More

    ವಿಜಯವಾಣಿ ರಿಯಾಲಿಟಿ ಚೆಕ್ : ಯುವಜನ ವಿಶೇಷ ಗ್ರಾಮಸಭೆಗೆ ಸೊಪ್ಪು ಹಾಕದ ಗ್ರಾಪಂಗಳು, 2 ಕೋಟಿ ಯುವಜನರ ಕನಸು ಭಗ್ನ

    ತುಮಕೂರು: ಕರ್ನಾಟಕದ ಗ್ರಾಮೀಣ ಯುವಜನರ ಜೀವನದ ಗುಣಮಟ್ಟ ಉತ್ತಮಪಡಿಸುವ ನಿಟ್ಟಿನಲ್ಲಿ ಘೋಷಿಸಿದ್ದ ‘ಯುವ ಜನರಿಗಾಗಿ ವಿಶೇಷ ಗ್ರಾಮಸಭೆ’ಗೆ ಜಿಲ್ಲೆಯಲ್ಲಿ ಗ್ರಾಪಂಗಳು ಸೊಪ್ಪು ಹಾಕಿಲ್ಲ.

    ಸರ್ಕಾರ ಯುವಜನ ಗ್ರಾಮಸಭೆ ಮಹತ್ವ ಮನಗಂಡು ಜ.12ರಂದು ಸ್ವಾಮಿ ವಿವೇಕಾನಂದರ ಜನ್ಮಜಯಂತಿ ಅಂಗವಾಗಿ ನಡೆಯುವ ರಾಷ್ಟ್ರೀಯ ಯುವ ಸಪ್ತಾಹದಲ್ಲಿ ರಾಜ್ಯದ ಎಲ್ಲ ಗ್ರಾಪಂಗಳಲ್ಲಿಯೂ ಕಡ್ಡಾಯವಾಗಿ ‘ಯುವಜನರಿಗಾಗಿ ವಿಶೇಷ ಗ್ರಾಮಸಭೆ’ ಆಯೋಜಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ ನಿರ್ದೇಶಿಸಿತ್ತು.

    ಈ ಬಗ್ಗೆ ಜಿಲ್ಲೆಯೆಲ್ಲೆಡೆ ರಿಯಾಲಿಟಿ ಚೆಕ್ ನಡೆಸಿದ ‘ವಿಜಯವಾಣಿ’ಗೆ ಎಲ್ಲಿಯೂ ಸಭೆ ಆಯೋಜಿಸಿರುವುದು ಕಾಣಿಸಲಿಲ್ಲ, ಸಪ್ತಾಹದ ಬಗ್ಗೆ ನಮಗೆ ಮಾಹಿತಿ ಬಂದಿಲ್ಲ ಎಂದು ಕೆಲ ಗ್ರಾಪಂ ಅಧಿಕಾರಿಗಳು ಹೇಳಿದರು, ಇನ್ನೂ ಕೆಲವರು ಈ ವಾರದಲ್ಲಿ ಒಂದು ದಿನ ಮಾಡುವುದಾಗಿ ತಪ್ಪು ಸರಿಪಡಿಸಿಕೊಳ್ಳುವ ಮಾತನಾಡಿದರು.

    ಜಿಲ್ಲೆಯಲ್ಲಿ 330 ಗ್ರಾಪಂಗಳಿದ್ದು ಚಿಕ್ಕನಾಯಕನಹಳ್ಳಿ ತಾಲೂಕು ಮುದ್ದೇನಹಳ್ಳಿ ಗ್ರಾಪಂ, ಶಿರಾ ತಾಲೂಕು ಸೀಬಿ ಅಗ್ರಹಾರ ಗ್ರಾಪಂ ಸೇರಿ ಬೆರಳೆಣಿಕೆಯಷ್ಟು ಗ್ರಾಪಂಗಳಲ್ಲಿ ಸ್ವಾಮಿ ವಿವೇಕಾನಂದರನ್ನು ನೆನಪು ಮಾಡಿಕೊಂಡು ಯುವಕರ ಸಮಸ್ಯೆ ಆಲಿಸಲಾಗಿದೆ. ಗ್ರಾಮೀಣ ಯುವಜನ ಸಬಲೀಕರಣದಲ್ಲಿ ಇದೊಂದು ಮಹತ್ವದ ಮೈಲಿಗಲ್ಲು ಎನಿಸಿದ್ದ ಕಾರ್ಯಕ್ರಮಕ್ಕೆ ತುಮಕೂರು ಜಿಪಂ ಎಳ್ಳುನೀರು ಬಿಟ್ಟಿರುವುದು ಯುವಜನರ ಆಕ್ರೋಶಕ್ಕೆ ಕಾರಣವಾಗಿದೆ.

    ಮಣ್ಣುಪಾಲಾದ ಗ್ರಾಮಸಭೆ ಉದ್ದೇಶ: ರಾಜ್ಯದಲ್ಲಿ 2 ಕೋಟಿಗೂ ಹೆಚ್ಚು ಯುವಜನನರಿದ್ದು ಇವರ ಪೈಕಿ ಶೇ.70 ಜನರು ಗ್ರಾಮಗಳಲ್ಲಿಯೇ ಇದ್ದಾರೆ. ಕರೊನಾ ಕಾರಣಕ್ಕೆ ಉದ್ಯೋಗ ಕಳೆದುಕೊಂಡು ನಗರದಿಂದ ಲಕ್ಷಾಂತರ ಜನರು ಗ್ರಾಮಗಳಿಗೆ ಹಿಂತಿರುಗಿದ ಕಾರಣಕ್ಕೆ ಶಿಕ್ಷಣ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗೆ ಸಿಲುಕಿದ್ದ ಹಿನ್ನೆಲೆಯಲ್ಲಿ ಸಭೆ ಮಹತ್ವ ಪಡೆದಿತ್ತು. ಇದೆಲ್ಲವನ್ನೂ ಗಮನಿಸಿ ಗ್ರಾಮೀಣ ಯುವಜನರ ಯೋಗಕ್ಷೇಮಕ್ಕೆ ಪೂರಕವಾಗಿ ಕಾರ್ಯಕ್ರಮ ರೂಪಿಸಲು ಮತ್ತು ಪ್ರತಿಸ್ಪಂದಿಸುವಂತೆ ಮಾಡಲು ‘ವಿಶೇಷ ಗ್ರಾಮಸಭೆ’ ಬಳಕೆಯಾಗಬೇಕಿತ್ತು. ಜಿಪಂ ಇಮೇಲ್ ಮೂಲಕ ಸೂಚಿಸಿದ್ದ ಸುತ್ತೋಲೆಗೆ ಗ್ರಾಪಂ ಪಿಡಿಒಗಳು ತಲೆಕೆಡಿಸಿಕೊಂಡಿಲ್ಲ.

    ಯುವ ಜನರಿಗಾಗಿ ಗ್ರಾಮಸಭೆ ನಡೆಸುವ ನಿರ್ಧಾರಕ್ಕಾಗಿ ಕಳೆದ ನಾಲ್ಕು ವರ್ಷದಿಂದ ಹೋರಾಟ ಮಾಡಿದ್ದೆವು, ಐತಿಹಾಸಿಕ ಎನಿಸಿಕೊಂಡಿದ್ದ ಈ ಮಹತ್ವದ ನಿರ್ಧಾರ ಅಧಿಕಾರಿಗಳ ನಿರುತ್ಸಾಹದಿಂದ ಹಾಳಾಗಿದೆ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಉನ್ನತಾಧಿಕಾರಿಗಳ ಗಮನ ಸೆಳೆಯಲಾಗುವುದು.
    ಕೆ.ಟಿ.ತಿಪ್ಪೇಸ್ವಾಮಿ ಸದಸ್ಯರು, ಪರಿಷತ್ ಮತ್ತು ನಿರ್ದೇಶಕ ಸಮಿತಿ, ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವಾಲಯ

    ಯುವಜನರನ್ನು ಗ್ರಾಮೀಣಾಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಜ.12ರಂದು ರಾಜ್ಯದ ಎಲ್ಲ ಗ್ರಾಪಂಗಳಲ್ಲಿಯೂ ‘ವಿಶೇಷ ಯುವ ಗ್ರಾಮಸಭೆ’ ನಡೆಸುವಂತೆ ಸೂಚಿಸಲಾಗಿತ್ತು.
    ಎಲ್.ಕೆ.ಅತೀಕ್ ಪ್ರಧಾನ ಕಾರ್ಯದರ್ಶಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts