More

    ಬೆಳೆ-ಮನೆ-ಮೂಲ ಸೌಕರ್ಯ ಹಾನಿ ಪರಿಶೀಲನೆ

    ವಿಜಯಪುರ: ಭೀಕರ ಪ್ರವಾಹ ಹಾಗೂ ಮಳೆ ಹಾನಿ ಹಿನ್ನೆಲೆ ಕೇಂದ್ರ ಅಧ್ಯಯನ ತಂಡ ಸೋಮವಾರ ಜಿಲ್ಲೆಯ ವಿವಿಧ ಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿತು.
    ಬೆಳೆ, ಮನೆ ಹಾಗೂ ಮೂಲ ಸೌಕರ್ಯಗಳ ಹಾನಿ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿತು. ಸಿಂದಗಿಯಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಪಿಪಿಟಿ ಪ್ರಸೆಂಟೇಷನ್ ಮೂಲಕ ಮಾಹಿತಿ ಒದಗಿಸಿದರು.
    ಚಡಚಣ, ಇಂಡಿ ಮತ್ತು ಸಿಂದಗಿ ತಾಲೂಕುಗಳಲ್ಲಿ ಭೀಮಾ ನದಿ ಪ್ರವಾಹದಿಂದ ಹಾಗೂ ಅ. 11 ರಿಂದ 22 ರವರೆಗೆ ಸುರಿದ ಭಾರಿ ಮಳೆಯಿಂದ ಹಾನಿಯಾದ ಕೃಷಿ, ತೋಟಗಾರಿಕೆ ಬೆಳೆ , ಮನೆ ಹಾನಿ ಹಾಗೂ ಮೂಲ ಸೌಕರ್ಯಗಳು ಹಾನಿಯಾಗಿರುವ ಬಗ್ಗೆ ಜಿಲ್ಲಾಧಿಕಾರಿ ಸಮಗ್ರ ಮಾಹಿತಿ ಒದಗಿಸಿದರು.

    ಬಾಧಿತರಿಗೆ ನೆರವು

    ಅ.13 ಮತ್ತು 14 ರಂದು ಭಾರಿ ಮಳೆಯಾಗಿದ್ದು, ಭೀಮಾನದಿಗೂ ಪ್ರವಾಹ ಬಂದಿತ್ತು. ಪ್ರವಾಹದಿಂದಾಗಿ ಚಡಚಣ, ಇಂಡಿ ಹಾಗೂ ಸಿಂದಗಿ ತಾಲೂಕುಗಳ 28 ಗ್ರಾಮಗಳಲ್ಲಿ ಸಂಕಷ್ಟ ಎದುರಾಗಿತ್ತು. ಅದರಂತೆ ಇತರ ತಾಲೂಕುಗಳಲ್ಲೂ ಅತಿವೃಷ್ಟಿ ಹಾನಿ ಸಂಭವಿಸಿತ್ತು. 4041 ಮನೆಗಳಿಗೆ ನೀರು ನುಗ್ಗಿದ್ದು, ಅವರಿಗೆ ತಲಾ 10,000 ರೂ.ಗಳಂತೆ ಜಿಲ್ಲಾಡಳಿತ ವತಿಯಿಂದ ಪರಿಹಾರ ನೀಡಲಾಗಿದೆ. ಎನ್‌ಡಿಆರ್‌ಎ್ ಎರಡು ತಂಡಗಳು ಎಸ್‌ಡಿಆರ್‌ಎ್ ಒಂದು ತಂಡ ಎಂಎಲ್‌ಐಆರ್‌ಪಿ (ಮಿಲಟರಿ) ತಂಡಗಳ ರಕ್ಷಣಾ ಕಾರ್ಯಾಚರಣೆ ಮೂಲಕ 1516 ಜನರನ್ನು ರಕ್ಷಿಸಲಾಗಿದೆ. 42 ಕಾಳಜಿ ಕೇಂದ್ರಗಳನ್ನು ತೆರೆದು ಸಂತ್ರಸ್ತರಿಗೆ ನೆರವಾಗಿರುವುದಾಗಿ ಜಿಲ್ಲಾಧಿಕಾರಿ ವಿವರಿಸಿದರು.

    ಜಾನುವಾರು-ಬೆಳೆ ಹಾನಿ

    ಜಿಲ್ಲೆಯಲ್ಲಿ 12 ಮಾನವ ಹಾಗೂ 13 ಜಾನುವಾರು ಜೀವಕ್ಕೂ ಕುತ್ತು ಉಂಟಾಗಿದೆ. 207146.00 ಹೆಕ್ಟೇರ್ ಕೃಷಿ ಬೆಳೆ ಹಾಗೂ 11929.10 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ತಂಡಕ್ಕೆ ಮಾಹಿತಿ ನೀಡಿದರು.
    ನಂತರ ಅಧ್ಯಯನ ತಂಡವು ಸಿಂದಗಿ ಸಮೀಪದ ರಾಂಪುರ ಗ್ರಾಮದಲ್ಲಿ ತೊಗರಿ ಬೆಳೆ ಹಾನಿ ಮತ್ತು ಹತ್ತಿ ಬೆಳೆ ಹಾನಿ ಹಾಗೂ ಕೋರಹಳ್ಳಿಯಲ್ಲಿ ಹತ್ತಿ ಬೆಳೆ ಹಾನಿ ಕುರಿತಂತೆ ಪರಿಶೀಲನೆ ನಡೆಸಿತು. ನಂತರ ತಾರಾಪುರ ಗ್ರಾಮದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿ ಕುರಿತು ಪರಿಶೀಲನೆ ನಡೆಸಿತು.

    ಹೈದರಾಬಾದ್ ಕೃಷಿ ಮತ್ತು ರೈತ ಸಚಿವಾಲಯದ ಬೀಜ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಡಾ. ಮನೋಹರನ್, ಬೆಂಗಳೂರು ಜಲಶಕ್ತಿ ಸಚಿವಾಲಯದ (ಎಚ್‌ಒ ಮತ್ತು ಪಿಪಿ) ಅಧೀಕ್ಷಕ ಅಭಿಯಂತರ ಗುರುಪ್ರಸಾದ್ ಜೆ. ಹಾಗೂ ನೈಸರ್ಗಿಕ ವಿಕೋಪ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಕಂದಾಯ ಇಲಾಖೆ ಸೀನಿಯರ್ ಕನ್ಸಲ್ಟಂಟ್ ಡಾ.ಜಿ.ಎಸ್. ಶ್ರೀನಿವಾಸ ರೆಡ್ಡಿ ತಂಡದಲ್ಲಿದ್ದರು.

    ಇಂಡಿ ಉಪವಿಭಾಗಾಧಿಕಾರಿ ರಾಹುಲ್ ಸಿಂಧೆ, ಕೃಷಿ ಜಂಟಿ ನಿರ್ದೇಶಕ ರಾಜಶೇಖರ್ ವಿಲಿಯಮ್ಸ್, ಉಪವಿಭಾಗಾಧಿಕಾರಿ ರಾಮಚಂದ್ರ, ವಿಪತ್ತು ನಿರ್ವಹಣಾ ಘಟಕದ ಅಧಿಕಾರಿ ರಾಕೇಶ ಜೈನಾಪುರ, ತೋಟಗಾರಿಕೆ ಉಪನಿರ್ದೇಶಕ ಸಿದ್ದರಾಯ ಬರಗಿಮಠ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಬಿ.ಬಿ. ಪಾಟೀಲ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts