More

    ಅಂತರಂಗ ಬಹಿರಂಗ ದೃಷ್ಟಿ, ಸುಂದರ ಸೃಷ್ಟಿ: ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಧರ್ಮದರ್ಶನ ಅಂಕಣ

    ನಮ್ಮ ಸುತ್ತಮುತ್ತಲಿರುವ, ಕಣ್ಣಿಗೆ ಕಾಣುವ ಎಲ್ಲ ವಸ್ತುಗಳಲ್ಲಿಯೂ ಒಂದಲ್ಲ ಒಂದು ತೆರನಾದ ಸೌಂದರ್ಯ ಇರುತ್ತದೆ. ಅದನ್ನು ನೋಡಿ, ಗುರುತಿಸಿ, ಅನುಭವಿಸಿ, ಆನಂದಿಸುವಂಥ ಅಂತರಂಗ ದೃಷ್ಟಿಯನ್ನು ನಾವೆಲ್ಲರೂ ಬೆಳೆಸಿಕೊಂಡಾಗ ಖಂಡಿತವಾಗಿಯೂ ಜೀವನ ಅರ್ಥಪೂರ್ಣವಾಗುತ್ತದೆ.

    ಅಂತರಂಗ ಬಹಿರಂಗ ದೃಷ್ಟಿ, ಸುಂದರ ಸೃಷ್ಟಿ: ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಧರ್ಮದರ್ಶನ ಅಂಕಣಜೀವನವನ್ನು ಆನಂದಿಸಲು, ಸವಿಯಲು ಮತ್ತು ಈ ಬದುಕಿನಲ್ಲಿ ಬರುವ ಪ್ರತಿಯೊಂದು ನವಿರಾದ ಘಟ್ಟವನ್ನು ಗುರುತಿಸಲು ಎರಡು ರೀತಿಯ ದೃಷ್ಟಿ ಬೇಕಾಗುತ್ತದೆ. ಒಂದು ಅಂತರಂಗ ದೃಷ್ಟಿ. ಇನ್ನೊಂದು ಬಹಿರಂಗ ದೃಷ್ಟಿ. ಎರಡೂ ವಿಧವಾದ ದೃಷ್ಟಿ ಎಲ್ಲರಲ್ಲಿಯೂ ಭಿನ್ನ ಭಿನ್ನವಾಗಿಯೇ ಇರುತ್ತದೆ. ಈ ದೃಷ್ಟಿಗಳು ಜನ್ಮತಃ ಸಂಸ್ಕಾರಗಳಿಂದಲೇ ಬರಬಹುದು ಅಥವಾ ಬಳಿಕದ ಜೀವನಾನುಭವದಿಂದ ಬರಬಹುದು, ಆನಂತರ ಕಲಿತ ವಿದ್ಯೆ, ಸ್ನೇಹಿತರ ಒಡನಾಟ, ಸಂಸ್ಕಾರ ಹಾಗೂ ಅನೇಕ ರೀತಿಯ ವ್ಯಾವಹಾರಿಕ ಅನುಭವದಿಂದ ಬರಬಹುದು.

    ಅಂತರಂಗ ದೃಷ್ಟಿ ಎಂದರೆ ಯಾವುದೇ ಒಂದು ವಸ್ತು, ವಿಷಯವನ್ನು ಕಂಡಾಗ ಅಂತರಂಗದಿಂದಲೇ ಅದನ್ನು ನೆಚ್ಚಿ ಮೆಚ್ಚಿ ಖುಷಿಪಡುವುದು. ಸುತ್ತಮುತ್ತಲ ಪ್ರಕೃತಿಯಲ್ಲಿ ಅನೇಕ ವಿಧವಾದ ವರ್ಣಗಳಿರುತ್ತವೆ. ಭಾರತದಲ್ಲಿ ಹಸಿರುಬಣ್ಣದ ಗಿಡಗಳು, ವೃಕ್ಷಗಳು, ಕೃಷಿಗೆ ಸಂಬಂಧಿಸಿದ ಹಸಿರು ಹಾಸಿಗೆಯೇ ಇರುತ್ತದೆ. ಕೆನಡಾ, ಜಪಾನ್ ಮುಂತಾದ ದೇಶಗಳಲ್ಲಿ ನಾನು ಕಂಡಂತೆ ಗಿಡಮರಗಳು ಬಹು ವಿಧವಾದ ಬಣ್ಣಗಳಿಂದ ಕೂಡಿರುತ್ತವೆ. ಮಳೆಗಾಲ, ಬೇಸಿಗೆ, ಚಳಿಗಾಲಕ್ಕೆ ಸಂಬಂಧಿಸಿ ಅವು ತಮ್ಮ ಬಣ್ಣವನ್ನು ಬದಲಾಯಿಸುತ್ತವೆ. ಪರಿಸರವನ್ನು ಅವಲೋಕಿಸುತ್ತ ಹೋದರೆ ಪ್ರತಿಯೊಂದು ವಸ್ತುವಿನಲ್ಲೂ ಸೌಂದರ್ಯವಿದೆ. ಇದನ್ನು ಗುರುತಿಸುವಂಥ ಅಂತರಂಗದ ದೃಷ್ಟಿ ಬೇರೆಯೇ ಆಗಿರುತ್ತದೆ. ಈ ಸೌಂದರ್ಯವನ್ನು ಗುರುತಿಸಿದಾಗ, ವಿಷಯ, ವಿಕಾಸಗಳ ಆನಂದಾನುಭೂತಿ ನಮಗಾಗುತ್ತದೆ. ಸಹಸ್ರಪಾದ ಎಂಬ ಕೀಟವಿದೆ. ಅದಕ್ಕೆ ಸಾವಿರ ಪಾದಗಳು. ಒಂದು ಸೆಂಟಿಮೀಟರ್ ಚಲಿಸ ಬೇಕಾದರೆ ಆ ಸಾವಿರ ಕಾಲುಗಳು ಕೂಡ ಚಲಿಸಬೇಕಾಗುತ್ತದೆ. ಇಂಥ ಅಪೂರ್ವವಾದ ಕೀಟವನ್ನು ಭಗವಂತ ಸೃಷ್ಟಿ ಮಾಡಿದ್ದು ಹೇಗೆ? ಯಾಕೆ? ಸಾವಿರ ಪಾದದ ಭಾಗಗಳು ಏಕಕಾಲದಲ್ಲಿ ಕ್ರಮಿಸುವಂತೆ ಮಾಡಿದ್ದು, ವೇಗವಾಗಿ ಚಲಿಸುವುದು, ಹೀಗೆ ಎಲ್ಲವೂ ಕುತೂಹಲಕರವಾಗಿರುತ್ತದೆ.

    ಚಿತ್ರರೂಪದ ಕಾರ್ಟೂನ್ ಚಿತ್ರಗಳನ್ನು ಪ್ರ್ರದ್ಧಿಪಡಿಸಿದ ವಾಲ್ಟ್ ಡಿಸ್ನಿ ತನ್ನ ಕಲೆಯಿಂದ ಪ್ರಾಣಿಗಳನ್ನು ಅತ್ಯಂತ ಸ್ನೇಹಿತರಾಗುವಂತೆ ವಿನ್ಯಾಸಗೊಳಿಸಿದ್ದಾರೆ. ಆದ್ದರಿಂದ ಮಕ್ಕಳು ಅದರತ್ತ ಆಕರ್ಷಿತರಾಗುವುದು ಸಹಜವೇ. ನಾಲ್ಕೈದು ದಶಕದ ಹಿಂದೆ ಬಾತುಕೋಳಿ, ಇಲಿಗಳು, ಬೆಕ್ಕು ಮುಂತಾದ ಪ್ರಾಣಿಗಳನ್ನು ಡಿಸ್ನಿಯು ಎಷ್ಟು ಸುಂದರವಾಗಿ ಚಿತ್ರಿಸಿದ್ದಾನೆಂದರೆ ಸಹಜವಾಗಿ ಅವುಗಳ ಸ್ವರೂಪವನ್ನು ಸ್ವಲ್ಪ ಬದಲಾಯಿಸಿ, ವಿವರಿಸಿದಾಗ ಪ್ರತಿಯೊಂದು ಪ್ರಾಣಿಯೂ ಸುಂದರವಾಗುತ್ತದೆ. ಹೀಗೆ ನೋಡುವ ದೃಷ್ಟಿ ಅಂತರಂಗದಿಂದ ಹೊರಹೊಮ್ಮಿದಾಗ ಯಾವ ಕಲೆಯೂ ಆಕರ್ಷಕವಾಗಿರುತ್ತದೆ.

    ಇತ್ತೀಚೆಗೆ ಶ್ರೀಮತಿ ಹೇಮಾವತಿಯವರು ಸೊಸೆಗೆ ಫೋನ್ ಮಾಡಿದರು. ಮಹಾಮಾರಿ ಕೋವಿಡ್​ನಿಂದಾಗಿ ಆಕೆ ತನ್ನ ತವರಿನಲ್ಲಿ ಇದ್ದುದರಿಂದ, ಹೇಗಿದ್ದೀಯ ಎಂದು ವಿಚಾರಿಸಿದರು. ಪ್ರಶ್ನೆಯ ಅರ್ಥವೇನೆಂದರೆ ಕರೊನಾ ಸಮಸ್ಯೆಯಿಂದ ಮನಸ್ಸು ಮುದುಡಿದೆಯೇ ಅಥವಾ ಸಂತೋಷವಾಗಿದೆಯೇ ಎಂಬುದಾಗಿತ್ತು. ಅದಕ್ಕೆ ಪ್ರತ್ಯುತ್ತರವಾಗಿ ಆಕೆ ನೆಮ್ಮದಿಯಿಂದ ಇರುವುದಾಗಿ ತಿಳಿಸಿ- ‘ನಾನು ಮುಂಜಾನೆ ಬೇಗ ಎದ್ದು ಮನೆಯಿಂದ ಹೊರಗೆ ಬರುತ್ತೇನೆ. ಮಾವಿನಮರ, ಲಿಂಬು, ಸಪೋಟ ಮುಂತಾದ ಗಿಡ-ಮರಗಳಿವೆ. ಈ ವೃಕ್ಷಸಂಕುಲಗಳನ್ನು ನೋಡುತ್ತೇನೆ. ಗಿಡಮರಗಳಲ್ಲಿರುವ ಹಣ್ಣನ್ನು ಸವಿಯಲು ಅನೇಕ ಬಣ್ಣ-ಬಣ್ಣದ ಪಕ್ಷಿಗಳು ಬರುತ್ತವೆ. ಆ ದೃಶ್ಯ ನೋಡಿ ಆನಂದಿಸುತ್ತೇನೆ’ ಎಂದಳು. ಇದನ್ನು ಕೇಳಿ ಹೇಮಾವತಿ ಅವರಿಗೆ ಆನಂದವಾಯಿತು. ನಮ್ಮ ಸುತ್ತಮುತ್ತಲಿರುವ ಪ್ರಕೃತಿಯ ರಹಸ್ಯವನ್ನು ಆನಂದಿಸಲು ಅಂತರಂಗದ ದೃಷ್ಟಿ ಸರಿಯಿರಬೇಕು. ಆಗ ಹೊರಗಿನ ಪ್ರತಿಯೊಂದೂ ಮುದವನ್ನು ನೀಡುತ್ತದೆ. ಅಲ್ಲದೆ ಅವುಗಳಲ್ಲಿ ಕುತೂಹಲ, ಚಿಕಿತ್ಸಕ ಬುದ್ಧಿಯನ್ನು ಬೆಳೆಸುತ್ತದೆ.

    ವನ್ಯಪ್ರದೇಶಗಳಿಗೆ ಹೋದರೆ ಸಹಜವಾಗಿ ಕಾಡುಗಳನ್ನು ಕಂಡು ಆನಂದಿಸುತ್ತೇವೆ. ಹಾಗೆಯೇ ನಗರ, ವಾಸಸ್ಥಳಗಳಲ್ಲಿ ಮತ್ತು ಮನೆಯ ಸುತ್ತಮುತ್ತ ಹೂವಿನ ತೋಟಗಳಲ್ಲಿ ಆಯ್ದ ಗಿಡಗಳನ್ನು ತಂದು, ನೆಟ್ಟು ಆರೈಕೆ ಮಾಡಿ ಅದನ್ನು ಬೆಳೆಸುತ್ತೇವೆ. ಅಥವಾ ಮನೆ ಸುತ್ತಮುತ್ತಲಿನ ಕೈತೋಟದಲ್ಲಿ ಬೇರೆ ಬೇರೆ ಸ್ವರೂಪದ ಮೂರ್ತಿಗಳನ್ನು ಇಟ್ಟು ಅದನ್ನು ಸುಂದರಗೊಳಿಸುತ್ತೇವೆ. ಇದು ನಮ್ಮನ್ನು ಆಕರ್ಷಿಸುತ್ತದೆ. ಇವೆಲ್ಲವೂ ನಮ್ಮ ಬಹಿರಂಗ ದೃಷ್ಟಿಗೆ ಕಾಣುವಂಥ ವಿಚಾರಗಳು. ನಮ್ಮ ಇಂದ್ರಿಯಗಳು ಬಹಿಮುಖವಾಗಿರುತ್ತವೆ. ಹೊರಗಿನ ವಸ್ತುಗಳನ್ನು ಕಂಡು ಅದರ ಸೌಂದರ್ಯವನ್ನು ಅವು ಅಂತರಂಗಕ್ಕೆ ತಲುಪಿಸುವ ಕೆಲಸಗಳನ್ನು ಮಾಡುತ್ತವೆ. ಹಾಗಾಗಿ ಕಣ್ಣಿಗೆ ಕಾಣುವಂಥ ಅನೇಕ ಆಕರ್ಷಕ ವಸ್ತುಗಳನ್ನು ನಿರ್ಮಾಣ ಮಾಡಿ ಅದರಿಂದಲೂ ಆನಂದ ಪಡುತ್ತೇವೆ.

    ಹೀಗೆ ಅಂತರಂಗ ಮತ್ತು ಬಹಿರಂಗ ದೃಷ್ಟಿಯಿಂದ ನಮ್ಮ ಸುತ್ತಮುತ್ತಲಿನ ಪ್ರಪಂಚವನ್ನು ಕಂಡು ಅನುಭವಿಸಿ ಆನಂದ ಪಡುವಂಥ ಪ್ರಕ್ರಿಯೆ ಇತ್ತೀಚಿನದ್ದಲ್ಲ. ಇದು ಪ್ರಾಚೀನ ಕಾಲದಿಂದಲೂ ನಮ್ಮಲ್ಲಿ ಇರುವಂಥದು. ಗ್ರಾಮೀಣ ಕಲೆ ಈಗೀಗ ಆಧುನಿಕವಾಗಿದೆ. ಅಂದರೆ ಗ್ರಾಮೀಣ ಕಲೆಯನ್ನು ಆನಂದಿಸುವ ದೃಷ್ಟಿ ಈಗ ನಮ್ಮಲ್ಲಿ ಬೆಳೆದಿದೆ.

    ಒಮ್ಮೆ ಒಬ್ಬ ಕಲಾವಿದ ನನ್ನ ಬಳಿಗೆ ಬಂದು ಆತ ಪಡೆದಿದ್ದ ಪ್ರಶಸ್ತಿಯ ಒಂದು ಚಿತ್ರವನ್ನು ನೀಡಿದ. ಅದರ ಜೊತೆಗೆ ಒಂದು ಆಲ್ಬಮ್ ತೋರಿಸಿದ. ಆಲ್ಬಂನಲ್ಲಿ ನೈಜಕಲೆ, ರಿಯಲಿಸ್ಟಿಕ್ ಆರ್ಟ್ ಇತ್ತು. ಅದನ್ನೆಲ್ಲ ತೋರಿಸಿದ ನಂತರ, ಆತ ತನಗೆ ದೊರೆತ ಪ್ರಶಸ್ತಿಯ ಚಿತ್ರಕಲೆಯನ್ನು ನೀಡಿದಾಗ ಅದು ಸ್ವಲ್ಪ ವಿಕಾರವಾಗಿತ್ತು. ‘ನೋಡು! ನೀನು ಇಷ್ಟು ಒಳ್ಳೆಯ ಚಿತ್ರಕಲೆಯನ್ನು ಮಾಡುವ ಕಲಾವಿದ. ಸುಂದರವಾದ, ಸಹಜ ವರ್ಣಮಯ ಚಿತ್ರಗಳನ್ನು ರಚಿಸಿದ್ದಿ. ಆದರೆ ನನಗೆ ನೀಡಿದ ಈ ಚಿತ್ರ ಇಷ್ಟು ವಿಕೃತಿಯಾಗಿದೆ ಯಾಕೆ?’ ಎಂದು ಕೇಳಿದೆ. ಆಗ ಅವನು – ‘ಸ್ವಾಮಿ! ಇದು ಸಹಜ ಕಲೆ. ಆದರೆ ಇಂದಿನ ಆಧುನಿಕ ಜಗತ್ತಿನಲ್ಲಿ ಯಾವುದೇ ಚಿತ್ರಗಳನ್ನು ಸ್ಪರ್ಧೆಗೆ ಕಳುಹಿಸಬೇಕಾದರೆ ಈ ರೀತಿಯ ಚಿತ್ರಗಳನ್ನು ಮಾಡಿದರೆ ಮಾತ್ರ ಅದಕ್ಕೆ ವಿಶೇಷವಾದ ಗೌರವ ದೊರಕುತ್ತದೆ. ಅದು ಸ್ಪರ್ಧೆಗೆ ಅರ್ಹವಾಗುತ್ತದೆ’ ಎಂದ. ಅಂದರೆ ಸೊಟ್ಟ ಕೈಕಾಲು, ದೊಡ್ಡ ಕಣ್ಣುಗಳು, ಉದ್ದ ಮೂಗು ಮತ್ತು ಅಸಹಜ ಅಲಂಕಾರಗಳನ್ನು ಮಾಡಿಕೊಂಡು ಮತ್ತು (ನಮಗೆ ಇಂದು ಆಕರ್ಷಣೀಯವಾಗಿ ಕಾಣುವ) ಬಣ್ಣಗಳನ್ನು ಹಾಕಿ ರಚಿಸಿದರೆ ಅದು ಸ್ಪರ್ಧೆಗೆ ಅರ್ಹ ಆಗುತ್ತದೆ ಎಂದು ಆತ ಹೇಳಿದ.

    ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾದ ಅನೇಕ ಶ್ರೇಷ್ಠ ಕಲಾವಿದರು, ಎಂಎಫ್ ಹುಸೇನ್, ಕೆ.ಕೆ. ಹೆಬ್ಬಾರ್ ಅಂಥವರು- ಆಧುನಿಕ ಕಲೆಯಲ್ಲಿ ಎಷ್ಟು ಸೌಂದರ್ಯವನ್ನು ಸೃಷ್ಟಿ ಮಾಡಿದರು ಎಂದರೆ ಅವರ ಕಲೆಯನ್ನು ನೋಡುತ್ತಿದ್ದ ಹಾಗೆ ನಾವು ತಲ್ಲೀನರಾಗಿ ಬಿಡುತ್ತೇವೆ. ಅವರು ಕೇವಲ ಗೆರೆಗಳಲ್ಲಿಯೇ ಸೌಂದರ್ಯದ ಗಣಿಯನ್ನು ನಿರ್ಮಾಣ ಮಾಡಿ ಬಿಡುತ್ತಾರೆ. ಕೆ.ಕೆ ಹೆಬ್ಬಾರರ ರೇಖಾಚಿತ್ರಗಳು ಅದ್ಭುತವಾದ ಭಾವನೆಗಳನ್ನು ಮೂಡಿಸುತ್ತವೆ. ವೀಕ್ಷಕರಿಗೆ ಅವರ ಪ್ರತಿಯೊಂದು ರೇಖಾಕಲೆೆ ಕೂಡ ಬೇರೆ ಬೇರೆ ಅರ್ಥವನ್ನು ನೀಡುತ್ತದೆ. ಒಮ್ಮೆ ಉಡುಪಿಯಲ್ಲಿ ಅವರನ್ನು ಭೇಟಿಯಾಗಿದ್ದೆ. ಅವರೊಂದಿಗೆ ಅಮೂಲ್ಯ ಸಮಯ ಕಳೆದಿದ್ದೆ. ಅವರು ಹೀಗೆ ಹೇಳುತ್ತಿದ್ದರು- ‘ನನ್ನ ರೇಖೆಗಳು ನನ್ನ ಮನಸ್ಸಿನಿಂದ ಮೂಡಿ ಬಂದದ್ದು. ಅದನ್ನು ನೋಡುವ ಸಾವಿರಾರು ವೀಕ್ಷಕರಿದ್ದರೆ ಅವರೆಲ್ಲರಿಗೂ ಪ್ರತ್ಯೇಕವಾದ ಅರ್ಥವನ್ನು ನೀಡುತ್ತದೆ. ಭಿನ್ನ-ಭಿನ್ನವಾಗಿ ಅವರು ಅದನ್ನು ಗ್ರಹಿಸುತ್ತಾರೆ. ನನ್ನ ಕಲಾಕೃತಿ ಕುರಿತು ನಾನೊಂದು ಅರ್ಥವನ್ನು ಹೇಳಬಹುದು. ಆದರೆ ವೀಕ್ಷಕರು ವಯೋಮಾನ, ಅನುಭವ, ಆಸಕ್ತಿಯ ಆಧಾರದಲ್ಲಿ ತಮ್ಮದೇ ಆದ ಅರ್ಥವನ್ನು ಕಲ್ಪಿಸಿ ಭಿನ್ನ ಭಿನ್ನ ರೀತಿಯಲ್ಲಿ ಅದನ್ನು ಅರ್ಥೈಸಿಕೊಂಡು ಅದಕ್ಕೆ ತಕ್ಕಂತೆ ಪ್ರತಿಪಾದನೆ ಮಾಡುತ್ತಾರೆ.’ ವಿದೇಶಗಳ ಮ್ಯೂಸಿಯಂಗಳಲ್ಲಿ ಚಿತ್ರಕಲೆಗಳು, ಎಲ್ಲೆಲ್ಲಿಂದಲೋ ಸಂಗ್ರಹಿಸಿದ ಮೂರ್ತಿಗಳನ್ನೂ ಇಟ್ಟಿರುತ್ತಾರೆ. ಕೆಲವರು ಗಂಟೆಗಟ್ಟಲೆ ಆ ಮೂರ್ತಿಯನ್ನು ವೀಕ್ಷಿಸುತ್ತ ಇರುತ್ತಾರೆ. ನಾವು ಎಷ್ಟೋ ಸಲ, ‘ಏನು ಹುಚ್ಚು ಇವರಿಗೆ, ಗಂಟೆಗಟ್ಟಲೆ ಆ ಮೂರ್ತಿಯನ್ನು ನೋಡುವುದಕ್ಕೆ ಏನಿದೆ?’ ಎಂಬುದಾಗಿ ಅಂಥವರನ್ನು ಹಾಸ್ಯ ಮಾಡಿದ್ದೂ ಇದೆ. ಆದರೆ ಅವರು ನೋಡುತ್ತ ನೋಡುತ್ತ ಭಿನ್ನ ಭಾವನೆಗಳನ್ನು ಆ ಮೂರ್ತಿಯಲ್ಲಿ ಕಂಡು ಆನಂದಿಸುತ್ತಾರೆ. ಬಹಿರಂಗದಲ್ಲಿ ಒಂದೇ ಮೂರ್ತಿ ಆಗಿರಬಹುದು. ಆದರೆ ಅಂತರಂಗದಲ್ಲಿ ಅದು ಅನೇಕ ಅರ್ಥಗಳನ್ನು ಅವರಿಗೆ ನೀಡುತ್ತದೆ. ಮೇಲ್ನೋಟಕ್ಕೆ ನೋಡಲು ಕೈಯಿಲ್ಲದ, ಕಾಲಿಲ್ಲದ ವಿಕಾರ ಮೂರ್ತಿ ಆಗಿರಬಹುದು. ಆದರೂ ಅಂಥದ್ದನ್ನು ನೋಡಿ ನೋಡುಗರು ಅನೇಕ ಅರ್ಥಗಳನ್ನು ಕಲ್ಪಿಸಿ ಅಂತರಂಗದಲ್ಲಿಯೇ ಅದನ್ನು ಅನುಭವಿಸಿ ಆನಂದಿಸುತ್ತಾರೆ. ಹಾಗಾಗಿ ಬಹಿರಂಗ ದೃಷ್ಟಿ ಮುಖ್ಯ. ಅಂತರಂಗ ದೃಷ್ಟಿ ಅದಕ್ಕಿಂತ ಮುಖ್ಯ.

    ನಮ್ಮದೇ ಮಂಜುಷಾ ಮ್ಯೂಸಿಯಂನಲ್ಲಿ ನಾನು ನೋಡಿದಂತೆ ಎಷ್ಟೋ ಜನರು ಪ್ರವೇಶವಾದ ತಕ್ಷಣ ‘ಹೊರಗೆ ಹೋಗುವ ದಾರಿ ಎಲ್ಲಿ?’ ಎಂದು ಕೇಳುತ್ತಾರೆ. ಇನ್ನು ಕೆಲವು ಮಂದಿ ಆಸಕ್ತಿಯಿಂದ ಸಾಕಷ್ಟು ಸಮಯ ವೀಕ್ಷಿಸುತ್ತಾರೆ. ನಮ್ಮ ಸುತ್ತಮುತ್ತಲಿರುವ, ಕಣ್ಣಿಗೆ ಕಾಣುವ ಎಲ್ಲ ವಸ್ತುಗಳಲ್ಲಿಯೂ ಒಂದಲ್ಲ ಒಂದು ತೆರನಾದ ಸೌಂದರ್ಯ ಇರುತ್ತದೆ. ಅದನ್ನು ನೋಡಿ, ಗುರುತಿಸಿ, ಅದನ್ನು ಅನುಭವಿಸಿ, ಆನಂದಿಸುವಂಥ ಅಂತರಂಗ ದೃಷ್ಟಿಯನ್ನು ನಾವೆಲ್ಲರೂ ಬೆಳೆಸಿಕೊಂಡಾಗ ಖಂಡಿತವಾಗಿಯೂ ಜೀವನ ಅರ್ಥಪೂರ್ಣವಾಗುತ್ತದೆ.

    ಮಕ್ಕಳು ಸುತ್ತಮುತ್ತಲಿನ ಪ್ರಕೃತಿಯನ್ನು ನೋಡಿ ಆನಂದಿಸುವಂತೆ ಬೆಳೆಸಬೇಕು. ಪ್ರಕೃತಿಯ ಬಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಬೇಕು. ಪ್ರಕೃತಿಯ ಜೊತೆಗೆ ಆಟವಾಡಲು ಅವರನ್ನು ಬಿಡಬೇಕು. ಪರಿಸರದಲ್ಲಿರುವ ವಸ್ತುಗಳನ್ನು ನೋಡಿ, ಗುರುತಿಸಿ ಆನಂದಿಸಲು ಅವಕಾಶ ಕಲ್ಪಿಸಿಕೊಡಬೇಕು. ಪ್ರಾಣಿ-ಪಕ್ಷಿ ಕ್ರಿಯೆಗಳನ್ನು ಪರಿಚಯಿಸಬೇಕು. ಯಾಕೆಂದರೆ ಭಗವಂತನಿಂದ ಸೃಷ್ಟಿಸಲ್ಪಟ್ಟ ಪ್ರಪಂಚದಲ್ಲಿ ಯಾವ ವಸ್ತುವೂ ವ್ಯರ್ಥವಲ್ಲ. ಯಾವ ಪ್ರಾಣಿಯೂ ದೂಷ್ಯವಲ್ಲ. ಎಲ್ಲದಕ್ಕೂ ಒಂದೊಂದು ಅರ್ಥ ಇದೆ. ಆದರೆ ಅದನ್ನು ನೋಡಿ, ಅರಿತುಕೊಳ್ಳುವ ಅಂತರಂಗ-ಬಹಿರಂಗ ದೃಷ್ಟಿ ನಮ್ಮಲ್ಲಿ ಬೆಳೆಯಬೇಕಷ್ಟೆ.

    (ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts