More

    ಶಿಕ್ಷಣ ತಜ್ಞ ಅನಿಲಕುಮಾರಗೆ ವಿಜಯರತ್ನ ಗರಿ; ಸಮಾಜಮುಖಿ ಸಾಧಕರಿಗೆ ವಿಜಯವಾಣಿ- ದಿಗ್ವಿಜಯ ವಾಹಿನಿ ಪ್ರತಿಷ್ಠಿತ ಗೌರವ ಪ್ರದಾನ

    ಬೆಂಗಳೂರು: ಜ್ಞಾನಧಾರೆ ಎರೆಯುವ ಮೂಲಕ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಪ್ರಾಧ್ಯಾಪಕರಾಗಿರುವ ಶಿಕ್ಷಣ ತಜ್ಞ ಪ್ರೊ. ಅನಿಲಕುಮಾರ ಲಗಮಣ್ಣ ಚೌಗುಲೆ ಅವರಿಗೆ ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ಸುದ್ದಿ ವಾಹಿನಿಯ ಪ್ರತಿಷ್ಠಿತ ‘ವಿಜಯರತ್ನ- 2022’ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ನಾಡಿನಾದ್ಯಂತ ಶಿಕ್ಷಣ, ಉದ್ಯಮ, ಆರೋಗ್ಯ, ಪರಿಸರ ಕಾಳಜಿ, ಸಮಾಜಸೇವೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 42 ಸಾಧಕರಿಗೆ ವಿಜಯರತ್ನ- 2022 ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್, ಚಿತ್ರನಟ ರಮೇಶ ಅರವಿಂದ, ನಟಿ ಶರ್ಮಿಳಾ ಮಾಂಡ್ರೆ ಅವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.

    ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿದರು: ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡಬೇಕು, ಆ ಮೂಲಕ ಅವರು ಹೆಚ್ಚಿನ ಜ್ಞಾನ ಗಳಿಸಿಕೊಂಡು ಸ್ಪರ್ಧಾತ್ಮಕ ಜಗತ್ತಿಗೆ ತೆರೆದುಕೊಳ್ಳಬೇಕು ಎಂಬ ಉದ್ದೇಶದಿಂದ ಪ್ರೊ. ಅನಿಲಕುಮಾರ ಚೌಗುಲೆ ಅವರು ಹುಬ್ಬಳ್ಳಿಯಲ್ಲಿ ಚೌಗಲಾ ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕಿದರು. ಅದರಡಿ ವಿದ್ಯಾನಿಕೇತನ ಪದವಿಪೂರ್ವ ವಿಜ್ಞಾನ ಕಾಲೇಜು ಆರಂಭಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಇದುವರೆಗೂ ವಿದ್ಯೆಯನ್ನು ಧಾರೆ ಎರೆದಿದ್ದಾರೆ. ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅದ್ವಿತೀಯ ಸಾಧನೆ ಮಾಡುವಂತೆ ಪ್ರೇರಣೆ ನೀಡಿದ್ದಾರೆ.

    ಸಂಸ್ಥೆ ಸ್ಥಾಪನೆಯಾಗಿ 14 ವರ್ಷಗಳಾಗಿದ್ದು, ಪ್ರತಿ ವರ್ಷವೂ ಅತ್ಯುತ್ತಮ ಲಿತಾಂಶ ದಾಖಲಿಸುತ್ತ ಬಂದಿರುವ ಮಹಾವಿದ್ಯಾಲಯವು ಸತತ 13 ವರ್ಷ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ದಾಖಲೆ ಬರೆಯುವಂತೆ ಮಾಡಿದ ಶ್ರೇಯಸ್ಸು ಇವರದು. ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರೊ. ಅನಿಲಕುಮಾರ ಅವರು, ಬಡ ಕುಟುಂಬದಿಂದ ಬಂದಿದ್ದರೂ ಸಮಾಜ ಹಾಗೂ ಅನೇಕ ಮಹನೀಯರ ಸಹಾಯ, ಸಹಕಾರ ಪಡೆದುಕೊಂಡು ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲಿ ಚಿಕ್ಕ ಕ್ಯಾಂಪಸ್‌ನಿಂದ ಸುಮಾರು ಐದು ಎಕರೆ ವಿಸ್ತಾರದ ಸುಸಜ್ಜಿತ ಕ್ಯಾಂಪಸ್‌ಗೆ ಕಾಲೇಜು ಸ್ಥಳಾಂತರ ಮಾಡಿ ಹೆಚ್ಚಿನ ವಿದ್ಯಾರ್ಥಿಗಳಿಗೆ ಓದುವ ಅವಕಾಶ ಮಾಡಿಕೊಟ್ಟಿದ್ದಾರೆ.

    ಎಸ್‌ಎಸ್‌ಎಲ್‌ಸಿ ಮುಗಿಸಿದ ಪ್ರತಿಯೊಬ್ಬ ವಿದ್ಯಾರ್ಥಿಯು ಚೌಗಲಾ ಶಿಕ್ಷಣ ಸಂಸ್ಥೆಯಲ್ಲಿಯೇ ಪಿಯುಸಿ ವಿಜ್ಞಾನ ಓದಬೇಕು ಎಂದು ಪಟ್ಟು ಹಿಡಿಯುವಂತಹ ಸಕಲ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿರುವುದು ಇವರ ಶಿಕ್ಷಣ ಪ್ರೀತಿಗೆ ಸಾಕ್ಷಿಯಾಗಿದೆ. ಪಕ್ಕದ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ ಸೇರಿ ಅನ್ಯ ರಾಜ್ಯಗಳಿಂದಲೂ ಇಲ್ಲಿಗೆ ಕಲಿಯಲು ಬರುತ್ತಿದ್ದಾರೆ.

    ಯುವಶಕ್ತಿಯ ಕೈಯಲ್ಲಿ ದೇಶದ ಭವಿಷ್ಯ ಅಡಗಿದೆ. ಇದೇ ಕಾರಣಕ್ಕೆ ಯುವಕರಲ್ಲಿ ಬದಲಾವಣೆ ತರಬೇಕೆಂಬ ಇಚ್ಛೆಯಿಂದ ನೂರೆಂಟು ಕೆಲಸಗಳನ್ನು ಬಿಟ್ಟು ಶಿಕ್ಷಣ ಕ್ಷೇತ್ರವನ್ನೇ ಆಯ್ದುಕೊಂಡಿರುವೆ ಎಂದು ಚೌಗುಲೆ ಅವರು ಹೆಮ್ಮೆಯಿಂದ ಹೇಳುತ್ತಾರೆ. ಇದಕ್ಕಾಗಿ ಎದುರಾದ ಎಲ್ಲ ಸವಾಲುಗಳನ್ನು ಧೈರ್ಯದಿಂದಲೇ ಎದುರಿಸಿದ ಇವರು, ಇದೀಗ ಆಡಳಿತ ಮಂಡಳಿಯ ಸಹಕಾರದೊಂದಿಗೆ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಅವಿರತ ಶ್ರಮಿಸುತ್ತಿದ್ದಾರೆ. ತಮ್ಮ ಶಿಕ್ಷಣ ಪಯಣದಲ್ಲಿ ಹುಬ್ಬಳ್ಳಿಯ ದಿಗಂಬರ ಜೈನ್ ಬೋರ್ಡಿಂಗ್, ವೀರೇಂದ್ರ ಧಾಮಜಿ ಛೇಡಾ ಅವರ ಸಹಾಯವನ್ನು ಇವರು ಮರೆಯುವುದಿಲ್ಲ. ಜತೆಗೆ ಡಾ. ರವೀಂದ್ರ ಗುರವ, ಡಾ. ರಮೇಶ ಬಂಡಿವಾಡ, ಗಂಗಾಧರ ಕಮಡೊಳ್ಳಿ, ಪ್ರಾಚಾರ್ಯ ಡಾ. ಆನಂದ ಮುಳಗುಂದ ಹಾಗೂ ಧರ್ಮಪತ್ನಿ ಶ್ರೀದೇವಿ ಅವರ ಸಹಕಾರಗಳನ್ನು ಸ್ಮರಿಸುತ್ತಾರೆ.

    ಟ್ಯುಟೋರಿಯಲ್‌ನಿಂದ ಆರಂಭ
    ರೈತ ಕುಟುಂಬದಿಂದ ಬಂದ ಅನಿಲಕುಮಾರ ಅವರು ಹುಬ್ಬಳ್ಳಿಯಲ್ಲಿ ಶಿಕ್ಷಣ ಪೂರೈಸಿದ ನಂತರ ದೇಶಪಾಂಡೆನಗರದಲ್ಲಿ ಸಣ್ಣ ಟ್ಯುಟೋರಿಯಲ್ ಆರಂಭಿಸಿದರು. ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಲೇ ಶಿಕ್ಷಣ ಸಂಸ್ಥೆಯನ್ನು ಕಟ್ಟಬೇಕೆಂಬ ಛಲ ಮೂಡಿತು. ಛಲದ ಹಾದಿ ಹಿಡಿದು ಹೊರಟ ಇವರಿಗೆ ಕುಟುಂಬದ ಬೆಂಬಲ ಲಭಿಸಿತು. ಸಾಲ ಮಾಡಿ ಸಣ್ಣ ಒಂದು ಕೊಠಡಿ ಬಾಡಿಗೆ ಪಡೆದು ಪಾಠ ಶುರು ಮಾಡಿದರು. ನಂತರದ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಬೆಳೆಯುತ್ತ ಹೋಯಿತು. ಮುಂದೆ ಕಾಲೇಜು ಆರಂಭಿಸಿ ಇದೀಗ 5 ಎಕರೆಯಲ್ಲಿ ಸಕಲ ಸವಲತ್ತುಗಳೊಂದಿಗೆ ಬೃಹತ್ ಕಟ್ಟಡ ನಿರ್ಮಿಸಿ ಕಾಲೇಜು ನಡೆಸುತ್ತಿದ್ದಾರೆ. ವಿದ್ಯಾನಿಕೇತನ ಉತ್ತರ ಕರ್ನಾಟಕದಲ್ಲಿ ಹೆಮ್ಮೆಯ ಸಂಸ್ಥೆಯಾಗಿ ನಿಂತಿದೆ. ಇಂತಹ ಸಾಧನೆ ಮಾಡಿದ ಪ್ರೊ. ಅನಿಲಕುಮಾರ ಅವರಿಗೆ ಅನೇಕ ಪ್ರಶಸ್ತಿಗಳು ಅರಸಿ ಬಂದಿವೆ. ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ ನೀಡುವ ರಾಷ್ಟ್ರೀಯ ಶಿಕ್ಷಣ ರತ್ನ ಬಿರುದು, ಅಖಿಲ ಕರ್ನಾಟಕ ಜೈನ್ ಒಕ್ಕೂಟದಿಂದ ಜ್ಞಾನಶ್ರೀ ಹಾಗೂ ಅನೇಕ ಸಂಘ- ಸಂಸ್ಥೆಗಳಿಂದ ಸನ್ಮಾನಗಳು ಲಭಿಸಿವೆ.

    ನೀಟ್ ಅಕಾಡೆಮಿ ಕಾರ್ಯಾರಂಭ
    ವಿದ್ಯಾನಿಕೇತನ ಪಿಯು ವಿಜ್ಞಾನ ಸಂಸ್ಥೆಯು ತನ್ನ ಅಂಗಸಂಸ್ಥೆ ಯಾಗಿ ವಿದ್ಯಾನಿಕೇತನ ನೀಟ್ ಅಕಾಡೆಮಿಯನ್ನು ಇತ್ತೀಚೆಗಷ್ಟೇ ಪ್ರಾರಂಭಿಸಿದ್ದು, ಆಗಸ್ಟ್‌ನಿಂದ ಬ್ಯಾಚ್‌ಗಳು ಸಹ ಪ್ರಾರಂಭವಾಗಿವೆ. ವಿದ್ಯಾರ್ಥಿಗಳು ಲಾಂಗ್ ಟರ್ಮ್ ಪ್ರವೇಶ ಪಡೆಯಬಹುದಾಗಿದೆ.


    ಕಡುಬಡತನದಲ್ಲಿ ಹುಟ್ಟಿ ಬೆಳೆದ ನನಗೆ ಅನೇಕ ಮಹನೀಯರು ಸಹಾಯ ಸಹಕಾರ ನೀಡಿ ಶಿಕ್ಷಣ ಕ್ಷೇತ್ರದಲ್ಲಿ ಬೆಳೆಯಲು ಪ್ರೇರಣೆ ನೀಡಿದರು. ಶಿಕ್ಷಣ ಸಂಸ್ಥೆ ಕಟ್ಟಿರುವುದರ ಹಿಂದೆ ಅಪಾರ ಶ್ರಮ ಇದೆ. ಸಹಾಯ ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಿಸುವೆ. ಸಾಧನೆ ಗುರುತಿಸಿ ವಿಜಯರತ್ನ ಪ್ರಶಸ್ತಿ ಬಂದಿರುವುದು ತುಂಬಾ ಹೆಮ್ಮೆಯ ಸಂಗತಿ.

    – ಪ್ರೊ. ಅನಿಲಕುಮಾರ ಚೌಗುಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts