More

    ಸಂಪಾದಕೀಯ: ವರ್ಚಸ್ಸು ವರ್ಧನೆ; ಜಿ 20 ಸಂಘಟನೆ ಅಧ್ಯಕ್ಷತೆ ವಹಿಸಿಕೊಂಡ ಭಾರತ

    ಜಗತ್ತಿನ ಪ್ರಮುಖ ರಾಷ್ಟ್ರಗಳ ಒಕ್ಕೂಟವಾಗಿರುವ ‘ಜಿ- 20’ ಸಂಘಟನೆಯ ಅಧ್ಯಕ್ಷತೆಯನ್ನು ಒಂದು ವರ್ಷ ಕಾಲ ಭಾರತ ವಹಿಸಿಕೊಳ್ಳುತ್ತಿರುವುದು ಭಾರತೀಯರಿಗೆ ಸಹಜವಾಗಿಯೇ ಹೆಮ್ಮೆಯ ಸಂಗತಿಯಾಗಿದ್ದು, ಈ ಸ್ಥಾನಮಾನವು ನಮ್ಮ ದೇಶದ ವರ್ಚಸ್ಸು ಹಾಗೂ ಪ್ರತಿಷ್ಠೆಯನ್ನು ವರ್ಧಿಸುವಲ್ಲಿ ಮಹತ್ವದ ಕೊಡುಗೆಯನ್ನು ನೀಡುವ ನಿರೀಕ್ಷೆಗಳು ಗರಿಗೆದರಿವೆ.

    ಜಿ-20 ಸಂಘಟನೆಯು ಅಂತಾರಾಷ್ಟ್ರೀಯ ಆರ್ಥಿಕ ಸಹಕಾರಕ್ಕಾಗಿ 1999ರಲ್ಲಿ ರೂಪುಗೊಂಡ 19 ದೇಶಗಳು ಹಾಗೂ ಐರೋಪ್ಯ ರಾಷ್ಟ್ರಗಳ ಪ್ರಮುಖ ಒಕ್ಕೂಟವಾಗಿದೆ. ಇದರಲ್ಲಿರುವ 20ಕ್ಕೂ ಅಧಿಕ ರಾಷ್ಟ್ರಗಳು ಇಡೀ ಜಗತ್ತಿನ ಅಗ್ರಗಣ್ಯ ದೇಶಗಳಾಗಿದ್ದು, ವಿಶ್ವದ ಆಗುಹೋಗುಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಈ ಸದಸ್ಯ ರಾಷ್ಟ್ರಗಳ ಜಿಡಿಪಿಯು ಜಗತ್ತಿನ ಜಿಡಿಪಿಯ ಶೇ. 80ರಷ್ಟಿದೆ. ಅಂದರೆ, ಒಟ್ಟಾರೆ ಜಗತ್ತಿನ ಆರ್ಥಿಕತೆಯಲ್ಲಿ ಈ ದೇಶಗಳ ಪಾಲು ಶೇ. 80ರಷ್ಟಿದೆ. ಒಟ್ಟು ಜಾಗತಿಕ ವ್ಯಾಪಾರ ವಹಿವಾಟಿನ ಶೇ. 75ರಷ್ಟು ಈ ದೇಶಗಳಲ್ಲಿಯೇ ನಡೆಯುತ್ತದೆ. ಅಲ್ಲದೆ, ವಿಶ್ವದ ಶೇ. 60ರಷ್ಟು ಜನಸಂಖ್ಯೆಯನ್ನು ಈ ದೇಶಗಳು ಪ್ರತಿನಿಧಿಸುತ್ತವೆ. ಈ ಅಂಕಿಅಂಶಗಳು ಈ ಸಂಘಟನೆಯ ಮಹತ್ವವನ್ನು ಸೂಚಿಸುವ ಸಂಗತಿಗಳಾಗಿವೆ. ಇಂತಹ ಪ್ರಮುಖ ಸಂಘಟನೆಯ ಅಧ್ಯಕ್ಷತೆಯನ್ನು ವಹಿಸುವುದು ನಿಸ್ಸಂಶಯವಾಗಿಯೂ ಭಾರತವನ್ನು ಜಗತ್ತಿನ ಅಗ್ರಗಣ್ಯ ರಾಷ್ಟ್ರವನ್ನಾಗಿ ಜಗತ್ತು ಪರಿಗಣಿಸುತ್ತದೆ ಎಂಬುದರ ದ್ಯೋತಕವಾಗಿದೆ.

    2022ರ ಡಿಸೆಂಬರ್ 1ರಿಂದ ಒಂದು ವರ್ಷದ ಅವಧಿಗೆ ಜಿ20 ಅಧ್ಯಕ್ಷ ಸ್ಥಾನದಲ್ಲಿ ಭಾರತ ಇರಲಿದೆ. ‘ವಸುಧೈವ ಕುಟುಂಬಕಂ (ಒಂದು ಭೂಮಿ ಒಂದು ಕುಟುಂಬ ಒಂದು ಭವಿಷ್ಯ) ಎಂಬ ಧ್ಯೇಯಘೋಷದೊಂದಿಗೆ ಈ ಸ್ಥಾನ ಅಲಂಕರಿಸುತ್ತಿರುವುದು ವಿಶ್ವದ ಕುರಿತ ಭಾರತದ ಈ ಪ್ರಾಚೀನ ಚಿಂತನೆಯು ಪ್ರಸ್ತುತ ಕಾಲಘಟ್ಟದಲ್ಲಿ ಎಷ್ಟೊಂದು ಮಹತ್ವದ್ದಾಗಿದೆ ಎಂಬುದನ್ನು ಬಿಂಬಿಸುತ್ತದೆ. ಇದು ಯುದ್ಧದ ಯುಗವಲ್ಲ ಎಂದು ಪ್ರಮುಖ ಜಾಗತಿಕ ವೇದಿಕೆಗಳಲ್ಲಿ ಸಾರಿರುವ ಪ್ರಧಾನಿ ಮೋದಿ ಅವರು ಭಾರತದಲ್ಲಿ ನಡೆಯಲಿರುವ ಮುಂದಿನ ಜಿ 20 ಶೃಂಗಸಭೆಯ ಕಾರ್ಯಸೂಚಿಯನ್ನು ಈಗಾಗಲೇ ಪ್ರಕಟಿಸಿದ್ದಾರೆ. ‘ಭಾರತದ ಅನುಭವಗಳು ಸಂಭವನೀಯ ಜಾಗತಿಕ ಪರಿಹಾರಗಳಿಗೆ ಒಳನೋಟಗಳನ್ನು ಒದಗಿಸಬಹುದು. ನಮ್ಮ ಜಿ20 ಅಧ್ಯಕ್ಷತೆಯ ಅವಧಿಯಲ್ಲಿ, ಭಾರತದ ಅನುಭವಗಳು, ಕಲಿಕೆಗಳು ಮತ್ತು ಮಾದರಿಗಳನ್ನು ಇತರರಿಗೆ, ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸಂಭವನೀಯ ಮಾದರಿಗಳಾಗಿ ಪ್ರಸ್ತುತಪಡಿಸುತ್ತೇವೆ’ ಎಂದು ಮೋದಿ ಹೇಳಿರುವುದು ಭಾರತವು ವಿಶ್ವ ಗುರುವಾಗಲು ಸನ್ನದ್ಧವಾಗುತ್ತಿದೆ ಎಂಬುದರ ಮುನ್ಸೂಚನೆ ನೀಡುವಂತಿದೆ.

    ನಮ್ಮ ಆದ್ಯತೆಗಳು ನಮ್ಮ ’ಒಂದು ಭೂಮಿ’ಯ ಯೋಗಕ್ಷೇಮಕ್ಕೆ ಗಮನಹರಿಸುತ್ತವೆ, ನಮ್ಮ ’ಒಂದು ಕುಟುಂಬ’ದಲ್ಲಿ ಸಾಮರಸ್ಯವನ್ನು ಸೃಷ್ಟಿಸುತ್ತವೆ ಮತ್ತು ನಮ್ಮ ’ಒಂದು ಭವಿಷ್ಯ’ಕ್ಕೆ ಭರವಸೆಯನ್ನು ನೀಡುತ್ತವೆ. 2023ರಲ್ಲಿ ಜಿ20 ಶೃಂಗದ ಅಧ್ಯಕ್ಷತೆ ವಹಿಸಿರುವಾಗ ಈ ಗುರಿಯನ್ನು ಸಾಧಿಸಲು ಭಾರತವು ವಿಶ್ವದ 20 ಬಲಿಷ್ಠ ಆರ್ಥಿಕತೆಗಳ ಪಾಲುದಾರರೊಂದಿಗೆ ಜಂಟಿಯಾಗಿ ಕೆಲಸ ಮಾಡುತ್ತದೆ ಎಂದು ಸಾರುವ ಮೂಲಕ ಮೋದಿ ದೂರದೃಷ್ಟಿತ್ವ ಪ್ರದರ್ಶಿಸಿದ್ದಾರೆ.

    ವಿಶ್ವ ಸಂಸ್ಥೆಯ ಭಧ್ರತಾ ಮಂಡಳಿಯಲ್ಲಿ 5 ಕಾಯಂ ಹಾಗೂ 10 ಕಾಯಂ ಅಲ್ಲದ ರಾಷ್ಟ್ರಗಳಿವೆ. ಭಾರತವು ಸದ್ಯ ಕಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿದೆ. ಇದರ ಅವಧಿ ಕೆಲದಿನಗಳಲ್ಲಿಯೇ ಮುಕ್ತಾಯಗೊಳ್ಳುವ ಮೊದಲೇ ಸಕಾಲಿಕವಾಗಿ ಜಿ-20 ಅಧ್ಯಕ್ಷ ಸ್ಥಾನ ಭಾರತಕ್ಕೆ ಒಲಿದುಬಂದಿದೆ. ಭಾರತ ತನ್ನ ವರ್ಚಸ್ಸು, ವಿಶ್ವಾಸವನ್ನು ವರ್ಧಿಸಿಕೊಂಡು, ವಿಟೋ (ವಿಶೇಷ ಮತ) ಚಲಾಯಿಸುವ ಅಧಿಕಾರ ಹೊಂದಿರುವ ಕಾಯಂ ಸ್ಥಾನವನ್ನು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪಡೆಯಲು ಜಿ 20 ನೇತೃತ್ವವು ಸಹಕಾರಿಯಾಗಬಹುದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts