More

    ಸಮಯದ ಮಹತ್ವ ಅರಿತು ವ್ಯವಹರಿಸೋಣ…

    ಸರಿಯಾದ ಸಮಯಕ್ಕೆ ಕೆಲಸಮಾಡುವ ಸಮಯಪ್ರಜ್ಞೆಯನ್ನು ಬೆಳೆಸಿಕೊಂಡರೆ ಮತ್ತು ಆನ್​ಲೈನ್ ಮೂಲಕ ನಡೆಯುವ ಕಾರ್ಯಕ್ರಮಗಳಿಗೆ ಹೊಂದಿಕೊಂಡರೆ ಬಹುಶಃ ನಮ್ಮ ವ್ಯವಹಾರ ಸುಲಭವಾಗಿ ನಡೆದೀತು. ಇದರಿಂದಾಗಿ ಪ್ರಯಾಣದಲ್ಲಿ ಆಗಬಹುದಾದ ಅನೇಕ ಸಮಸ್ಯೆಗಳನ್ನು, ಅಪಾಯಗಳನ್ನು ತಪ್ಪಿಸಲು ಕೂಡ ಸಾಧ್ಯವಿದೆ.

     ಗಾಂಧೀಜಿಯವರು ಸಮಯಕ್ಕೆ ಕೊಡುತ್ತಿದ್ದ ಬೆಲೆ ಎಲ್ಲರಿಗೂ ತಿಳಿದಿದೆ. ಅವರ ಪ್ರಾರ್ಥನಾ ಸಭೆಗಳು ಅಥವಾ ಸಾರ್ವಜನಿಕ ಸಮಯದ ಮಹತ್ವ ಅರಿತು ವ್ಯವಹರಿಸೋಣ...ಕಾರ್ಯಕ್ರಮಗಳು ಕರಾರುವಾಕ್ಕಾಗಿ ಸಮಯಕ್ಕೆ ಸರಿಯಾಗಿ ಆರಂಭವಾಗುತ್ತಿದ್ದವು. ಎಷ್ಟೇ ದೊಡ್ಡ ರಾಜಕಾರಣಿ ಇರಲಿ, ಬ್ರಿಟಿಷ್ ಅಧಿಕಾರಿಗಳಿರಲಿ ಅವರು ಗಾಂಧಿಯವರ ಸಮಯಕ್ಕೆ ಸರಿಯಾಗಿ ಹೊಂದಿಕೊಂಡೇ ಭೇಟಿ ಮಾಡಬೇಕಿತ್ತು. ಬಹುಶಃ ಅವರು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿರುವುದರಿಂದ ಮತ್ತು ಅಲ್ಲಿ ವಕೀಲರಾಗಿ ಕಾರ್ಯನಿರ್ವಹಿಸಿರುವುದರಿಂದ ಆ ಸಮಯಪ್ರಜ್ಞೆ ಬಂದಿರಬಹುದು. ‘ಯಾವುದಾದರೂ ಸಾರ್ವಜನಿಕ ಕಾರ್ಯಕ್ರಮಕ್ಕೆ ನೀವು ವಿಳಂಬವಾಗಿ ಹೋದರೆ ಅಲ್ಲಿ ಸೇರಿರುವ ಅಷ್ಟು ಜನರ ವಿಳಂಬದ ಸಮಯವನ್ನು ಗುಣಿಸಿ ಒಟ್ಟು ಎಷ್ಟು ಸಮಯ ವ್ಯರ್ಥವಾಯಿತೆಂದು ತಿಳಿದುಕೊಳ್ಳಿ’ ಎಂದು ಅವರು ಹೇಳುತ್ತಿದ್ದರು. ಸಮಯಪ್ರಜ್ಞೆಯ ಬಗ್ಗೆ ಇದು ದೊಡ್ಡ ಸಂದೇಶ.

    ಬ್ರಿಟಿಷರು ಸಮಯಪ್ರಜ್ಞೆ ಪಾಲಿಸಿಕೊಂಡು ಬಂದಿದ್ದರು. ವಿದೇಶ ಪ್ರವಾಸದ ಸಂದರ್ಭದಲ್ಲಿ ನಾನು ಕಂಡುಕೊಂಡಂತೆ ಅಲ್ಲಿ ಯಾವುದೇ ಕಾರ್ಯಕ್ರಮವನ್ನು ಸಮಯಕ್ಕೆ ಸರಿಯಾಗಿ ನಡೆಸುತ್ತಾರೆ ಮತ್ತು ಮುಗಿಸುತ್ತಾರೆ. ರೈಲು, ಬಸ್, ಕಾರು, ವಿಮಾನ ಹೀಗೆ ಯಾವುದೇ ಇರಲಿ ಸಮಯಕ್ಕೆ ಸರಿಯಾಗಿ ಹೊರಟೆ ಬಿಡುತ್ತದೆ. ಅಲ್ಲಿನ ವ್ಯವಸ್ಥೆಯ ಬಗ್ಗೆ ಕೂಡಾ ನಾವು ತಿಳಿದುಕೊಳ್ಳುವುದು ಅಗತ್ಯ. ವಿದೇಶ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಗಳಲ್ಲಿ ಕನಿಷ್ಠ ಹದಿನೈದು ನಿಮಿಷ ಮುಂಚಿತವಾಗಿ ಬಂದು ಕುಳಿತುಕೊಳ್ಳಿ ಎಂಬ ಸಂದೇಶ ಕೊಟ್ಟಿರುತ್ತಾರೆ. ಅತಿಥಿಗಳು ಬರುವಾಗ ಎದ್ದು ನಿಂತು ಅವರಿಗೆ ಗೌರವ ಸೂಚಿಸಲು ಸಹಾಯಕವಾಗುತ್ತದೆ. ಮತ್ತು ಕಾರ್ಯಕ್ರಮ ಆರಂಭವಾಗಿರುವಾಗ ಮಧ್ಯೆ ಮಧ್ಯೆ ಪ್ರೇಕ್ಷಕರು ನಡೆದುಕೊಂಡು ಬರುವುದು ತಪ್ಪುತ್ತದೆ ಎಂಬುದು ಇದರ ಉದ್ದೇಶ.

    ಗಣ್ಯ ವ್ಯಕ್ತಿಗಳು ಸಭೆಗೆ ಬರುವಾಗ ಎದ್ದು ನಿಲ್ಲುವುದು ನಮ್ಮ ದೇಶದಲ್ಲಿ ಸಂಪ್ರದಾಯ. ಕಾರ್ಯಕ್ರಮ ಆರಂಭವಾದ ನಂತರ ಬಂದರೂ ಎಲ್ಲರೂ ಎದ್ದು ನಿಂತು ಗೌರವಿಸುತ್ತಾರೆ. ಆಗ ವೇದಿಕೆಯಲ್ಲಿರುವವರಿಗೂ ಮುಜುಗರವಾಗುತ್ತದೆ. ವಿದೇಶಗಳಲ್ಲಿನ ಕಾರ್ಯಕ್ರಮಗಳಲ್ಲಿ ಸ್ವಾಗತ-ಪರಿಚಯ ಬಹಳ ಸಂಕ್ಷಿಪ್ತವಾಗಿರುತ್ತದೆ.

    ವಿದೇಶಗಳ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಯಲ್ಲಿ ಖ.ಖ.ಗಿ.ಕ. ಎಂದು ಅಚ್ಚು ಹಾಕಿಸುತ್ತಾರೆ. ಈ ಪದ ಫ್ರೆಂಚ್ ಮೂಲದಿಂದ ಬಂದಿದೆ. ಅತಿಥಿಗಳಿಗೆ ಆಹ್ವಾನ ಕೊಟ್ಟಾಗ ಒಪ್ಪಿದ್ದಾರೆಯೇ ಇಲ್ಲವೇ ಎಂದು ತಿಳಿಸಬೇಕಾಗಿ ಕೋರಿಕೆ, ಆತಿಥ್ಯಕ್ಕೆ ಮತ್ತು ವ್ಯವಸ್ಥೆಗೆ ಅನುಕೂಲವಾಗುತ್ತದೆ ಎಂಬುದು ಇದರ ಅರ್ಥ. ಇದರ ಅರ್ಥ ತಿಳಿಯದೇ ಮಾಮೂಲಾಗಿ ಭಾರತದಲ್ಲೂ ಹಿಂದೆ ಈ ಪದ ಬಳಕೆಯಾಗುತ್ತಿತ್ತು. ಕಾರ್ಯಕ್ರಮಕ್ಕೆ ಎಷ್ಟು ಮಂದಿ ಆಗಮಿಸುತ್ತಾರೆ ಎಂದು ತಿಳಿಯದೆ ‘ಎಷ್ಟು ಮಂದಿಗೆ ಊಟ ತಯಾರಿಸಬೇಕು?’ ಎಂದು ಅಡುಗೆ ಮಾಡುವವರು ಕೇಳಿದರೆ ‘ಸುಮಾರು ಐನೂರು ಮಂದಿಗೆ ತಯಾರಿಸಿ. ಹೆಚ್ಚು ಜನ ಬಂದರೆ ಸುಧಾರಿಸಿ’ ಎಂದೋ, ‘ಅಡ್ಜಸ್ಟ್ ಮಾಡಿ’ ಎಂದೋ ಹೇಳಬೇಕಾಗುತ್ತದೆ.

    ಗ್ರಾಮಾಭಿವೃದ್ಧಿ ಯೋಜನೆಯಿಂದ ಪರ್ಯಾಯ ಇಂಧನ ವ್ಯವಸ್ಥೆ ಮಾಡಿದ ಬಗ್ಗೆ ನಮಗೆ ‘ಆಶ್ಡೇನ್’ ಪ್ರಶಸ್ತಿ ದೊರಕಿತು. ಹೀಗಾಗಿ ಸನ್ಮಾನ ಕಾರ್ಯಕ್ರಮವನ್ನು ಲಂಡನ್ ಮ್ಯಾಂಬೆತ್​ನ ಮಾಜಿ ಮೇಯರ್ ನೀರಜ್ ಪಾಟೀಲ್ ಏರ್ಪಡಿಸಿದ್ದರು. ಆ ಹೋಟೆಲ್​ನ ಹಾಲ್​ನಲ್ಲಿ 150 ಜನ ಮಾತ್ರ ಕುಳಿತುಕೊಳ್ಳುವ ವ್ಯವಸ್ಥೆ ಇತ್ತು. ನಮ್ಮ ಜೊತೆಗೆ ಬಂದಿದ್ದ ನಮ್ಮ ಬಂಧುಗಳು ಮತ್ತು ಅಲ್ಲಿನ ನನ್ನ ಅಭಿಮಾನಿಗಳು ಉತ್ಸ್ಸಾಹದಿಂದ ಬಂದಿದ್ದರು. ಆದರೆ ಹೋಟೆಲ್​ನ ಸಿಬ್ಬಂದಿ ಅವರನ್ನು ಒಳಗೆ ಬಿಡಲೇ ಇಲ್ಲ. ಹೋಟೆಲ್​ನವರು ‘ನೂರ ಐವತ್ತು ಜನರ ಕಾರ್ಯಕ್ರಮ ಅಂದರೆ ಅಷ್ಟು ಜನಕ್ಕೆ ಮಾತ್ರ ಇನ್ಷುರೆನ್ಸ್ ಇರುತ್ತದೆ. ಅದಕ್ಕಿಂತ ಒಂದು ಸೀಟ್ ಕೂಡಾ ನಾವು ಹೆಚ್ಚಿಗೆ ಕೊಡುವುದಿಲ್ಲ’ಎಂದರು. ಬಂದವರೆಲ್ಲ ನಿರಾಶೆಯಿಂದ ಹೊರಗೆ ಉಳಿಯಬೇಕಾಯಿತು.

    ‘ಭಾರತೀಯ ಸಮಯ’ ಅಂತಲೇ ವಾಡಿಕೆ ಮಾತಿದೆ, ಅಂದರೆ ಸಮಯಕ್ಕೆ ಸರಿಯಾಗಿ ನಾವು ಹೋಗುವುದಿಲ್ಲ ಎಂದು. ಈಗ ಭಾರತೀಯರಲ್ಲಿ ಸಮಯಪ್ರಜ್ಞೆ ಹೆಚ್ಚಾಗಿದೆ. ನನ್ನ ಬಳಿ ಒಂದು ಇಲೆಕ್ಟ್ರಾನಿಕ್ ವಾಚ್ ಇತ್ತು. ಯಾವುದೇ ಕಾರ್ಯಕ್ರಮಕ್ಕೆ ಹೋಗುವಾಗ ಪ್ರತಿ ಬಾರಿ ಬಹಳ ಒತ್ತಡಕ್ಕೆ ಒಳಗಾಗುತ್ತಿದ್ದೆ. ಡ್ರೖೆವರ್​ನನ್ನು ಪ್ರಯಾಣದುದ್ದಕ್ಕೂ‘ಇನ್ನೂ ವೇಗವಾಗಿ ಹೋಗು’ ಎಂದು ಹುರಿದುಂಬಿಸುತ್ತಿದ್ದೆ. ಆದರೂ ರಸ್ತೆ ಸಮಸ್ಯೆ ಹಾಗೂ ಸಂದಭೋಚಿತವಾಗಿ ಎದುರಾಗುವ ಅಡೆತಡೆಗಳನ್ನು ಎದುರಿಸಿಕೊಂಡು ತಲುಪುವಾಗ ವಿಳಂಬವಾಗುತ್ತಿತ್ತು. ಒಂದು ದಿನ ಉಜಿರೆಯಲ್ಲಿ ಒಂದು ಕಾರ್ಯಕ್ರಮ. ಮುಖ್ಯ ಅತಿಥಿ ಖ್ಯಾತ ವೈದ್ಯ ಮತ್ತು ಸಂಸ್ಕೃತಿ ಚಿಂತಕ ಡಾ. ಬಿ.ಎಂ. ಹೆಗ್ಡೆ. ಹತ್ತು ನಿಮಿಷ ತಡವಾಗಿ ಅವರು ಬಂದರು. ಅಂದು ಅವರ ಕೈಯಲ್ಲಿ ವಾಚ್ ಇರದ್ದನ್ನು ಕಂಡು ‘ನೀವು ಬರುವಾಗ ತಡವಾಯಿತಲ್ಲ’ ಅಂದೆ. ‘ನನ್ನ ಕೈಯಲ್ಲಿ ವಾಚ್ ಇದ್ದರೂ ತಡವಾಗುವುದನ್ನು ತಪ್ಪಿಸಲು ಸಾಧ್ಯವಾಗುತ್ತಿರಲಿಲ್ಲ. ಯಾಕೆಂದರೆ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಿತ್ತು ಮತ್ತು ಅನೇಕ ಕಾರಣಗಳಿಂದ ತಡವಾಯಿತು. ಹಾಗಾಗಿ ಇದಕ್ಕೆ ಒತ್ತಡಕ್ಕೀಡಾಗಬಾರದು’ ಅಂದರು. ನನಗೆ ಅದೇ ಒಂದು ಸಂದೇಶವಾಯಿತು. ಅಂದಿನಿಂದ ಇಲೆಕ್ಟ್ರಾನಿಕ್ ವಾಚ್ ಬದಿಗಿಟ್ಟೆ. ಮತ್ತು ಅಂದೇ ದೀಕ್ಷೆಯನ್ನು ಕೈಗೊಂಡೆ. ನಾವು ಹತ್ತು ನಿಮಿಷ ಬೇಗನೆ ಹೊರಟು, ಬೇಗನೆ ತಲುಪಬೇಕು. ಮುಂದೆ ಎಂದೂ ಡ್ರೖೆವರ್​ಗೆ ವೇಗವಾಗಿ ಹೋಗು ಎನ್ನಲಿಲ್ಲ.

    ಧಾರ್ವಿುಕ ಕಾರ್ಯಕ್ರಮಗಳಿಗೆ ಮುಹೂರ್ತದ ಸಮಯ ಅಮೂಲ್ಯವಾದುದು. ವಧು-ವರರ ಜಾತಕ ನೋಡಿ ವಿವಾಹದ ಮುಹೂರ್ತ ನಿಗದಿಪಡಿಸಲಾಗುತ್ತದೆ. ದೀರ್ಘ ದಾಂಪತ್ಯ ಜೀವನ, ಸುಖ-ಶಾಂತಿ-ನೆಮ್ಮದಿ, ಸಂತಾನ ಭಾಗ್ಯ ಹೀಗೆ ಎಲ್ಲಾ ರೀತಿಯ ಒಳಿತಿಗಾಗಿ ಮುಹೂರ್ತಕ್ಕೆ ಪ್ರಾಧಾನ್ಯತೆ ಇದೆ. ಅಮೃತ ಘಳಿಗೆಗಳು ಕೆಲವೇ ನಿಮಿಷಗಳಿರುತ್ತವೆ. ತಪ್ಪಿದರೆ ವಿಷಘಳಿಗೆ ಬಂದೀತು. ಈ ಲೇಖನ ಬರೆಯುತ್ತಿರುವಾಗಲೇ, ಎರಡು ಮಕ್ಕಳಿರುವ ದಂಪತಿ ಬಂದು ‘ಅನೇಕ ಸಮಸ್ಯೆಗಳಿಗೆ ಒಳಗಾಗಿದ್ದೇವೆ. ಧರ್ಮಸ್ಥಳದಲ್ಲಿ ಮತ್ತೊಮ್ಮೆ ಮಾಂಗಲ್ಯ ಧಾರಣೆ ಮಾಡಿಸಿಕೊಳ್ಳುತ್ತೇವೆ’ ಎಂದು ತಿಳಿಸಿದರು.

    ದಿನಕ್ಕೆ ಇಪ್ಪತ್ತನಾಲ್ಕೆ ಗಂಟೆ. ವಾರಕ್ಕೆ ಏಳೇ ದಿವಸ. ತಿಂಗಳಿಗೆ ಮೂವತ್ತೇ ದಿನ. ಸಮಯದ ಬೆಲೆ ಎಷ್ಟು ಎಂದು ಕೇಳಿದರೆ ಬಹುಶಃ ದ್ರೌಪದಿ ವಸ್ತ್ರಾಪಹರಣ ಸಂದರ್ಭ ನೆನಪಿಸಿಕೊಳ್ಳಬೇಕಾಗುತ್ತದೆ. ಪಾಂಡವರಿಗೆ ಮಾನಹಾನಿ ಮಾಡಬೇಕೆಂದು ಕೌರವರು ದ್ರೌಪದಿಯನ್ನು ತುಂಬಿದ ರಾಜಸಭೆಗೆ ಎಳೆದುಕೊಂಡು ಬರುತ್ತಾರೆ. ಅವಳಿಗೆ ಆ ಕ್ಷಣದಲ್ಲಿ ಎಷ್ಟು ಒತ್ತಡ, ಅನಾಥಪ್ರಜ್ಞೆ, ಹತಾಶೆ, ಸಿಟ್ಟು ಇದ್ದಿರಬಹುದು! ದುಶ್ಶಾಸನ ಅವಳ ಸೀರೆಯನ್ನು ಎಳೆಯಲು ಪ್ರಾರಂಭಿಸುತ್ತಾನೆ. ಆಕೆ ತನ್ನ ಮಾನ ಮುಚ್ಚಿಕೊಳ್ಳಲು, ಮಾನ ಉಳಿಸಿಕೊಳ್ಳಲು ಸೆರಗನ್ನು ಹಿಂದಕ್ಕೆ ಎಳೆಯುತ್ತಾಳೆ. ಕೊನೆಗೆ ದುಶ್ಶಾಸನನ ಶಕ್ತಿಯನ್ನು ಎದುರಿಸಲಾಗದೆ ‘ಗೋವಿಂದ ಕೃಷ್ಣ’ ಎಂದು ಹೇಳಿ ಸೆರಗನ್ನು ಕೈಬಿಟ್ಟುಬಿಡುತ್ತಾಳೆ. ಆ ಹೊತ್ತಿಗೆ ಕೃಷ್ಣ ಅವಳ ಸೀರೆಯನ್ನು ಅಕ್ಷಯಾಂಬರ ಮಾಡಿದ್ದು ನಮಗೆಲ್ಲಾ ಗೊತ್ತಿದೆ. ಮುಂದೆ ಅವಳು ಕೃಷ್ಣನನ್ನು ಕೇಳುತ್ತಾಳೆ- ‘ಅಲ್ಲಣ್ಣ, ನಾನು ಅಷ್ಟು ಹತಾಶಳಾಗಿದ್ದೆ, ಅನಾಥಳಾಗಿದ್ದೆ. ನೀನು ಅಕ್ಷಯಾಂಬರವನ್ನು ಮೊದಲೆ ಕೊಟ್ಟಿದ್ದರೆ ನನ್ನ ಒತ್ತಡ ಕಡಿಮೆಯಾಗುತ್ತಿತ್ತಲ್ಲ. ಮಾನ ಉಳಿಯುತ್ತಿತ್ತಲ್ಲ’ ಎಂದು. ಆಗ ಕೃಷ್ಣ, ‘ನಿನ್ನನ್ನು ನೀನು ಉಳಿಸಿಕೊಳ್ಳಲು ಅವಕಾಶ ಕೊಟ್ಟೆ. ಕೌರವ ಸಭೆಯಲ್ಲಿದ್ದ ಹಿರಿಯರು ಯಾರಾದರೂ ತಡೆದಿದ್ದರೆ ನಾನು ಬರುವ ಅವಶ್ಯಕತೆ ಇರಲಿಲ್ಲ. ಆದರೆ ಹಾಗಾಗದಿದ್ದಾಗ ನಾನು ಅನುಗ್ರಹ ತೋರಿದೆ’ ಎಂದನಂತೆ. ಆ ಒಂದು ಕ್ಷಣದ ಬೆಲೆ ದ್ರೌಪದಿಗೆ ಸ್ವಯಂವೇದ್ಯವಾಗಿತ್ತು.

    ಒಂದು ಹಾಸ್ಯಮಯ ಉದಾಹರಣೆಯನ್ನು ಕೊಡಬಹುದಾದರೆ ವಿದ್ವಾಂಸ ರಜನೀಶ್ ಮಹರ್ಷಿಯವರಲ್ಲಿ ಒಮ್ಮೆ ಒಬ್ಬ ಶಿಷ್ಯ, ‘ಸ್ವಾಮಿ ಒಂದು ನಿಮಿಷದ ಬೆಲೆಯೆಷ್ಟು’ ಎಂದ. ಆಗ ರಜನೀಶರು, ‘ಶೌಚಗೃಹದ ಹೊರಗೆ ಅವಸರವಾಗಿರುವಂತಹ ಒಬ್ಬ ವ್ಯಕ್ತಿಯನ್ನು ಕೇಳಿದರೆ ಒಂದು ನಿಮಿಷದ ಬೆಲೆಯೇನೆಂದು ಹೇಳುತ್ತಾನೆ’ ಎಂದುತ್ತರಿಸುತ್ತಾರೆ. ಶೌಚಗೃಹಕ್ಕೆ ಹೋಗುವ ಒತ್ತಡಗಳು ತೀವ್ರವಾಗಿದ್ದಾಗ, ಅಲ್ಲಿ ಸಂದರ್ಭ ಅನುಕೂಲವಾಗಿಲ್ಲದಿದ್ದರೆ ಎಷ್ಟು ಹಿಂಸೆ ಪಟ್ಟುಕೊಳ್ಳಬೇಕಾಗುತ್ತದೆ ಎಂಬುದನ್ನು ಊಹಿಸಿಕೊಳ್ಳಬಹುದು.

    ಸೆಕೆಂಡಿನ ಬೆಲೆ ಎಷ್ಟು ಎಂದು ಓಟಗಾರರಲ್ಲಿ ಕೇಳಿದರೆ ಹೇಳಿಯಾರು. ವಿಶೇಷವಾಗಿ ಓಟದಲ್ಲಿ ಮಾಡುವ ರಾಜ್ಯ ಅಥವಾ ರಾಷ್ಟ್ರ ದಾಖಲೆಗಳಲ್ಲಿ ಸೆಕೆಂಡುಗಳಷ್ಟು ಮಾತ್ರ ವ್ಯತ್ಯಾಸಗಳಿರುತ್ತದೆ.

    ಹೃದಯಾಘಾತ, ಮಿದುಳಿನ ರಕ್ತಸ್ರಾವ ಮುಂತಾದವು ಅನಿರೀಕ್ಷಿತವಾಗಿ ಅತಿಥಿಗಳಂತೆ ಬಂದುಬಿಡುತ್ತವೆ. ಆಗೆಲ್ಲ ಶೀಘ್ರವಾಗಿ ವೈದ್ಯಕೀಯ ಚಿಕಿತ್ಸೆ ದೊರೆತರೆ ಬದುಕುವ ಸಾಧ್ಯತೆ ಇರುತ್ತದೆ. ವೈದ್ಯಕೀಯ ಭಾಷೆಯಲ್ಲಿ ಅದನ್ನು ‘ಗೋಲ್ಡನ್ ಅವರ್’ ಎಂದು ಕರೆಯುತ್ತಾರೆ. ಒಂದೊಂದು ಸೆಕೆಂಡು ಕೂಡಾ ಅಮೂಲ್ಯವಾದದ್ದು.

    ಒಬ್ಬ ಭಕ್ತರು ಧರ್ಮಸ್ಥಳಕ್ಕೆ ಆಗಾಗ ಬರುತ್ತಿದ್ದರು. ಒಂದು ದಿನ ಒಂದು ಸಂದರ್ಭವನ್ನು ನೆನಪಿಸಿಕೊಂಡರು- ‘ಬೆಂಗಳೂರಿನಲ್ಲಿ ಒಮ್ಮೆ ರಸ್ತೆಯಲ್ಲಿ ಮುಷ್ಕರ ನಡೆಯುತ್ತಿತ್ತು. ನಾನು ವಾಹನವನ್ನು ಬೇರೊಂದು ದಾರಿಯಲ್ಲಿ ತಿರುಗಿಸಲು ಪ್ರಯತ್ನಿಸಿದೆ. ಸಾಧ್ಯವಾಗಲಿಲ್ಲ. ಅಲ್ಲೆ ಪಕ್ಕದಲ್ಲಿ ಒಂದು ಆಸ್ಪತ್ರೆ ಇತ್ತು. ಆಸ್ಪತ್ರೆ ಒಳಗೆ ಹೋಗಿ, ಕಾರನ್ನು ಪಕ್ಕದಲ್ಲಿ ನಿಲ್ಲಿಸಿದ ತಕ್ಷಣ ಎದೆನೋವು ಬಂತು. ಕೌಂಟರ್​ನಲ್ಲಿ ಹೋಗಿ, ನನಗೆ ಎದೆನೋವು ಆಗುತ್ತಿದೆ ಎಂದಾಗ, ತಕ್ಷಣ ಒಳಗೆ ಕರೆದುಕೊಂಡು ಹೋದರು. ಆ ಕೂಡಲೇ ಬೈಪಾಸ್ ಸರ್ಜರಿ ಆಯಿತು.’ ಇಂತಹ ಘಟನೆಗಳಲ್ಲಿ ಸಮಯದ ಬೆಲೆ ಗೊತ್ತಾಗುತ್ತದೆ. ಮತ್ತು ಆ ವ್ಯಕ್ತಿ ಇದು ಭಗವಂತನ ಅನುಗ್ರಹ ಎಂಬ ತೀರ್ವನಕ್ಕೂ ಬಂದಿದ್ದರು. ಒಂದು ಸುಭಾಷಿತ ಹೀಗೆ ಹೇಳುತ್ತದೆ-‘ನ ದೇವಾಃ ದಂಡಮಾದಾಯ ರಕ್ಷಂತಿ ಪಶುಪಾಲವತ್ | ಯಂ ತು ರಕ್ಷಿತುಮಿಚ್ಛಂತಿ ಬುಧ್ಯಾ ಸಂಯೋಜಯಂತಿ ತಮ್ ||’ (ದೇವನು ಗೋಪಾಲಕರಂತೆ ಕೈಯಲ್ಲಿ ಕೋಲನ್ನು ಹಿಡಿದು ನಮ್ಮನ್ನು ಕಾಯುವುದಿಲ್ಲ. ಯಾರನ್ನು ರಕ್ಷಿಸಬೇಕೆಂದು ಬಯಸುತ್ತಾನೋ ಅವನಿಗೆ ಒಳ್ಳೆಯ ಬುದ್ಧಿಯನ್ನು ನೀಡುತ್ತಾನೆ)

    ಲಾಕ್​ಡೌನ್ ಆದ ಮೇಲೆ ಹೊಸ ಅನುಭವ ನಮಗೆ ಆಗುತ್ತಾ ಇದೆ. ಮೊದಲನೆಯದಾಗಿ ಕಳೆದ ಐದು ತಿಂಗಳಲ್ಲಿ ಯಾವುದೆ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿಲ್ಲ. ಆಗ ಅನೇಕ ಮಂದಿ ನನ್ನಲ್ಲಿ ಕೇಳಿದ್ದಿದೆ- ‘ನೀವು ಹೇಗೆ ಸಮಯವನ್ನು ಕಳೆಯುತ್ತೀರಿ? ಕಾರ್ಯಕ್ರಮಗಳಿಗೆ ಹೊಂದಿಕೊಂಡ ನಿಮ್ಮ ಜೀವನ ಪದ್ಧತಿಯನ್ನು ಇನ್ನು ಹೇಗೆ ಬದಲಾಯಿಸಿಕೊಳ್ಳುತ್ತೀರಿ’ ಎಂದು. ಈ ಮಧ್ಯೆ ಅಂತರ್ಜಾಲದಲ್ಲೇ ವೆಬಿನಾರ್, ಮೀಟಿಂಗ್ ಎಂದು ಶುರುವಾಯಿತು. ಇತ್ತೀಚೆಗೆ ಐವತೆôದಕ್ಕೂ ಹೆಚ್ಚು ದೇಶಗಳಲ್ಲಿರುವ ಭಾರತೀಯರು ನನ್ನ ಜೊತೆಗೆ ಸಂವಾದ ಮಾಡುವಂತಾಯಿತು.

    ಇನ್ನುಮುಂದೆ ಈ ಸಂವಹನ ಮಾಧ್ಯಮ ಬಹಳ ಉಪಯುಕ್ತವಾಗಬಹುದು. ನಮ್ಮ ಮನೆಯಲ್ಲಿ, ವಾಸಸ್ಥಳದಲ್ಲೆ ಕುಳಿತು ದೇಶ ವಿದೇಶಗಳೊಂದಿಗೆ ಪ್ರವಾಸವಿಲ್ಲದೆ, ಪ್ರಯಾಣವಿಲ್ಲದೆ ಕಾರ್ಯಕ್ರಮ ನಿರ್ವಹಿಸುವುದರಿಂದ ಸಮಯದ ಉಳಿತಾಯವಾಗುತ್ತದೆ. ಇತ್ತೀಚೆಗೆ ಬೆಂಗಳೂರು, ಮೈಸೂರು ಇತ್ಯಾದಿ ವಿದ್ಯಾಸಂಸ್ಥೆಗಳ ಮೀಟಿಂಗ್​ಗಳು ಮತ್ತು ಕೆಲವು ಸಾರ್ವಜನಿಕ ಕಾರ್ಯಕ್ರಮಗಳು ಕೂಡಾ ವೆಬಿನಾರ್ ಮೂಲಕವೇ ನಡೆಯಿತು. ಹೀಗೆ ಉಳಿತಾಯವಾದ ಸಮಯವನ್ನು ಇನ್ನೊಂದು ರಚನಾತ್ಮಕವಾದ ಕಾರ್ಯಕ್ಕೆ ಉಪಯೋಗಿಸಿಕೊಳ್ಳಬಹುದು.

    ಸಮಯದ ಮಹತ್ವ ಅರಿತು ಸಮಯಪ್ರಜ್ಞೆಯನ್ನು ನಾವು ಬೆಳೆಸಿಕೊಂಡರೆ ಮತ್ತು ಆನ್​ಲೈನ್ ಮೂಲಕ ಕಾರ್ಯಕ್ರಮಗಳಿಗೆ ಹೊಂದಿಕೊಂಡರೆ ಬಹುಶಃ ನಮ್ಮ ವ್ಯವಹಾರ ಬಹಳ ಸುಲಭವಾಗಿ ನಡೆದೀತು. ಇದರಿಂದಾಗಿ ಪ್ರಯಾಣದಲ್ಲಿ ಆಗಬಹುದಾದಂತಹ ಅನೇಕ ಸಮಸ್ಯೆಗಳನ್ನು, ಅಪಾಯಗಳನ್ನು ತಪ್ಪಿಸಲು ಕೂಡ ಸಾಧ್ಯವಿದೆ. ಈ ಬಗ್ಗೆ ಹೆಚ್ಚು ಚಿಂತನೆ ನಡೆಯಲಿ ಎಂದು ಆಶಿಸುತ್ತೇನೆ.

    50 ಕೋಟಿ ರೂಪಾಯಿ ಪಿಡಿಎಸ್ ಹಗರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts