More

    ಲಿಂಗಾಯತೇತರ ನಾಯಕನಾಗಿ ವಿಜಯೇಂದ್ರ ಉದಯ : ವರ್ಚಸ್ಸು ಬದಲಾಯಿಸಿದ ಶಿರಾ, ಕೆ.ಆರ್.ಪೇಟೆ ಗೆಲುವು

    ಶಿವಾನಂದ ತಗಡೂರು
    ಬೆಂಗಳೂರು : ತಂದೆಗೆ ತಕ್ಕ ಮಗ ಎನ್ನುವುದನ್ನು ಬಿ.ವೈ.ವಿಜಯೇಂದ್ರ ಅವರಿಗೆ ಶಿರಾ ಮತ್ತು ಕೆ.ಆರ್.ಪೇಟೆ ಉಪಚುನಾವಣೆಗಳು ಸಾಬೀತುಪಡಿಸಿವೆ. ವೀರಶೈವ ಲಿಂಗಾಯತರ ಪ್ರಾಬಲ್ಯವಿದ್ದ ಕಡೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಭಾವ ಬಳಸಿ ಗೆದ್ದು ಬರುವುದರಲ್ಲಿ ಅಂತಹ ವಿಶೇಷವೇನಿಲ್ಲ. ಆದರೆ, ಲಿಂಗಾಯತರೇ ಅಲ್ಪಸಂಖ್ಯಾತರಾಗಿರುವ ಶಿರಾ ಮತ್ತು ಕೆ.ಆರ್.ಪೇಟೆ ಎರಡೂ ಕ್ಷೇತ್ರಗಳಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿರುವ ವಿಜಯೇಂದ್ರ ರಾಜಕೀಯ ವರ್ಚಸ್ಸು ಪಕ್ಷದಲ್ಲಿ ಗಂಭೀರವಾದ ಚರ್ಚೆಗೆ ಗ್ರಾಸವಾಗಿದೆ.

    2018ರ ವಿಧಾನಸಭಾ ಚುನಾವಣೆ ವೇಳೆ ಬಿ.ವೈ.ವಿಜಯೇಂದ್ರ ವರುಣ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕಿದ್ದು, ಕೊನೇ ಕ್ಷಣದಲ್ಲಿ ಹೈಕಮಾಂಡ್ ಟಿಕೆಟ್ ನಿರಾಕರಿಸುವ ಮೂಲಕ ಅವಗಣನೆ ಮಾಡಿದ್ದು ಇತಿಹಾಸ. ಎಲ್ಲಿ ಅವಗಣನೆಗೆ ಒಳಗಾಗಿದ್ದರೋ ಅದೇ ಪಕ್ಷದಲ್ಲಿ ಹೈಕಮಾಂಡ್ ಗಮನಿಸುವ ಮಟ್ಟಕ್ಕೆ ವಿಜಯೇಂದ್ರ, ಪಕ್ಷವೊಡ್ಡಿದ ಸವಾಲುಗಳನ್ನು ಗೆದ್ದು ಗೆಲುವಿನ ಮಾಲೆ ಅರ್ಪಿಸುವ ಮೂಲಕ ಬೆಳೆದು ನಿಂತಿರುವುದು ಹೊಸ ಇತಿಹಾಸ. ಎದೆಗುಂದದೆ ಪಕ್ಷ ಕಟ್ಟುವ ಕೆಲಸ ಮಾಡುವಂತೆ ಯಡಿಯೂರಪ್ಪ ಮಾಡಿದ್ದ ಮಾರ್ಗದರ್ಶನವನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬಂದಿರುವ ವಿಜಯೇಂದ್ರ, ಇನ್ನಷ್ಟು ದಿಟ್ಟ ಹೆಜ್ಜೆ ಇಡುತ್ತಲೇ ಗಮನ ಸೆಳೆಯುತ್ತಿದ್ದಾರೆ.

    ಯಡಿಯೂರಪ್ಪ ಸಿಎಂ ಗದ್ದುಗೆಯಲ್ಲಿ ಕುಳಿತು ಅಧಿಕಾರ ನಡೆಸಿದರೂ ತವರು ಕ್ಷೇತ್ರ ಕೆ.ಆರ್.ಪೇಟೆಯಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಾಗಲಿಲ್ಲ ಎನ್ನುವ ಟೀಕೆ-ಟಿಪ್ಪಣಿಗೆ ಕಳೆದ ವರ್ಷದ ಉಪಚುನಾವಣೆಯಲ್ಲಿ ವಿಜಯೇಂದ್ರ ಪೂರ್ಣವಿರಾಮ ಹಾಕಿದ್ದರು. ನಾರಾಯಣಗೌಡರನ್ನು ಗೆಲ್ಲಿಸಿಕೊಂಡು ಬರುವ ಮೂಲಕ ತವರು ಗೆಲ್ಲಲಿಲ್ಲ ಎನ್ನುವ ಅಪ್ಪ ಬಿಎಸ್​ವೈ ನೋವನ್ನೂ ನಿವಾರಿಸಿದ್ದರು. ಆದರೆ, ಲಿಂಗಾಯತರೇ ಅಲ್ಪವಿರುವ ಗೌಡರ ಭದ್ರ ಕೋಟೆಯಲ್ಲಿ ಕಮಲ ಅರಳಿಸಿದ್ದು ರಾಜಕೀಯ ಸಾಧನೆ ಎನ್ನುವುದನ್ನು ಕೆಲವರು ಒಪ್ಪಲು ತಯಾರಿರಲಿಲ್ಲ. ಈ ಕೊರಗನ್ನು ಶಿರಾ ಕ್ಷೇತ್ರದ ಗೆಲುವು ನಿವಾರಿಸಿದೆ. ಅಲ್ಲದೆ, ವಿಜಯೇಂದ್ರರನ್ನು ಲಿಂಗಾಯತೇತರ ನಾಯಕನಾಗಿ ಹೊರ ಹೊಮ್ಮುವಂತೆ ಮಾಡಿದೆ.

    ಶಿರಾದಲ್ಲಿ 3 ಸಾವಿರ ಲಿಂಗಾಯತರ ಮತಗಳಿಲ್ಲ. ಇನ್ನು ಕೆ.ಆರ್.ಪೇಟೆಯಂತೆ ಸಿಎಂ ತವರು ಎನ್ನುವ ಅನುಕಂಪವೂ ಇರಲಿಲ್ಲ. ರಾಜಕೀಯವಾಗಿಯೂ ಬರದ ಬೆಂಗಾಡಾಗಿರುವ ಶಿರಾದಲ್ಲಿ ಕಮಲ ಅರಳಿಸುವುದು ನಿಜವಾಗಿಯೂ ವಿಜಯೇಂದ್ರರಿಗೆ ಸವಾಲಾಗಿತ್ತು. ಗೆಲ್ಲಲೇಬೇಕು ಎಂದು ಟೊಂಕ ಕಟ್ಟಿ ನಿಂತ ಸಂದರ್ಭದಲ್ಲಿಯೇ ಅಲ್ಲಿ ಬಿಜೆಪಿ ಸೋತರೂ ಪರವಾಗಿಲ್ಲ ಎನ್ನುವಷ್ಟರ ಮಟ್ಟಿಗೆ ಬಿಜೆಪಿಯೊಳಗೆ ಷಡ್ಯಂತ್ರಗಳು ನಡೆದಿದ್ದವು. ಗೆಲುವಿನ ಕ್ರೆಡಿಟ್ ವಿಜಯೇಂದ್ರರಿಗೆ ಹೋಗಬಾರದು ಎನ್ನುವ ಕಾರಣಕ್ಕೆ ನಾನಾ ತಂತ್ರಗಾರಿಕೆಯನ್ನೂ ಮಾಡಲಾಗಿತ್ತು. ಕ್ಷೇತ್ರದ ಉದ್ದಗಲಕ್ಕೂ ಪ್ರವಾಸ ಮಾಡುವ ಮೂಲಕ ಪಕ್ಷ ಸಂಘಟಿಸಿ, ಕಡಿಮೆ ಕಾಲಾವಧಿಯಲ್ಲಿ ಜನರ ವಿಶ್ವಾಸ ಗಳಿಸಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿಕೊಂಡು ಬಂದಿರುವುದು ಕಡಿಮೆ ಸಾಧನೆಯೇನಲ್ಲ.

    ಎರಡೂ ಉಪ ಚುನಾವಣೆಗಳನ್ನು ಎದುರಿಸಿ ಸವಾಲಿನ ಎದುರು ಈಜಿರುವ ವಿಜಯೇಂದ್ರ ರಾಜಕೀಯ ಸಾಮರ್ಥ್ಯದ ಬಗ್ಗೆ ಪಕ್ಷದೊಳಗೆ ಬಿಸಿ ಚರ್ಚೆ ನಡೆದಿದೆ. ಹೈಕಮಂಡ್ ಕೂಡ ವಿಜಯೇಂದ್ರ ಬೆನ್ನು ತಟ್ಟಿದ್ದು, ಭವಿಷ್ಯದಲ್ಲಿ ಯುವ ಸಮುದಾಯದ ಸ್ಟ್ರಾಂಗ್ ಲೀಡರ್ ಆಗಿ ಹೊರ ಹೊಮ್ಮಿರುವುದನ್ನು ಅವರ ವಿರೋಧಿಗಳೂ ಅಲ್ಲಗಳೆದಿಲ್ಲ.

    ವಿದೇಶಿ ದೇಣಿಗೆ ನಿಯಮ ಬಿಗಿ: ಪರಿಷ್ಕೃತ ನಿಬಂಧನೆ ಪಾಲಿಸಬೇಕು ಎನ್​ಜಿಒಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts