More

    ರಣಜಿ ಟ್ರೋಫಿ | ಪ್ರಮುಖರ ಅನುಪಸ್ಥಿತಿಯಲ್ಲೂ ರಾಜ್ಯ ತಂಡದ ಯುವ ಆಟಗಾರರ ಪ್ರಚಂಡ ನಿರ್ವಹಣೆ

    ಬೆಂಗಳೂರು: ದೇಶೀಯ ಕ್ರಿಕೆಟ್​ನಲ್ಲಿ ಪವರ್​ಹೌಸ್ ಎನಿಸಿರುವ ಕರ್ನಾಟಕ ತಂಡದಲ್ಲೀಗ ಯುವ ಆಟಗಾರರದ್ದೇ ಆಟ. ಸ್ಟಾರ್ ಆಟಗಾರರು ರಾಷ್ಟ್ರೀಯ ತಂಡದಲ್ಲಿದ್ದರೆ ಅವರ ಜಾಗದಲ್ಲಿ ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಸಿಕೊಳ್ಳುತ್ತಿದ್ದಾರೆ ಯುವ ಪ್ರತಿಭೆಗಳು. ಪ್ರಸಕ್ತ ರಣಜಿ ಟ್ರೋಫಿಯ ಲೀಗ್ ಹಂತದಲ್ಲಿ ಅರ್ಧದಾರಿ ಸವೆಸಿರುವ ಕರ್ನಾಟಕ ತಂಡದ ನಿರ್ವಹಣೆಯೇ ಇದಕ್ಕೆ ಸಾಕ್ಷಿ. ಮಯಾಂಕ್ ಅಗರ್ವಾಲ್, ಮನೀಷ್ ಪಾಂಡೆ, ಕೆಎಲ್ ರಾಹಲ್ ರಂಥ ಅನುಭವಿ ಆಟಗಾರರಿಲ್ಲದೆ ರಾಜ್ಯ ತಂಡ ಗಮನಾರ್ಹ ನಿರ್ವಹಣೆ ತೋರುತ್ತಿದೆ. ಜನವರಿ 11 ರಿಂದ ರಾಜ್​ಕೋಟ್​ನಲ್ಲಿ ಸೌರಾಷ್ಟ್ರದಲ್ಲಿ ನಡೆಯಲಿರುವ 5ನೇ ಸುತ್ತಿನ ಪಂದ್ಯದಲ್ಲಿ ಮದುವೆಯಿಂದ ಕರುಣ್ ನಾಯರ್ ಕೂಡ ಅಲಭ್ಯರಾಗುತ್ತಿದ್ದು, ವೇಗಿ ಮಿಥುನ್ ಒಬ್ಬರೇ ರಾಷ್ಟ್ರೀಯ ತಂಡದಲ್ಲಿ ಆಡಿದ ಅನುಭವಿಯಾಗಿದ್ದಾರೆ.

    ಬಿಸಿಸಿಐನ ನೀತಿಯಿಂದಾಗಿ ಕರ್ನಾಟಕ ತಂಡದ ಕಾಯಂ ನಾಯಕ ಮನೀಷ್ ಪಾಂಡೆ ಸ್ಥಿತಿ ಅಲ್ಲೂ ಇಲ್ಲ ಇಲ್ಲೂ ಇಲ್ಲ ಎನ್ನುವಂತಾಗಿದೆ. ನಿಗದಿತ ಓವರ್​ಗಳಲ್ಲಿ ರಾಷ್ಟ್ರೀಯ ತಂಡದಲ್ಲಿದ್ದರೂ ಅತಿಥಿ ಸದಸ್ಯರಾಗಿದ್ದಾರೆ. ನಾಗ್ಪುರದಲ್ಲಿ ಬಾಂಗ್ಲಾದೇಶ ವಿರುದ್ಧದ 3ನೇ ಪಂದ್ಯವಾಡಿದ್ದ ಮನೀಷ್ ಪಾಂಡೆ, ಬಳಿಕ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಚುಟುಕು ಕ್ರಿಕೆಟ್ ಸರಣಿಯಲ್ಲಿ ಬೆಂಚು ಕಾಯಿಸಿದ್ದರು. ನಿಗದಿತ ಓವರ್ ಆಗಿರುವುದರಿಂದ ರಾಜ್ಯ ತಂಡದ ಪರ ಆಡಲು ರಾಷ್ಟ್ರೀಯ ತಂಡದಿಂದ ಬಿಡುಗಡೆಯೂ ಆಗುವಂತಿಲ್ಲ. ಕಳೆದ ನಾಲ್ಕು ತಿಂಗಳಲ್ಲಿ ತವರಲ್ಲಿ ನಡೆದ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿಗಳಿಂದ ನಡೆದ 9 ಪಂದ್ಯಗಳಲ್ಲಿ ಮನೀಷ್ ಏಕೈಕ ಪಂದ್ಯವನ್ನಷ್ಟೇ ಆಡಿದ್ದಾರೆ. ಹೀಗಾಗಿ ಮನೀಷ್ ಪಾಂಡೆ ಸೇವೆ ಎರಡೂ ಕಡೆಯೂ ದಕ್ಕುತ್ತಿಲ್ಲ. ವೈಯಕ್ತಿಕವಾಗಿ ಮನೀಷ್ ಪಾಂಡೆಗೆ ಭಾರಿ ಹಿನ್ನಡೆಯುಂಟು ಮಾಡಿದೆ.

    ವೇಗಿಗಳ ದರ್ಬಾರ್: ಪ್ರಸಕ್ತ ದೇಶೀಯ ಋತುವಿನಲ್ಲಿ ಇದುವರೆಗೂ ಎರಡೂ ಟ್ರೋಫಿ ಗೆದ್ದಿರುವ ಕರ್ನಾಟಕ ತಂಡದ ಯಶಸ್ಸಿನಲ್ಲಿ ವೇಗಿಗಳ ಪಾಲು ಪ್ರಮುಖ ಪಾತ್ರವಹಿಸಿದೆ. ಪ್ರಸಿದ್ಧ ಕೃಷ್ಣ ಅಲಭ್ಯರಾದರೂ ಮಿಥುನ್, ಕೌಶಿಕ್ (3 ಪಂದ್ಯ, 11 ವಿಕೆಟ್), ಪ್ರತೀಕ್ ಜೈನ್ (2 ಪಂದ್ಯ, 9 ವಿಕೆಟ್), ರೋನಿತ್ ಮೋರೆ (3 ಪಂದ್ಯ, 7 ವಿಕೆಟ್) ಒಳಗೊಂಡ ವೇಗಿಗಳ ನಿರ್ವಹಣೆ ಉತ್ತಮವಾಗಿಯೇ ಇದೆ. 90 ದಶಕದಲ್ಲಿದ್ದ ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ದೊಡ್ಡ ಗಣೇಶ್, ಡೇವಿಡ್ ಜಾನ್ಸನ್​ರಂಥ ದಿಗ್ಗಜ ವೇಗಿಗಳ ಪಡೆಯ ಗತವೈಭವವನ್ನು ನೆನಪಿಸುತ್ತಿದೆ.

    ಕಾಡುತ್ತಿರುವ ಗಾಯದ ಸಮಸ್ಯೆ: ಪ್ರಸಕ್ತ ವರ್ಷವೂ ಕರ್ನಾಟಕ ತಂಡಕ್ಕೆ ಗಾಯದ ಸಮಸ್ಯೆ ತಪು್ಪತ್ತಿಲ್ಲ. ರಾಜ್ಯ ತಂಡದ ಪ್ರಮುಖ ವೇಗಿಯಾಗಿರುವ ಪ್ರಸಿದ್ಧ ಕೃಷ್ಣ ಗಾಯದ ಸಮಸ್ಯೆಯಿಂದ ಇದುವರೆಗೂ ಒಂದು ಪಂದ್ಯವಾಡಿಲ್ಲ. ವಿಜಯ್ ಹಜಾರೆ ಏಕದಿನ ಟ್ರೋಫಿಯ ಎಂಟರಘಟ್ಟದ ಪಂದ್ಯದಲ್ಲಿ ಕಡೆಯ ಬಾರಿಗೆ ಆಡಿದ್ದರು. ಬಳಿಕ ನಡೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಿಂದಲೂ ಪ್ರಸಿದ್ಧ ಕೃಷ್ಣ ಹೊರಬಿದ್ದಿದ್ದರು. ಆರಂಭಿಕ ಬ್ಯಾಟ್ಸ್​ಮನ್ ಕೆವಿ ಸಿದ್ದಾರ್ಥ್ ಕೂಡ ವಿಜಯ್ ಹಜಾರೆ ಟೂರ್ನಿ ವೇಳೆ ಗಾಯಗೊಂಡು, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿ ತಪ್ಪಿಸಿಕೊಂಡಿದ್ದರು. ಆರಂಭಿಕ 4 ಪಂದ್ಯಗಳಿಂದಲೂ ಹೊರಬಿದ್ದಿದ್ದರು. ಕರುಣ್, ಮಯಾಂಕ್ ಅನುಪಸ್ಥಿತಿಯಲ್ಲಿ ಸೌರಾಷ್ಟ್ರ ವಿರುದ್ಧ ಬ್ಯಾಟಿಂಗ್ ಬಲ ತುಂಬಲಿದ್ದಾರೆ. ಆಲ್ರೌಂಡರ್ ಪವನ್ ದೇಶಪಾಂಡೆ ಮೊದಲ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಆಡಿದ ಬಳಿಕ 3 ಪಂದ್ಯ ತಪ್ಪಿಸಿಕೊಂಡಿದ್ದರು. ಇದೀಗ ಮುಂದಿನ ಪಂದ್ಯಕ್ಕೆ ಅಣಿಯಾಗಿದ್ದಾರೆ. ಮತ್ತೋರ್ವ ಆಲ್ರೌಂಡರ್, ತಮಿಳುನಾಡು ವಿರುದ್ಧದ ಗೆಲುವಿನ ರೂವಾರಿ ಕೆ.ಗೌತಮ್ ಕೂಡ ಗಾಯದಿಂದ ಹೊರಬಿದ್ದಿದ್ದಾರೆ. ವೇಗಿಗಳಾದ ಮಿಥುನ್ ಹಾಗೂ ರೋನಿತ್ ಮೋರೆ ಕೂಡ ಗಾಯದ ಸಮಸ್ಯೆ ಎದುರಿಸಿದ್ದರು.

    ಲಭಿಸದ ಮಯಾಂಕ್ ಸೇವೆ !: ದೇಶೀಯ ಕ್ರಿಕೆಟ್​ನಲ್ಲಿ ಕಳೆದ 3 ವರ್ಷಗಳಿಂದಲ್ಲೂ ರನ್​ಹೊಳೆಯನ್ನೇ ಹರಿಸುತ್ತಿರುವ ಮಯಾಂಕ್ ಅಗರ್ವಾಲ್ ರಾಷ್ಟ್ರೀಯ ಟೆಸ್ಟ್ ಪಂದ್ಯದಲ್ಲಿ ಕಾಯಂ ಸ್ಥಾನ ಪಡೆದಿದ್ದಾರೆ. ರಾಷ್ಟ್ರೀಯ ತಂಡದಿಂದ ಬಿಡುವು ಸಿಕ್ಕ ತಕ್ಷಣವೇ ರಾಜ್ಯ ತಂಡ ಕೂಡಿಕೊಳ್ಳುವ ಪ್ರವೃತ್ತಿ ಹೊಂದಿದ್ದಾರೆ. ಇದರಿಂದಾಗಿಯೇ ವಿಜಯ್ ಹಜಾರೆ ಟ್ರೋಫಿ ಫೈನಲ್ ಹಾಗೂ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಫೈನಲ್ ಪಂದ್ಯಗಳಲ್ಲಿ ಮಯಾಂಕ್ ಆಡಿದ್ದರು. ಇದುವರೆಗೂ 2 ರಣಜಿ ಪಂದ್ಯವಾಡಿದ್ದ ಮಯಾಂಕ್ ಮುಂದಿನ ಪಂದ್ಯಗಳಿಗೆ ಅವರ ಸೇವೆ ರಾಜ್ಯ ತಂಡಕ್ಕೆ ಲಭಿಸುವುದು ಅನುಮಾನವಾಗಿದೆ. ಬಿಸಿಸಿಐ ವಿಶ್ರಾಂತಿ ಸೂಚಿಸಿದ್ದ ಹಿನ್ನೆಲೆಯಲ್ಲಿ ಮುಂಬೈ ಪಂದ್ಯದಿಂದ ಹೊರಬಿದ್ದಿದ್ದ ಮಯಾಂಕ್, ಜನವರಿ 10ರಂದು ಭಾರತ ಎ ತಂಡದೊಂದಿಗೆ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದಾರೆ. ಒಂದು ವೇಳೆ ಕರ್ನಾಟಕ ಫೈನಲ್​ಗೇರಿದಷ್ಟೇ ಮಯಾಂಕ್ ರಾಜ್ಯದ ತಂಡಕ್ಕೆ ಲಭ್ಯರಾಗುವ ಸಾಧ್ಯತೆಗಳಿವೆ.

    ವಿನಯ್ ಜಾಗ ತುಂಬಿದ ಮಿಥುನ್: ಕರ್ನಾಟಕ ತಂಡ ಸತತ 2 ಬಾರಿ ಹ್ಯಾಟ್ರಿಕ್ ಪ್ರಶಸ್ತಿ ಗೆದ್ದುಕೊಟ್ಟಿದ್ದ ನಾಯಕ ಆರ್.ವಿನಯ್​ ಕುಮಾರ್ ಪ್ರಸಕ್ತ ವರ್ಷ ಪುದುಚೇರಿಗೆ ವಲಸೆ ಹೋದ ಹಿನ್ನೆಲೆಯಲ್ಲಿ ಅವರ ಜಾಗವನ್ನು ವೇಗಿ ಮಿಥುನ್ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಇದುವರೆಗೂ ಆಡಿರುವ 3 ಪಂದ್ಯಗಳಿಂದ 13 ವಿಕೆಟ್​ಗಳು ಕಬಳಿಸಿರುವುದೇ ಇದಕ್ಕೆ ಸಾಕ್ಷಿ. ಹಿರಿಯ ಸದಸ್ಯನಾಗಿ ಅಗತ್ಯವೇಳೆ ತಂಡಕ್ಕೆ ನೆರವಾಗುತ್ತಿದ್ದಾರೆ. ಪ್ರಸಕ್ತ ವರ್ಷದ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿ ಫೈನಲ್ ಹಾಗೂ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಸೆಮಿಫೈನಲ್​ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ್ದರು. ಮೂರು ಮಾದರಿಯಲ್ಲೂ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.

    2ನೇ ಸ್ಥಾನದಲ್ಲಿ ಕರ್ನಾಟಕ ತಂಡ: ಟೂರ್ನಿಯಲ್ಲಿ ಇದುವರೆಗೂ ಆಡಿರುವ 4 ಪಂದ್ಯಗಳಲ್ಲಿ 2 ಜಯ, 2 ಡ್ರಾ ಸಾಧಿಸಿರುವ ಕರ್ನಾಟಕ ಎ ಮತ್ತು ಗುಂಪಿನಿಂದ 2ನೇ ಸ್ಥಾನದಲ್ಲಿದೆ. ಮುಂದಿನ ಪಂದ್ಯಗಳಲ್ಲಿ ಸೌರಾಷ್ಟ್ರ, ರೈಲ್ವೇಸ್ (ಜ.27ರಿಂದ), ಮಧ್ಯ ಪ್ರದೇಶ (ಫೆ.4ರಿಂದ) ಹಾಗೂ ಬರೋಡ (ಫೆ.12) ತಂಡಗಳನ್ನು ಎದುರಿಸಲಿದೆ.

    ಹೊಸ ಪ್ರತಿಭೆಗಳ ಅನಾವರಣ: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಮನೀಷ್ ಪಾಂಡೆ ರಾಷ್ಟ್ರೀಯ ತಂಡಕ್ಕೆ ಎಂಟ್ರಿ ಕೊಟ್ಟಿರುವುದರಿಂದ ರಾಜ್ಯ ತಂಡದಲ್ಲಿ ಹೊಸ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಮಾಡಿಕೊಟ್ಟಂತಾಗಿದೆ. ಕಳೆದ ಬಾರಿ ರಣಜಿಗೆ ಪದಾರ್ಪಣೆ ಮಾಡಿದ್ದ ದೇವದತ್ ಪಡಿಕಲ್, ರೋಹನ್ ಕದಂ, ಪ್ರತೀಕ್ ಜೈನ್​ರಂಥ ಯುವ ಪ್ರತಿಭೆಗಳು ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡಿದ್ದಾರೆ.

    ಕರ್ನಾಟಕ ತಂಡದ ಬೆಂಚ್​ಸ್ಟ್ರೆಂತ್ ಬಗ್ಗೆ ಮಾತನಾಡುವ ಹಾಗೆಯೇ ಇಲ್ಲ. ಎರಡು ತಂಡ ರಚಿಸುವಷ್ಟು ಆಟಗಾರರಿದ್ದಾರೆ. ಅನುಭವಿ ಆಟಗಾರರು ರಾಷ್ಟ್ರೀಯ ತಂಡದಲ್ಲಿರುವುದರಿಂದ ಯುವ ಪ್ರತಿಭೆಗಳಿಗೆ ಅವಕಾಶ ಲಭಿಸುತ್ತಿದೆ. ಈ ಅವಕಾಶವನ್ನು ಯುವ ಆಟಗಾರರೂ ಕೂಡ ಸೂಕ್ತವಾಗಿ ಬಳಸಿಕೊಳ್ಳುತ್ತಿರುವುದು ಆರೋಗ್ಯಕರ ಬೆಳವಣಿಗೆ.

    | ವಿನಯ್ ಮೃತ್ಯುಂಜಯ, ಕೆಎಸ್​ಸಿಎ ಖಜಾಂಚಿ ಹಾಗೂ ವಕ್ತಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts