More

    ಧರ್ಮದರ್ಶನ| ನಿಯಮ ಮತ್ತು ನಿಯಂತ್ರಣದಿಂದ ಯೋಗಕ್ಷೇಮ

    ಧರ್ಮದರ್ಶನ| ನಿಯಮ ಮತ್ತು ನಿಯಂತ್ರಣದಿಂದ ಯೋಗಕ್ಷೇಮಕರೊನಾ ವ್ಯಾಪಿಸಿದ ಮೇಲೆ, ಕಳೆದ ನಾಲ್ಕು ತಿಂಗಳು ‘ಗೃಹಸ್ಥ’ರಾಗಿದ್ದವರಿಗೆ ಈ ಮಹಾಮಾರಿಯಿಂದ ಜೀವರಕ್ಷಣೆಯೇ ಮೊದಲ ಆದ್ಯತೆಯಾಗಿತ್ತು. ಮನೆಯಲ್ಲಿಯೇ ಕುಟುಂಬದವರ ಜೊತೆ ಕಡ್ಡಾಯವಾಗಿ ಉಳಿದುಕೊಳ್ಳಬೇಕಾಯಿತು. ತುಳುನಾಡಿನಲ್ಲಿ ವ್ಯಕ್ತಿಯ ಇಂತಹ ಬದಲಾವಣೆಯನ್ನು ‘ಈಗ ಗೃಹಸ್ಥನಾಗಿದ್ದಾನೆ’ ಎಂದು ಸ್ವಾರಸ್ಯಕರವಾಗಿ ಹೇಳುತ್ತಾರೆ. ತುಂಟನಾಗಿದ್ದ ಮಗು ಅಥವಾ ಯುವಕ ವಯಸ್ಸಿನ ಕಾರಣದಿಂದಲೋ, ಜವಾಬ್ದಾರಿ ಅಥವಾ ಶಿಕ್ಷಣದ ಒತ್ತಡದಿಂದಲೋ ಗಂಭೀರವಾದರೆ ‘ಈಗ ತುಂಬಾ ಬದಲಾಗಿದ್ದಾನೆ’ ಅನ್ನುವ ಸೂಚನೆಯನ್ನು ಒಂದೇ ಶಬ್ದದಲ್ಲಿ ಸೂಚಿಸುತ್ತಾರೆ.

    ಕಳೆದ ನಾಲ್ಕು ತಿಂಗಳು ವಾನಪ್ರಸ್ಥದಲ್ಲಿದ್ದವರು ಅಂದರೆ ಉದ್ಯೋಗ ವ್ಯವಹಾರ, ನಿತ್ಯದುಡಿಮೆಯ ಗಡಿಬಿಡಿಯ ಕರ್ಮಗಳಿಂದ ದೂರವಿದ್ದವರು ತಮ್ಮ ದೇಹ ಮತ್ತು ಆತ್ಮರಕ್ಷಣೆಯನ್ನು ಮಾಡಿಕೊಂಡಿದ್ದಾರೆ ಮತ್ತು ತಮ್ಮವರನ್ನೂ ಅಪಾಯದಿಂದ ಕಾಪಾಡಿದ್ದಾರೆ. ಅಂದರೆ, ‘ಜೀವರಕ್ಷಣೆ’. ಸಂಸಾರದಲ್ಲಿರುವ ವಿರಕ್ತಿಯನ್ನು (ತೋರಿಕೆಯೂ ಸೇರಿ) ಪ್ರದರ್ಶಿಸುತ್ತಿರುವವರು ‘ಅಭಾವ ವೈರಾಗ್ಯ’ ಹೊಂದಿದ್ದಾರೆ. ವಿಶ್ವಾಮಿತ್ರನು ಮೇನಕೆಯಿಂದ ಸಂತಾನ ಪಡೆದ ಮೇಲೆ ಅನಿವಾರ್ಯವಾಗಿ ತ್ಯಾಗ ಮಾಡುವಾಗಕೈ ಎತ್ತಿ ‘ಒಲ್ಲೆ’ ಎಂದಂತೆ ಎಲ್ಲಾ ಭೌತಿಕ ಸುಖಗಳಿಗೂ ಇದೀಗ ಕೈ ಎತ್ತಿದ್ದಾರೆ. ಮನೆಯೇ ಮಂತ್ರಾಲಯವಾಗಿದೆ. ಮನೆಯಲ್ಲಿ ರುಚಿಕರವಾದ (?)ಆಹಾರವಿದ್ದರೂ, ಬೆಳಿಗ್ಗಿನ ಕಾಫಿ ಚಹಾವನ್ನು ಹೊರಗೆ ಹೋಟೆಲ್​ನಲ್ಲೋ, ಗೂಡಂಗಡಿಯಲ್ಲೋ ಕುಡಿದರೇನೆ ಸ್ವಾರಸ್ಯ ಎನ್ನುವವರಿದ್ದಾರೆ. ಇದೀಗ ಜೀವನಶೈಲಿಯಲ್ಲಿ ಬದಲಾವಣೆಯಾಗಿ ‘ಗೃಹಬಂಧನ’ವಾಗಿದೆ. ಹಾಲಿಲ್ಲದೆಯೂ ಕಾಫಿ ಚಹಾ ಸ್ವಾದಿಷ್ಟವಾಗಿದೆ. ತರಕಾರಿ ಇಲ್ಲದೆಯೂ ಪಲ್ಯ ರುಚಿಸುತ್ತದೆ. ಇದನ್ನು ಒಪ್ಪಿಕೊಳ್ಳುವವರನ್ನು ‘ಗೃಹಸ್ಥ’ನಾಗಿದ್ದಾನೆ/ರೆ ಅನ್ನಬಹುದೇನೋ.

    ಚಿಗುರು ವೈವಿಧ್ಯ     ಗ್ರಾಮೀಣ ಪ್ರದೇಶಗಳಲ್ಲಿ ಸಿಗುವ, ಪಲ್ಲೋಡಿ ಮಾಡಲು ಬೇಕಾದ ಚಿಗುರುಗಳ ಮಾಹಿತಿ: ಕೊಟ್ಟೆ ಹಣ್ಣಿನ ಮರದ ಚಿಗುರು, ನೆಲನೆಕ್ಕರೆ, ನಾಣಿಲ್, ಕೈಕೋಲು, ನೆಲ್ಲಿಕಾಯಿ ಚಿಗುರು, ಪುನರ್ಪಳಿ, ನುಗ್ಗೆ ಸೊಪ್ಪು, ಮಾದೇರಿ, ಕೇಪುಳ, ಅರ್ತಿಯ ಎಲೆ, ಕೊಜಂಜೆ ಚಿಗುರು, ಪುಜ್ಜೆಕಾಯಿ ಚಿಗುರು, ಇಲ್ಲ್ ಬೂರ್, ಬಂದನಾರ್ ಚಿಗುರು, ಗಿರಿಬೀಜ ಚಿಗುರು,ಕುಂಟೋಲು ಚಿಗುರು, ನೆಕ್ಕರೆ, ಇಜಿನ್ ಚಿಗುರು, ತಜಂಕ್ ಎಲೆ, ಚೇವು ಎಲೆ, ಪೇರಳೆ ಚಿಗುರು, ಕಕ್ಕೆಸೋಪ್ಪು, ಸೋಣೆದ ಸೊಪ್ಪು, ಸೀಗೆ ಸೊಪ್ಪು, ನರೆಬೂರ್, ಉಯೇರ್ ಬೂರ್, ಪೊಂಗರ್ ಎಲೆ, ಚೀ ಮುಳ್ಳು, ನೇಡಿಲು, ಕೂರೆಂಬೆಲ, ಅಪ್ಪಿ ಹಣು ್ಣ ಮರದ ಚಿಗುರು, ತೇರೆ, ಕಡ್ಪರೆಂಗಿ, ಎಂಜಿರ್ ಎಲೆ, ತಿಮರೆ, ಕುದ್ಕ ಬಚ್ಚಿರೆ, ಚೂರಿಕಾಯಿ, ಕಾಡುಹುಳಿ ಚಿಗುರು,ಕಾಳುಮೆಣಸು ಎಲೆ ಚಿಗುರು, ಮಾವಿನ ಚಿಗುರು, ಗೇರು ಎಲೆ ಚಿಗುರು, ಹಲಸಿನ ಚಿಗುರು, ಕಾರೆಕಾಯಿ ಚಿಗುರು, ಹುಣಿಸೆ ಹುಳಿಚಿಗುರು, ಕಕೋಟೆ, ಮರುವದ ಚಿಗುರು, ಅರ್ಕೆದ ಬೂರುನ ಎಲೆ, ದಡ್ಡಲ್, ಬಣ್ಪುದ, ಕೊರಜ್ಜಿ ಚಿಗುರು.

    ಎಮ್ ಹರಿದಾಸರಾಯರು ಬರೆದ ‘ಬಾಳಿನ ಗಿಡ’ ಎನ್ನುವ ಪುಸ್ತಕವನ್ನು ಗೋವಿಂದರಾವ್ ಅವರು ಕಳುಹಿಸಿದ್ದರು. ಕೃಷಿಕರ ಜೀವನದ ಕಷ್ಟ ಕಾರ್ಪಣ್ಯಗಳನ್ನು ಇದು ವಿವರಿಸುತ್ತದೆ. ‘ಕೃಷಿತೋ ನಾಸ್ತಿ ದುರ್ಭಿಕ್ಷಂ’ ಎಂಬ ಗಾದೆ ಇದ್ದರೂ ದುರ್ಭಿಕ್ಷದ ಕಲ್ಪನೆಯನ್ನು ಇಂತಹ ಕೃಷಿಕರ ಜೀವನದಲ್ಲಿ ಕಾಣಲು ಸಾಧ್ಯ. ಈ ಪುಸ್ತಕದಿಂದ 1925-30ರ ದಶಕದಲ್ಲಿನ ದಕ್ಷಿಣಕನ್ನಡ ಜಿಲ್ಲೆಯ ಗ್ರಾಮೀಣಜೀವನದ ಪರಿಚಯವಾಯಿತು. ಆಗ ಮನೆ ತುಂಬಾ ಜನ. ಕನಿಷ್ಠ 6 ರಿಂದ 12 ಮಕ್ಕಳು. ಗೃಹಿಣಿಯಾದವಳು ಮುಂಜಾನೆಎದ್ದು ದನಕರುಗಳ ಸೇವೆ ಮಾಡಿ, ಸ್ನಾನಕ್ಕೆ ಬಿಸಿ ನೀರು ಕಾಯಿಸಿ, ಒಲೆ ಹಚ್ಚಿ ಅಡುಗೆ ಮಾಡುವ ವಿವರ ಓದುವಾಗಲೇ ಸಂಕಟವಾಗುತ್ತದೆ.

    ಆಗಿನ ಕಾಲದಲ್ಲಿ ಕೃಷಿಯೆಂದರೆ ಭತ್ತವೇ ಪ್ರಧಾನ. ಆದ್ದರಿಂದ ಮನೆ ವೆಚ್ಚಕ್ಕೆ ಅಕ್ಕಿ ದೊರೆಯುತ್ತಿತ್ತು. ಆದರೆ ಅಕ್ಕಿಯ ಮುಡಿಗೆ (39 ಕೆ.ಜಿ.)ಮೂರು ರೂಪಾಯಿ ಇದ್ದಾಗ ಬೀಜ, ಬಿತ್ತನೆ, ಕೊಯ್ಲು ಇತ್ಯಾದಿ ವೆಚ್ಚ ಕಳೆದು ಉಳಿದದ್ದು ಮನೆ ಬಳಕೆಯ ಧಾನ್ಯ, ಎಣ್ಣೆ, ಮಕ್ಕಳ ವಿದ್ಯಾಭ್ಯಾಸಕ್ಕೆ, ದೇವರು, ಮನೆದೈವಗಳ ಪೂಜೆಗೆ ಆಗಿ ಉಳಿದದ್ದನ್ನು ಉಪಯೋಗಿಸುತ್ತಿದ್ದರು.

    ಈ ಕಾದಂಬರಿಯಲ್ಲಿ ಗ್ರಾಮೀಣಜೀವನದ ಪರಿಚಯವಿದೆ. ಅದನ್ನು ಇಂದಿನ ಎಲ್ಲವೂ ಇದ್ದರೂ, ಅನುಭವಿಸಲು ಇಲ್ಲದ(ಕರೊನಾದಿಂದಾಗಿ) ಜೀವನಕ್ಕೆ ಹೋಲಿಸಬಹುದು. ನಮ್ಮ ಕ್ಷೇತ್ರಕ್ಕೆ ನಗರದಿಂದ ಬರುವವರು ಮನೆವಾರ್ತೆಯ ಕಷ್ಟ ಹೇಳಿಕೊಳ್ಳುತ್ತಾರೆ. ತರಕಾರಿ ತರಲು ಹೊರಗೆ ಹೋಗುವಂತಿಲ್ಲ. ಮನೆಗೆ ತಂದರೂ ಹೊರ ಬಾಗಿಲಿನಲ್ಲಿ ತೊಳೆದು ಸ್ಯಾನಿಟೈಸ್ ಮಾಡಬೇಕು. ಇಂದು ತರಕಾರಿಗಳು ಪಲ್ಯಕ್ಕೆ, ಅದರ ಸಿಪ್ಪೆ ಮತ್ತು ಜೀಜಗಳು ಮತ್ತೊಂದು ಅಡುಗೆಗೆ ಯಾ ಚಟ್ನಿಗೆ ಬಳಕೆಯಾಗುತ್ತವೆ. ವಿಲಾಸಿ ಜೀವನದಿಂದ ಅವಶ್ಯಕತೆಯ ವಾಸ್ತವಿಕತೆಗೆ ಹೊಂದಿಕೊಳ್ಳುವಂತಾಗಿದೆ.

    ಮನೆಯ ಬಳಿ ಇರುವ ಬಾಳೆಗಿಡ ಎಷ್ಟು ಉಪಕಾರಿಯೆಂದು ಇಂದಿನ ಜನಾಂಗಕ್ಕೆ ತಿಳಿಯದು. ಈಗ ಅರ್ಥವಾಗಲು ಪ್ರಾರಂಭವಾಗಿದೆ. ಬಾಳೆಕಾಯಿಯ ವಿವಿಧ ಪಲ್ಯಗಳು, ಗೊನೆಯ ಕೊನೆಯಲ್ಲಿರುವ ಹೂವಿನ ಪಲ್ಯ ಚಟ್ನಿ ಸಾರು ನಾಲಗೆ ಮತ್ತು ದೇಹ ಎರಡಕ್ಕೂ ಹಿತ. (ನನಗೆ ತಿಳಿಯದ್ದು ಬಹಳವಿರಬಹುದು). ಬಾಳೆದಿಂಡಿನ ರಸ ಅನೇಕ ಕಾಯಿಲೆಗಳಿಗೆ ರಾಮಬಾಣ. ಬಡವರಿಗಂತೂ ಕಾಡು ಬೆಳೆಯ ತರಕಾರಿಗಳá- ತುಳುವಿನ ಅಡ್ಕರೆ, ಕಾಡು ಹೀರೆ, ಕೆಸು, ಗಡ್ಡೆಗಳು, ಬೇಲಿಯಲ್ಲಿ ಸ್ವಾಭಾವಿಕವಾಗಿ ಬೆಳೆಯುವ ವನಸಹಜವಾದ ಹಣ್ಣುಹಂಪಲಗಳು, ಕೃಷಿ ತೋಟಗಳಿಂದ ದಿವಿಹಲಸು, ಹಲಸಿನಕಾಯಿ ಹಣ್ಣು ಆಪತ್ಪಾಂಧವರು. ನಮ್ಮ ತಾಯಿ ರತ್ನಮ್ಮನವರಿಗೆ ಹಳ್ಳಿ ಅಡುಗೆ ಇಷ್ಟ. ‘ಋತುಭುಕ್’ ಅಂದರೆ ಋತುಮಾನಕ್ಕೆ ಸರಿಯಾದ ವನಸ್ಪತಿಗಳಿಂದ ‘ಪಲ್ಲೊಡಿ’ ಸಂಗ್ರಹಿಸಿ ಅಡುಗೆ ಮಾಡಿಸುತ್ತಿದ್ದರು. ಪಲ್ಲೊಡಿ ಅಂದರೆ ಗಿಡಗಳಿಂದ ಆಯ್ದುತಂದ ಚಿಗುರುಗಳನ್ನು ಬಳಸಿ ಚಟ್ನಿ ಮಾಡುವುದು. ಪಲ್ಲೋಡಿಯನ್ನು ಕೆಲವು ದಿನ ಬಳಸಬಹುದು. ಇಂದಿಗೂ ಈ ಕೊಡಿ ಚಿಗುರುಗಳ (ಚಟ್ನಿ) ಪದಾರ್ಥ ಎಲ್ಲರಿಗೂ ಬಹಳ ಇಷ್ಟ. ಇತ್ತೀಚೆಗೆ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಅವರ ಪಕ್ಷದ ನಾಯಕರು ಧರ್ಮಸ್ಥಳಕ್ಕೆ ಬಂದಾಗ ಈ ಪಲ್ಲೋಡಿ ಚಟ್ನಿಯನ್ನು ಮಾಡಬಹುದೇ ಎಂದು ಮನೆಯಲ್ಲಿ ಚರ್ಚೆಯಾಯಿತು. ‘ಛೇ, ಈ ಹಳ್ಳಿ ಅಡುಗೆ ಅಂದರೆ ಸಣ್ಣ ಬಾಳೆಎಲೆ ತುಂಡಿನಲ್ಲಿ ಅನ್ನದೊಂದಿಗೆ, ಕಡುಬಿನ ಪಾತ್ರೆಯಲ್ಲಿ ಬೇಯಿಸಿದ ಈ ಚಟ್ನಿಯ ಮುದ್ದೆಯನ್ನಿಟ್ಟು ಗಣ್ಯರಿಗೆ ಕೊಡಬಹುದೇ’ ಎಂಬ ಮಾತು ಬಂದಾಗ ಶ್ರೀಮತಿ ಹೇಮಾವತಿಯವರು ‘ನಿಮ್ಮ ನಾಲಿಗೆಗೆ ಹಿತವಾದುದು ಅವರಿಗೆ ಆಗದೇ?’ಎಂದಾಗ, ಮೆನುವಿನಲ್ಲಿ ಸೇರಿಸಿದರು.

    ಸರಿ, ಮನೆಯ ಅನುಭವಸ್ಥ ನೌಕರರು ಓಡಾಡಿ ಅರುವತ್ತು ವಿವಿಧ ಗಿಡಗಳ ಚಿಗುರುಗಳನ್ನು ಸಂಗ್ರಹಿಸಿದರು. ಅಡುಗೆಯಾಗಿ ಅತಿಥಿಗಳಿಗೆ ಬಡಿಸಿದಾಗ ಅದನ್ನು ಮೆಚ್ಚಿತಿಂದವರು ಎರಡನೇ ಪಂಕ್ತಿಗಿದ್ದವರಿಗೆ ಏನೂ ಉಳಿಸಲಿಲ್ಲ. ಈ ಹಳ್ಳಿ ಅಡುಗೆಗೆ ‘ಗೋಲ್ಡನ್’ ಅಂದರೆ, ಚಿನ್ನದ ಪ್ರಶಂಸೆ ದೊರಕಿತು!

    ಹಿಂದೆ ಸಮೃದ್ಧವಾದ ಕಾಡಿತ್ತು. ವನಸ್ಪತಿಗಳಿದ್ದವು. ಸುಮಾರು 70-75 ಕಾಡುಸಸ್ಯಗಳ ಚಿಗುರುಗಳನ್ನು ಸಂಗ್ರಹಿಸಿ ಪಲ್ಲೋಡಿಗೆ ಬಳಸುತ್ತಿದ್ದರು. ಅವುಗಳನ್ನು ಕೊಯ್ಯುವವರು ಅನಕ್ಷರಸ್ಥರಾಗಿದ್ದರು. ಆದರೆ ಈ ವನಸ್ಪತಿಗಳನ್ನು ಗುರುತಿಸುವ ಚಾಕಚಕ್ಯತೆ, ಕೊಯ್ಯುವರೀತಿ ಮತ್ತು ಸಂಗ್ರಹಿಸುವ ತಾಳ್ಮೆ ಅವರಲ್ಲಿತ್ತು. ಇಂದಿಗೂ ನಾವು ಕನಿಷ್ಠ 50 ವಿಧದ ಚಿಗುರುಗಳನ್ನು ಪಲ್ಲೊಡಿಗೆ ಬಳಸುತ್ತೇವೆ.

    ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಬೆಳೆಯುವ ‘ಹಜಂಕು’ (ತುಳು) ಎನ್ನುವ ಗಿಡದ ಎಲೆಗಳಿಂದ ದೋಸೆ, ಪಲ್ಯ, ಕಡುಬು, ಚಟ್ನಿ ಇತ್ಯಾದಿ ಮಾಡುತ್ತಾರೆ. ನವಧಾನ್ಯಗಳು ಅನಿವಾರ್ಯವಾಗಿ ಆಹಾರದ ಸರ್ವಸ್ವವೂ ಆಗಿವೆ. ಅದರಲ್ಲಿ ನಮ್ಮ ಮನೆಯ ಹಳ್ಳಿ ಅಡುಗೆಯಲ್ಲಿ ಹುರುಳಿ, ಕಡಲೆ, ಹೆಸರುಕಾಳು ಇತ್ಯಾದಿ ಬೆಳಗಿನ ತಿಂಡಿಗಾದರೆ, ಅದನ್ನು ಹದಮಾಡಲು ಇಟ್ಟ ನೀರು ಮಧ್ಯಾಹ್ನ ಊಟಕ್ಕೆ ಸಾರು.

    ಹಲಸು ತುಳುನಾಡಿನ ಹಾಗೂ ಮಲೆನಾಡಿನ ಕಲ್ಪವೃಕ್ಷ. ಹಲಸಿನ ಹಣ್ಣಿನ ಮುಳ್ಳೊಂದನ್ನು ಬಿಟ್ಟು ಉಳಿದೆಲ್ಲವೂ ನಾನಾ ರೀತಿಯ ಭಕ್ಷ್ಯ, ಪಾಯಸ, ಪಲ್ಯಕ್ಕೆ ಉಪಯೋಗಿಸಲಾಗುತ್ತದೆ. ಹಲಸಿನ ಕಡುಬು, ದೋಸೆ, ಸೋಳೆಯ ಒಗ್ಗರಣೆ ಎಲ್ಲವೂ ರುಚಿಕರ. ಜತೆಗೆ ಹಲಸಿನ ನಾನಾ ರೀತಿಯ ಹಪ್ಪಳ ಮಾಡಬಹುದು. ಹಲಸಿನ ಸೋಳೆಗಳನ್ನು ಉಪ್ಪಿನಲ್ಲಿ ಹಾಕಿಟ್ಟು ಬೇಕಾದಾಗ ಪಲ್ಯ ಮಾಡುವ, ಹಲಸಿನ ಬೀಜವನ್ನು ಒಣಗಿಸಿಟ್ಟು ಬೇಕೆನಿಸಿದಾಗ ತಿನ್ನುವ ವ್ಯವಸ್ಥೆಯೂ ಇದೆ. ಈಗ ಕೈಗೆ ಅಂಟುವ ಮೇಣವಿಲ್ಲದೇ ಬೆಳೆಯುವ ಹಲಸನ್ನು ಸಂಶೋಧಿಸಿದ್ದಾರೆ.

    ಹಿಂದೆ, ಹಲಸಿನ ಹಣ್ಣಿನ ಬೆಳೆಯ ಸಮಯದಲ್ಲಿ ನೆಂಟರು ಮನೆಗೆ ಬಂದಾಗ ಅದರ ಸೋಳೆಯನ್ನು ಕೊಡುತ್ತಿದ್ದರಂತೆ. ಮೊದಲನೇ ಪ್ರಯೋಜನ ಆತಿಥ್ಯ. ಎರಡನೆಯದ್ದು ಹಲಸಿನ ಹಣ್ಣಿನಿಂದ ಹೊಟ್ಟೆತುಂಬಿದಾಗ ಊಟದ ಹಸಿವು ಇಂಗಿ ಇದ್ದ ಅಡುಗೆಯಲ್ಲಿ ಸುಧಾರಿಸಬಹುದು ಎಂಬುದು ಹಳ್ಳಿಯಲ್ಲಿ ವಾಡಿಕೆಯಲ್ಲಿದ್ದ ಅನುಭವಗಳು.

    ಕರಾವಳಿಯಲ್ಲಿ ‘ಋತುಭುಕ್’ಗೆ ಬೇಕಾಗುವಷ್ಟು ಹಣ್ಣುತರಕಾರಿ ಸೊಪ್ಪುಗಳ ಆಗರವೇ ಕಾಡುಗಳಲ್ಲಿವೆ. ಕಾಡುಪೀರೆ, ಕರೆವೊಲು ಜತೆಗೆ ಚಪ್ಪೆಸೊಪ್ಪು (ತಜಂಕ್), ಕೆಸುವಿನ ಸೊಪ್ಪು, ತಿಮರೆ ಸೊಪ್ಪು (ಒಂದೆಲಗ) ಹೀಗೆ ವೈವಿಧ್ಯಮಯ ಸೊಪ್ಪು ತರಕಾರಿಗಳಿಂದ ನಮ್ಮ ಹಿರಿಯರು ಸೃಜನಶೀಲತೆಯಿಂದ ತಯಾರಿಸುತ್ತಿದ್ದ ಪಾಕ ವೈವಿಧ್ಯಗಳಲ್ಲಿ ಪ್ರತಿಯೊಂದು ತಿಂಡಿ, ಪಲ್ಯ, ಚಟ್ನಿಗಳೂ ವೈವಿಧ್ಯತೆ, ರುಚಿಗಳಿಂದಾಗಿ ಗಮನ ಸೆಳೆಯುತ್ತವೆ.

    ಒಂದುಕಾಲದಲ್ಲಿ ಬೇಡವೆಂದು ಅಟ್ಟಏರಿದ್ದ ಹಳೇ ಸಾಮಗ್ರಿಗಳು ಹೊಸ ಮನೆಯಲ್ಲಿ ಪ್ರಧಾನಅಲಂಕಾರದ ವಸ್ತುಗಳಾಗಿ ಮೂಡಿ ಬಂದ ಹಾಗೆ, ಈ ಸಂದರ್ಭದಲ್ಲಿ ಪೇಟೆಯಿಂದ ಹಳ್ಳಿಗೆ ಬಂದ ಮನೆಮಕ್ಕಳು ಈ ತಿಂಡಿಗಳನ್ನು ಮಾಡಿ ತಿನ್ನುತ್ತಿರುವುದರಿಂದ ಹಳೆಯ ಕಾಲದ ಎಲ್ಲಾ ತಿಂಡಿಗೆ ಪುನರ್ಜನ್ಮ ಬಂದಂತಾಗಿ ಅಜ್ಜಿಯಂದಿರು, ತಾಯಂದಿರು ಖುಷಿಪಡುವಂತಾಗಿದೆ. ಚೈನೀಸ್, ಫ್ರೆಂಚ್, ಇಟಾಲಿಯನ್ ತಿಂಡಿಗಳ ಬಗ್ಗೆ ಮಾತನಾಡುತ್ತಿದ್ದ ಪೇಟೆಯ ಮಹಿಳೆಯರು ಈಗ ಗ್ರಾಮೀಣ ತಿಂಡಿಗಳನ್ನು ತಯಾರಿಸಿ ಆ ಫೋಟೊಗಳನ್ನು ವಾಟ್ಸಪ್​ನಲ್ಲಿ ಕಳುಹಿಸುತ್ತಿದ್ದಾರೆ. ನಮ್ಮ ಈ ಪ್ರಾದೇಶಿಕ ಆಹಾರದ ಮೂಲಕ ನಮ್ಮದೇ ನಾಡಿನ ಮಣ್ಣಿನ ಅಂತಃಸತ್ವ ತಿಳಿಯುವ ಅವಕಾಶವನ್ನು ಇಂದಿನ ಸ್ಥಿತಿ ಕಲ್ಪಿಸಿದೆ. ‘ಕಣ್ಣಿಗೆ ಕಣ್ಣಿನ ರೆಪ್ಪೆಯೇ ಕಾಣದು’ ಎಂಬಂತೆ ನಮ್ಮತನವನ್ನು ಗುರುತಿಸದೆ ದೂರದೆಡೆಗೆ ಕಣ್ಣು ಹಾಯಿಸುತ್ತಿದ್ದ ನಾವು ಮರಳಿ ಮಣ್ಣಿಗೆ ಬಂದಂತಾಗಿದೆ.

    ಸಾಮಾನ್ಯವಾಗಿ ಕರೊನಾ ಸಂದರ್ಭದಲ್ಲಿ ಮನೆಯಲ್ಲಿಯೇ ಕುಳಿತು ಎಲ್ಲರೂ ಬೊಜ್ಜು ಬೆಳೆಸಿಕೊಂಡಿರುತ್ತಾರೆ ಎಂಬ ಭಾವನೆ ಇತ್ತು. ನಾನು ನೋಡಿದ ಹಾಗೆ ಹಾಗಾಗಿಲ್ಲ. ಇದು ಒಂದುರೀತಿಯಲ್ಲಿ ಆಹಾರದ ನಿಯಂತ್ರಣದಿಂದಲೂ ಇರಬಹುದು ಮತ್ತು ಹೋಟೆಲ್ ಬೇಕರಿ ಮುಂತಾದ ಹೊರಗಡೆಯ ಆಹಾರವನ್ನು ಸೇವಿಸದಿರುವುದರಿಂದ ಕೂಡ ಆಗಿರಬಹುದು. ಹಿತಭುಕ್, ಮಿತಭುಕ್ ಎಂಬ ನಿಯಮ ಅನುಸರಿಸಿಕೊಂಡು ಆಹಾರ ಮತ್ತು ಜೀವನಶೈಲಿಯಲ್ಲಿ ನಿಯಂತ್ರಣ ಸಾಧಿಸಿಕೊಂಡ ಬಗ್ಗೆ ಅವರಿಗೆ ಅಭಿನಂದನೆಯನ್ನು ಸಲ್ಲಿಸಬೇಕಾಗುತ್ತದೆ.

    (ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts