More

    ಸಂಪಾದಕೀಯ: ಮಹತ್ವದ ಉಪಕ್ರಮ

    ಕೃಷಿ ರಂಗಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಬುಧವಾರ ಕೆಲ ಮಹತ್ವದ ಕ್ರಮಗಳನ್ನು ಪ್ರಕಟಿಸಿದೆ. ಈ ಹೆಜ್ಜೆಗಳು ದೇಶದ ಕೃಷಿಕ್ಷೇತ್ರದಲ್ಲಿ ವ್ಯಾಪಕ ಬದಲಾವಣೆ ತರುವ ಜತೆಗೆ ರೈತರ ಆದಾಯವನ್ನೂ ಹೆಚ್ಚಿಸಲು ಪೂರಕವಾಗಿವೆ ಎಂದು ಸರ್ಕಾರ ಹೇಳಿಕೊಂಡಿದೆ. ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ, ಕೃಷಿ ಉತ್ಪನ್ನಗಳ ಮುಕ್ತ ಸಾಗಾಟ ಮುಂತಾದವು ಈ ನಿರ್ಣಯಗಳಲ್ಲಿ ಸೇರಿವೆ. ಸದ್ಯ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಮಾರುಕಟ್ಟೆಯ ಹೊರಗೆ ಮಾರಾಟ ಮಾಡುವುದಕ್ಕೆ ಕೆಲ ನಿರ್ಬಂಧಗಳಿವೆ. ಇದಲ್ಲದೆ, ಎಪಿಎಂಸಿ ಕಾಯ್ದೆ ಬೇರೆ ಬೇರೆ ರಾಜ್ಯಗಳಲ್ಲಿ ಭಿನ್ನವಾಗಿರುವುದರಿಂದಾಗಿ ಕೃಷಿ ಉತ್ಪನ್ನಗಳ ಸಾಗಾಟಕ್ಕೂ ಅಡಚಣೆಯಾಗುತ್ತದೆ. ಈ ತೊಡಕುಗಳನ್ನು ನಿವಾರಿಸಲೋಸುಗ ‘ಕೃಷಿ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಪ್ರವರ್ತನೆ ಮತ್ತು ಅವಕಾಶ) ಸುಗ್ರೀವಾಜ್ಞೆ’ ಹೊರಡಿಸಲು ಕೇಂದ್ರ ಸಂಪುಟ ಒಪ್ಪಿದೆ.

    ಇದರಿಂದಾಗಿ ರೈತರು ಹಾಗೂ ವ್ಯಾಪಾರಿಗಳಿಗೆ ಕೃಷಿ ಉತ್ಪನ್ನಗಳ ಮಾರಾಟ ಮತ್ತು ಖರೀದಿಯಲ್ಲಿ ಹೆಚ್ಚಿನ ಸ್ವಾತಂತ್ರ್ಯ ಸಿಗುತ್ತದೆ ಮತ್ತು ಅಂತಾರಾಜ್ಯ ವ್ಯಾಪಾರಕ್ಕೂ ಆಸ್ಪದವಾಗುತ್ತದೆ ಎಂದು ಸರ್ಕಾರ ಹೇಳಿದೆ. ಇದಲ್ಲದೆ, ರೈತರಿಗೆ ಹೆಚ್ಚಿನ ಅವಕಾಶಗಳೂ ತೆರೆಯುತ್ತವೆ. ಮಾರುಕಟ್ಟೆ ವೆಚ್ಚ ಕಡಿಮೆಮಾಡಲು ಮತ್ತು ಬೆಳೆಗೆ ಉತ್ತಮ ಬೆಲೆ ಪಡೆಯಲು ಆಸ್ಪದವಾಗುತ್ತದೆ ಎಂದು ಹೇಳಲಾಗಿದೆ. ಈ ಕಾಯ್ದೆಯ ಪ್ರಕಾರ, ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರಿದ್ದಕ್ಕೆ ಪ್ರತಿಯಾಗಿ ಯಾವುದೇ ಸೆಸ್ ಅಥವಾ ಲೆವಿಯನ್ನು ವಿಧಿಸಲಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

    ಇದನ್ನೂ ಓದಿ  ಬಸ್ ಪ್ರಯಾಣಿಕರು ಮಾಸ್ಕ್ ಧರಿಸದೇ ಇದ್ದುದಕ್ಕೆ ಕಂಡಕ್ಟರ್‌ಗೆ ನೋಟಿಸ್!

    ಇದರ ಜತೆಗೆ, ಅಗತ್ಯ ವಸ್ತುಗಳ ಕಾಯ್ದೆಗೂ ಸರ್ಕಾರ ಕೆಲ ಮಾರ್ಪಾಡು ತಂದಿದೆ. ಈ ಪ್ರಕಾರ, ಏಕದಳ ಮತ್ತು ದ್ವಿದಳ ಧಾನ್ಯಗಳು, ಈರುಳ್ಳಿ, ಎಣ್ಣೆಬೀಜಗಳು, ಆಲೂಗಡ್ಡೆ ಮುಂತಾದವುಗಳನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ಹೊರಗಿಡಲಾಗಿದೆ. ಇದರಿಂದಾಗಿ, ಖಾಸಗಿ ಹೂಡಿಕೆದಾರರು ಅತಿಯಾದ ಸರ್ಕಾರಿ ನಿಯಂತ್ರಕ ಹಸ್ತಕ್ಷೇಪದ ಭಯದಿಂದ ಮುಕ್ತರಾಗಿ ವಹಿವಾಟು ನಡೆಸಬಹುದು. ಇದಲ್ಲದೆ, ಕೃಷಿ ವಲಯದಲ್ಲಿ ಖಾಸಗಿ ಮತ್ತು ವಿದೇಶಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಇದರಿಂದ ಅನುಕೂಲವಾಗುತದೆ. ಶೈತ್ಯಾಗಾರ ನಿರ್ಮಾಣ ಮತ್ತು ಆಹಾರ ಪೂರೈಕೆ ಸರಪಳಿಯಲ್ಲಿ ಆಧುನೀಕರಣ ತರುವುದಕ್ಕೂ ಅವಕಾಶವಾಗುತ್ತದೆ ಎಂದು ಸರ್ಕಾರ ಇದರ ಸಕಾರಾತ್ಮಕ ಅಂಶಗಳನ್ನು ಪಟ್ಟಿಮಾಡಿದೆ. ಅಗತ್ಯ ವಸ್ತುಗಳ ಕೊರತೆ ಅಥವಾ ಯಾವುದೇ ತುರ್ತು ಸಂದರ್ಭದಲ್ಲಿ, ಖಾಸಗಿಯವರು ಅತಿಯಾಗಿ ಸಂಗ್ರಹ ಮಾಡದಂತೆ ಕಾಯ್ದೆಯಲ್ಲಿ ಮುನ್ನೆಚ್ಚರಿಕೆ ಅಂಶಗಳನ್ನು ಸೇರಿಸಲಾಗಿದೆ ಎಂದು ಸರ್ಕಾರ ಭರವಸೆ ನೀಡಿದೆ.

    ನಮ್ಮ ದೇಶದಲ್ಲಿ ಶೈತ್ಯಾಗಾರ ಮತ್ತಿತರ ಸವಲತ್ತುಗಳ ಕೊರತೆಯಿಂದಾಗಿ ಅಪಾರ ಪ್ರಮಾಣದ ಕೃಷಿ ಉತ್ಪನ್ನಗಳು ಹಾಳಾಗುತ್ತಿರುವುದು ಗೊತ್ತೇ ಇದೆ. ಈ ಹೊಸ ಕ್ರಮಗಳಿಂದಾಗಿ ಈ ನಿಟ್ಟಿನಲ್ಲಿ ಕೆಲ ಬದಲಾವಣೆ ನಿರೀಕ್ಷಿಸಬಹುದಾಗಿದೆ. ಕೃಷಿ ವಲಯದಲ್ಲಿ ವ್ಯಾಪಕ ಮಾರ್ಪಾಡು ಅಗತ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಸರ್ಕಾರದ ನೀತಿನಿರೂಪಣೆಗಳಲ್ಲಿ ಕಾಲಕ್ಕೆ ತಕ್ಕಂತೆ ಬದಲಾವಣೆಗಳು ಬೇಕಾಗುತ್ತವೆ. ಆದರೆ ಇಂಥ ಕ್ರಮಗಳು ಮತ್ತು ಬದಲಾವಣೆಯಿಂದ ಖಾಸಗಿಯವರ ಕೈಮೇಲಾಗದಂತೆ ಮತ್ತು ಕೃಷಿ ವಲಯದಲ್ಲಿ ಅವರು ನಿಯಂತ್ರಣ ಸಾಧಿಸದಂತೆ ಕಟ್ಟೆಚ್ಚರ ವಹಿಸಬೇಕಾಗುತ್ತದೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ಸಂದರ್ಭದಲ್ಲಿ ಇಂಥ ಅಭಿಪ್ರಾಯ ಕೆಲ ವಲಯಗಳಲ್ಲಿ ವ್ಯಕ್ತವಾಗಿದ್ದು ಇಲ್ಲಿ ಉಲ್ಲೇಖನೀಯ.

    ವಿಜಯ್ ಮಲ್ಯ ಗಡಿಪಾರಿಗೆ ದಿನಗಣನೆ- ಶೀಘ್ರದಲ್ಲೇ ಭಾರತಕ್ಕೆ ಹಸ್ತಾಂತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts