More

    ರುದ್ರೇಶ್ ಸೇವೆ ಮೆಚ್ಚಿದ ರಾಮನಗರ

    ಕರೊನಾದಂತಹ ಐತಿಹಾಸಿಕ ಸಂಕಷ್ಟದ ಪರಿಸ್ಥಿತಿಯಲ್ಲಿ, ಯಾವುದೇ ಅಧಿಕಾರ, ಹುದ್ದೆ ಇಲ್ಲದಿದ್ದರೂ ಜನಪ್ರತಿನಿಧಿಗಳನ್ನೂ ಮೀರಿಸಿ ಜನಸೇವೆ ಮಾಡುತ್ತಿರುವ ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ. ರುದ್ರೇಶ್ ಅವರನ್ನು ಜಿಲ್ಲೆಯ ಜನರೇ ಹೃದಯಪೂರ್ವಕವಾಗಿ ಅಭಿನಂದಿಸಿದ್ದಾರೆ. ಕರೊನಾ ಸಂಕಷ್ಟ ಸ್ಥಿತಿಯನ್ನು ನಿಭಾಯಿಸುವ ಸಂಬಂಧ ವಿಜಯವಾಣಿ ಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಕರೆ ಮಾಡಿದ ಎಲ್ಲರೂ ರುದ್ರೇಶ್ ಅವರ ಸೇವಾ ಕೈಂಕರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ಭೇಷ್ ಎಂದರು.

    ರುದ್ರೇಶ್ ಸೇವೆ ಮೆಚ್ಚಿದ ರಾಮನಗರಬೆಂಗಳೂರು: ಆಹಾರ ಸಾಮಗ್ರಿ ಕೊರತೆಯಿರುವವರಿಗೆ ಕಿಟ್ ವಿತರಣೆ, ಔಷಧ ಬೇಕಿದ್ದವರಿಗೆ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಅವರ ಯೋಜನೆಯಲ್ಲಿ ಔಷಧ ನೀಡಿಕೆ, ನಿರಾಶ್ರಿತ ಕಾರ್ವಿುಕರಿಗೆ ಆಹಾರ ನೀಡುವ ಜತೆಗೆ ರಾಮನಗರದ ಭವಿಷ್ಯದ ದೃಷ್ಟಿಯಿಂದ ಶಾಶ್ವತವಾಗಿ ಸಹಾಯವಾಣಿ ಆರಂಭಿಸುವಿಕೆ, ಪಕ್ಷದ ಬಲವರ್ಧನೆ, ಸಿಎಂ ಬಿಎಸ್ ಯಡಿಯೂರಪ್ಪ ಅವರ ಕನಸಿನ ಯೋಜನೆಗಳಾದ ಶ್ರೀ ಶಿವಕುಮಾರ ಸ್ವಾಮೀಜಿ ಹಾಗೂ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಪ್ರತಿಮೆ ಸ್ಥಾಪನೆ, ರಾಮನಗರ-ಚನ್ನಪಟ್ಟಣ ಅವಳಿ ನಗರವಾಗಿಸುವುದು ಸೇರಿ ಅನೇಕ ಕನಸುಗಳನ್ನು ರುದ್ರೇಶ್ ಬಿಚ್ಚಿಟ್ಟರು. ಬೆಂಗಳೂರಿಗೆ ಅತ್ಯಂತ ಸಮೀಪದಲ್ಲಿರುವ ಜಿಲ್ಲೆಯಾದರೂ ರಾಮನಗರದ ಅನೇಕ ಗ್ರಾಮಗಳಿಗೆ ಮೂಲಸೌಕರ್ಯ ಇಲ್ಲ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಆಡಳಿತ ನಡೆಸಿದವರ ಕಾರ್ಯವೈಖರಿಗೆ ಇದು ಸಾಕ್ಷಿ. ಈಗ ಜಿಲ್ಲೆಯವರೇ ಆದ ಇಬ್ಬರು ಸಚಿವರು (ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ ಹಾಗೂ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್) ಹಾಗೂ ಜಿಲ್ಲಾ ತಂಡದ ಜತೆಗೂಡಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮುಂದಾಗುತ್ತೇವೆ ಎಂದು ರುದ್ರೇಶ್ ಹೇಳಿದರು.

    ಬಿಎಸ್​ವೈ ಇಲ್ಲದಿದ್ದರೆ ಸಂಕಷ್ಟ

    ರಾಜ್ಯದ ಜನರು ಸಂಕಷ್ಟದಲ್ಲಿರುವ ಸಮಯದಲ್ಲಿ ಬಿ.ಎಸ್.ಯಡಿಯೂರಪ್ಪನವರು ಸಿಎಂ ಆಗಿರುವುದರಿಂದ ಕರೊನಾದಿಂದಾಗಿ ರಾಜ್ಯ ಹೆಚ್ಚು ಬಾಧಿತವಾಗದಂತೆ ತಡೆದಿದ್ದಾರೆ. ಇಲ್ಲದಿದ್ದರೆ ನಮ್ಮ ರಾಜ್ಯ ಮಹಾರಾಷ್ಟ್ರದಂತಾಗುತ್ತಿತ್ತು ಎಂದ ರುದ್ರೇಶ್, ಪ್ರಧಾನಿ ನರೇಂದ್ರ ಮೋದಿಯವರ ಕಾಳಜಿಗೆ ತಕ್ಕಂತೆ ಯಡಿಯೂರಪ್ಪನವರು ಕಾರ್ಯ ನಡೆಸುತ್ತಿದ್ದಾರೆ. ಪೊಲೀಸ್, ವೈದ್ಯರು, ಆಶಾ ಕಾರ್ಯಕರ್ತೆಯರ ಪರಿಶ್ರಮ ಹಾಗೂ ಜನರ ಸಹಕಾರದಿಂದಾಗಿ ಜಿಲ್ಲೆ ಹಸಿರು ವಲಯದಲ್ಲಿದೆ. ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಸಚಿವರಾದ ಎಸ್.ಟಿ. ಸೋಮಶೇಖರ್, ಗೃಹಸಚಿವ ಬಸವರಾಜ ಬೊಮ್ಮಾಯಿ ಅವರೆಲ್ಲರ ಸಹಕಾರವೂ ಇದೆ ಎಂದರು.

    ತಂಡದ ಕಾರ್ಯ, ಮಠಗಳ ಸಹಕಾರ

    ನಮ್ಮ ಕಾರ್ಯಕರ್ತರು, ಅದರಲ್ಲೂ ಯುವ ಮೋರ್ಚಾ ಜಿಲ್ಲಾಧ್ಯಕ್ಷ ವರದರಾಜಗೌಡರ ತಂಡ ಪ್ರತಿನಿತ್ಯ ಸುಮಾರು 2000 ಜನರಿಗೆ ಮೂರು ಹೊತ್ತು ಊಟ ನೀಡುವ ಕಾರ್ಯ ಮಾಡಿದೆೆ. ದಿನಸಿ, ಆಹಾರ, ಔಷಧ ವಿತರಣೆ, ಆಸ್ಪತ್ರೆಗೆ ಕರೆದೊಯ್ಯಲು ಪ್ರತ್ಯೇಕ ತಂಡಗಳು ಕೆಲಸ ಮಾಡುತ್ತಿವೆ. ಕನಕಪುರದ ದೇಗುಲ ಮಠ ಹಾಗೂ ರಾಮನಗರದ ರೇವಣಸಿದ್ದೇಶ್ವರ ಮಠಗಳು ಈ ನಿಟ್ಟಿನಲ್ಲಿ ನೀಡಿದ ಸಹಕಾರ ಅಪಾರ ಎಂದು ರುದ್ರೇಶ್ ಸ್ಮರಿಸಿದರು.

    ವಿಜಯೇಂದ್ರ ಕನಸಿನ ಕೂಸು

    ಫೋನ್​ಇನ್​ನಲ್ಲಿ ಭಾಗವಹಿಸಿದ ಬಹುತೇಕ ಎಲ್ಲರೂ, ಮನೆಮನೆಗೆ ಔಷಧ ಸರಬರಾಜು ಮಾಡಿದ ರುದ್ರೇಶ್ ಅವರಿಗೆ ಅಭಿನಂದನೆ ಸಲ್ಲಿಸಿದರು. 4 ವರ್ಷದ ಮಧುಮೇಹ ಪೀಡಿತ ಮಗುವೊಂದಕ್ಕೆ ಔಷಧ ಬೇಕೆಂದು ರಾತ್ರಿ ತಿಳಿಸಿದ ಕೂಡಲೆ ಔಷಧ ತಲುಪಿಸಿದ್ದೀರ ಎಂದು ರಾಮನಗರದ ಕುಮಾರ್ ಹೇಳಿದರು. ಔಷಧ ವಿತರಣೆಯ ಸಂಪೂರ್ಣ ಶ್ರೇಯವನ್ನು ಬಿ.ವೈ. ವಿಜಯೇಂದ್ರ ಅವರಿಗೆ ಅರ್ಪಿಸಿದ ರುದ್ರೇಶ್, ಯೋಜನೆಯನ್ನು ಜಿಲ್ಲಾ ಯುವ ಮೋರ್ಚಾ ಸಮರ್ಥವಾಗಿ ಜಾರಿಗೊಳಿಸಿದೆ. ಜಿಲ್ಲಾ ಘಟಕದಿಂದಲೇ ಔಷಧ ವಿತರಿಸಲಿದ್ದೇವೆ ಎಂದು ತಿಳಿಸಿದರು.

    ಕೊಳಚೆ ನೀರಲ್ಲಿ ಕರೊನಾ ತಪಾಸಣೆ

    ಕೊಳಚೆ ನೀರಿನಲ್ಲೂ ಕರೊನಾ ಸೋಂಕು ಹರಡುತ್ತೆ ಎಂಬ ವಿಷಯವನ್ನು ಗಂಭೀರವಾಗಿ ಪರಿಗಣಿಸುವುದಾಗಿ ರುದ್ರೇಶ್ ತಿಳಿಸಿದರು. ಇತ್ತೀಚೆಗೆ ಬಿಡದಿ ಕೈಗಾರಿಕಾ ಪ್ರದೇಶಗಳಲ್ಲಿ ಚರ್ಮರೋಗ, ಕುಡಿಯುವ ನೀರಿನಿಂದ ಹಲ್ಲಿನ ಸಮಸ್ಯೆ ಹೆಚ್ಚಾಗಿ ಕಂಡು ಬಂದಿದ್ದರ ಬಗ್ಗೆ ಚರ್ಚೆ ಮಾಡಿದ್ದೆವು. ಆದರೆ ಇದು ಅದಕ್ಕಿಂತಲೂ ನಿಜಕ್ಕೂ ಗಂಭೀರ ವಿಷಯ. ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ, ಸಚಿವರಾದ ಶ್ರೀರಾಮುಲು, ಸುಧಾಕರ್ ಅವರೊಂದಿಗೆ ರ್ಚಚಿಸಲಾಗುವುದು. ಕೊಳಚೆ ನೀರು ಪರೀಕ್ಷೆ ಮಾಡಿಸಲು ಚಿಂತನೆ ನಡೆಸಲಾಗುವುದು ಎಂದರು.

    ಇದನ್ನೂ ಓದಿ ಬೈಕ್​ನ 4 ಅಡಿ ದೂರದಲ್ಲಿ ನಿಂತ್ರೆ ಹಾಲು ಬರುತ್ತೆ ..!​

    ಸಚಿವರ ಬೆಂಬಲ

    ರಾಮನಗರ ಜಿಲ್ಲೆಯವರೇ ಆದ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಹಾಗೂ ಸಚಿವ ಎಸ್.ಟಿ. ಸೋಮಶೇಖರ್ ಅವರು ತಮ್ಮೆಲ್ಲ ಅಭಿವೃದ್ಧಿಕೆಲಸಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ರಾಮನಗರದಲ್ಲಿ ಬಿಜೆಪಿಯನ್ನು ಬಲಿಷ್ಠವಾಗಿ ಕಟ್ಟುವ ತಮ್ಮ ಸಂಕಲ್ಪಕ್ಕೆ ಕೈಜೋಡಿಸಿದ್ದಾರೆ ಎಂದು ರುದ್ರೇಶ್ ಹೇಳಿದರು.

    ಶ್ರೀಗಳ ಪ್ರತಿಮೆ ನಿರ್ಮಾಣ

    ಶ್ರೀ ಶಿವಕುಮಾರ ಸ್ವಾಮೀಜಿಯವರ ಹಾಗೂ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಪ್ರತಿಮೆ ಸ್ಥಾಪಿಸುವುದು ಬಿಎಸ್​ವೈ ಕನಸಿನ ಯೋಜನೆ. ಈಗಾಗಲೆ ಭೂಮಿ ಹಸ್ತಾಂತರ ಆಗಿದೆ. ಆದಷ್ಟು ಶೀಘ್ರದಲ್ಲಿ ಈಡೇರುತ್ತದೆ.

    ರಾಜಕೀಯ ಮಾಡಲ್ಲ

    ರಾಮನಗರ ಸ್ಥಳೀಯ ಶಾಸಕರು ಮಾಡಬೇಕಾದ ಕೆಲಸವನ್ನು ನೀವು ಮಾಡುತ್ತಿದ್ದೀರಿ. ಸಮಾಜಸೇವೆ ಮಾಡುವ ನೀವು ರಾಜಕೀಯದಲ್ಲಿ ಪ್ರವೇಶ ಮಾಡಬಾರದೇಕೆ ? ಎಂದು ರಾಮನಗರ ಕೂಟಗಲ್​ನ ನಂದೀಶ್ ಪ್ರಶ್ನೆಗೆ ಉತ್ತರಿಸಿದ ರುದ್ರೇಶ್ ಕರೊನಾ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಬೇಕು. ಈ ವೇಳೆ ರಾಜಕೀಯ ಮಾಡಬಾರದು. ಜಿಲ್ಲಾಧ್ಯಕ್ಷ ಸ್ಥಾನದಲ್ಲಿದ್ದುಕೊಂಡು ನಮ್ಮ ಧರ್ಮ ನಾನು ಮಾಡಿದ್ದೇನೆ. ಬೇರೆಯವರು ಏನು ಮಾಡುತ್ತಾರೆ ಎಂಬ ಬಗ್ಗೆ ಚಿಂತೆ ಮಾಡಲ್ಲ, ನಿಮಗೇನಾದರೂ ಸಮಸ್ಯೆ ಅಥವಾ ಸರ್ಕಾರದಿಂದ ಏನಾದರೂ ಬರಬೇಕಾ ಹೇಳಿ, ನನ್ನ ಕೈಲಾದ್ದನ್ನು ಮಾಡುತ್ತೇನೆ ಎಂದರು.

    ಕೆಂಗಲ್ ಹನುಮಂತಯ್ಯರ ಪ್ರತಿಮೆ ಶತಃಸಿದ್ಧ

    ಕೆಂಗಲ್ ಹನುಮಂತಯ್ಯನವರ ಪ್ರತಿಮೆ ನಿರ್ಮಾಣ ಮಾಡಿಯೇ ತೀರುತ್ತೇವೆ ಎಂದು ರುದ್ರೇಶ್ ಹೇಳಿದರು. ರಾಮನಗರದಿಂದ ದೇವೇಗೌಡರ ಕುಟುಂಬಕ್ಕೆ ಲಾಭವಾಗಿದೆಯೇ ವಿನಃ ಅವರಿಂದ ಜಿಲ್ಲೆಗೆ ಏನೂ ಆಗಿಲ್ಲ. ದೇವೇಗೌಡರ ಪ್ರತಿಮೆ ಮಾಡಲು ಮುಂದಾಗುವವರಿಗೆ, ನಾಡಿನ ಸಿಎಂ ಆಗಿದ್ದ ಕೆಂಗಲ್ ಹನುಮಂತಯ್ಯನವರ ಪ್ರತಿಮೆ ಮಾಡುವ ಮನಸ್ಸಿಲ್ಲ. ಅವರ ಕುಟುಂಬಸ್ಥರಿಗೂ ಸಹಾಯ ಮಾಡಿಲ್ಲ. ಈ ಬಾರಿ ಜನರೇ ಪಾಠ ಕಲಿಸುತ್ತಾರೆ. ಕುಮಾರಸ್ವಾಮಿಯವರ ಪುತ್ರ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುತ್ತೇವೆ. ಅದೇ ರೀತಿ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಸಹೋದರರ ಬಗ್ಗೆಯೂ ಜನರಿಗೆ ಅರಿವಾಗಿದೆ. ಬಿಜೆಪಿ ವತಿಯಿಂದಲೇ ಕೆಂಗಲ್ ಹನುಮಂತಯ್ಯನವರ ಪ್ರತಿಮೆ ಸ್ಥಾಪಿಸುತ್ತೇವೆ ಎಂದರು.

    ಮಾಧ್ಯಮದಿಂದ ಸಹಾಯ

    ಪ್ರಾಣಿಗಳಿಗೆ ಆಹಾರ ನೀಡಿದ ವಿಚಾರವನ್ನು ಮಾಧ್ಯಮಗಳು ಎಲ್ಲೆಡೆ ಪ್ರಸಾರ ಮಾಡಿದ್ದರಿಂದ ಸಾವಿರಾರು ಪ್ರಾಣಿಗಳ ಪ್ರಾಣ ಉಳಿಯಿತು. ಈ ಸುದ್ದಿ ನೋಡಿ ಬೆಂಗಳೂರು ಸುತ್ತಮುತ್ತಲಿನ ಅನೇಕ ಅರಣ್ಯ ಪ್ರದೇಶಕ್ಕೆ ಜನರು ತೆರಳಿ ಪ್ರಾಣಿಗಳಿಗೆ ಆಹಾರ ನೀಡಿದ್ದಾರೆ. ಇದರ ಶ್ರೇಯ ಮಾಧ್ಯಮಗಳಿಗೆ ಸಲ್ಲಬೇಕು.

    ಮನೆಮನೆಗೆ ಜಾಗೃತಿ

    ಯೇಸುಬೆಟ್ಟದ ಹೆಸರಿನಲ್ಲಿ ನಡೆದ ಕೆಲಸಕ್ಕೆ ಹಿಂದಿನ ಸರ್ಕಾರ ಸಾಕಷ್ಟು ಪ್ರೋತ್ಸಾಹ ನೀಡಿದ್ದು ಕಾರಣ. ಕಾನೂನಾತ್ಮಕ ವಾಗಿ ಎಲ್ಲವನ್ನೂ ಪೂರೈಸಿಕೊಂಡಿದ್ದಾರೆ. ಈ ವಿಷಯವನ್ನು ಜಿಲ್ಲೆಯಲ್ಲಿ ಆಂದೋಲನವನ್ನಾಗಿಸಿ ಕೊಂಡು ಮನೆಮನೆಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ.

    ಅವಳಿ ನಗರದ ಯೋಜನೆ

    ಹುಬ್ಬಳ್ಳಿ-ಧಾರವಾಡದಂತೆ ರಾಮನಗರ-ಚನ್ನಪಟ್ಟಣ ಅವಳಿ ನಗರವಾಗಿ ಅಭಿವೃದ್ಧಿಪಡಿಸುವುದು ಕನಸಿನ ಯೋಜನೆ ಎಂದು ರುದ್ರೇಶ್ ಹೇಳಿದರು. ಈ ಹಿಂದೆ ಅವಳಿ ನಗರ ಪ್ರಾಧಿಕಾರ ಇತ್ತು. ಈ ವ್ಯವಸ್ಥೆಯನ್ನು ರಾಜಕೀಯ ಕಾರಣಕ್ಕೆ ಅನೇಕರು ಬದಲಾಯಿಸಿದರು. ಈಗ ಮತ್ತೊಮ್ಮೆ ಅವಳಿ ನಗರವಾಗಿಸಿ ಪ್ರಾಧಿಕಾರ ರಚಿಸುವ ಪ್ರಯತ್ನ ಆರಂಭವಾಗಲಿದೆ ಎಂದರು.

    ಕಾರ್ವಿುಕರ ಸಮಸ್ಯೆಗಳಿಗೆ ಪರಿಹಾರ

    ಚನ್ನಪಟ್ಟಣ ಸುತ್ತಲಿನ ಪ್ರದೇಶಗಳಲ್ಲಿ ಗೊಂಬೆಗಳ ಕೆತ್ತನೆ ಕೆಲಸ ಮಾಡುವ 2 ರಿಂದ 3 ಸಾವಿರ ನೌಕರರಿದ್ದಾರೆ. ಇವರಿಗೂ ಸರ್ಕಾರದ ಪ್ಯಾಕೇಜ್ ಒದಗಿಸಿಕೊಡಿ ಎಂದು ಚನ್ನಪಟ್ಟಣದ ಮಂಜುನಾಥ್ ಎಂಬುವವವರ ಪ್ರಶ್ನೆಗೆ, ವಿಶ್ವಕರ್ಮ ಸಮುದಾಯದವರಿಗೆ ಈಗಾಗಲೇ ಪ್ಯಾಕೇಜ್​ಗೆ ಚಿಂತನೆ ನಡೆಸಲಾಗಿದೆ. ಅದರಲ್ಲಿ ರೇಷ್ಮೆ ನೂಲು ತೆಗೆಯುವವರೂ ಸೇರಿ ಹಲವು ಸರ್ಕಾರದ ಪ್ಯಾಕೇಜ್ ವ್ಯಾಪ್ತಿಗೆ ಒಳಪಡುತ್ತಾರೋ ಅಥವಾ ಇಲ್ಲವೊ ಎಂದು ಪರಿಶೀಲಿಸಲಾಗುತ್ತಿದೆ. ಈಗಾಗಲೇ ಲಕ್ಷಾಂತರ ಕಾರ್ವಿುಕರ ಸಮಸ್ಯೆಗೆ ಪರಿಹಾರ ಒದಗಿಸಲು ಸರ್ಕಾರ ಈ ಪ್ಯಾಕೇಜ್ ಮಾಡಿದೆ. ಅದರಲ್ಲಿ ಗೊಂಬೆಗಳ ಕೆತ್ತನೆ ಕೆಲಸ, ರೇಷ್ಮೆ ನೂಲು ತೆಗೆಯುವವರಿಗೂ ವಿಶೇಷ ಪ್ಯಾಕೇಜ್ ಕಲ್ಪಿಸಲು ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.

    ಡಿಸಿಎಂ ಆದ್ಯತೆಯ ಯೋಜನೆ

    ರಾಮನಗರದಲ್ಲಿ ರಾಜೀವ್​ಗಾಂಧಿ ಆರೋಗ್ಯ ವಿವಿ ಸ್ಥಾಪಿಸುವ ಕಾರ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಡಿಸಿಎಂ ಡಾ. ಸಿ.ಎನ್.ಅಶ್ವತ್ಥನಾರಾಯಣ ಆದ್ಯತೆ ಮೇಲೆ ಪರಿಗಣಿಸಿದ್ದಾರೆ. ಸಮಸ್ಯೆಯನ್ನೆಲ್ಲ ಬಗೆಹರಿಸಿಕೊಳ್ಳಲಾಗಿದೆ, ಸದ್ಯದಲ್ಲೇ ಯೋಜನೆ ಸಾಕಾರವಾಗುತ್ತದೆ.

    ತಕ್ಷಣ ಸ್ಪಂದನೆ, ಅಧಿಕಾರಿಗೆ ಕರೆ

    ವೃದ್ಧಾಪ್ಯ ವೇತನಕ್ಕಾಗಿ ಹಲವು ಬಾರಿ ಬ್ಯಾಂಕ್​ಗೆ ಓಡಾಡಿ ಸಾಕಾಗಿದೆ, ಸಹಾಯ ಮಾಡಿ ಎಂದು ಮಾದಾಪುರದ ಶಿವಸ್ವಾಮಿಯವರು ಕೋರಿದರು. ವೃದ್ಧಾಪ್ಯ ವೇತನ ಬರಲಿಲ್ಲ ಎಂದು ಚಿಂತೆಗೆ ಒಳಗಾಗಬೇಡಿ, ಸಮಸ್ಯೆ ಸರಿಪಡಿಸಲಾಗುವುದು ಎಂದು ತಿಳಿಸಿದ ರುದ್ರೇಶ್, ಕೂಡಲೆ ಬ್ಯಾಂಕ್ ಅಧಿಕಾರಿಗೆ ಕರೆ ಮಾಡಿದರು. ಸಂಕಷ್ಟದ ಸಮಯದಲ್ಲಿ ಈ ರೀತಿ ತೊಂದರೆ ಆಗದಂತೆ ಗಮನಹರಿಸಿ. ಸಾಧ್ಯವಾದರೆ ಅವರ ಖಾತೆಗೆ ಆರ್​ಟಿಜಿಎಸ್ ಮಾಡಿ ಎಂದು ಮನವಿ ಮಾಡಿದರು.

    ಸಮಸ್ಯೆಗಳ ಪರಿಹಾರಕ್ಕೆ ಶಾಶ್ವತ ಸಹಾಯವಾಣಿ

    ಇಷ್ಟು ಜನಸೇವೆ ಮಾಡುತ್ತಿರುವ ನೀವೇಕೆ ಚುನಾವಣೆ ಕಣಕ್ಕೆ ಇಳಿಯಬಾರದು? ಎಂದು ಕರೆ ಮಾಡಿದವರೊಬ್ಬರು ಕೋರಿದರು. ಉತ್ತರಿಸಿದ ರುದ್ರೇಶ್, ಸದ್ಯ ಸಂಘಟನೆ ಮಾಡುವಂತೆ ಪಕ್ಷ ಹೊಣೆ ನೀಡಿದೆ. ಅದನ್ನು ಮುಂದುವರಿಸುತ್ತಿದ್ದೇವೆ. ಈ ಹಿಂದೆ ಕೆಲ ಗೊಂದಲಗಳು ಆಗಿರಬಹುದು. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗುತ್ತದೆ ಎಂಬ ಭರವಸೆಯಿದೆ. ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪಕ್ಷದ ಕಚೇರಿಯಲ್ಲಿ ಶಾಶ್ವತವಾಗಿ ಸಹಾಯವಾಣಿಯೊಂದನ್ನು ಆರಂಭಿಸಲಿದ್ದೇವೆ. ಬೆಂಗಳೂರಿನಿಂದ ನೂರಾರು ಕಿ.ಮೀ. ದೂರದ ಇಲ್ಲಿಯ ಹಳ್ಳಿಗಳ ಜನರ ಸಮಸ್ಯೆಗಳನ್ನು ಕಾರ್ಯಕರ್ತರು ಆಲಿಸಿ ಪರಿಹಾರ ಸೂಚಿಸುವ ಕೆಲಸ ಮಾಡುತ್ತೇವೆ ಎಂದರು.

    ಇದನ್ನೂ ಓದಿ ರಿಯಾಜ್ ನಾಯ್ಕೂ ಹತ್ಯೆ ಬಳಿಕ ಹಿಜ್ಬುಲ್ ಮುಜಾಹಿದೀನ್‌ಗೆ ಬಂದ ಹೊಸ ಕಮಾಂಡರ್!

    ಸಂಕಷ್ಟಕ್ಕೆ ಸ್ಪಂದನೆ

    ಪಾದರಾಯನಪುರದಲ್ಲಿ ದೊಂಬಿ ಎಬ್ಬಿಸಿದವರನ್ನು ರಾಮನಗರ ಜೈಲಿಗೆ ಕರೆತಂದದ್ದು ಎಷ್ಟು ಸರಿ?

    | ಪ್ರದೀಪ್ ರಾಮನಗರ

    ಆರೋಪಿಗಳನ್ನು ಎಲ್ಲಿ ಬೇಕೆಂದರಲ್ಲಿ ಉಳಿಸುವಂತಿಲ್ಲ. ಸಾಮಾನ್ಯ ಜನರಿಗೆ ತೊಂದರೆ ಆಗದಂತೆ ಅವರನ್ನಿಡಲು, ಬೆಂಗಳೂರಿನ ಸುತ್ತಮುತ್ತ, ವಸತಿ ಪ್ರದೇಶದಿಂದ ದೂರವಿರುವ ಜೈಲು ರಾಮನಗರದ್ದು ಎಂಬ ಕಾರಣಕ್ಕೆ ಅಲ್ಲಿಗೆ ವರ್ಗಾವಣೆ ನಿರ್ಧಾರ ಮಾಡಲಾಗಿತ್ತು. ಇದರಲ್ಲಿ ರಾಜಕಾರಣ ಬೆರೆಸಬಾರದು. ಕಾಂಗ್ರೆಸ್-ಜೆಡಿಎಸ್​ನವರು ಇರುವುದೇ ಈ ರೀತಿ ಆರೋಪ ಮಾಡಲು. ಇಂಥದ್ದಕ್ಕೆ ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ.

    ಬೆಳಗಾವಿ ಮೂಲದ ಕಾರ್ವಿುಕರಿಗೆ ಈಗ ಆಹಾರ ಸಿಗುತ್ತಿಲ್ಲ.

    | ಕುಮಾರ್ ರಾಮನಗರ

    ಈ ಬಗ್ಗೆ ಗಮನಹರಿಸಲಾಗುತ್ತದೆ. ಅವಶ್ಯಕತೆಯಿದ್ದರೆ ಆಹಾರ ನೀಡಲಾಗುತ್ತದೆ.

    ಕರೊನಾ ಇದ್ದರೂ ಅನೇಕರು ಇಲ್ಲಿ ಮಾರುಕಟ್ಟೆಯಲ್ಲಿ ಜನ ಸಂಚರಿಸುತ್ತಿದ್ದಾರೆ.

    | ಶಿವಣ್ಣ ಕೃಷ್ಣರಾಜ ಮಾರುಕಟ್ಟೆ | ಬಸವರಾಜು ರಾಮನಗರ

    ತೀರಾ ಅವಶ್ಯಕ ಕೆಲಸ ಹೊರತುಪಡಿಸಿ ಎಲ್ಲರೂ ಮನೆಯಲ್ಲಿರಬೇಕು ಎಂದು ಪ್ರಧಾನಿ, ಮುಖ್ಯಮಂತ್ರಿ ಮನವಿ ಮಾಡಿದ್ದಾರೆ. ಎಲ್ಲರೂ ಇದನ್ನು ಪಾಲಿಸಬೇಕು. 60 ವರ್ಷ ದಾಟಿದವರಂತೂ ಮನೆ ಬಿಟ್ಟು ಹೊರ ಹೋಗಲೇಬಾರದು. ರಾಮನಗರ ಎಸ್​ಪಿ ಜತೆಗೆ ಮಾತನಾಡಿ ಗಮನಹರಿಸುವಂತೆ ಕೋರುತ್ತೇನೆ.

    ಸಮಾಜ ಕಲ್ಯಾಣ ಇಲಾಖೆಯ ಚೆನ್ನಮ್ಮ ವಸತಿ ಶಾಲೆಯ ಅತಿಥಿ ಉಪನ್ಯಾಸಕರಿಗೆ ಏಪ್ರಿಲ್ ವೇತನ ನೀಡಿಲ್ಲ.

    | ಶಿವಪ್ರಸಾದ್ ಮಾಗಡಿ

    ಈ ಬಗ್ಗೆ ಸಿಎಂ ಗಮನಕ್ಕೆ ತಂದು, ಸಮಸ್ಯೆ ಬಗೆಹರಿಸುವಂತೆ ಕೋರುತ್ತೇನೆ.

    ಹಾರೋಹಳ್ಳಿಯಲ್ಲಿ ಖಾಸಗಿ ಕಂಪನಿ ಸಿಬ್ಬಂದಿಗೆ ವೇತನ ನೀಡುತ್ತಿಲ್ಲ.

    | ಸಂಪತ್ ಕುಮಾರ್ ಮಳವಳ್ಳಿ

    ವೇತನ ನೀಡಬೇಕೆಂದು ಪ್ರಧಾನಿ, ಮುಖ್ಯಮಂತ್ರಿ ಎಲ್ಲರೂ ಹೇಳಿದ್ದಾರೆ. ಸಮಸ್ಯೆಯಿದ್ದರೆ ಪರಿಹರಿಸುತ್ತೇವೆ.

    ಮೂಲತಃ ಉಡುಪಿಯವರಾಗಿದ್ದು, ಇಲ್ಲಿ ವಾಸವಿದ್ದೇವೆ. ಮನೆಗೆ ತೆರಳಲು ವಾಹನಕ್ಕೆ ಅನುಮತಿ ಹಾಗೂ ಉಡುಪಿ ಮನೆಯಲ್ಲೇ ಕ್ವಾರಂಟೈನ್ ಮಾಡಲು ಸಹಕರಿಸಿ.

    | ಜಯರಾಜಶೆಟ್ಟಿ ಭಟ್ಟರಹಳ್ಳಿ

    ಈ ಬಗ್ಗೆ ನಮ್ಮ ಕಾರ್ಯಕರ್ತರು ನಿಮ್ಮನ್ನು ಸಂರ್ಪಸಿ ಸಮಸ್ಯೆ ಬಗೆಹರಿಸುತ್ತಾರೆ.

    ರಾಮನಗರದಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ. ಇದು ಹೇಗೆ ಸಾಧ್ಯವಾಯಿತು ?

    | ಮನೋಜ್ ಬಿಡದಿ

    ರಾಮನಗರ ಜಿಲ್ಲಾಧಿಕಾರಿಗಳು, ಆರೋಗ್ಯಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಸಹಕಾರ ಹಾಗೂ ಪರಿಶ್ರಮದಿಂದಲೇ ಇದು ಸಾಧ್ಯವಾಯಿತು.

    ಮಹಾರಾಷ್ಟ್ರದಿಂದ ಬಂದಿರುವ ಕೆಲವರನ್ನು ಮನೆಯಲ್ಲೇ ಕ್ವಾರಂಟೈನ್ ಮಾಡಲು ಹೊರಟಿದ್ದಾರೆ. ಅಕ್ಕಪಕ್ಕದಲ್ಲಿರುವವರು ಆತಂಕದಲ್ಲೇ ಕಳೆಯುವಂತಾಗಿದೆ.

    | ವಿನೋದ್ ಕೆಂಪೇಗೌಡನ ದೊಡ್ಡಿ

    ಉ: ಈಗಾಗಲೇ ಈ ವಿಷಯ ಗಮನಕ್ಕೆ ಬಂದಿದೆ. ಅಕ್ಕಪಕ್ಕದಲ್ಲಿರುವವರಿಗೆ ಸಮಸ್ಯೆ ಆಗದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು.

    ರಾಮನಗರ ಜಿಲ್ಲೆಯ ಆಟೋ, ಟ್ಯಾಕ್ಸಿ ಚಾಲಕರಿಗೆ ಕರೊನಾ ಪರಿಹಾರ ಧನ ಸಿಗುತ್ತದೆಯೇ?

    | ರಮೇಶ್ ರಾಮನಗರ

    : ಇದು ರಾಜ್ಯದ ಎಲ್ಲ ಆಟೋ ಚಾಲಕರಿಗೆ ಹಾಗೂ ಡ್ರೖೆವರ್​ಗಳಿಗೆ ಅನ್ವಯವಾಗುತ್ತೆ.

    ಪಾರ್ಶ್ವವಾಯು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಔಷಧ ಬೇಕು.

    | ಮೈಲಸಂದ್ರ ನಿವಾಸಿ

    ಸಚಿವ ಎಸ್.ಟಿ.ಸೋಮಶೇಖರ್ ಅವರ ಗಮನಕ್ಕೆ ತಂದು ಔಷಧ ತಲುಪಿಸುತ್ತೇವೆ.

    ಆಶಾ ಕಾರ್ಯಕರ್ತೆಯರಿಗೂ ದಿನಸಿ ಕಿಟ್ ವಿತರಿಸುವುದನ್ನು ಮತ್ತಷ್ಟು ದಿನ ವಿಸ್ತರಿಸಿ.

    | ಮಂಗಳಮ್ಮ ಆಶಾ ಕಾರ್ಯಕರ್ತೆ

    ಕರೊನಾ ಸಂಕಷ್ಟದಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಅತಿ ಮುಖ್ಯ. ನಮ್ಮ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯರ ನೆರವಿಗೆ ಕಾರ್ಯಕರ್ತರು ಸಿದ್ಧವಾಗಿರುತ್ತಾರೆ.

    ಜಿಲ್ಲೆಯಲ್ಲಿ ಉಚಿತವಾಗಿ ದಿನಸಿ ಕಿಟ್ ವಿತರಿಸುವ ಕಾರ್ಯ ಮುಂದುವರಿಸಿ.

    | ಜ್ಯೋತಿಕಲಾ ಅಂಚೇಪುರ ಕಾಲನಿ

    ಸಹಾಯವಾಣಿ ಮೂಲಕ ಮನೆ ಮನೆ ಔಷಧ ಸರಬರಾಜು ಮಾಡುವ ಕಾರ್ಯವನ್ನು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವರದರಾಜು ಅವರ ನೇತೃತ್ವದಲ್ಲಿ ನೆರವೇರಿಸಲಾಗುತ್ತದೆ. ಈ ದಿನಸಿ ಕಿಟ್ ಹಾಗೂ ರೋಗಿಗಳಿಗೆ ಔಷಧ ತಲುಪಿಸುವ ಕಾರ್ಯವನ್ನು ಮುಂದುವರಿಸಲಾಗುವುದು.

    ಬುದ್ಧಿಮಾಂದ್ಯ ಮಗ, 75 ವರ್ಷದ ಅಮ್ಮ ಇದ್ದು, ಜೀವನ ಕಷ್ಟಕರವಾಗಿದೆ.

    | ಹೇಮಲತಾ ಮಾದಾಪುರ

    ಸ್ಥಳೀಯ ಕಾರ್ಯಕರ್ತರು ನಿಮ್ಮ ಸಮಸ್ಯೆ ಬಗೆಹರಿಸುವಂತೆ ಕ್ರಮ ಕೈಗೊಳ್ಳಲಾಗುತ್ತದೆ.

    ಗ್ರಾಮೀಣ ಬಡವರ ಬಗ್ಗೆ ಗಮನಹರಿಸಿ.

    | ಗೌರಿಶಂಕರ್

    ಇದುವರೆವಿಗೂ ಸಾವಿರಾರು ಜನರಿಗೆ ಉಚಿತ ದಿನಸಿ ಕಿಟ್ ನೀಡಲಾಗಿದೆ. ನಿಮ್ಮ ವ್ಯಾಪ್ತಿಯಲ್ಲಿ ತಲುಪದಿದ್ದಲ್ಲಿ ಸರಿಪಡಿಸಲಾಗುತ್ತದೆ.

    ರೈತರಿಗೆ ಕೃಷಿ ಸನ್ಮಾನ್ ಯೋಜನೆ ಹಣ ಇನ್ನೂ ಬಂದಿಲ್ಲ.

    | ರಾಮಕೃಷ್ಣ ಸುಗ್ಗನಹಳ್ಳಿ

    ನಿಮ್ಮ ಹಣ ಖಂಡಿತವಾಗಿ ಬರುತ್ತದೆ.

    ನರೇಗಾ ಕೆಲಸ ನೀಡಲು ಸ್ಥಳೀಯ ಪಿಒಡಿ ಸ್ಪಂದಿಸುತ್ತಿಲ್ಲ.

    | ಪ್ರಜ್ವಲ್ ಕೂಟಗಲ್ ಪಂಚಾಯಿತಿ

    ಪಿಡಿಒ ಜತೆಗೆ ಮಾತನಾಡಿ ಸಮಸ್ಯೆ ಸರಿಪಡಿಸುತ್ತೇನೆ.

    ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿರುವ ನನಗೆ ದಯವಿಟ್ಟು ಔಷಧಗಳನ್ನು ತಲುಪಿಸಿ.

    | ಹನುಮಂತು ರಾಮನಗರ

    ವರದರಾಜ್ ಅವರು ಈಗಾಗಲೆ ನಿಮ್ಮ ಮನೆಗೆ ಔಷಧ ತಲುಪಿಸಲು ಮುಂದಾಗಿದ್ದಾರೆ. ನಾಳೆ ಬರುತ್ತದೆ.

    ಅಯೋಧ್ಯೆ ವಿವಾದಿತ ಕಟ್ಟಡ ಧ್ವಂಸ ಪ್ರಕರಣದ ವಿಚಾರಣೆ ಬೇಗ ಮುಗಿಸಿ: ಸುಪ್ರೀಂ ಕೋರ್ಟ್ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts