More

    ಜೀವನ ಕೊಟ್ಟ ನೈಸರ್ಗಿಕ ಕೃಷಿ

    ಕೆ.ಆರ್.ಪೇಟೆ: ಪ್ರಸ್ತುತ ಪದವೀಧರರು ಕೃಷಿಯಿಂದ ವಿಮುಖರಾಗಿ ಉದ್ಯೋಗಕ್ಕಾಗಿ ಪಟ್ಟಣ ಸೇರುತ್ತಿರುವ ಇಂತಹ ಸಂದರ್ಭದಲ್ಲಿ ಇಲ್ಲೊಬ್ಬ ಸಿವಿಲ್ ಗುತ್ತಿಗೆದಾರ ನೈಸರ್ಗಿಕ ಕೃಷಿಯಲ್ಲಿ ಯಶಸ್ಸು ಕಂಡು ಜೀವನ ಕಟ್ಟಿಕೊಂಡಿದ್ದಾರೆ.

    ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ನಾಯಸಿಂಗನಹಳ್ಳಿ ಗ್ರಾಮದ ರೈತ ದಿ.ಚಿಕ್ಕೇಗೌಡ ಅವರ ಪುತ್ರ ಅಣ್ಣೇಗೌಡ ಬೆಂಗಳೂರಿನ ಬಿಬಿಎಂಪಿಯಲ್ಲಿ ಗುತ್ತಿಗೆದಾರರಾಗಿದ್ದರೂ ಅಲ್ಲಿಂದ ಬಂದು ಕೃಷಿಯಲ್ಲಿ ಜೀವನ ಕಂಡುಕೊಂಡಿದ್ದಾರೆ.

    ಸ್ನೇಹಿತ ಲಿಂಗರಾಜು ಗ್ರಾಮದಲ್ಲಿ ನೈಸರ್ಗಿಕ ಕೃಷಿ ಮಾಡುತ್ತಿದ್ದುದ್ದನ್ನು ಹತ್ತಿರದಿಂದ ಗಮನಿಸಿ ಪ್ರೇರೇಪಣೆಗೊಂಡ ಅಣ್ಣೇಗೌಡ ಸ್ನೇಹಿತನ ಸಲಹೆಯಂತೆ ತೋಟದಲ್ಲಿ ಸಿಲ್ವರ್, ತೇಗ ಸಸಿಗಳನ್ನು ನೆಟ್ಟರು. ಆದರೆ ಮರಗಳಿಗೆ ಬೆಲೆ ಕಡಿಮೆಯಾದ ಹಿನ್ನೆಲೆಯಲ್ಲಿ ಮೆಣಸು ಹಬ್ಬಿಸಿದರು. ಕುಟುಂಬದ ಹಿತದೃಷ್ಟಿಯಿಂದ ಸಾವಯವ ಆಹಾರ ಬೆಳೆಯಬೇಕೆಂಬ ಕಾರಣಕ್ಕಾಗಿ ನಂತರದ ದಿನಗಳಲ್ಲಿ ನೈಸರ್ಗಿಕ ಕೃಷಿಯತ್ತ ಮೊರೆ ಹೋಗಿ ಹತ್ತು ವರ್ಷದಿಂದ ಅದರಲ್ಲಿ ತೊಡಗಿಸಿಕೊಂಡಿದ್ದಾರೆ.

    ತಮ್ಮ 3 ಎಕರೆ ಜಮೀನಿನಲ್ಲಿ ರಾಸಾಯನಿಕ ಮುಕ್ತ ಕೃಷಿ ಮಾಡುತ್ತಿದ್ದು, ಕಡಿಮೆ ಖರ್ಚಿನಲ್ಲಿ ಆದಾಯ ಗಳಿಸುವುದರ ಜತೆಗೆ ಪೂರ್ವಿಕರ ಬೇಸಾಯ ಪದ್ಧತಿಯಡಿ ವಿಷಮುಕ್ತ ಆಹಾರ ಧಾನ್ಯಗಳನ್ನು ಬೆಳೆಯುತ್ತಿದ್ದಾರೆ. ಇದರೊಂದಿಗೆ 15 ಖಡಕ್ನಾತ್ ಕೋಳಿ, 2 ಹಳ್ಳಿಕಾರ್ ಹಸುಗಳನ್ನು ಸಾಕುತ್ತಿದ್ದಾರೆ.

    ಇನ್ನು ಗೋ-ಮೂತ್ರವನ್ನು ನೈಸರ್ಗಿಕವಾಗಿ ಶುದ್ಧೀಕರಿಸಿ ಇದರೊಂದಿಗೆ 200 ಲೀಟರ್ ಸಾಮರ್ಥ್ಯದ ಡ್ರಂನಲ್ಲಿ (ಜೀವಾಮೃತ) ಸಗಣಿ ಮತ್ತು ಗಂಜಲ, ಸಾವಯವ ಬೆಲ್ಲ, ದ್ವಿದಳ ಧಾನ್ಯಗಳನ್ನು ಮಿಶ್ರ ಮಾಡಿ 6 ದಿನಗಳ ನಂತರ ಅದನ್ನು ಬೇರುಗಳಿಗೆ ನೀರಿನ ಮೂಲಕ ಉಣಿಸುತ್ತಾರೆ. ಬೇರುಗಳಲ್ಲಿ ಸತ್ವ ಹೆಚ್ಚಾಗಬೇಕೆಂಬ ದೃಷ್ಟಿಯಿಂದ ಗೋಮೂತ್ರ, ಸಾವಯವ ಬೆಲ್ಲ, ನಾಟಿ ಹಸುವಿನ ಸಿಹಿ ಮಜ್ಜಿಗೆಯನ್ನು ಮಿಶ್ರಣ ಮಾಡಿ 5 ದಿನ ನಂತರ ಅದನ್ನು ಬೇರುಗಳಿಗೆ ಹಾಕುತ್ತಾರೆ. ಇದಲ್ಲದೆ ಪೊಟ್ಯಾಷ್ ಪೋಷಕಾಂಶ ಪೂರೈಕೆಗಾಗಿ ಬಾಳೆಹಣ್ಣು, ಸಾವಯವ ಬೆಲ್ಲವನ್ನು 30 ದಿನ ನೆನೆಸಿ ನಂತರ ಅದನ್ನು ಬೆಳೆಗಳಿಗೆ ಉಪಯೋಗಿಸುತ್ತಾರೆ. ಇದರೊಂದಿಗೆ ಅಕ್ಕಿತೊಳೆದ ನೀರು, ನಾಟಿ ಹಸುವಿನ ಹಾಲನ್ನು 20 ದಿನ ಹಾಗೂ ಮೀನು, ಸಾವಯವ ಬೆಲ್ಲವನ್ನು ಮಿಶ್ರಣ ಮಾಡಿ 55 ದಿನ ನೆನೆಸಿ ನಂತರ ಅದನ್ನು ಬೇರುಗಳಿಗೆ ಉಣಿಸುತ್ತಾರೆ. ಇದರಿಂದ ಮಣ್ಣಿನಲ್ಲಿರುವ ಸೂಕ್ಷ್ಮಾಣುಜೀವಿಗಳು ಬೆಳೆದು ಬೆಳೆಗೆ ಪೋಷಕಾಂಶ ಲಭ್ಯವಾಗುವಂತೆ ಮಾಡುತ್ತದೆ.

    ಕೃಷಿ ಯಂತ್ರೋಪಕರಣಗಳಾದ ಚಾಪ್ ಕಟರ್, ಕಳೆ ಕತ್ತರಿಸುವ ಯಂತ್ರ, ಔಷಧ ಸಿಂಪಡಣಾ ಯಂತ್ರವನ್ನು ಬಳಕೆ ಮಾಡುತ್ತಿದ್ದಾರೆ. ಕಳೆಗಳನ್ನು ಕತ್ತರಿಸಿದ ಬಳಿಕ ಕೃಷಿ ತ್ಯಾಜ್ಯವನ್ನು ಪುಡಿ ಮಾಡಿ ಜೀವಾಮೃತ ಮತ್ತು ಗೋಮೂತ್ರವನ್ನು ಅದರ ಮೇಲೆ ಹರಡುವ ಮೂಲಕ ತೇವಾಂಶ ಕಾಯ್ದುಕೊಳ್ಳುವಂತೆ ಮಾಡಲಾಗುತ್ತಿದೆ. ಇದರೊಂದಿಗೆ ಬೇವು, ಸಿಲ್ವರ್, ತ್ಯಾಗ, ನೆರಲೆ, ಹಲಸು, ಮಾವು, ಮಹಾಘನಿ, ಶ್ರೀಗಂಧ ಸೇರಿದಂತೆ ಹಲವು ಜಾತಿಯ 200ಕ್ಕೂ ಹೆಚ್ಚು ಮರ-ಗಿಡಗಳು ಬೆಳೆದಿದ್ದಾರೆ.

    ತೋಟಗಾರಿಕೆ ಬೆಳೆಗಳಾದ ತೆಂಗು, ಅಡಕೆ, ಬಾಳೆ, ಮಾವು, ಕಾಫಿ, ಕಾಳು ಮೆಣಸು, ಏಲಕ್ಕಿ, ಜಾಯಿಕಾಯಿ, ಅಂಜೂರ, ಕಿತ್ತಳೆ, ಮೂಸಂಬಿ, ನಿಂಬೆ, ಹಿರಳೇಕಾಯಿ, ಸೀಬೆ, ಮಿರಾಕಲ್, ಸಪೋಟ (ವೈಟ್), ಲಾಗಾನ್, ಲೀಚಿ, ನೀರಿನ ಸೇಬು, ಎಗ್ ಫ್ರೂಟ್ಸ್, ಮರಸೇಬು, ಲವಂಗ, ಹಾಲ್ ಸ್ಪೈಸ್, ಲಕ್ಷ್ಮಣ ಫಲ, ಲಕೋಟ, ದ್ರಾಕ್ಷಿ, ಕೊಂಬು ದ್ರಾಕ್ಷಿ, ಸಿಹಿನಿಂಬೆ, ಪಿಸ್ತಾ, ಇಂಗು, ಸೀತಾಫಲ, ರುದ್ರಾಕ್ಷಿ, ಹುಣಸೆ, ಸೀಗೇಕಾಯಿ, ರಾಂಪತ್ರ, ಕೋಕಂ, ಪುನಃಪುಳಿ ಬೆಳೆದಿದ್ದಾರೆ. ಜಮೀನಿನಲ್ಲಿ ಮೂರು ಜೇನು ಪೆಟ್ಟಿಗೆಯನ್ನು ಅಳವಡಿಸಲಾಗಿದ್ದು, ಮನೆಗೆ ಅಗತ್ಯವಿರುವಷ್ಟನ್ನು ಇಟ್ಟುಕೊಂಡು ಉಳಿದದ್ದನ್ನು ಸ್ಥಳೀಯವಾಗಿ ಮಾರಾಟ ಮಾಡಿ ಆದಾಯ ಗಳಿಸುತ್ತಿದ್ದಾರೆ. ಪ್ರತಿ ವರ್ಷ ಸುಮಾರು 8 ಲಕ್ಷ ರೂ. ನಷ್ಟು ಆದಾಯಗಳಿಸುತ್ತಿದ್ದು, ಕೃಷಿ ನಿರ್ವಹಣೆಗೆ 2 ಲಕ್ಷ ರೂ. ವೆಚ್ಚ ಮಾಡುತ್ತಿದ್ದಾರೆ. ತೋಟಗಾರಿಕಾ ಬೆಳೆಗಳನ್ನು ರಾಸಾಯನಿಕ ಮುಕ್ತವಾಗಿ ಬೆಳೆದು ಇಳುವರಿಯಲ್ಲಿ ಸುಸ್ಥಿರತೆ ಕಾಯ್ದುಕೊಳ್ಳಬಹುದೆಂದು ತೋರಿಸಿ ಕೊಟ್ಟಿದ್ದಾರೆ. ಅಣ್ಣೇಗೌಡರ ಕೃಷಿ ಸಾಧನೆಗಾಗಿ ಆತ್ಮ ಯೋಜನೆಯಡಿ 2023-24 ನೇ ಸಾಲಿನಲ್ಲಿ ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ ದೊರಕಿದೆ.

    ಬೆಂಗಳೂರಿನಲ್ಲಿ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ ನಾನು ಜಮೀನನ್ನು ಮಾರಾಟ ಮಾಡಬೇಕೆಂಬ ಯೋಚನೆಯಲ್ಲಿದ್ದೆ. ಕೃಷಿ, ಗುತ್ತಿಗೆ ಎಂಬ ಎರಡು ದೋಣಿ ಮೇಲೆ ಕಾಲು ಇಡುವುದು ಬೇಡ ಎಂದು ಯೋಚಿಸಿದೆ. ಜಮೀನನ್ನು ಮಾರಾಟ ಮಾಡದಂತೆ ತಡೆದು ನೈಸರ್ಗಿಕ ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ನನ್ನ ಸ್ನೇಹಿತ ಪ್ರೇರೇಪಿಸಿದ. ಇದೀಗ ನೈಸರ್ಗಿಕ ಕೃಷಿ ಆರೋಗ್ಯಕರ ಎನಿಸಿದ್ದು, ಸುಸ್ಥಿರ ಆದಾಯದೊಂದಿಗೆ ನೆಮ್ಮದಿ ತಂದು ಕೊಟ್ಟಿದೆ. ನೈಸರ್ಗಿಕವಾಗಿ ರೈತರು ಕೃಷಿ ಮಾಡಿ ಹೆಚ್ಚಿನ ಆದಾಯ ಗಳಿಸಬೇಕು.
    ಅಣ್ಣೇಗೌಡ ನೈಸರ್ಗಿಕ ಕೃಷಿಕ ನಾಯಿಸಿಂಗನಹಳ್ಳಿ

    ಕೃಷಿಯನ್ನು ವೈಜ್ಞಾನಿಕವಾಗಿ ಮಾಡಿದರೆ ನಷ್ಟ ಆಗುವುದಿಲ್ಲ. ಸುಸ್ಥಿರ ಆದಾಯ ಬರಲಿದೆ. ರೈತರಿಗೆ ಆಸಕ್ತಿ ಇದ್ದಾಗ ಮಾತ್ರ ನೈಸರ್ಗಿಕ, ಸಾವಯವ ಕೃಷಿ ಮಾಡಬಹುದು. ಅಣ್ಣೇಗೌಡ ಉತ್ತಮವಾಗಿ ಕೃಷಿ ಮಾಡಿದ್ದು, ಇತರರಿಗೆ ಮಾದರಿಯಾಗಿದ್ದಾರೆ.
    ಪಿ.ಜಿ.ಶೃತಿ ತಾಲೂಕು ತಾಂತ್ರಿಕ ವ್ಯವಸ್ಥಾಪಕಿ, ಕೃಷಿ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts