More

    ಹಳ್ಳಿಹಳ್ಳಿಗೂ ಹರಡುತ್ತಿದೆ ಕರೊನಾ

    ಬೆಳಗಾವಿ: ವಿಶ್ವವ್ಯಾಪಿಯಾಗಿ ಬೃಹತ್ ನಗರಗಳಿಗೆ ಕಾಡುತ್ತಿದ್ದ ಕರೊನಾ, ಇದೀಗ ಕಾಲಿಡದ ಪ್ರದೇಶಗಳಿಲ್ಲ. ಆರಂಭದಲ್ಲಿ ದೆಹಲಿ ಹಾಗೂ ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳ ಪ್ರವಾಸದ ಹಿನ್ನೆಲೆ ಹೊಂದಿರುವವರಲ್ಲಿ ಮಾತ್ರ ಕೋವಿಡ್-19 ದೃಢವಾಗುತ್ತಿತ್ತು. ಆದರೆ, ಇದೀಗ ಹಳ್ಳಿಹಳ್ಳಿಗೂ ಕರೊನಾ ಕಾಲಿಟ್ಟಿದ್ದು, ಕಾಡತೊಡಗಿದೆ.

    ಹಳ್ಳಿಗಳಲ್ಲಿ ದಿನೇ-ದಿನೆ ಸೋಂಕಿತರ ಪ್ರಮಾಣ ಹೆಚ್ಚುತ್ತಲಿದ್ದು, ದೃಢಪಟ್ಟವರ ಸೋಂಕಿನ ಮೂಲ ಹಾಗೂ ಸಂಪರ್ಕ ಪತ್ತೆ ಹಚ್ಚಲು ತೊಡಕಾಗಿರುವುದು ಗ್ರಾಮಗಳನ್ನು ಬೆಚ್ಚಿ ಬೀಳಿಸುತ್ತಲಿದೆ. ಈ ವಿದ್ಯಮಾನ ರಾಜ್ಯದಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.

    ಈ ಹಿಂದೆ ಕೋವಿಡ್ ಪ್ರಕರಣಗಳ ಮೂಲಕ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದ್ದ ಬೆಳಗಾವಿ ಜಿಲ್ಲೆ, ನಂತರದ ದಿನಗಳಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗಿ ರಾಜ್ಯದಲ್ಲಿಯೇ ಅತ್ಯಂತ ಕಡಿಮೆ ಸೋಂಕಿತರು ಇರುವ ಜಿಲ್ಲೆಯಾಗಿ ಗಮನ ಸೆಳೆದಿತ್ತು. ಇದೀಗ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ರಣಕೇಕೆ ಹಾಕುತ್ತಿರುವ ಕರೊನಾದಿಂದಾಗಿ
    ಜಿಲ್ಲೆ ಮತ್ತೆ ರಾಜ್ಯದಲ್ಲಿ 3ನೇ ಸ್ಥಾನದಲ್ಲಿದೆ.

    61 ಜನ ಸಾವು: ರಾಜ್ಯದ ಬಹುದೊಡ್ಡ ಜಿಲ್ಲೆ ಹಾಗೂ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಜತೆ ಗಡಿ ಹಂಚಿಕೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿ ಬುಧವಾರದ ವರಗೆ 2,811 ಜನ ಸೋಂಕಿನಿಂದ ಬಳಲುತ್ತಿದ್ದರೆ, 61 ಜನ ಮಾರಕ ಕಾಯಿಲೆಗೆ ಬಲಿಯಾಗಿದ್ದಾರೆ. ಜುಲೈ 20 ರಿಂದ ಈಚೆಗೆ ಖಾನಾಪುರ, ಸವದತ್ತಿ, ರಾಮದುರ್ಗ, ಬೈಲಹೊಂಗಲ, ಕಿತ್ತೂರು, ಚಿಕ್ಕೋಡಿ, ಗೋಕಾಕ, ರಾಯಬಾಗ, ಹುಕ್ಕೇರಿ ಹಾಗೂ ಬೆಳಗಾವಿ ಸೇರಿದಂತೆ 10 ತಾಲೂಕುಗಳಿಗೆ ಸೋಂಕು ವ್ಯಾಪಿಸಿದೆ. ಜಿಲ್ಲೆಯ 75ಕ್ಕೂ ಅಧಿಕ ಹಳ್ಳಿಗಳಲ್ಲಿ ಕೋವಿಡ್ ರುದ್ರನರ್ತನ ಮುಂದುವರಿದಿದೆ. ದಿನವೂ ಸೋಂಕಿತರು ಹಾಗೂ ಮೃತರ ಸಂಖ್ಯೆ ಏರಿಕೆ ಆಗುತ್ತಲೇ ಇದೆ.

    ವಿಳಂಬವಾಗುತ್ತಿದೆ ವರದಿ: ಸೋಂಕಿತರ/ಲಕ್ಷಣವಿರುವವರ ಗಂಟಲು ಹಾಗೂ ಮೂಗಿನ ದ್ರವದ ಮಾದರಿ ನೀಡಿದ 8 ದಿನಗಳ ಬಳಿಕ ವಿಳಂಬವಾಗಿ ವರದಿ ಬರುತ್ತಿದೆ. ಇದರಿಂದ ಸೋಂಕಿತರ ಸಂಪರ್ಕಿಗಳ ಸಂಖ್ಯೆ ಹೆಚ್ಚುತ್ತಲಿದೆ ಎಂಬ ಆರೋಪ ಕೇಳಿಬರುತ್ತಿದೆ. ಮಂಗಳವಾರದವರೆಗೆ 40,705 ಮಂದಿಯಿಂದ ಗಂಟಲು ಅಥವಾ ಮೂಗಿನ ದ್ರವದ ಮಾದರಿ ಸಂಗ್ರಹಿಸಲಾಗಿದೆ. ಇದರಲ್ಲಿ 38 ಸಾವಿರದಷ್ಟು ಪರೀಕ್ಷೆ ವರದಿ ಬಂದಿದ್ದು 2,750 ಪಾಸಿಟಿವ್ ದೃಢವಾಗಿದೆ.

    ಮತ್ತೊಂದು ಬೆಂಗಳೂರು ಆಗುತ್ತಿದೆ ಗಡಿನಾಡು

    ಗಡಿಜಿಲ್ಲೆ ಬೆಳಗಾವಿಯಲ್ಲೀಗ ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ದ್ವಿಗುಣಗೊಳ್ಳುತ್ತಿದೆ. ನಾಲ್ಕು ದಿನಗಳಲ್ಲಿ ಪಾಸಿಟಿವ್ ಪ್ರಕರಣ ಅಧಿಕಗೊಂಡಿದ್ದು, ಮುಂದಿನ ಎರಡೇ ವಾರದಲ್ಲಿ ಕೋವಿಡ್-19 ಹರಡುವಿಕೆ ಹೆಚ್ಚಾಗುವ ಮೂಲಕ ಬೆಳಗಾವಿ ಮತ್ತೊಂದು ಬೆಂಗಳೂರು ಆಗಲಿದೆ. ಜು.26ರಿಂದ ಸರಾಸರಿಯಾಗಿ ನಿತ್ಯ 200ಕ್ಕೂ ಅಧಿಕ ಪ್ರಕರಣ ದೃಢಪಡುತ್ತಿದ್ದು, ಸೋಂಕು ಸಮುದಾಯಮಟ್ಟದಲ್ಲಿ ಹರುಡುತ್ತಿದೆ. ಹೀಗಾಗಿ ನಿತ್ಯ ಶೇ. 80ಕ್ಕೂ ಅಧಿಕ ಸೋಂಕಿತರ ಸಂಪರ್ಕ ಪತ್ತೆ ಕಾರ್ಯ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ವೈದ್ಯಾಧಿಕಾರಿಗಳು.

    ಬೆಳಗಾವಿಯಲ್ಲಿ ಸಮುದಾಯ ಮಟ್ಟದಲ್ಲಿ ಸೋಂಕು ಹರುಡುತ್ತಿರುವುದನ್ನು ಗುರುತಿಸಲಾಗಿದೆ. ಹೀಗಾಗಿ ಇತರ ಕಾಯಿಲೆಯಿಂದ ಬಳಲುತ್ತಿರುವವರ ಕುರಿತು ಮನೆಯ ಸದಸ್ಯರು ವಿಶೇಷ ಕಾಳಜಿ ವಹಿಸಿ ಅವರ ರೋಗ ನಿರೋಧಕ ಶಕ್ತಿ ಕುಂದದಂತೆ ನೋಡಿಕೊಳ್ಳಬೇಕು. ಮುಂದಿನ ಎರಡು ವಾರಗಳಲ್ಲಿ ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಾಗಲಿದ್ದು, ಆ ನಂತರ ಮಹಾರಾಷ್ಟ್ರದ ಧಾರಾವಿಯಂತೆ ಗಮನಾರ್ಹ ಇಳಿಕೆ ಕಾಣುವ ನಿರೀಕ್ಷೆ ಇದೆ.
    | ಡಾ.ಶಶಿಕಾಂತ ಮುನ್ಯಾಳ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿ, ಬೆಳಗಾವಿ

    | ರವಿ ಗೋಸಾವಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts