More

    ಧರ್ಮದರ್ಶನ : ಶಾಲಾ ಶೈಕ್ಷಣಿಕ ಪ್ರವಾಸ ಜ್ಞಾನಾರ್ಜನೆಯ ವೇದಿಕೆಯಾಗಲಿ

    ಪ್ರವಾಸಕ್ಕೆ ಸರಿಯಾದ ಸಿದ್ಧತೆ ಮಾಡಿಕೊಳ್ಳದಿದ್ದರೆ ಹೆಜ್ಜೆಹೆಜ್ಜೆಗೂ ಸಮಸ್ಯೆ ಎದುರಾಗುತ್ತದೆ. ಶಿಕ್ಷಕರು ಮುಂಚಿತವಾಗಿಯೇ ಮಾಹಿತಿಯನ್ನು ಸರಿಯಾಗಿ ನೀಡಬೇಕು. ಹೋಗುವ ಸ್ಥಳ, ಅಲ್ಲಿ ನೋಡಲೇಬೇಕಾದ ಏನೇನಿದೆ ಮತ್ತು ಅಲ್ಲಿ ಏನನ್ನು ಗಂಭೀರವಾಗಿ ತಿಳಿದುಕೊಳ್ಳಬೇಕೆಂಬುದನ್ನು ಸೂಚಿಸಿದರಂತೂ ಪ್ರವಾಸದ ಉದ್ದೇಶ ಫಲಪ್ರದವಾಗುತ್ತದೆ.

    ಧರ್ಮದರ್ಶನ : ಶಾಲಾ ಶೈಕ್ಷಣಿಕ ಪ್ರವಾಸ ಜ್ಞಾನಾರ್ಜನೆಯ ವೇದಿಕೆಯಾಗಲಿಬಾಲ್ಯದ ಸಮಯದಲ್ಲಿ ಶಾಲಾ ಪ್ರವಾಸ ಎಂಬುದು ಬಹಳ ಸಂತೋಷದ ಮತ್ತು ಮೋಜಿನ ವಿಷಯವಾಗಿರುತ್ತದೆ. ಇದರ ಜೊತೆಗೆ ನಮಗೆ ಗೊತ್ತಿಲ್ಲದ ಅನೇಕ ಹೊಸ ಹೊಸ ಸಂಗತಿಗಳನ್ನು, ಸ್ಥಳಗಳನ್ನು ಸಹಪಾಠಿಗಳೊಂದಿಗೆ ತಿರುಗಿ ತಿಳಿಯುವುದಕ್ಕೆ ವೇದಿಕೆಯಾಗುತ್ತದೆ. ಈ ಪ್ರವಾಸದಲ್ಲಿ ವಯಸ್ಸಿಗನುಗುಣವಾಗಿ ದೃಷ್ಟಿಕೋನಗಳು ಬದಲಾಗಬಹುದು. ಅಭಿರುಚಿಗಳು ಬದಲಾಗಬಹುದು ಅಥವಾ ಅನುಭವಿಸುವ ಸಂತೋಷಗಳು ಬದಲಾಗಬಹುದು. ಆದರೆ ಪ್ರಾಥಮಿಕ ಪ್ರೌಢಶಾಲಾ ಹಂತದಲ್ಲಿ ಮಕ್ಕಳಲ್ಲಿ ಕುತೂಹಲ ಹೆಚ್ಚಾಗಿರುವುದರಿಂದ ಪ್ರವಾಸ ಹೋದ ಸಮಯದಲ್ಲಿ ಎಲ್ಲವನ್ನು ವಿಚಿಕಿತ್ಸಕ ಬುದ್ಧಿಯಿಂದ ಪರೀಕ್ಷಿಸುತ್ತಾರೆ.

    ಇಲ್ಲಿ ನನ್ನ ಬಾಲ್ಯದಲ್ಲಿನ ಪ್ರವಾಸ ನೆನಪಾಗುತ್ತದೆ. ನಾನು ಶಾಲಾ ವಿದ್ಯಾರ್ಥಿಯಾಗಿದ್ದಾಗ ಕಾರ್ಕಳ, ಮೂಡುಬಿದ್ರಿಗೆ (60 ಕಿ.ಮೀ) ಹೋಗಿದ್ದೇ ಬಹುದೊಡ್ಡ ಪ್ರವಾಸ. ನಂತರ ನಾನು ಬೆಂಗಳೂರಿನಲ್ಲಿ ಹೈಸ್ಕೂಲ್ ಶಿಕ್ಷಣ ಪಡೆಯುತ್ತಿದ್ದಾಗ, ನಮ್ಮ ಶಾಲೆಯಿಂದ ಕೆಲವು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಧರ್ಮಸ್ಥಳ ಪ್ರವಾಸಕ್ಕೆ ಬಂದಿದ್ದೆವು. ಹಾಗೆ ಬಂದಾಗ ಧರ್ಮಸ್ಥಳದ ಪ್ರತಿಯೊಂದು ವಸ್ತುವನ್ನೂ ಕುತೂಹಲದಿಂದ ನೋಡಿ, ಆಶ್ಚರ್ಯಪಟ್ಟಿದ್ದರು. ನಾವು ಶಾಲೆಯಲ್ಲಿ ತರಗತಿಯಲ್ಲಿ ಕುಳಿತಿದ್ದಾಗ ಅಧ್ಯಾಪಕರು ‘ನಿಮ್ಮ ಧರ್ಮಸ್ಥಳ ಪ್ರವಾಸದ ಅನುಭವಗಳನ್ನು ಹೇಳಿ’ ಎಂದರು. ಒಬ್ಬ ವಿದ್ಯಾರ್ಥಿ ಎದ್ದು ನಿಂತು- ‘ಅಲ್ಲಿಯ ಊಟ ತುಂಬಾ ರುಚಿಕರವಾಗಿತ್ತು, ನಾನು ಮನೆಯಲ್ಲಿ ಉಣ್ಣುವುದಕ್ಕಿಂತ ಹೆಚ್ಚಿಗೆ ಊಟ ಮಾಡಿದೆ’ ಎಂದ. ಇನ್ನೊಬ್ಬ ವಿದ್ಯಾರ್ಥಿ- ‘ಅಲ್ಲಿ ಎಲ್ಲಿ ನೋಡಿದರೂ ಕಾಡೇ ಕಾಡು. ದಟ್ಟವಾದ ಕಾನನ. ಈ ಕಾಡಿನೊಳಗೆ ಏನೇನು ಪ್ರಾಣಗಳಿರಬಹುದು. ಎಂತೆಂತಹ ಗಿಡಮರ ಪಕ್ಷಿಗಳಿರಬಹುದು. ಯಾವ ಯಾವ ರೀತಿಯ ಭೂತಪ್ರೇತಗಳಿರಬಹುದು ಎಂದು ನನಗೆ ಭಯವಾಯಿತು’ ಎಂದನು. ಮತ್ತೊಬ್ಬ ಹುಡುಗ, ವಿಶೇಷವೆಂದರೆ ಧರ್ಮಸ್ಥಳಕ್ಕೆ ಹೋಗುವ ದಾರಿಬದಿಯಲ್ಲಿರುವ ಮರದ ಎಲ್ಲಾ ಎಲೆಗಳೂ ಕೆಂಪಾಗಿದ್ದವು ಎಂದ. ಇದನ್ನು ಕೇಳಿದ ಅಧ್ಯಾಪಕರಿಗೆ ಆಶ್ಚರ್ಯವಾಯಿತು. ಅವರು ತರಗತಿಯಲ್ಲಿ ಕುಳಿತಿದ್ದ ನನ್ನ ಮುಖವನ್ನು ನೋಡಿದರು. ನನಗೂ ಮೊದಲು ಈ ಮಾತಿನ ಅರ್ಥವಾಗಲಿಲ್ಲ. ನಂತರ ಒಳಾರ್ಥವನ್ನರಿತು ಹೇಳಿದೆ. ಆಗಿನ್ನೂ ಧರ್ಮಸ್ಥಳದ ರಸ್ತೆಯ ಡಾಮರೀಕರಣವಾಗಿರಲಿಲ್ಲ. ಉಜಿರೆಯಿಂದ ಧರ್ಮಸ್ಥಳದವರೆಗೆ ಮಣ್ಣಿನ ರಸ್ತೆಯಿತ್ತು. ರಸ್ತೆಯ ಇಕ್ಕೆಲಗಳಲ್ಲಿರುವ ಮರಗಳ ಎಲೆಯ ಮೇಲೆ ಈ ಧೂಳು ಕುಳಿತು ಹಸಿರಾದ ಎಲೆಗಳೆಲ್ಲ ಕೆಂಪಗಾಗಿದ್ದವೆಂದು ತಿಳಿಸಿದೆ. ತರಗತಿಯವರೆಲ್ಲರೂ ಹೊಟ್ಟೆ ತುಂಬಾ ನಕ್ಕು ಆನಂದಿಸಿದ್ದೆವು. ವಿದ್ಯಾರ್ಥಿಗಳು ಎಷ್ಟು ಸೂಕ್ಷ್ಮವಾಗಿ ಪ್ರತಿಯೊಂದನ್ನೂ ಗಮನಿಸುತ್ತಾರೆಂಬುದಕ್ಕೆ ಇದೊಂದು ನಿದರ್ಶನ.

    ಬಾಲ್ಯವೆಂಬುದು ಕುತೂಹಲದ ಬೀಡು. ಪ್ರವಾಸದ ಆರಂಭದಿಂದ ಅಂತ್ಯದವರೆಗೆ ಎಲ್ಲವನ್ನು ಗ್ರಹಿಸುವುದು ಮತ್ತು ಆ ನಂತರ ಬಹುಸಮಯದವರೆಗೆ ಆ ಘಟನಾವಳಿಗಳನ್ನು ನೆನಪಿಸಿಕೊಂಡು ಖುಷಿಪಡುವುದು ಪ್ರವಾಸದ ಪ್ರಯೋಜನವೆಂದು ಅಧ್ಯಾಪಕರು ವಿವರಿಸಿದ್ದರು. ಇಂತಹ ಶಾಲಾಜೀವನದ ಪ್ರವಾಸದ ರೀತಿ ಮತ್ತು ಅನುಭವ ಇಂದಿಗೂ ನಮ್ಮಲ್ಲಿ ಹಚ್ಚಹಸುರಾಗಿಯೇ ಇದೆ.

    ಕಾಲಕಳೆದಂತೆ ಮಕ್ಕಳ ಪ್ರಾಪಂಚಿಕ ಜ್ಞಾನದ ಮಟ್ಟ ಹೆಚ್ಚಾಗಿರುವುದನ್ನು ನಾವು ಗುರುತಿಸಿದ್ದೇವೆ. ಈಗಿನ ತಾಂತ್ರಿಕಯುಗದಲ್ಲಿ ಎಲ್ಲ ಮಾಹಿತಿಯೂ ನಮ್ಮ ಕೈತುದಿಯಲ್ಲೇ ದೊರಕುವುದರಿಂದ ವಿದ್ಯಾರ್ಥಿಗಳ ತಿಳಿವಳಿಕೆ ಮಟ್ಟ ಎತ್ತರದಲ್ಲಿದೆ. ತಾಯಿತಂದೆ, ಅಜ್ಜ-ಅಜ್ಜಿ ಮಾತನಾಡುವ ವಿಷಯಗಳು, ಟಿವಿ ವೀಕ್ಷಣೆ, ಕಂಪ್ಯೂಟರ್, ಮೊಬೈಲ್, ಫೇಸ್​ಬುಕ್ ಬಳಕೆ, ಗೆಳೆಯರು ಪರಸ್ಪರ ಹಂಚಿಕೊಳ್ಳುವ ವೈಷಯಿಕ ಚರ್ಚೆ ಇವೆಲ್ಲ ಇಂದಿನ ವಿದ್ಯಾರ್ಥಿಗಳ ತಿಳಿವಳಿಕೆಯ ಹಂತವನ್ನು ಎತ್ತರಕ್ಕೆ ಏರಿಸಿವೆ.

    ಶಿಕ್ಷಕರು ಮುಂಚಿತವಾಗಿಯೇ ಪ್ರವಾಸ ಕಾರ್ಯಕ್ರಮದ ಮಾಹಿತಿಯನ್ನು ಸರಿಯಾಗಿ ನೀಡಿದರೆ ಅಥವಾ ಅವರು ಸಂಚಾರ ಮಾಡುವ ವಾಹನದಲ್ಲಿ ಸರಿಯಾದ ವ್ಯವಸ್ಥೆಯಿದ್ದರೆ, ಹೋಗುವ ಮುಂದಿನ ಊರು, ಅಲ್ಲಿ ನೋಡಲೇ ಬೇಕಾದ ಏನೇನಿದೆ ಮತ್ತು ಅಲ್ಲಿ ಏನನ್ನು ಗಂಭೀರವಾಗಿ ತಿಳಿದುಕೊಳ್ಳಬೇಕೆಂಬುದನ್ನು ಸೂಚಿಸಿದರಂತೂ ಪ್ರವಾಸದ ಉದ್ದೇಶ ಫಲಪ್ರದವಾಗುತ್ತದೆ.

    ಉದಾ: ಮೈಸೂರು ನಮ್ಮ ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲೇ ಒಂದು ಪ್ರಸಿದ್ಧ ಪ್ರವಾಸಿಕೇಂದ್ರ. ಅಲ್ಲಿ ಅರಮನೆಗಳಂತಹ ಬೃಹತ್ ಕಟ್ಟಡಗಳಿವೆ. ಅಲ್ಲಿಯ ಇತಿಹಾಸ, ರಾಜಮಹಾರಾಜರ ಕಥೆಗಳು ರೋಚಕವಾಗಿವೆ. ಅದರ ಜೊತೆಗೆ ಅಲ್ಲಿನ ಪ್ರಾಣಿ ಸಂಗ್ರಹಾಲಯ ಮಕ್ಕಳ ಕುತೂಹಲವನ್ನು ತಣಿಸಲು ಸಮರ್ಥವಾಗಿದೆ; ಅಲ್ಲಿನ ದೇಶ-ವಿದೇಶಗಳ ಪ್ರಾಣಿಗಳನ್ನು ನೋಡಿ, ಮಕ್ಕಳು ತುಂಬಾ ಸಂತೋಷಪಡುತ್ತಾರೆ. ಪುಸ್ತಕದಲ್ಲಿ ಹಾಗೂ ಚಿತ್ರಗಳಲ್ಲಿ, ಸಿನೆಮಾಗಳಲ್ಲಿ ನೋಡಿದ ಪ್ರಾಣಿಗಳು ತಮ್ಮೆದುರೇ ನಿಂತಾಗ ಆಗುವ ಆನಂದ ಹೇಳತೀರದು. ಇದರ ಜೊತೆಗೆ ನದಿ, ಸಮುದ್ರಗಳು, ಬೆಟ್ಟ-ಗುಡ್ಡಗಳು ಹಾಗೆಯೇ ಪ್ರಕೃತಿಯಲ್ಲಿ ಕಂಡುಬರುವ ಪ್ರತಿಯೊಂದು ವಿಷಯಗಳ ಬಗ್ಗೆಯೂ ಮಕ್ಕಳಿಗೆ ಆಸಕ್ತಿಯಿರುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಶಾಲಾಪ್ರವಾಸವು ತರಗತಿಯಲ್ಲಿ ದೊರಕದ ಅನೇಕ ಅಂಶಗಳನ್ನು ಪಾಠಮಾಡುತ್ತದೆ.

    ಪ್ರೌಢಶಾಲಾ ಹಂತ ದಾಟಿದ ನಂತರದ ಮಕ್ಕಳು ಪ್ರೌಢರಾಗಿ ಪಿಯುಸಿ ಅಥವಾ ಕಾಲೇಜು ಶಿಕ್ಷಣಕ್ಕೆ ಸೇರಿಕೊಳ್ಳುತ್ತಾರೆ. ಕಳೆದ 25 ವರ್ಷಗಳಲ್ಲಿ ಈ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಮತ್ತು ಪ್ರಾಪಂಚಿಕ ಜ್ಞಾನದ ಸ್ತರ ಬಹಳ ಹೆಚ್ಚಾಗಿದೆ. ಹಾಗಾಗಿಯೇ ಪ್ರವಾಸದಲ್ಲಿ ಅವರು ಮೋಜುಮಸ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಅವರು ಯಾವುದೇ ಊರಿಗೆ ಪ್ರವಾಸ ಹೋದರೂ ಅಲ್ಲಿ ಆಕರ್ಷಣೀಯ ವಸ್ತುಗಳೇ ಇಲ್ಲವೇನೋ ಎಂಬಂತೆ ಅವರ ವ್ಯವಹಾರವಿರುತ್ತದೆ. ಯಾವುದೋ ವ್ಯಕ್ತಿಯನ್ನೋ, ವಸ್ತುವನ್ನೋ ನೋಡಿ ಅಪಹಾಸ್ಯ ಮಾಡುವುದು, ತಿರಸ್ಕಾರಭಾವವನ್ನು ತೋರಿಸುವುದು, ತಮಗೆ ಎಲ್ಲವೂ ಗೊತ್ತಿದೆ ಎಂಬಂತೆ ವ್ಯವಹರಿಸುವುದನ್ನು ನಾವು ಕಾಣುತ್ತೇವೆ. ನಮ್ಮ ಧರ್ಮಸ್ಥಳದ ಮಂಜೂಷಾ ಮ್ಯೂಸಿಯಂಗೆ ಬಂದಾಗ, ಶಾಲಾ ಮಕ್ಕಳು ಅಲ್ಲಿನ ವಸ್ತುಗಳನ್ನು ನೋಡುವ ರೀತಿಗೂ, ಯುವಕ ಯುವತಿಯರು ಬಂದಾಗ ನೋಡುವ ವಿಧಾನಕ್ಕೂ ಅಜಗಜಾಂತರವಿದೆ. ಪ್ರವಾಸಕ್ಕಿಂತ ಮೊದಲೇ ಕಾಲೇಜಿನ ಶಿಕ್ಷಕರು ಈ ಪ್ರೌಢಾವಸ್ಥೆಯ ಮಕ್ಕಳಿಗೆ ಸರಿಯಾದ ತಿಳಿವಳಿಕೆಯನ್ನು ನೀಡಿದರೆ ಮಾತ್ರ ಕುತೂಹಲ ಆಸಕ್ತಿ ಮತ್ತು ಜ್ಞಾನಾರ್ಜನೆಯಾಗುತ್ತದೆ.

    ಪ್ರವಾಸದಲ್ಲಿ ತಾವು ಕಂಡ ವಿಶೇಷತೆಗಳನ್ನು ಗುರುತು ಮಾಡಿಕೊಳ್ಳುವುದು ಮತ್ತು ಪ್ರವಾಸದಿಂದ ವಾಪಸಾದ ನಂತರ ಪ್ರವಾಸದ ವರದಿಯನ್ನು ಒಪ್ಪಿಸುವುದು, ಅನುಭವವನ್ನು ಹಂಚಿಕೊಳ್ಳುವುದು ಸಾಮಾನ್ಯವಾಗಿತ್ತು. ಇತ್ತೀಚೆಗೆ ಈ ಪ್ರವಾಸದ ದೃಷ್ಟಿ ಬದಲಾಗಿದೆ ಎಂದು ನನಗೆ ಭಾಸವಾಗುತ್ತಿದೆ. ಕಳೆದ ಡಿಸೆಂಬರ್​ನಲ್ಲಿ ಅದೆಷ್ಟೋ ಸಾವಿರ ಮಕ್ಕಳು ಪ್ರವಾಸಕ್ಕಾಗಿ ಶ್ರೀಕ್ಷೇತ್ರಕ್ಕೆ ಬಂದರು. ಅವರವರ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಬಸ್ಸು, ಟೆಂಪೋ ಟ್ರಾವೆಲರ್ ಮೊದಲಾದವುಗಳಲ್ಲಿ ಬರುತ್ತಿದ್ದರು. ಧರ್ಮಸ್ಥಳಕ್ಕೆ ಬಂದು ತಲುಪುವ ಸಮಯದ ಅರಿವು ಮಕ್ಕಳಿಗೂ-ಶಿಕ್ಷಕರಿಗೂ ಸಾಮಾನ್ಯವಾಗಿ ಇರುವುದಿಲ್ಲ. ಯಾಕೆಂದರೆ ಇದು ಚಾಲಕನನ್ನು ಅವಲಂಬಿಸಿರುತ್ತದೆ. ವಿದ್ಯಾರ್ಥಿಗಳಿಂದ ಮಾರ್ಗಮಧ್ಯದಲ್ಲಿ ತಡವಾಗಲೂಬಹುದು. ಶಾಲೆಯಿಂದ ವಾಹನ ಹೊರಡುವ ಮೊದಲೇ ಎಷ್ಟು ಹೊತ್ತಿಗೆ ಹಿಂತಿರುಗಿ ಶಾಲೆಗೆ ತಲುಪಬೇಕೆಂಬ ನಿರ್ಧಾರವಾಗಿರುತ್ತದೆ. ಹಾಗಾಗಿ ಕ್ಷೇತ್ರವನ್ನು ಸಂದರ್ಶಿಸುವುದಕ್ಕೆ, ಪ್ರಕೃತಿ ವೀಕ್ಷಣೆಗೆ ಸಾಕಷ್ಟು ಸಮಯ ದೊರಕುವುದಿಲ್ಲ. ಸಮಯಕ್ಕೆ ಕಟ್ಟುಬಿದ್ದು ವಿದ್ಯಾರ್ಥಿಗಳು ನೋಡಬೇಕಾದ್ದನ್ನೂ ಸರಿಯಾಗಿ ನೋಡದೇ ಗಡಿಬಿಡಿಯಿಂದ ಓಡುತ್ತಿರುತ್ತಾರೆ. ಶಿಕ್ಷಕರೂ ಒತ್ತಡ ಹಾಕುತ್ತಲೇ ಇರುತ್ತಾರೆ. ಈ ಒತ್ತಡದಿಂದ ಮಕ್ಕಳಿಗೆ ಎಷ್ಟೋಸಲ ಮಲಮೂತ್ರ ವಿಸರ್ಜನೆಗೂ ಸರಿಯಾಗಿ ಸಮಯ ದೊರಕುವುದಿಲ್ಲ. ಇನ್ನು ದೇವಾಲಯಗಳಿಗೆ ಬರುವಾಗ ಇಲ್ಲಿನ ದರ್ಶನದ ಅವಧಿ, ಊಟೋಪಚಾರದ ವ್ಯವಸ್ಥೆಯನ್ನು ಸರಿಯಾಗಿ ಅರಿಯದೇ ಬಂದು ಕಷ್ಟಪಡುತ್ತಾರೆ. ವಸತಿ-ಸ್ನಾನಗಳಿಗೂ ತೊಂದರೆ ಅನುಭವಿಸುತ್ತಾರೆ. ಒಟ್ಟಾರೆ ಪ್ರವಾಸವು ಬಂದರು-ನೋಡಿದರು-ಹೋದರು ಎಂಬಂತಾಗಿಬಿಡುತ್ತದೆ.

    ಪ್ರವಾಸಕ್ಕೆ ಸರಿಯಾದ ಸಿದ್ಧತೆ ಮಾಡಿಕೊಳ್ಳದಿದ್ದರೆ ಹೆಜ್ಜೆಹೆಜ್ಜೆಗೂ ಸಮಸ್ಯೆ ಎದುರಾಗುತ್ತದೆ. ಕೊನೇ ಹಂತದಲ್ಲಿ ಪ್ರವಾಸಮಾಡುವುದೆಂದು ತೀರ್ವನಿಸಿದಾಗ ಸರಿಯಾದ ವಾಹನ ಸಿಕ್ಕದೆ ಪ್ರವಾಸ ನಿಂತಿದ್ದೂ ಇದೆ. ಡಿಸೆಂಬರ್ 31 ರೊಳಗೆ ಪ್ರವಾಸವನ್ನು ಪೂರೈಸಬೇಕೆಂಬ ಷರತ್ತನ್ನು ಸರ್ಕಾರ ವಿಧಿಸಿದೆ. ಆದ್ದರಿಂದ ಡಿಸೆಂಬರ್​ನ ಕೊನೆಯ 15 ದಿನಗಳಲ್ಲಿ ಅತೀವ ಒತ್ತಡ ಇರುತ್ತದೆ. ಬರುವಾಗ ದಾರಿಯ ಮಧ್ಯೆ ಮುನ್ಸೂಚನೆ ಇಲ್ಲದೇ ಹೋಟೆಲಿಗೆ ನುಗ್ಗಿದಾಗ ಗಲಿಬಿಲಿ ಆರಂಭವಾಗುತ್ತದೆ. ಕೆಲವು ಹೋಟೆಲ್​ಗಳಲ್ಲಿ ಹೆಚ್ಚೆಂದರೆ ನೂರು ಜನರಿಗೆ ಆಹಾರ ವ್ಯವಸ್ಥೆಯಿರುತ್ತದೆ. ಒಮ್ಮೆಲೇ ನಾಲ್ಕೈದುನೂರು ಜನ ಅಲ್ಲಿಗೆ ಬಂದರೆ…? ಹೋಟೆಲಿನವರು ಬಿಸಿನೀರನ್ನು ಕಾಫಿ ಎಂದು ಕೊಡುತ್ತಾರೆ. ತಿಂಡಿಗೂ ಅದೇ ಗತಿ. ಆದರೆ ಬಿಲ್ ಮಾತ್ರ ಸಕತ್ತಾಗಿಯೇ ಇರುತ್ತದೆ. ಕೆಲವೊಂದು ಸಲ ಪ್ರವಾಸ ಸಂಘಟಕರೂ ಮೋಸಮಾಡುತ್ತಾರೆ. ಹೋಟೆಲಿನ ಬಿಲ್ಲಿನ ಮೊತ್ತಕ್ಕೂ ನಿಜವಾಗಿ ಕೊಡುವ ಹಣಕ್ಕೂ ವ್ಯತ್ಯಾಸವಿರುತ್ತದೆ. ನಮ್ಮಂತಹ ಕ್ಷೇತ್ರಕ್ಕೆ ಬಂದಾಗ ಊಟದ ಸಮಸ್ಯೆಯಿರುವುದಿಲ್ಲ. ಇಂದು ಹೆಚ್ಚಿನ ಧಾರ್ವಿುಕ ಕ್ಷೇತ್ರಗಳಲ್ಲಿ ಭೋಜನ ವ್ಯವಸ್ಥೆಯಿರುತ್ತದೆ. ಈ ಉಚಿತ ಪ್ರಸಾದ ವ್ಯವಸ್ಥೆ ಪಡೆಯುವುದಕ್ಕೆ ಎಲ್ಲ ಶಾಲೆಯವರೂ ಪೂರ್ವಸಿದ್ಧತೆ ಮಾಡಿಕೊಂಡು ಈ ಕ್ಷೇತ್ರಗಳಲ್ಲೆ ಊಟದ ಸಮಯ ಹೊಂದಿಸಿಕೊಳ್ಳುತ್ತಾರೆ. ಅಲ್ಲಿನ ವ್ಯವಸ್ಥಾಪಕರಿಗೆ ದೇವರೇ ಗತಿ.

    ನಮ್ಮ ಧರ್ಮಸ್ಥಳದಲ್ಲಿ ಶಾಲಾ ಪ್ರವಾಸಿಗಳ ಒತ್ತಡದಿಂದ ಡಿಸೆಂಬರ್ ತಿಂಗಳಿನಲ್ಲಿ ಅನೇಕ ಸಮಸ್ಯೆಗಳು ಎದುರಾದವು. ದರ್ಶನದ ವ್ಯವಸ್ಥೆಯಲ್ಲಿ ಏರುಪೇರಾಯಿತು. ವಸತಿ ವ್ಯವಸ್ಥೆಯನ್ನು ಸರಿಯಾಗಿ ಕಲ್ಪಿಸಲಾಗಲಿಲ್ಲ. ಯಾತ್ರಿಕರಿಗೂ ಬಹಳ ಸಮಸ್ಯೆಯಾಯಿತು. ಪ್ರವಾಸ ಬಂದ ವಿದ್ಯಾರ್ಥಿಗಳ ಸಮಸ್ಯೆಯಂತೂ ಹೇಳತೀರದು. ಅವರ ಸ್ನಾನ ಶೌಚ ವ್ಯವಸ್ಥೆಗಳೂ ಸರಿಯಾಗಿ ಆಗಲಿಲ್ಲ. ಇದೆಲ್ಲದರ ಮಧ್ಯೆ ಸಿಬ್ಬಂದಿ ಕೊರತೆಯಿರುವ ಕ್ಷೇತ್ರಗಳಲ್ಲಿ ಹೋಟೆಲ್​ಗಳು ಮತ್ತು ಪ್ರವಾಸಿ ತಾಣಗಳಲ್ಲಿ ಸೂಕ್ತ ಸೇವೆಯನ್ನು ಪ್ರವಾಸಿಗರಿಗೆ ಒದಗಿಸಲಾಗಿಲ್ಲ.

    ಈ ಎಲ್ಲಾ ಸಮಸ್ಯೆಗಳನ್ನು ಗಮನಿಸಿ, ನಾನು ಇತ್ತೀಚೆಗೆ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದೇನೆ. ಅಕ್ಟೋಬರ್ 15 ರಿಂದ ಡಿಸೆಂಬರ್ 31 ರವರೆಗೆ ಅನುಕೂಲವಾದ ಸಮಯದಲ್ಲಿ ಪ್ರವಾಸಕ್ಕೆ ಅನುಮತಿ ನೀಡಬೇಕೆಂದು ಮತ್ತು ಆಯಾ ಉಪನಿರ್ದೇಶಕರು (ಡಿಡಿಪಿಐ) ಒಂದೇ ದಿನ ನೂರಾರು ಶಾಲೆಯ ಪ್ರವಾಸದ ಬದಲು, ಸಮನಾಗಿ ಹಂಚಿ ವ್ಯವಸ್ಥೆಗೊಳಿಸಿದರೆ, ಪ್ರವಾಸದ ವ್ಯವಸ್ಥೆ ಸುಗಮವಾಗುತ್ತದೆ ಮತ್ತು ಬಂದ ಪ್ರವಾಸಿಗರನ್ನು ಕ್ಷೇತ್ರಗಳಲ್ಲಿ ಸರಿಯಾಗಿ ನಡೆಸಿಕೊಳ್ಳಲು ಅನುಕೂಲವಾಗುವುದೆಂದು ತಿಳಿಸಿದ್ದೇನೆ. ಇದರಿಂದ ಪ್ರವಾಸದ ಉದ್ದೇಶವೂ ಈಡೇರಿದಂತಾಗುತ್ತದೆ. ಪ್ರವಾಸವೆಂಬುದು ಬರೇ ಮೋಜಲ್ಲ, ಜ್ಞಾನಾರ್ಜನೆಗೂ ಇದು ವೇದಿಕೆಯಾಗಬೇಕೆಂಬುದು ನನ್ನ ಆಶಯ.

    (ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts