More

    ವಿಜಯವಾಣಿ ಫೋನ್ ಇನ್| ವಸತಿ ಇಲಾಖೆ ಸೋಮಣ್ಣ ಹೊಸಬಣ್ಣ

    ಕಳಾಹೀನವಾಗಿದ್ದ ವಸತಿ ಇಲಾಖೆಗೆ ಈಗ ಹುರುಪು ಬಂದಿದೆ. ಅತಿ ಕಡಿಮೆ ಅವಧಿಯಲ್ಲಿ ದೊಡ್ಡ ಗುರಿಯೊಂದನ್ನು ಸಾಧಿಸುವ ಛಲದೊಂದಿಗೆ ಇಲಾಖೆ ಹೊರಟಂತಿದೆ. ಅನುಭವಿ ವಿ.ಸೋಮಣ್ಣ ಎರಡನೇ ಬಾರಿಗೆ ವಸತಿ ಸಚಿವರಾಗಿ ಜವಾಬ್ದಾರಿ ತೆಗೆದುಕೊಂಡ ನಾಲ್ಕೇ ತಿಂಗಳಲ್ಲಿ ಇಲಾಖೆಯಲ್ಲಿ ಸಂಚಲನ ಸೃಷ್ಟಿಯಾಗಿದೆ. ಈ ಹಿಂದೆ ನಡೆದ ಅಕ್ರಮಗಳನ್ನು ಕೊಡವಿ, ಏರುಪೇರುಗಳನ್ನು ಸರಿಪಡಿಸಿ ವ್ಯವಸ್ಥೆಯನ್ನು ಹಳಿಮೇಲೆ ತರಲು 69ರ ಹರೆಯದ ಸೋಮಣ್ಣ, 28ರ ಯುವಕರಂತೆ ಕೆಲಸ ಮಾಡುತ್ತಾ ಚುರುಕುಮುಟ್ಟಿಸಿದ್ದಾರೆ. ಇಲಾಖೆಯಲ್ಲಿ ಆಗಿರುವ, ಆಗಬೇಕಿರುವ ಕೆಲಸಗಳ ಬಗ್ಗೆ ‘ವಿಜಯವಾಣಿ ಫೋನ್- ಇನ್’ನಲ್ಲಿ ಸಚಿವರು ಮನಬಿಚ್ಚಿ ಮಾತನಾಡಿದ್ದಾರೆ.

    ವಿಜಯವಾಣಿ ಫೋನ್ ಇನ್| ವಸತಿ ಇಲಾಖೆ ಸೋಮಣ್ಣ ಹೊಸಬಣ್ಣನಾನು ವಸತಿ ಇಲಾಖೆ ಜವಾಬ್ದಾರಿ ತೆಗೆದುಕೊಂಡ ಮೇಲೆ ಒಂದು ಹಂತಕ್ಕೆ ತಂದಿದ್ದೇನೆ. ನಕಲಿ ದಾಖಲೆ ನೀಡಿ ಮನೆ ಪಡೆದುಕೊಳ್ಳುವ ಪ್ರಕರಣ ಪತ್ತೆ ಹಚ್ಚಲಾಗಿದೆ. ಇದೇ ಕೆಲವರಿಗೆ ಸಮಸ್ಯೆಯಾಗಿದೆ. ‘ನೀನ್ಯಾಕಪ್ಪ ಈ ಇಲಾಖೆಗೆ ಬಂದೆ’ ಎಂದು ಕೆಲವರು ಕೇಳುತ್ತಿದ್ದಾರೆ ಎಂದು ಸಚಿವ ಸೋಮಣ್ಣ ಅನುಭವ ಹಂಚಿಕೊಂಡರು. ನುಂಗಣ್ಣರ ಹಾವಳಿ ವಿಪರೀತ ಇದ್ದು, ಎಲ್ಲರನ್ನೂ ಹದ್ದುಬಸ್ತಿನಲ್ಲಿಡುತ್ತಿದ್ದೇನೆ. ನಿಧಾನವಾಗಿ ಎಲ್ಲವೂ ಸರಿಯಾಗುತ್ತಿದೆ. ಇನ್ನೂ 3-4 ತಿಂಗಳಲ್ಲಿ ಒಂದು ಹಂತಕ್ಕೆ ತರುತ್ತೇನೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
    ಈ ಹಿಂದೆ ವಸತಿ ಯೋಜನೆಗಳಲ್ಲಿ ಸಮಸ್ಯೆ ಮಾಡಿ ಹೋಗಿದ್ದಾರೆ. ಪುಂಡ ಪೋಕರಿಗಳಿಗೆಲ್ಲ ಮನೆ ನೀಡಿದ್ದಾರೆ. ಈಗ ತಪ್ಪಿತಸ್ಥ 3-4 ಪಿಡಿಒಗಳ ಮೇಲೆ ಕ್ರಮಕೈಗೊಳ್ಳುತ್ತಿದ್ದಂತೆ ಎಲ್ಲರೂ ಎಚ್ಚೆತ್ತುಕೊಂಡು ಅರ್ಹರಿಗೆ ಮಾತ್ರ ಅವಕಾಶ ಸಿಗುವಂತಾಗಿದೆ. ಪಂಚಾಯಿತಿಯಲ್ಲಿ ನುಂಗಣ್ಣರಿದ್ದಾರೆ. ಮನೆ ಮಂಜೂರು ಮಾಡಲು 40 ಸಾವಿರ ರೂ.ವರೆಗೆ ಲಂಚ ಕೊಡುವ ಪರಿಸ್ಥಿತಿ ಇದೆ. ಇದೆಲ್ಲವನ್ನೂ ಸರಿ ಮಾಡಿ ಪಾರದರ್ಶಕವಾಗಿ ಅರ್ಹರಿಗೆ ಮನೆ ಸಿಗಬೇಕೆಂಬುದು ನನ್ನ ಆಶಯ ಎಂದರು.

    2022ರೊಳಗೆ 10 ಲಕ್ಷ ಮನೆ ಕೊಡಬೇಕೆಂಬ ಗುರಿ ಇಟ್ಟುಕೊಂಡಿದ್ದೇನೆ. ಅದಕ್ಕೂ ಮೊದಲು ಈಗ 5.40 ಲಕ್ಷ ಮನೆ ವಿವಿಧ ಹಂತದಲ್ಲಿದೆ. 4.60 ಲಕ್ಷ ಮನೆ ಸ್ಥಗಿತವಾಗಿದೆ. ಇದನ್ನು ಮೊದಲು ಲಾಜಿಕಲ್ ಎಂಡ್​ಗೆ ತೆಗೆದುಕೊಂಡು ಹೋಗುತ್ತೇನೆ ಎಂದ ಸೋಮಣ್ಣ, ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ಅನೇಕ ರಾಜಕೀಯ ಕಾರಣಕ್ಕಾಗಿ ತಪ್ಪುಗಳಾಗಿದೆ. ಕೆಲಕಡೆ ಸುಳ್ಳು ಹೇಳಿ ಮನೆ ಮಂಜೂರು ಪತ್ರ ಕೊಟ್ಟಿದ್ದಾರೆ. ಅದರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ಆದರೆ, ಅದನ್ನು ಇಟ್ಟುಕೊಂಡವರಿಗೆ ಉಪಯೋಗವಾಗಲ್ಲ ಎಂದರು. ನಾನು ಇಲಾಖೆಗೆ ಬಂದ ಮೇಲೆ 1200 ಕೋಟಿ ರೂ. ವೆಚ್ಚ ಮಾಡಿದ್ದೇವೆ. ಅರ್ಹರಿಗೆ ಹಣ ಬಿಡುಗಡೆ ಮಾಡುತ್ತಿದ್ದೇವೆ. ಮುಂದೆ ಸಹ ಈ ಬಗ್ಗೆ ಎಚ್ಚರಿಕೆ ವಹಿಸುತ್ತೇವೆ ಎಂದು ತಿಳಿಸಿದರು.

    ಪೌರಕಾರ್ವಿುಕರು ದೇವರಂತೆ

    ನಗರಗಳನ್ನು ಸ್ವಚ್ಛವಾಗಿಡುವಲ್ಲಿ ಪೌರಕಾರ್ವಿುಕರ ಪಾತ್ರ ಮಹತ್ವದ್ದು. ಅವರು ದೇವರಿದ್ದ ಹಾಗೆ. ಅವರಿಗೆ ಮನೆ ಕೊಡುವ ವಿಚಾರದಲ್ಲಿ ಪ್ರಥಮ ಪ್ರಾಶಸ್ತ್ಯ ನೀಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಸಚಿವ ಸೋಮಣ್ಣ ಉತ್ತರಿಸಿದರು.

    ಸ್ಲಂಗಳ ನಿಮೂಲನೆಗೆ 70 ಸಾವಿರ ಮನೆ ನಿರ್ಮಾಣ

    ವಿಜಯವಾಣಿ ಫೋನ್ ಇನ್| ವಸತಿ ಇಲಾಖೆ ಸೋಮಣ್ಣ ಹೊಸಬಣ್ಣರಾಜ್ಯದಲ್ಲಿ 2700 ಕೊಳಚೆ (ಸ್ಲಂ) ಪ್ರದೇಶಗಳಿದ್ದು, ಅದರಲ್ಲಿ ಕನಿಷ್ಠ 1 ಸಾವಿರ ಕೊಳಚೆ ಪ್ರದೇಶಗಳನ್ನ ನಿಮೂಲನೆ ಮಾಡಲು ಸಂಕಲ್ಪ ಮಾಡಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು. ಬೆಂಗಳೂರಿನಲ್ಲಿ 200ಕ್ಕೂ ಹೆಚ್ಚು ಕೊಳಚೆ ಪ್ರದೇಶಗಳಿವೆ. ಅವರಿಗಾಗಿಯೇ 70 ಸಾವಿರ ಮನೆಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ಹಿಂದೆ ಸಚಿವನಾಗಿದ್ದ ಸಂದರ್ಭ ಬಿನ್ನಿಪೇಟೆ, ಕರಿತಿಮ್ಮನಹಳ್ಳಿ, ಪಾದರಾಯನಪುರ, ಪಂತರಪಾಳ್ಯ ಸೇರಿ ಹಲವು ಕಡೆಯಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಟ್ಟಿದ್ದೇನೆ ಎಂದರು.

    ಕೊಳಚೆ ನಿಮೂಲನಾ ಮಂಡಳಿ ಬಿಳಿಯಾನೆ

    ವಿಜಯವಾಣಿ ಫೋನ್ ಇನ್| ವಸತಿ ಇಲಾಖೆ ಸೋಮಣ್ಣ ಹೊಸಬಣ್ಣನಿಜ ಹೇಳ ಬೇಕೆಂದರೆ, ಕೊಳಚೆ ನಿಮೂಲನಾ ಮಂಡಳಿ ಬಿಳಿಯಾನೆ ಆಗಿದೆ. ತಿಮಿಂಗಿಲ ಸಾಕಲು ಆಗುತ್ತದೆಯೇ? ರಾಜೀವ್​ಗಾಂದಿ ವಸತಿ ನಿಗಮ ವ್ಯಾಪ್ತಿಗೆ ಕೆಲವು ಮಂಡಳಿ ತರಬೇಕು ಎಂದು ಸೋಮಣ್ಣ ಅಭಿಪ್ರಾಯಪಟ್ಟರು.

    ಪ್ರಾಧಿಕಾರಗಳು ವಸತಿ ಇಲಾಖೆಗೆ ಬರಲಿ

    ನಗರಾಭಿವೃದ್ಧಿ ಇಲಾಖೆಯಡಿ ಇರುವ ಪ್ರಾಧಿಕಾರಗಳನ್ನು ವಸತಿ ಇಲಾಖೆ ವ್ಯಾಫ್ತಿಗೆ ನೀಡಿದರೆ, ವಸತಿ ಯೋಜನೆಯಲ್ಲಿ ಡೂಪ್ಲಿಕೇಷನ್ ಆಗುವುದನ್ನು ತಡೆಯಲು ಸಾಧ್ಯ ಮತ್ತು ಇನ್ನಷ್ಟು ಸಮರ್ಥವಾಗಿ ಕೆಲಸ ಮಾಡಬಹುದಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿ ಪ್ರಸ್ತಾವನೆ ಸಲ್ಲಿಸಿದ್ದೇನೆ. ಸರ್ಕಾರ ಈ ಬಗ್ಗೆ ತೀರ್ಮಾನ ತೆಗೆದು ಕೊಳ್ಳಬೇಕಿದೆ ಎಂದು ಸೋಮಣ್ಣ ತಿಳಿಸಿದರು.

    ರೇರಾ ಕಾಯ್ದೆಗೆ ಹೊಸ ರೂಪ

    ವಸತಿ ಸಮುಚ್ಛಯಗಳಲ್ಲಿ ಮನೆ ಕೊಳ್ಳಲು ಹೋಗಿ ಮೋಸ ಹೋಗುವ ಸಾಮಾನ್ಯ ಜನರನ್ನು ರಕ್ಷಿಸಲು ರೇರಾ ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಿದ್ದೇನೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು. ಮನೆ ಕೊಳ್ಳುವ ಉದ್ದೇಶದಿಂದ ಮಧ್ಯಮ ವರ್ಗದವರು ಒಂದಷ್ಟು ಕಂತುಗಳನ್ನು ಪಾವತಿಸುತ್ತಾರೆ, ಮಧ್ಯದಲ್ಲಿ ಒಂದೋ ಎರಡೋ ಕಂತು ಪಾವತಿ ಮಾಡದೆ ಇದ್ದರೆ ಅದನ್ನೇ ನಪವಾಗಿಟ್ಟುಕೊಂಡು ಅವರ ಹಣ ಹಿಂತಿರುಗಿಸಿ ಬೇರೆಯವರಿಗೆ ಮನೆ ಮಾರಾಟ ಮಾಡುವ ದಂಧೆ ಹೆಚ್ಚಾಗಿದೆ ಎಂದರು. ರೇರಾ ಕಾಯ್ದೆ ಉಲ್ಲಂಘನೆ ಸಂಬಂಧ 4000ಕ್ಕಿಂತ ಹೆಚ್ಚು ದೂರುಗಳು ದಾಖಲಾಗಿದೆ. ಇದರಲ್ಲಿ 700 ದೂರು ವಿಲೇವಾರಿ ಮಾಡಲಾಗಿದೆ. ಹೆಚ್ಚಿನ ದೂರುಗಳು ಇದೇ ರೀತಿಯದ್ದಾಗಿವೆ. ಸಣ್ಣ ಪುಟ್ಟ ಉಳಿತಾಯ ಮಾಡಿ ಮನೆ ಕೊಳ್ಳಲು ಹೋದವರಿಂದ ಕಂತು ಕಟ್ಟಿಸಿ ನಂತರ ಆ ಮನೆಗಳನ್ನು ಹೆಚ್ಚಿನ ಬೆಲೆ ಬಂದಾಗ ಬೇರೆಯವರಿಗೆ ಮಾರುತ್ತಿದ್ದಾರೆ ಎಂದ ಸೋಮಣ್ಣ, ನಾನೇನು ಬಿಲ್ಡರ್​ಗಳ ವಿರೋಧಿಯಲ್ಲ. ಆದರೆ, ಜನಸಾಮಾನ್ಯರಿಗೆ ವಂಚನೆ ಆಗಬಾರದಲ್ಲ. ಹೀಗಾಗಿ ರೇರಾ ಕಾಯ್ದೆಗೆ ತಿದ್ದುಪಡಿ ತರುತ್ತೇನೆ. ಜನ ಸಾಮಾನ್ಯನೂ ಮನೆ ಕೊಳ್ಳುವಂತೆ ಮಾಡುತ್ತೇನೆ ಎಂದು ಹೇಳಿದರು.

    ಅಲೆಮಾರಿಗಳಿಗೆ ವಿಶೇಷ ಪ್ಯಾಕೇಜ್

    ವಿಜಯವಾಣಿ ಫೋನ್ ಇನ್| ವಸತಿ ಇಲಾಖೆ ಸೋಮಣ್ಣ ಹೊಸಬಣ್ಣಬುಡುಬುಡುಕೆ, ಸುಡುಗಾಡುಸಿದ್ದ, ಹಕ್ಕಿಪಿಕ್ಕಿ, ಕಾಡುಕುರುಬರು, ಕಾಡುಗೊಲ್ಲರು ಸೇರಿ ಅಲೆಮಾರಿ ಜನಾಂಗಗಳ ವಸತಿರಹಿತರಿಗೆ ಮನೆ ನಿರ್ವಿುಸಿಕೊಡಲು ವಿಶೇಷ ಪ್ಯಾಕೇಜ್ ರೂಪಿಸಲಾಗುತ್ತಿದೆ, 60 ಸಾವಿರ ಮನೆಗಳನ್ನು ಈ ವರ್ಗದವರಿಗೆ ನಿರ್ವಿುಸಿಕೊಡುವ ಉದ್ದೇಶವಿದೆ ಎಂದು ಹೇಳಿದರು. ಗ್ರಾಮೀಣ ಪ್ರದೇಶದ ವಸತಿ ರಹಿತರಿಗೆ ಮನೆ ನಿರ್ವಿುಸಲು ಬೇಕಾದ ನಿವೇಶನ ರಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ಜಾಗ ಗುರುತಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಇದರಿಂದ ಗ್ರಾಮೀಣ ಪ್ರದೇಶದ ಬಹುತೇಕ ಸಮಸ್ಯೆ ಪರಿಹಾರ ಕಾಣಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

    9.74 ಲಕ್ಷ ಮನೆ ಪೂರ್ಣ ನನ್ನ ಮೊದಲ ಗುರಿ

    ವಿವಿಧ ಕಾರಣಗಳಿಂದ ನನೆಗುದಿಗೆ ಬಿದ್ದಿರುವ ವಸತಿ ಯೋಜನೆಗಳನ್ನು ಪೂರ್ಣಗೊಳಿಸುವುದೇ ನನ್ನ ಮೊದಲ ಗುರಿ ಎಂದು ವಿ.ಸೋಮಣ್ಣ ತಿಳಿಸಿದರು. ಈ ಹಿಂದಿನ ಸರ್ಕಾರ ವಸತಿ ಯೋಜನೆ ಬಗ್ಗೆ ಕಾಳಜಿ ವಹಿಸಲೇ ಇಲ್ಲ. ನನ್ನ ಹಿಂದಿನ ಅವಧಿಯಲ್ಲಿ ಜಾರಿ ಮಾಡಿದ್ದ ಯೋಜನೆಗಳೇ ಪೂರ್ಣಗೊಳಿಸಲಿಲ್ಲ. ಸರಿಸುಮಾರು 9.74 ಲಕ್ಷ ಮನೆಗಳು ಪ್ರಗತಿಯಲ್ಲಿದ್ದು, ಇವು ಪೂರ್ಣಗೊಳ್ಳಲು 10 ಸಾವಿರ ಕೋಟಿ ರೂ. ಬೇಕಾಗುತ್ತದೆ. ಈ ವಿಷಯವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗಿದೆ. ಅವರು ಅನುದಾನ ಕೊಡುವ ಭರವಸೆ ನೀಡಿದ್ದಾರೆ ಎಂದರು. ಗ್ರಾಮೀಣ ಭಾಗದಲ್ಲಿ 1.24 ಲಕ್ಷ ನಿವೇಶನಗಳನ್ನು ಬಡವರಿಗೆ ನೀಡಲು 4523 ಎಕರೆ ಜಾಗವಿದೆ. ಅದನ್ನು ಬಡವರಿಗೆ ಹಂಚದೆ ಬಿಟ್ಟರೆ ಬೇರೆ ಯಾರಿಗಾದರೂ ಮಾರಾಟ ಮಾಡಿಬಿಡುತ್ತಾರೆ. ಹೀಗಾಗಿ ಆದ್ಯತೆ ಮೇಲೆ ನಿವೇಶನ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ಕೇಂದ್ರ 1.25 ಲಕ್ಷ ಮನೆ ಹಂಚಿಕೆ ಮಾಡಿದ್ದು, ಈಗಿನ ಎಲ್ಲ ವಸತಿ ಯೋಜನೆ ಒಂದು ಹಂತಕ್ಕೆ ಬಂದ ನಂತರ ಅದನ್ನು ಬಳಸಿಕೊಳ್ಳಲಾಗುತ್ತದೆ. ಇದನ್ನು ಬಳಸಲು ಮೂರು ವರ್ಷ ಕಾಲಾವಕಾಶವಿದೆ ಎಂದರು.

    ಬಿಡಿಎ ಎಡವಟ್ಟು

    ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹುಟ್ಟಿ ಕೊಂಡಿದ್ದು ಯೋಜನೆ ರೂಪಿಸಲು. ಆದರೆ, ಅದನ್ನು ಬಿಟ್ಟು ಅವರು ಲೇಔಟ್ ಮಾಡಲು ಹೋಗಿ ಎಲ್ಲ ಎಡ ವಟ್ಟಾಯಿತು. ಮೂಲ ಉದ್ದೇಶವೇ ಸಫಲವಾಗಲಿಲ್ಲ. ಹೌಸಿಂಗ್ ಬೋರ್ಡ್ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಸೋಮಣ್ಣ ಹೇಳಿದರು.

    ಸೋಮಣ್ಣರ ಮಾರ್ಗದರ್ಶನ

    ವಿಜಯವಾಣಿ ಫೋನ್ ಇನ್| ವಸತಿ ಇಲಾಖೆ ಸೋಮಣ್ಣ ಹೊಸಬಣ್ಣಗೋವಿಂದರಾಜನಗರ ವಾರ್ಡ್​ನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ಸಚಿವರಾದ ವಿ.ಸೋಮಣ್ಣ ಅವರ ಮಾರ್ಗದರ್ಶನ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಬಿಬಿಎಂಪಿ ಸದಸ್ಯ ಕೆ.ಉಮೇಶ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಚಿವರು ಹಾಗೂ ವಾರ್ಡ್​ನ ನಾಗರಿಕರ ಆಶೋತ್ತರಗಳಿಗೆ ಸ್ಪಂದಿಸಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸಾರ್ವಜನಿಕರ ತೆರಿಗೆ ಹಣ ಸಮರ್ಪಕವಾಗಿ ವಾರ್ಡ್ ಅಭಿವೃದ್ದಿಗೆ ಯೋಜನಾ ಬದ್ಧವಾಗಿ ಕಾಮಗಾರಿಗಳು ನಡೆಯುತ್ತಿದೆ. ವಾರ್ಡ್​ನ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳು ಸಿಗಬೇಕು. ಜನರಿಂದ ಜನರಿಗಾಗಿ ಸೇವೆ ಮಾಡುವುದು ನಮ್ಮ ಕರ್ತವ್ಯ ಎಂದು ಸೋಮಣ್ಣ ಅವರ ಜತೆಗೂಡಿ ದಿನರಾತ್ರಿ ಶ್ರಮಿಸುತ್ತೇವೆ ಎಂದು ಉಮೇಶ್ ಶೆಟ್ಟಿ ಹೇಳಿದ್ದಾರೆ.

    ಸಾಲ ಕೊಡಿಸಿದ ‘ತಪ್ಪಿಗೆ’ ತಾಯಿ-ಮಗಳ ಆತ್ಯಹತ್ಯೆ! ಫಿಲೇಚರ್ ಮಾಲೀಕನ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts