More

    ಆನೆಗಳ ಜತೆಗೆ ಕೃಷಿರಕ್ಷಣೆಯೂ ಆಗಬೇಕು: ಧರ್ಮದರ್ಶನ ಡಾ.ವೀರೇಂದ್ರ ಹೆಗ್ಗಡೆಯವರ ಅಂಕಣ

    ಆನೆಗಳ ಸಂತತಿ ಉಳಿಯಬೇಕು. ಆದರೆ, ಅವು ಕಾಡಿನಲ್ಲಿಯೇ ಇರುವಂತೆ ಮಾಡುವುದು ಮುಖ್ಯ. ಆ ನಿಟ್ಟಿನಲ್ಲಿ ಕಾಡುಗಳ ರಕ್ಷಣೆ ಆಗಬೇಕು ಮತ್ತು ಆನೆಗಳಿಗಾಗಿಯೇ ಪ್ರತ್ಯೇಕ ಕಾರಿಡಾರ್ ರೂಪಿಸಬೇಕು. ಆಗ ಗಜಪಡೆಯಿಂದ ಕೃಷಿಹಾನಿ, ಪ್ರಾಣಹಾನಿಯನ್ನು ತಪ್ಪಿಸಲು ಸಾಧ್ಯವಾಗಬಹುದು. ಈ ನಿಟ್ಟಿನಲ್ಲಿ ಸರ್ಕಾರ ಅವಶ್ಯ ಕ್ರಮ ಕೈಗೊಳ್ಳಬೇಕು.

    ಆನೆಗಳ ಜತೆಗೆ ಕೃಷಿರಕ್ಷಣೆಯೂ ಆಗಬೇಕು: ಧರ್ಮದರ್ಶನ ಡಾ.ವೀರೇಂದ್ರ ಹೆಗ್ಗಡೆಯವರ ಅಂಕಣಪ್ರಪಂಚದಲ್ಲಿದ್ದ ಅನೇಕ ಪ್ರಾಣಿಗಳು ಸಂಪೂರ್ಣವಾಗಿ ನಿರ್ನಾಮವಾಗಿವೆ; ಅವುಗಳ ತಳಿ ಅಥವಾ ಸಂತತಿಯೇ ನಾಶವಾಗಿದೆ. ಇನ್ನು ಕೆಲವು ಅಳಿವಿನಂಚಿನಲ್ಲಿವೆ. ನಮಗೆಲ್ಲ ತಿಳಿದಿರುವಂತೆ ಡೈನೋಸಾರ್ ಎಂಬ ಭಯಂಕರ ಪ್ರಾಣಿ ಇತ್ತು ಎಂದು ವಿಜ್ಞಾನಿಗಳು ಹೇಳುತ್ತಾರೆ. ಅದು ಇಂದಿಲ್ಲ. ಈ ಸೃಷ್ಟಿಯಲ್ಲಿ ಗಂಡಭೇರುಂಡದಂಥ ಹಲವಾರು ರೀತಿಯ ವಿಚಿತ್ರವಾದ ಪ್ರಾಣಿಗಳಿದ್ದವೆಂಬುದನ್ನು ನಮ್ಮ ಪುರಾಣ ಇತಿಹಾಸಗಳಲ್ಲಿ ಮತ್ತು ವೈಜ್ಞಾನಿಕ ಅಧ್ಯಯನದಲ್ಲಿ ಕಾಣುತ್ತೇವೆ. ಈಗ ಘೕಂಡಾಮೃಗ ಅಪಾಯದ ಅಂಚಿನಲ್ಲಿದೆ ಎಂದು ಪ್ರಾಣಿಶಾಸ್ತ್ರಜ್ಞರು ಹೇಳುತ್ತಾರೆ. ಹುಲಿ ಸಂತತಿ ಕ್ಷೀಣವಾಗುತ್ತ ಬರುತ್ತಿದೆ ಎಂಬ ಮಾತೂ ಕೇಳಿಬರುತ್ತಿದೆ. ಹೀಗೆ ನಾಶವಾದ ಈ ಪ್ರಾಣಿಗಳಲ್ಲಿ ಶೇಕಡ 80 ಅಥವಾ 90 ಮಾಂಸಾಹಾರಿ ಪ್ರಾಣಿಗಳು. ಇವು ಆಹಾರಕ್ಕಾಗಿ ಇನ್ನೊಂದು ಪ್ರಾಣಿಯ ಮೇಲೆ ಆಕ್ರಮಣ ಮಾಡಿ ಅದನ್ನು ಕೊಂದು ತಿಂದು ಜೀವಿಸುತ್ತಿದ್ದ ಪ್ರಾಣಿಗಳು. ಮನುಷ್ಯರನ್ನು ಕೂಡ ನಾನಾ ರೀತಿಯಲ್ಲಿ ಹಿಂಸಿಸುತ್ತಿದ್ದವು. ಮನುಷ್ಯರು ಕೂಡ, ಇಂತಹವನ್ನು ಕ್ರೂರ ಪ್ರಾಣಿಗಳೆಂದು ಗುರುತಿಸಿ ಅವುಗಳ ನಾಶಕ್ಕೆ ಪ್ರಯತ್ನಿಸಿರಬಹುದು. ಈ ರೀತಿ ನಾಶವಾಗುವಂತಹ ತಳಿಗಳಲ್ಲಿ ಇನ್ನೂ ಉಳಿದುಕೊಂಡು ಬಂದ ದೊಡ್ಡ ಗಾತ್ರದ ಪ್ರಾಣಿ ಎಂದರೆ ಅದು ಆನೆ.

    ಆನೆಗಳ ಜತೆಗೆ ಕೃಷಿರಕ್ಷಣೆಯೂ ಆಗಬೇಕು: ಧರ್ಮದರ್ಶನ ಡಾ.ವೀರೇಂದ್ರ ಹೆಗ್ಗಡೆಯವರ ಅಂಕಣಆನೆಯ ವಂಶಾವಳಿ ಉಳಿದು ಬೆಳೆದದ್ದು ಒಂದು ವಿಶೇಷವಾದ ಘಟನೆ. ಆನೆ ಸಸ್ಯಾಹಾರಿ ಪ್ರಾಣಿ. ಒಂದೊಮ್ಮೆ ಮಾಂಸಾಹಾರಿಯಾಗಿದ್ದರೆ ಅದು ಉಳಿಯುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಸಸ್ಯಾಹಾರಿಯಾದ್ದರಿಂದಲೇ ಆನೆ ಉಳಿದು ಬೆಳೆದುಕೊಂಡು ಬಂತು. ಗೋಸಂತತಿ, ಗಜಸಂತತಿ, ಅಶ್ವಸಂತತಿ ಇವೆಲ್ಲ ಉಳಿದುಕೊಂಡು ಬಂದದ್ದು ಮಾತ್ರವಲ್ಲದೆ ಮನುಷ್ಯನಿಗೆ ಸಮೀಪದಲ್ಲಿ, ಪ್ರೀತಿಪಾತ್ರವಾಗಿ ಬೆಳೆದುಕೊಂಡು ಬಂದವು.

    ಇತಿಹಾಸವನ್ನು ಅವಲೋಕಿಸಿದರೆ, ಆನೆಯ ಸಂರಕ್ಷಣೆ ಮತ್ತು ಉಪಯೋಗ ಅನೇಕ ಶತಮಾನಗಳಿಂದ ಬೆಳೆದು ಬಂದಿದೆ. ಆನೆ ಗಾತ್ರ, ಶಕ್ತಿಯಿಂದ ಮನುಷ್ಯರನ್ನು ಮೀರಿಸಬಲ್ಲ ಸಾಮರ್ಥ್ಯವುಳ್ಳದ್ದು. ಎಷ್ಟು ದೊಡ್ಡ ಗಾತ್ರದ ಆನೆಯಾದರೂ ನಿಯಂತ್ರಿಸಲು ಯಾವ ದೊಡ್ಡ ಆಯುಧ ಬೇಕಾಗಿಲ್ಲ. ದೊಡ್ಡದೇಹ, ಚುರುಕುಬುದ್ಧಿ ಮತ್ತು ಶಕ್ತಿ ಇದ್ದರೂ ಒಂದು ಅಂಕುಶದಿಂದ ಹತೋಟಿಗೆ ತರಬಹುದು. ಏಕೆಂದರೆ, ಆನೆ ನೋವಿಗೆ, ಮನುಷ್ಯನಿಗೆ ಹೆದರುತ್ತದೆ. ಅಲ್ಲದೆ ಇದು ಸಹಜೀವಿ ಪ್ರಾಣಿಯೂ ಹೌದು. ‘ನಾಸ್ತಿ ಹಸ್ತಿಸಮೊ ಬಂಧುಃ ನಾಸ್ತಿ ಹಸ್ತಿಸಮಃ ಸಖಾ|’ ನಮ್ಮೊಂದಿಗೆ ಸಮೀಪದಲ್ಲಿ ಇದ್ದುಕೊಂಡು ಅದು ಬದುಕುತ್ತದೆ. ಈ ಕಾರಣದಿಂದಲೇ ಆನೆಸಂತತಿ ಬದುಕುಳಿಯಿತು ಎಂದು ಹೇಳಬಹುದು.

    ಹಿಂದೆಲ್ಲ ಚತುರಂಗಬಲ ಎಂದು ಪ್ರಸಿದ್ಧವಾದ ಸೈನ್ಯದಲ್ಲಿ ಆನೆಗೆ ವಿಶೇಷವಾದ ಸ್ಥಾನಮಾನವಿತ್ತು. ಒಂದು ಅಕ್ಷೋಹಿಣಿ ಸೈನ್ಯದಲ್ಲಿ 21,870 ಗಜಗಳು ಇರಬೇಕು ಎಂಬ ನಿಯಮವಿತ್ತು. ವಿಶೇಷವಾಗಿ ಯುದ್ಧದ ಸಂದರ್ಭದಲ್ಲಿ ಆನೆಯ ಬಳಕೆ ಕಂಡುಬರುತ್ತಿತ್ತು. ಪಾಂಡವರ ಸೈನ್ಯದಲ್ಲಿ 7 ಅಕ್ಷೋಹಿಣಿ ಹಾಗೂ ಕೌರವರ ಪಕ್ಷದಲ್ಲಿ 11 ಅಕ್ಷೋಹಿಣಿ ಸೈನ್ಯವಿತ್ತು. ಓದುಗರು 21,870 ಆನೆಗಳು ಮತ್ತು 18 ಅಕ್ಷೋಹಿಣಿಯನ್ನು ಗುಣಾಕಾರ ಮಾಡಿ ಆನೆಯ ಸಂಖ್ಯೆಯನ್ನು ತಿಳಿದುಕೊಳ್ಳಬಹುದು ಮತ್ತು ಇಷ್ಟು ಆನೆಗಳು ಓಡಾಡುತ್ತಿರಬೇಕಾದರೆ ಕುರುಕ್ಷೇತ್ರ ಯುದ್ಧಭೂಮಿ ಎಷ್ಟು ವಿಶಾಲವಾಗಿರಬಹುದು ಹಾಗೂ ಈ ಆನೆಗಳ ಓಡಾಟದಲ್ಲಿ ಕಾಲ್ತುಳಿತಕ್ಕೆ ಸಿಕ್ಕ ಸೈನಿಕರ ಸಂಕಷ್ಟ ಹೇಗಿರಬಹುದೆಂದು ಊಹಿಸಿಕೊಳ್ಳಬಹುದು.

    ನಮ್ಮ ನಾಡಿನ ಶ್ರೇಷ್ಠ ರಾಜರು, ಅಷ್ಟೇ ಅಲ್ಲ ವಿದೇಶದಲ್ಲಿ ಆಳ್ವಿಕೆ ಮಾಡಿದಂಥ ರಾಜರು ಕೂಡ ಗಜಪಡೆಯನ್ನು ಇಟ್ಟುಕೊಳ್ಳುತ್ತಿದ್ದರು. ಅದು ಅವರ ಗೌರವದ ಸಂಕೇತವಾಗಿತ್ತು. ಇಂಥ ಗಜಪಡೆಯ ಸಾಮರ್ಥ್ಯದಿಂದಲೇ ಶತ್ರುಗಳನ್ನು ಸೋಲಿಸುತ್ತಿದ್ದರು.

    ರಕ್ಷಂತಿ ಪಕ್ಷಂ ಮುದಿತಾಃ ಸ್ವಕೀಯಂ ಮಥ್ನಂತಿ ಸೈನ್ಯಂ ಕುಪಿತಾಃ ಪರೇಷಾಂ|
    ಪ್ರಾಣೈರಪೀಚ್ಛಂತಿ ಹಿತಂ ಪ್ರಭೂಣಾಂ ಗಜೈಃ ಸಮಾನಂ ಕ್ವ ಬಲಂ ಬಲೀಯಃ ||

    (ಸಂತೋಷಗೊಂಡ ಆನೆಗಳು ಸ್ವಪಕ್ಷವನ್ನು ರಕ್ಷಿಸಿ, ಕೋಪಬಂದರೆ ಶತ್ರುಪಕ್ಷವನ್ನು ನಾಶಮಾಡುತ್ತವೆ. ಪ್ರಾಣತೆತ್ತಾದರೂ ರಾಜನನ್ನು ರಕ್ಷಿಸುತ್ತವೆ. ಆದ್ದರಿಂದ ಆನೆಗಿಂತ ಬಲಿಷ್ಠರಾರಿದ್ದಾರೆ?)

    ದ್ರೋಣಾಚಾರ್ಯರನ್ನು ವಧೆ ಮಾಡುವುದಕ್ಕಾಗಿ ಧರ್ಮರಾಜನಿಂದ ‘ಅಶ್ವತ್ಥಾಮೋ ಹತಃ ಕುಂಜರಃ’ ಎಂದು ಹೇಳಿಸಲಾಗುತ್ತದೆ. ಮಹಾಭಾರತದಲ್ಲಿ ದ್ರೋಣರ ವಧೆ ಹೀಗೆ ಆನೆಯ ನೆಪದಿಂದಾಯಿತು. ಸತ್ಯನಿಷ್ಠನಾದ ಧರ್ಮರಾಜನ ಬಾಯಿಂದಲೂ ಸುಳ್ಳನ್ನು ಹೇಳಿಸಿದ್ದು ಕೃಷ್ಣನ ಉಪಾಯ. ಅದಕ್ಕೆ ನೆಪವಾದದ್ದು ಆನೆ.

    ಮನುಷ್ಯನ ಒಡನಾಡಿ ಗಜರಾಜ: ಇದು ಬಹಳ ಕುತೂಹಲಕಾರಿ ಅಂಶ. ಇಷ್ಟೆಲ್ಲ ಸಹಸ್ರಮಾನಗಳ ಕಾಲ ಆನೆಸಂತತಿ ಉಳಿದದ್ದು ದೇಹದ ಗಾತ್ರ ಅಥವಾ ಸಾಮರ್ಥ್ಯದಿಂದಲ್ಲ, ಬದಲಿಗೆ ಆನೆಗಳಲ್ಲಿರುವ ಭಯ ಮತ್ತು ಸ್ನೇಹ ಗುಣದಿಂದಾಗಿ. ಈ ಗುಣವು ಅದನ್ನು ಮನುಷ್ಯನ ಒಡನಾಡಿಯಾಗಿ ಮಾಡಿದೆ. ಇತ್ತೀಚೆಗೆ ಟಿವಿಯಲ್ಲಿ ಒಂದು ಘಟನೆ ನೋಡಿದೆ. ಒಬ್ಬ ವ್ಯಕ್ತಿಯನ್ನು ಆಫ್ರಿಕನ್ ಆನೆ ಓಡಿಸಿಕೊಂಡು ಬರುತ್ತಿತ್ತು. ಇನ್ನೇನು ಹತ್ತಿರಕ್ಕೆ ಬಂದು ಅವನ ಮೇಲೆ ಆಕ್ರಮಣ ಮಾಡುತ್ತದೆ ಎನ್ನುವಾಗಲೂ ಆ ವ್ಯಕ್ತಿ ಧೈರ್ಯವಾಗಿ ನಿಂತುಕೊಂಡ. ಓಡಿಬಂದ ಆನೆ 30 ಅಡಿ ದೂರದಲ್ಲಿ ಏಕಾಏಕಿ ನಿಂತು, ಇವನು ಭಯಪಡುತ್ತಾನೇನೋ ಎಂದು ಗಮನಿಸಿತು. ಒಂದೊಮ್ಮೆ ಇವನು ಹೆದರಿ ಓಡಿ ಹೋಗಿದ್ದರೆ ಆನೆ ಓಡಿಸಿಕೊಂಡು ಬಂದು ಸಾಯಿಸಿ ಬಿಡುತ್ತಿತ್ತು. ಇವನು ಸ್ಥಿರವಾಗಿ ನಿಂತಿದ್ದರಿಂದ, ಈತ ಭಯಪಡುವ ವ್ಯಕ್ತಿಯಲ್ಲ ಬದಲಾಗಿ ತನಗೆ ಏನಾದರೂ ಮಾಡಿಯಾನು ಎಂಬ ಹೆದರಿಕೆಯಿಂದ ಹಿಂದಕ್ಕೆ ಹೋಗಿಬಿಟ್ಟಿತು. ಇದು ಆನೆಯ ಸೂಕ್ಷ್ಮ ಹೃದಯವನ್ನು ತಿಳಿದುಕೊಳ್ಳುವುದಕ್ಕೆ ಒಳ್ಳೆಯ ಉದಾಹರಣೆ.

    ಇನ್ನೊಂದು ದೃಷ್ಟಿಯಿಂದ ನೋಡಿದರೆ ಬೃಹದ್ಗಾತ್ರದ, ಶಕ್ತಿಶಾಲಿಯಾದ ಆನೆಯನ್ನು ಮನುಷ್ಯನು ಕೇವಲ ಅಂಕುಶದಿಂದ ಪಳಗಿಸಿ ಅದರಿಂದ ಎಂತೆಂತಹ ಸಾಹಸದ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾನೆ. ಆನೆ ಪುಕ್ಕಲು ಸ್ವಭಾವ ಹೊಂದಿರುವುದರಿಂದ ಮನುಷ್ಯ ಹೇಳಿದ ಹಾಗೆ ಅವನ ಜೊತೆಗೆ ಬದುಕುವ ಪ್ರವೃತ್ತಿಯನ್ನು ರೂಢಿಸಿಕೊಂಡಿದೆ. ಸ್ನೇಹಕ್ಕೆ ಹೆಸರಾದ ಆನೆ ಕುರಿತು ನೂರಾರು ಕಥೆಗಳು ಪ್ರಚಲಿತದಲ್ಲಿವೆ.

    ಹೆಚ್ಚುತ್ತಿದೆ ಗಜಗಳ ಸಂಖ್ಯೆ: ಪ್ರಪಂಚದ ಎಲ್ಲ ದೇಶಗಳಲ್ಲಿಯೂ ಆನೆಗಳನ್ನು ವನಗಳಲ್ಲಿ ರಕ್ಷಿಸುತ್ತಾರೆ ಹಾಗೂ ಸಾಕುತ್ತಾರೆ. ಆಫ್ರಿಕನ್ ದೇಶಗಳಲ್ಲಿ ಆನೆಗಳ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ. ಏಷ್ಯಾದ ಕಾಡುಗಳಲ್ಲಿನ ಆನೆ ದಿನಕ್ಕೆ 16ರಿಂದ 18 ಗಂಟೆ ಆಹಾರವನ್ನು ತಿನ್ನುತ್ತಿರುತ್ತದೆ. ದಿನಕ್ಕೆ ಸರಾಸರಿ 400 ಪೌಂಡ್​ನಷ್ಟು ಆಹಾರ ಸೇವಿಸುವ ಆನೆ ಒಂದೇ ದಿನದಲ್ಲಿ ಸಾವಿರಾರು ಎಕರೆ ಬೆಳೆಗಳನ್ನು ನಾಶಮಾಡಬಲ್ಲುದು. ಸಂಖ್ಯೆ ಹೆಚ್ಚುತ್ತಿರುವುದರಿಂದ ಆಫ್ರಿಕಾದಲ್ಲಿ ಕಲ್ಲಿಂಗ್ (u್ಝ್ಞ) ಎಂದರೆ ಆನೆಯನ್ನು ಕೊಲ್ಲಲಾಗುತ್ತಿದೆ. ಪ್ರಕೃತಿಯ ಮೇಲಾಗುವ ದುಷ್ಪರಿಣಾಮಗಳನ್ನು ತಡೆಯುವುದಕ್ಕೆ ಒಂದೇ ಮಾರ್ಗವೆಂದರೆ- ಅದು ಆನೆಗಳನ್ನು ಸಾಯಿಸುವುದೇ ಆಗಿದೆ ಎಂಬುದು ಅವರ ದೃಢವಾದ ನಂಬಿಕೆಯಾಗಿದೆ.

    ಆನೆಯ ದೇಹದಲ್ಲಿ ಹೆಚ್ಚು ಮೌಲ್ಯವುಳ್ಳದ್ದು ಅದರ ದಂತ. ದಂತದ ಆಸೆಗಾಗಿ ಆನೆಯನ್ನು ಕೊಲ್ಲುತ್ತಾರೆ. ಎಲ್ಲ ದೇಶಗಳಲ್ಲಿ ಆನೆಯನ್ನು ರಕ್ಷಣೆ ಮಾಡುವ ಮುಖ್ಯ ಉದ್ದೇಶವೇ ಅದರ ದಂತಗಳನ್ನು ಪಡೆದುಕೊಳ್ಳುವುದು. ಪ್ರಾಣಿಗಳೆಲ್ಲವೂ ಮನುಷ್ಯನಿಂದಲೇ ನಾಶವಾಗಿವೆ ಎಂದೇನಲ್ಲ. ಪ್ರವಾಹ, ಅಧಿಕ ತಾಪಮಾನವೂ ಅದಕ್ಕೆ ಕಾರಣವಾಗಿರಬಹುದು. ಕೆಲವು ಬಾರಿ ಭೂಕಂಪದಿಂದ ಮಣ್ಣು ಕುಸಿತವಾಗಿ ಇಂತಹ ದುರ್ಘಟನೆ ಸಂಭವಿಸಿರಬಹುದು. ಈ ಲೇಖನ ಬರೆಯುತ್ತಿರುವಾಗಲೇ, ಆಸ್ಟ್ರೇಲಿಯಾ ಮುಂತಾದೆಡೆ ಸಾವಿರಾರು ಎಕರೆ ಭೂಪ್ರದೇಶ ಬೆಂಕಿಗೆ ಆಹುತಿಯಾಗುತ್ತಿರುವ ಸುದ್ದಿ ಬರುತ್ತಿತ್ತು. ಅಲ್ಲಿರುವ ಪ್ರಾಣಿ-ಪಕ್ಷಿಗಳ ಮಾರಣಹೋಮವೇ ನಡೆದುಬಿಟ್ಟಿದೆ.

    ಸಮತೋಲನ ಕಾಪಾಡಬೇಕಿದೆ: ಮುಂದಿನ ದಿನಗಳಲ್ಲಿ ಆನೆಗಳ ಸಮತೋಲನ ಕಾಪಾಡುವುದು ಸರ್ಕಾರದ ಹೊಣೆಯಾಗಿದೆ. ಕರ್ನಾಟಕದಲ್ಲಿ ನಾವು ಆನೆಗಳ ಸಂರಕ್ಷಣೆಗಾಗಿ ಹಲವು ಪ್ರಯತ್ನ ಮಾಡುತ್ತಿದ್ದೇವೆ. ಪ್ರಸಕ್ತ ಆನೆಗಳ ಸಂಖ್ಯೆಯೂ ಹೆಚ್ಚಾಗಿದೆ. ಕಾಡುಪ್ರದೇಶ ಕಡಿಮೆಯಾಗಿ ಭೂಪ್ರದೇಶ ಹೆಚ್ಚಾಗಿರುವುದು ಸಮಸ್ಯೆಯಾಗಿ ಪರಿಣಮಿಸಿದೆ. ಅಲ್ಲದೆ, ಮನುಷ್ಯರೇ ಕಾಡನ್ನು ಅತಿಕ್ರಮಿಸುತ್ತಿರುವ ಪ್ರಮಾಣ ಹೆಚ್ಚುತ್ತಿದೆ. ಕಾಡಿನಲ್ಲಿ ಸ್ವಚ್ಛಂದವಾಗಿ ವಿಹಾರ ಮಾಡುತ್ತಿರುವ ಪ್ರಾಣಿಗಳಿಗೆ ಇದರಿಂದ ಸಂಕಷ್ಟದ ಸ್ಥಿತಿ ಎದುರಾಗಿದೆ. ಆನೆ ಮತ್ತಿತರ ಕಾಡುಪ್ರಾಣಿಗಳಿಂದ ಅನೇಕ ವಿಧವಾದ ಸಮಸ್ಯೆಗಳು ಉಂಟಾಗುತ್ತಿವೆ ಎಂಬುದೇನೋ ನಿಜ. ಆದರೆ, ಕಾಡಿನಲ್ಲಿ ಯಥೇಚ್ಛವಾಗಿ ಆಹಾರವೂ ಸಿಕ್ಕದೆ ಇರುವಾಗ ನಾಡಿಗೆ ಬರುವುದು ಅನಿವಾರ್ಯ ಎಂಬಂತಾಗಿದೆ. ಆನೆಗಳು ಕೃಷಿ ತೋಟಗಳಿಗೆ ಬರುತ್ತಿರುವುದನ್ನು ಅಥವಾ ಪೇಟೆಯ ರಸ್ತೆಗಳಲ್ಲಿ ಸಂಚರಿಸುವ ಸುದ್ದಿಯನ್ನು ಕೇಳುತ್ತೇವೆ, ಕಾಣುತ್ತೇವೆ. ಅದೇ ರೀತಿಯಾಗಿ ಚಿರತೆ, ಹುಲಿ ಮುಂತಾದ ಪ್ರಾಣಿಗಳು ಕೂಡ ನಾಡಿಗೆ ಬರುತ್ತಿರುವುದನ್ನು, ತಲ್ಲಣ ಮೂಡಿಸುತ್ತಿರುವುದನ್ನು ಗಮನಿಸುತ್ತಿದ್ದೇವೆ.

    ಕೊಡಗು ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ತೋಟಗಳಿಗೆ ಆನೆಗಳಿಂದಾಗಿ ಹಾನಿಯಾಗಿವೆ. ಇತ್ತೀಚೆಗೆ ಶ್ರೀಕ್ಷೇತ್ರಕ್ಕೆ ಬಂದ ಭಕ್ತರೊಬ್ಬರು-‘ನಮ್ಮ ಊರಿನ ತೋಟದಲ್ಲಿ ರೆಸಿಡೆಂಟ್ ಎಲಿಫೆಂಟ್ ಇವೆ’ ಎಂದರು, ಅಂದರೆ ತೋಟ, ಗದ್ದೆಯಲ್ಲಿ ಬಂದು ಶಾಶ್ವತವಾಗಿ ವಾಸಿಸುವಂಥ ಆನೆಗಳು ಎಂದರ್ಥ. ಆನೆಗಳ ಶಾಶ್ವತ ವಾಸದಿಂದ ಜನರಿಗೆ ತುಂಬ ಸಮಸ್ಯೆ ಆಗಿರುವುದಲ್ಲದೆ, ಕೃಷಿಗೂ ಅಪಾರ ನಷ್ಟವಾಗಿದೆ. ಅಲ್ಲದೆ, ಪ್ರಾಣಭೀತಿಯಲ್ಲಿ ದಿನದೂಡುವಂತಾಗಿದೆ.

    ಪ್ರತ್ಯೇಕ ಕಾರಿಡಾರ್ ಅಗತ್ಯ: ಸಾಮಾನ್ಯವಾಗಿ ಆನೆ ಯಾರನ್ನೂ ಹಿಂಸಿಸುವುದಿಲ್ಲ. ಆದರೆ ತನಗೆ ಅಪಾಯ ಒದಗುತ್ತದೆ ಎಂದಾದಾಗ ಅದು ಇನ್ನೊಬ್ಬರ ಮೇಲೆ ಆಕ್ರಮಣ ಮಾಡುವುದಕ್ಕೆ ಹೆದರುವುದಿಲ್ಲ. ಆನೆಗಳ ಆಕ್ರಮಣದಿಂದ ಅನೇಕರು ಪ್ರಾಣ ಕಳೆದುಕೊಂಡಿದ್ದೂ ಇದೆ. ಈ ದೃಷ್ಟಿಯಿಂದ ಆನೆಗಳಿಗಾಗಿ ಪ್ರತ್ಯೇಕ ವಲಯಗಳನ್ನು ನಿರ್ಮಾಣ ಮಾಡಬೇಕು (ಆನೆ ಕಾರಿಡಾರ್). ಪ್ರಾಣಿಗಳು ಕಾಡಿನಲ್ಲಿಯೇ ಇರಬೇಕು. ಇದಕ್ಕಾಗಿ ಅವುಗಳಿಗೆ ಅಗತ್ಯವಾದಷ್ಟು ಕಾಡಿನ ರಕ್ಷಣೆಯನ್ನು ಮಾಡಬೇಕು. ಅರಣ್ಯದೊಳಗೇ ಅವು ಇದ್ದು, ಕೃಷಿ ಪ್ರದೇಶಗಳಿಗೆ ಅಥವಾ ನಾಡಿಗೆ ಬರದೇ ಇರುವ ಹಾಗೆ ತಡೆಯುವ ವ್ಯವಸ್ಥೆ ಮಾಡಬೇಕಾಗಿದೆ. ಕೆಲವು ದೇಶಗಳಲ್ಲಿ ಆನೆಗಳು ನಾಡಿಗೆ ಬರದ ಹಾಗೆ ವ್ಯವಸ್ಥೆಗಳನ್ನು ಮಾಡಿದ್ದಾರಂತೆ. ಅದನ್ನು ಗಮನಿಸಿ, ಅಳವಡಿಸುವ ಕಾರ್ಯ ಆಗಬೇಕು. ಅಲ್ಲದೆ ನಾಡಿಗೆ ಬಂದ ಆನೆಗಳನ್ನು ಮತ್ತೆ ಕಾಡಿಗೆ ಕಳುಹಿಸುವ ಪ್ರಯತ್ನವನ್ನೂ ಅರಣ್ಯ ಇಲಾಖೆ ಮಾಡಬೇಕು. ಒಟ್ಟಾರೆಯಾಗಿ, ಆನೆಗಳ ರಕ್ಷಣೆಯೂ ಆಗಬೇಕು, ಆನೆಗಳಿಂದ ಮನುಷ್ಯರ ರಕ್ಷಣೆಯೂ ಆಗಬೇಕು. ಕೃಷಿಯ ರಕ್ಷಣೆಯೂ ಅಷ್ಟೇ ಅಗತ್ಯ ಎಂಬುದನ್ನು ಮರೆಯುವಂತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts