಾಮಗಳ ಜನ ಸಿಎಂ ಸಿದ್ದರಾಮಯ್ಯ ಅವರಿಗೆ ಈ ರೀತಿ ಮನವಿ ಮಾಡುತ್ತಿದ್ದಾರೆ. 2021 ಜುಲೈ 23 ರಂದು ಉಂಟಾದ ಪ್ರವಾಹಕ್ಕೆ ಗಂಗಾವಳಿ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಗುಳ್ಳಾಪುರ ಸೇತುವೆ ಕೊಚ್ಚಿ ಹೋಗಿದೆ.

    ಇದರಿಂದ ಅಂಕೋಲಾ ತಾಲೂಕಿನ ಗಂಗಾವಳಿ ನದಿಯಾಚೆಗಿನ ಡೋಂಗ್ರಿ ಗ್ರಾಪಂ ವ್ಯಾಪ್ತಿಯ ಕೈಗಡಿ, ಕೊಂಕಿ, ಶೇವಕಾರು, ಹೆಗ್ಗಾರ, ಕಲ್ಲೇಶ್ವರ, ಕಮ್ಮಾಣಿ ಹೀಗೆ ಹತ್ತಾರು ಗ್ರಾಮಗಳು ಮಳೆಗಾಲದಲ್ಲಿ ದ್ವೀಪವಾಗುತ್ತಿವೆ.

    ತುರ್ತು ಅನಾರೋಗ್ಯವಾಗಿ ಆಸ್ಪತ್ರೆಗೆ ಹೋಗಬೇಕು ಎಂದರೂ ಇವರಿಗೆ ಸುಲಭದ ರಸ್ತೆ ಇಲ್ಲ, ದೋಣಿ ಏರಬೇಕು. ಜೋರು ಮಳೆಯಾದರೆ, ನದಿ ರಭಸದಲ್ಲಿ ಹರಿಯುವುದರಿಂದ ದೋಣಿ ಹಾಕುವ ಪರಿಸ್ಥಿತಿಯೂ ಇರುವುದಿಲ್ಲ.

    ಗುಳ್ಳಾಪುರ ಬಳಿ ಸಿಮೆಂಟ್ ಪೈಪ್, ಮರಳಿನ ಚೀಲ ಹಾಕಿ ತಾತ್ಕಾಲಿಕ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆಯಾದರೂ, ಸಣ್ಣ ಮಳೆ ಬಂದರೂ ಆ ಸೇತುವೆ ಮೇಲೆ ನೀರು ಹೋಗುತ್ತದೆ. ಪ್ರವಾಹ ಬಂದರೆ ಕೊಚ್ಚಿ ಹೋಗುತ್ತದೆ.

    ಇದನ್ನೂ ಓದಿ:ಸಂಘಟನೆ ಬಲಗೊಂಡರೆ ಮಾತ್ರ ದೇಶ ಬಲಿಷ್ಠ

    ಕಳೆದ ಬಾರಿ ತಾತ್ಕಾಲಿಕ ಸೇತುವೆಯ ಮೇಲೆ ಮಳೆಗಾಲದಲ್ಲಿ ತೆರಳಿದ ಲಾರಿಯೊಂದು ಕೊಚ್ಚಿ ಹೋಗುವ ವಿಡಿಯೋ ವೈರಲ್ ಆಗಿತ್ತು. ದೋಣಿ ಅಪಾಯಕ್ಕೆ ಸಿಲುಕಿದ ಘಟನೆಯೂ ಇದೇ ಭಾಗದಲ್ನಲಿ ಡೆದಿತ್ತು.

    ಹಾಗಾಗಿ ಮಳೆಗಾಲದ ಸುಮಾರು ಮೂರು ತಿಂಗಳು ಗ್ರಾಮಸ್ಥರು ತೀವ್ರ ಸಂಕಷ್ಟ ಅನುಭವಿಸುತ್ತಾರೆ. ಕೆಲವು ಬಾರಿ ಗ್ಯಾಸ್ ಸಿಲಿಂಡರ್ ಸಹ ಊರಿಗೆ ತಲುಪುವುದಿಲ್ಲ. ರೇಶನ್ ಸಿಗುವುದಿಲ್ಲ ಅಂಥ ಪರಿಸ್ಥಿತಿ ನಿರ್ಮಾಣವಾಗುತ್ತದೆ. ರಾತ್ರಿ ವೇಳೆ ಅನಾರೋಗ್ಯವಾದರೂ ನಮ್ಮ ಪರಿಸ್ಥಿತಿ ಅಯೋಮಯ' ಎನ್ನುತ್ತಾರೆ ಗ್ರಾಮಸ್ಥ ವೆಂಕಟರಮಣ ನಾರಾಯಣ ಭಟ್ಟ.

    “ಪಣಸಗುಳಿ ಎಂಬಲ್ಲಿ ಸಣ್ಣ ಬ್ರಿಜ್ ಮೂಲಕ ವಾಹನ ದಾಟಿಸಬಹುದು. ಆದರೆ, ಸಣ್ಣ ಮಳೆ ಬಂದರೂ ಆ ಬ್ರಿಜ್ ಮೇಲೆ ನೀರು ಹೋಗುತ್ತದೆ. ಎಷ್ಟೋ ಬಾರಿ ನಾವು ವ್ಯವಹಾರಕ್ಕಾಗಿ ಯಲ್ಲಾಪುರ ಅಂಥವಾ ಕಚೇರಿ ಕೆಲಸಕ್ಕಾಗಿ ತಾಲೂಕು ಕೇಂದ್ರ ಅಂಕೋಲಾಕ್ಕೆ ತೆರಳಿದರೆ ವಾಪಸ್ ಬರುವ ಹೊತ್ತಿಗೆ ನೀರು ತುಂಬಿರುತ್ತದೆ. ಊರು ತಲುಪುವ ಭರವಸೆ ಇರುವುದಿಲ್ಲ’ ಎಂದು ಗ್ರಾಮಸ್ಥ ಜಯಪ್ರಕಾಶ ಗಾಂವಕರ್ ತಮ್ಮ ಗೋಳು ತೋಡಿಕೊಳ್ಳುತ್ತಾರೆ.

    ಹೊಸ ಸೇತುವೆಯೂ ದೂರ:

    ಇದೇ ಗಂಗಾವಳಿ ನದಿಗೆ ಗುಳ್ಳಾಪುರದಿಂದ ಸುಮಾರು 18 ಕಿಮೀ ಕೆಳಗೆ ರಾಮನಗುಳಿ ಬಳಿ ಇದ್ದ ತೂಗು ಸೇತುವೆ 2019 ರಲ್ಲಿ ಕೊಚ್ಚಿ ಹೋಗಿತ್ತು.
    ಆಗ ಶಾಸಕಿಯಾಗಿದ್ದ ರೂಪಾಲಿ ನಾಯ್ಕ ಪ್ರಯತ್ನದಿಂದ ರಾಮನಗುಳಿ ಬಳಿ ಸುಮಾರು 23 ಕೋಟಿ ರೂ. ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣವಾಗುತ್ತಿದೆ.

    ಆದರೆ, ಅದು ವಾಹನಗಳ ಓಡಾಟಕ್ಕೆ ತೆರೆದುಕೊಳ್ಳಲು ಇನ್ನೂ ಕೆಲ ದಿನ ಬೇಕು. ಒಮ್ಮೆ ತೆರೆದುಕೊಂಡರೂ ಗ್ರಾಮಸ್ಥರು ಸುಮಾರು ಹತ್ತಾರು ಕಿಮೀ ಸುತ್ತಬೇಕು. ಇದರಿಂದ ಗುಳ್ಳಾಪುರದಲ್ಲಿ ಪ್ರತ್ಯೇಕ ಸೇತುವೆ ನಿರ್ಮಿಸಿಕೊಡಬೇಕು ಎಂಬುದು ಗ್ರಾಮಸ್ಥರ ಆಗ್ರಹ.

    ಮನವಿ:
    ಈ ಬಜೆಟ್‌ನಲ್ಲಿ ನಮಗೆ ಸೇತುವೆ ಮಂಜೂರು ಮಾಡಿಕೊಡಬೇಕು ಎಂದು ಗಂಗಾವಳಿ ಸೇತುವೆ ಪುನರ್ನಿರ್ಮಾಣ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಮಂಗಳವಾರ ಮನವಿ ಮಾಡಿದ್ದಾರೆ. ನಾವು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ, ಕಾರವಾರ ಶಾಸಕ ಸತೀಶ ಸೈಲ್ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದೇವೆ. ಶಿರಸಿ ಶಾಸಕರಿಗೂ ಮನವಿ ಮಾಡುವವರಿದ್ದೇವೆ ಎಂದು ಹೋರಾಟ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.

    ಮೂರು ತಾಲೂಕಿಗೆ ಅನುಕೂಲ:
    ಸೇತುವೆ ಇರುವ ಜಾಗ ಯಲ್ಲಾಪುರ ತಾಲೂಕಿಗೆ ಬರುತ್ತದೆ. ಸೇತುವೆಯಾಚಿನ ಊರು ಅಂಕೋಲಾ ತಾಲೂಕಿಗೆ ಬರುತ್ತದೆ. ಅಲ್ಲದೆ, ಶಿರಸಿ ತಾಲೂಕಿನ ಕಕ್ಕಳ್ಳಿ, ಧೋರಣಗಿರಿ ಮುಂತಾದ ಗ್ರಾಮಗಳಿಗೆ ಕಾರವಾರ ತಲುಪುವ ಅತಿ ಸಮೀಪದ ರಸ್ತೆ ಇದಾಗಿದೆ. ಒಟ್ಟಿನಲ್ಲಿ ಈ ಸೇತುವೆಯಿಂದ ಮೂರು ತಾಲೂಕಿನ ಜನರಿಗೆ ಅನುಕೂಲವಾಗಲಿದೆ.

    ಈ ಬಗ್ಗೆ ಪರಿಶೀಲನೆ ನಡೆಸಿ ಸೇತುವೆ ಮಂಜೂರಿ ಬಗ್ಗೆ ಸರ್ಕಾರಕ್ಕೆ ಮರು ಪ್ರಸ್ತಾವನೆ ಸಲ್ಲಿಸಲಾಗುವುದು.
    ಪ್ರಭುಲಿಂಗ ಕವಳಿಕಟ್ಟಿ
    ಜಿಲ್ಲಾಧಿಕಾರಿ, ಉತ್ತರ ಕನ್ನಡ

    ಕೊಡಸಳ್ಳಿ ಅಣೆಕಟ್ಟೆ ನಿರ್ಮಾಣ ಸಮಯದಲ್ಲಿ ನಮ್ಮ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ನಮ್ಮನ್ನು ಈ ಊರಿಗೆ ಸ್ಥಳಾಂತರಿಸಲಾಯಿತು. ನಿರಾಶ್ರಿತರ ಪುನರ್ವಸತಿ ಕೇಂದ್ರಕ್ಕಾಗಿ 25 ವರ್ಷಗಳ ಹಿಂದೆ ಆರ್.ವಿ.ದೇಶಪಾಂಡೆ ಅವರು ಸೇತುವೆ ಮಾಡಿಸಿಕೊಟ್ಟಿದ್ದರು. ಈಗ ಸೇತುವೆ ಮುರಿದ ನಂತರ ನಮ್ಮ ಪರಿಸ್ಥಿತಿ ಚಿಂತಾಜನಕವಾಗಿದೆ. ಹಲವು ಜನಪ್ರತಿನಿಧಿಗಳು ಬಂದು ನಮ್ಮ ದುಸ್ಥಿತಿಯನ್ನು ನೋಡಿ ಮರುಕ ವ್ಯಕ್ತಪಡಿಸಿದರೇ ವಿನಃ ಹೊಸ ಸೇತುವೆ ನಿರ್ಮಾಣಕ್ಕೆ ಕ್ರಮ ವಹಿಸಿಲ್ಲ.
    ಜಯಪ್ರಕಾಶ ಗಾಂವಕರ್
    ಹೆಗ್ಗಾರ ಗ್ರಾಮಸ್ಥ

    ……….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts