More

    ಜವಳಿ ಕ್ಷೇತ್ರದ ಮೇರು ಬಾಹುಬಲಿ ಮುತ್ತಿನಗೆ ವಿಜಯರತ್ನ ಗರಿ

    ಬೆಂಗಳೂರು: ಏಷ್ಯಾ ಖಂಡದ ಜವಳಿ ಉದ್ಯಮದ ನಕ್ಷೆಯಲ್ಲಿ ವಿಜಯಪುರ ಜಿಲ್ಲೆ ಚಡಚಣದ ಹೆಸರನ್ನು ಮುಗಿಲೆತ್ತರಕ್ಕೆ ಏರಿಸಿದ ಖ್ಯಾತಿ ಜವಳಿ ಕ್ಷೇತ್ರದ ‘ಗೌರಿಶಂಕರ’ ಎಂದೇ ಕರೆಯಲ್ಪಡುವ ಬಾಹುಬಲಿ ಮುತ್ತಿನ ಅವರಿಗೆ ಕನ್ನಡಿಗರ ಧ್ವನಿ ‘ವಿಜಯವಾಣಿ’ ಮತ್ತು ‘ದಿಗ್ವಿಜಯ’ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ವಿಜಯರತ್ನ-2022’ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ನಾಡಿನಾದ್ಯಂತ ಶಿಕ್ಷಣ, ಉದ್ಯಮ, ಆರೋಗ್ಯ ಪರಿಸರದ ಕಾಳಜಿ, ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 42 ಸಾಧಕರಿಗೆ ‘ವಿಜಯರತ್ನ-2022’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್, ಖ್ಯಾತ ಚಿತ್ರನಟ ರಮೇಶ್ ಅರವಿಂದ್, ನಟಿ ಶರ್ಮಿಳಾ ಮಾಂಡ್ರೆ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.

    ಜವಳಿ ಕ್ಷೇತ್ರದ ಗೌರಿಶಂಕರ: ಛಲ, ಪರಿಶ್ರಮ, ಪ್ರಾಮಾಣಿಕತೆ, ಸಮಯಪಾಲನೆ, ಸೇವಾ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜವಳಿ ಉದ್ಯಮದಲ್ಲಿ ಎವರೆಸ್ಟ್ ಎತ್ತರಕ್ಕೆ ಸಾಧನೆ ಮಾಡಿದವರು ಬಾಹುಬಲಿ ಮುತ್ತಿನ ಹಾಗೂ ಅಜಿತ ಮುತ್ತಿನ ಸಹೋದರರು. ಕೃಷಿ ನಂಬಿ ಬದುಕುತ್ತಿದ್ದ ಸಹೋದರರು ‘ಅಮ್ಮ’ನ ಬಯಕೆಯಂತೆ ಜವಳಿ ಕ್ಷೇತ್ರಕ್ಕೆ ಕಾಲಿಟ್ಟು ಸಾಮಾಜಿಕ ಕಾಳಜಿಯೊಂದಿಗೆ ಕೋಟ್ಯಂತರ ರೂ. ವ್ಯವಹಾರ ಮಾಡುವ ಮಟ್ಟಿಗೆ ಬೆಳೆದ ಯಶೋಗಾಥೆ ಅದ್ವಿತೀಯ.

    ಕೃಷಿಯಿಂದ ಜವಳಿ ಉದ್ಯಮಕ್ಕೆ: 1981ರಲ್ಲಿ ಬಾಹುಬಲಿ ಹಾಗೂ ಅಜಿತ ಮುತ್ತಿನ ಸಹೋದರರು ಚಡಚಣದಲ್ಲಿ ಚಿಕ್ಕ ಬಂಡವಾಳದೊಂದಿಗೆ ಜವಳಿ ವ್ಯಾಪಾರ ಆರಂಭಿಸಿದರು. ಗ್ರಾಹಕರ ಸಂತೃಪ್ತಿಯಿಂದ ವಹಿವಾಟು ಬೇಗ ಅಭಿವೃದ್ಧಿಯಾಯಿತು. ಅತ್ಯಂತ ಗುಣಮಟ್ಟದ ಬಟ್ಟೆಗಳನ್ನು ಕಡಿಮೆ ಬೆಲೆಗೆ ಗ್ರಾಹಕರಿಗೆ ಒದಗಿಸಲು ನೇರವಾಗಿ ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ದೇಶದ ವಿವಿಧ ಭಾಗಗಳಿಗೆ ತೆರಳಿ ಫ್ಯಾಕ್ಟರಿಗಳಿಂದಲೇ ಉತ್ಪನ್ನ ತಂದು ಕಡಿಮೆ ಬೆಲೆಗೆ ಗ್ರಾಹಕರಿಗೆ ವಿತರಿಸಿದರು. ಮೂರು ದಶಕಗಳ ಕಠಿಣ ಪರಿಶ್ರಮದಿಂದ ನೆರೆಯ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶದ, ತೆಲಂಗಾಣ ಸೇರಿದಂತೆ ದಕ್ಷಿಣ ಭಾರತದಲ್ಲೇ ಮುತ್ತಿನ ಜವಳಿ ವ್ಯಾಪಾರ ಹೆಸರಾಯಿತು. ಸಿಯಾರಾಮ್, ರೇಮಂಡ್ಸ್, ಫ್ಯಾಬ್ ಇಂಡಿಯಾ, ಅಲೆನ್‌ಸೋಲಿ, ಪೀಟರ್ ಇಂಗ್ಲೆಂಡ್ ಮತ್ತಿತರ ಬ್ರ್ಯಾಂಡೆಡ್​ ಬಟ್ಟೆಗಳ ಕಂಪನಿಗಳು ಮುತ್ತಿನ ಸಹೋದರರ ಪಾರದರ್ಶಕ ವ್ಯಾಪಾರ, ಜನಪರ ಕಳಕಳಿ ಮತ್ತು ವಿವಿಧ ಬಟ್ಟೆ ಉತ್ಪನ್ನಗಳನ್ನು ಹಳ್ಳಿ ಗ್ರಾಹಕರಿಗೂ ತಲುಪಿಸುವ ಮನೋಭಾವವನ್ನು ಕಂಡು ನೇರ ವ್ಯಾಪಾರಕ್ಕೆ ಸಹಕರಿಸಿದರು. ಅದರ ಪರಿಣಾಮ ಬಾಹುಬಲಿ ಮುತ್ತಿನ ಸಹೋದರರ ಸಾಧನೆ ‘ಗೌರಿಶಂಕರ’ದೆತ್ತರಕ್ಕೆ ಬೆಳೆದಿದೆ.

    ಬೃಹತ್ ಮಳಿಗೆ ಆರಂಭ: ನಾಲ್ಕು ವರ್ಷಗಳ ಹಿಂದೆ ಚಡಚಣದಲ್ಲೇ 10 ಎಕರೆ ವಿಶಾಲಪ್ರದೇಶದಲ್ಲಿ 5 ಮಹಡಿಗಳ ಬೃಹತ್ ಮಳಿಗೆ ನಿರ್ಮಿಸಿ, ನೂರಾರು ಕಂಪನಿಗಳ ಬಟ್ಟೆಗಳು ಒಂದೇ ಸೂರಿನಡಿ ಗ್ರಾಹಕರಿಗೆ ದೊರೆಯುವಂತೆ ಅನುಕೂಲ ಕಲ್ಪಿಸಿದ್ದಾರೆ. ವಾರದ ಎಲ್ಲ ದಿನಗಳಲ್ಲೂ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ನಿರಂತರ ವಹಿವಾಟು ನಡೆಯುತ್ತಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಖರೀದಿದಾರರನ್ನು ಹೊಂದಿರುವ ಬಟ್ಟೆ ಅಂಗಡಿ ಎಂಬ ಖ್ಯಾತಿಗೂ ಬಾಹುಬಲಿ ಮುತ್ತಿನ ಶೋರೂಂ ಪಾತ್ರವಾಗಿದೆ. ಮಹಿಳೆಯರು ಸೇರಿದಂತೆ ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ. ಉದ್ಯೋಗಿಗಳು ಹಾಗೂ ಗ್ರಾಹಕರು ಸೇರಿ ನಿತ್ಯ 3 ಸಾವಿರಕ್ಕೂ ಹೆಚ್ಚು ಜನರಿಗೆ ಉಚಿತ ಭೋಜನ ವ್ಯವಸ್ಥೆ ಮಾಡಲಾಗಿದೆ.

    ಜವಳಿ ಕ್ಷೇತ್ರದ ಮೇರು ಬಾಹುಬಲಿ ಮುತ್ತಿನಗೆ ವಿಜಯರತ್ನ ಗರಿ
    ಜವಳಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಅಜಿತ ಮುತ್ತಿನ ಅವರಿಗೆ ಸಚಿವ ಡಾ. ಕೆ. ಸುಧಾಕರ್ ಮತ್ತು ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ವಿಜಯರತ್ನ-2022 ಪ್ರಶಸ್ತಿ ಪ್ರದಾನ ಮಾಡಿದರು.

    ಹಿರಿಯರು ಕೃಷಿ ಉದ್ಯಮದಲ್ಲಿದ್ದರೂ ನಾವು ಜವಳಿ ಕ್ಷೇತ್ರ ಆರಿಸಿಕೊಂಡು ಜನಸೇವೆಯಲ್ಲಿ ತೊಡಗಿದ್ದೇವೆ. ಗ್ರಾಹಕರ ಸಂತೃಪ್ತಿಯ ಜೊತೆಗೆ ಕಡಿಮೆ ಲಾಭಾಂಶದಲ್ಲಿ ಅತಿ ಹೆಚ್ಚು ವ್ಯವಹಾರ ಮಾಡುತ್ತೇವೆ. ಇದರಿಂದ ಎಲ್ಲ ವರ್ಗದ ಜನರು ಬ್ರ್ಯಾಂಡೆಡ್​ ಬಟ್ಟೆಗಳನ್ನು ಖರೀದಿಸುವಂತಾಗಿದೆ. ಜನತೆಯ ವಿಶ್ವಾಸಕ್ಕೆ ನಾವು ಋಣಿಯಾಗಿದ್ದೇವೆ.

    | ಬಾಹುಬಲಿ ಮುತ್ತಿನ ಮಾಲೀಕರು

    ದೇವರು, ಗುರುಗಳು, ಹಿರಿಯರ ಆಶೀರ್ವಾದದಿಂದ ಜವಳಿ ಉದ್ಯಮದಲ್ಲಿ ಯಶ ಕಂಡಿದ್ದೇವೆ. ಕೆರೆ ನೀರನ್ನು ಕೆರೆಗೆ ಚೆಲ್ಲು ಎಂಬಂತೆ ವ್ಯವಹಾರದಲ್ಲಿ ಬಂದ ಲಾಭಾಂಶದಲ್ಲಿ ಧಾರ್ಮಿಕ, ಸಾಮಾಜಿಕ ಕಾರ್ಯಗಳಿಗೆ ಯಥೇಚ್ಛವಾಗಿ ದಾನ ಮಾಡುತ್ತಿದ್ದೇವೆ. ನಮ್ಮ ಸಿಬ್ಬಂದಿಯನ್ನು ಮನೆಯವರಂತೆಯೇ ನೋಡಿಕೊಳ್ಳುವುದರಿಂದ ಅವರೂ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಾರೆ.

    | ಅಜಿತ ಮುತ್ತಿನ ಮಾಲೀಕರು

    ಜನಸೇವೆಗೂ ಮುಂದು: ಸಮಾಜ ಸೇವೆಗೂ ಹೆಸರಾಗಿರುವ ಮುತ್ತಿನ ಸಹೋದರರು ಧಾರ್ಮಿಕ, ಶೈಕ್ಷಣಿಕ, ವೈದ್ಯಕೀಯ ಹೀಗೆ ಹಲವು ಕ್ಷೇತ್ರಗಳಿಗೆ ಬಡ ಜನತೆಗೆ ಆಸರೆಯಾಗುವ ಮೂಲಕ ಕೊಡುಗೈ ದಾನಿ ಎನಿಸಿದ್ದಾರೆ. ಜೈನ ಬಾಂಧವರ ಪವಿತ್ರ ಯಾತ್ರಾ ಸ್ಥಳ ಜಾರ್ಖಂಡದ ಗಿರಿಧರ ಜಿಲ್ಲೆ ಶಿಖರಜಿ ಕ್ಷೇತ್ರಕ್ಕೂ ಸಾವಿರಾರು ಭಕ್ತರನ್ನು ಉಚಿತವಾಗಿ ಕರೆದೊಯ್ದಿದ್ದಾರೆ. ಧರ್ಮಸ್ಥಳ, ಉಡುಪಿ, ಕಾಶಿ ಮತ್ತಿತರ ಪವಿತ್ರ ಯಾತ್ರಾಸ್ಥಳಗಳ ದರ್ಶನ ಮಾಡಿಸಿದ್ದಾರೆ. ಕರ್ನಾಟಕ, ಮಹಾರಾಷ್ಟ್ರದ ಗುಡಿ-ಗುಂಡಾರಗಳ ಜೀರ್ಣೋದ್ಧಾರಕ್ಕೆ ಲಕ್ಷಾಂತರ ರೂ. ದೇಣಿಗೆ ನೀಡಿದ್ದಾರೆ. ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡುತ್ತಿದ್ದಾರೆ. ಚಡಚಣದ ಸಂಗಮೇಶ್ವರ ಜಾತ್ರೆ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಜರುಗುವ ಜಾತ್ರೋತ್ಸವಗಳಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕೈಗೊಂಡಿದ್ದಾರೆ. ಜೈನ ಧರ್ಮದ ಪಂಚ ಕಲ್ಯಾಣ ಕಾರ್ಯಕ್ರಮಗಳಿಗೆ ಆರ್ಥಿಕ ಸಹಾಯ ಒದಗಿಸಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಸಾಮೂಹಿಕ ವಿವಾಹಗಳಲ್ಲಿ ವಧು- ವರರಿಗೆ ಅನೇಕ ಬಾರಿ ಉಚಿತವಾಗಿ ಬಟ್ಟೆ ವಿತರಿಸಿದ್ದಾರೆ.

    ಮುಂದಿನ ಯೋಜನೆಗಳು: ಜವಳಿ ಉದ್ಯಮವನ್ನೇ ಇನ್ನಷ್ಟು ವಿಸ್ತರಿಸಬೇಕು ಎಂಬ ಚಿಂತನೆ ಹೊಂದಿರುವ ಬಾಹುಬಲಿ ಹಾಗೂ ಅಜಿತ ಮುತ್ತಿನ ಮುಂದಿನ ದಿನಗಳಲ್ಲಿ ಸದ್ಯ ಇರುವ ಶೋರೂಂ ಎದುರಲ್ಲೇ ಹತ್ತು ಎಕರೆ ವಿಶಾಲ ಪ್ರದೇಶದಲ್ಲಿ ಇನ್ನೊಂದು ಬೃಹತ್ ಮಳಿಗೆ ಆರಂಭಿಸಿ ಮತ್ತಷ್ಟು ಜನರಿಗೆ ಉದ್ಯೋಗ ಕಲ್ಪಿಸುವ ಕನಸು ಕಂಡಿದ್ದಾರೆ. ಇದರೊಂದಿಗೆ ಬೃಹತ್ ಗೋಶಾಲೆ ಆರಂಭಿಸುವ ಚಿಂತನೆಯೂ ಇವರದ್ದಾಗಿದೆ.

    ಸಾಧನೆಯ ಹೆಜ್ಜೆ ಗುರುತು: ಚಡಚಣದ ಸಾತ್ವಿಕ ಮನೆತನದ ನೇಮಿನಾಥ ಮುತ್ತಿನ ಹಾಗೂ ರಾಜಮತಿ ಕೃಷಿಯಲ್ಲಿ ಬದುಕು ಕಟ್ಟಿಕೊಂಡವರು. ಆದರೂ ಬಡವರ ಕಷ್ಟಗಳಿಗೆ ಸ್ಪಂದಿಸುವ ಗುಣ ಅವರದ್ದು. ಇವರಿಗೆ ನಾಲ್ವರು ಪುತ್ರಿಯರು ಹಾಗೂ ಶಾಂತಿನಾಥ, ಬಾಹುಬಲಿ, ಅಜಿತ ಎಂಬ ಮೂವರು ಪುತ್ರರು. ತಾಯಿ ರಾಜಮತಿ ಒಮ್ಮೆ ನಾಲ್ಕು ಸೀರೆಗಳನ್ನು ತಂದು ಪುಟ್ಟ ವ್ಯಾಪಾರ ಆರಂಭಿಸಬೇಕು ಎಂಬ ಬಯಕೆ ವ್ಯಕ್ತಪಡಿಸಿದಾಗ ಅವರ ಕನಸು ನನಸು ಮಾಡಲು ಸಹೋದರರು ನಿಶ್ಚಯಿಸಿ, ಕಾರ್ಯಪ್ರವೃತ್ತರಾದರು. ಆಗ ಭಾವ ವಿಜಯಕುಮಾರ್ ಹಜಾರೆ ಇವರನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಿದರು.

    ದಾವಣಗೆರೆ ಬಿಎಸ್​ಸಿ ಸಂಸ್ಥೆಗೆ ವಿಜಯರತ್ನ ಗರಿ: ವಿಜಯವಾಣಿ, ದಿಗ್ವಿಜಯ ನ್ಯೂಸ್​ ವಾಹಿನಿಯ ಪ್ರತಿಷ್ಠಿತ ಗೌರವ ಪ್ರದಾನ

    ಶಿಕ್ಷಣ ತಜ್ಞ ಅನಿಲಕುಮಾರಗೆ ವಿಜಯರತ್ನ ಗರಿ; ಸಮಾಜಮುಖಿ ಸಾಧಕರಿಗೆ ವಿಜಯವಾಣಿ- ದಿಗ್ವಿಜಯ ವಾಹಿನಿ ಪ್ರತಿಷ್ಠಿತ ಗೌರವ ಪ್ರದಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts