More

    ನೇದಲಗಿಗೆ ಡಿಸಿಸಿಯಿಂದ ನೋಟಿಸ್ ಜಾರಿ

    ವಿಜಯಪುರ: ಜಿ.ಪಂ. ಅಧ್ಯಕ್ಷ ಸ್ಥಾನ ಬದಲಾವಣೆ ಪ್ರಹಸನ ದಿನದಿಂದ ದಿನಕ್ಕೆ ಚುರುಕು ಪಡೆಯುತ್ತಿದ್ದು,ರಾಜೀನಾಮೆ ನೀಡದ ಶಿವಯೋಗಪ್ಪ ನೇದಲಗಿ ಅವರಿಗೆ ಜಿಲ್ಲಾ ಕಾಂಗ್ರೆಸ್ ಕಮಿಟಿಯಿಂದ(ಡಿಸಿಸಿ) ಶನಿವಾರ ನೋಟಿಸ್ ಜಾರಿಗೊಳಿಸಲಾಗಿದೆ.
    ಒಪ್ಪಂದದ ಅನ್ವಯ ಕಾಂಗ್ರೆಸ್ ಸದಸ್ಯೆ ಸುಜಾತಾ ಕಳ್ಳಿಮನಿ ಅವರಿಗೆ ಅಧಿಕಾರವಧಿ ಬಿಟ್ಟುಕೊಡಬೇಕಿದ್ದು, ಈಗಾಗಲೇ ಆ ಬಗ್ಗೆ ಮನವರಿಕೆ ಮಾಡಲಾಗಿದೆ. ಅದಾಗ್ಯೂ ರಾಜೀನಾಮೆಗೆ ನಿರಾಕರಿಸುತ್ತಿರುವ ಹಿನ್ನೆಲೆ ತಮ್ಮ ಮೇಲೆ ಶಿಸ್ತು ಕ್ರಮ ಏಕೆ ಕೈಗೊಳ್ಳಬಾರದೆಂದು ನೋಟಿಸ್‌ನಲ್ಲಿ ಪ್ರಶ್ನಿಸಲಾಗಿದೆ.

    ಒಪ್ಪಂದದ ವಿವರಣೆ

    ಈ ಹಿಂದೆ ಬೆಳಗಾವಿ ಅಧಿವೇಶನ ಸಂದರ್ಭ ಜಿಪಂ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಲಾಗಿತ್ತು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ನಿರ್ದೇಶನದ ಮೇರೆಗೆ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ನೇತೃತ್ವದಲ್ಲಿ ವಿಜಯಪುರ ಜಿಲ್ಲೆ ಶಾಸಕರು, ವಿಪ ಸದಸ್ಯರು ಹಾಗೂ ಜಿಪಂ ಸದಸ್ಯರು ಮತ್ತು ಡಿಸಿಸಿ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ನೀಲಮ್ಮ ಮೇಟಿ ಅವರಿಂದ ರಾಜೀನಾಮೆ ಕೊಡಿಸಿ ಶಿವಯೋಗಪ್ಪ ನೇದಲಗಿ ಅವರನ್ನು ಅಧ್ಯಕ್ಷರನ್ನಾಗಿಸಲು ತೀರ್ಮಾನಿಸಲಾಗಿತ್ತು. ಈ ವೇಳೆ ಶಿವಯೋಗಪ್ಪ ನೇದಲಗಿ ಮತ್ತು ಸುಜಾತಾ ಕಳ್ಳಿಮನಿ ನಡುವೆ ಅಧಿಕಾರ ಹಂಚಿಕೆ ಒಪ್ಪಂದವಾಗಿತ್ತು. ಅದರಂತೆ 2019 ಜ.7 ರಂದು ನೇದಲಗಿ ಅವರು ಅಧ್ಯಕ್ಷರಾಗಿದ್ದರು. ಒಪ್ಪಂದದ ಅನ್ವಯ 2020 ಮಾ. 6ಕ್ಕೆ 14 ತಿಂಗಳು ಭರ್ತಿಯಾಗಿದ್ದು ಮುಂದಿನ ಅವಧಿಯನ್ನು ಸುಜಾತಾ ಕಳ್ಳಿಮನಿ ಅವರಿಗೆ ಅಧಿಕಾರ ಬಿಟ್ಟುಕೊಡಬೇಕಿದೆ.

    ವರಿಷ್ಠರ ಸೂಚನೆ

    ಫೆ. 24ರಂದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲೆಯ ಶಾಸಕರಾದ ಎಂ.ಬಿ. ಪಾಟೀಲ, ಯಶವಂತರಾಯಗೌಡ ಪಾಟೀಲ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ನೇದಲಗಿ ಅವರಿಗೆ ತಿಳಿಸಲಾಗಿದೆ. ಈವರೆಗೆ ರಾಜೀನಾಮೆ ನೀಡಿಲ್ಲ. ಕೆಪಿಸಿಸಿ ನಿರ್ದೇಶನದ ಪ್ರಕಾರ ನೋಟಿಸ್ ನೀಡಲಾಗುತ್ತಿದ್ದು, ಮೂರು ದಿನಗಳ ಒಳಗಾಗಿ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ಪಕ್ಷದಿಂದ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಡಿಸಿಸಿ ಅಧ್ಯಕ್ಷ ಪ್ರೊ. ರಾಜು ಆಲಗೂರ ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts