More

    ತರಗತಿಯತ್ತ ಸುಳಿಯದ ವಿದ್ಯಾರ್ಥಿಗಳು

    ವಿಜಯಪುರ: ಮಹಾಮಾರಿ ಕರೊನಾ ಹಿನ್ನೆಲೆ ಎಂಟು ತಿಂಗಳಿಂದ ಸ್ಥಗಿತಗೊಂಡಿದ್ದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳಿಗೆ ಮಂಗಳವಾರ ಚಾಲನೆ ಸಿಕ್ಕಿತಾದರೂ ಬಹುತೇಕ ವಿದ್ಯಾರ್ಥಿಗಳು ತರಗತಿಯತ್ತ ಸುಳಿಯಲಿಲ್ಲ.
    ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸೋಮವಾರ ಮತ್ತು ಮಂಗಳವಾರ ಕಾಲೇಜು ಆರಂಭಕ್ಕೆ ಸಕಲ ಸಿದ್ಧತೆ ಪೂರ್ಣಗೊಳಿಸಲಾಗಿತ್ತು. ಕೊಠಡಿಗಳಿಗೆ ಸ್ಯಾನಿಟೈಸ್ ಮಾಡಿಸಿ ಶುಚಿತ್ವ ಕಾಪಾಡಲಾಗಿತ್ತು. ಪ್ರವೇಶ ದ್ವಾರದಲ್ಲೇ ತಪಾಸಣೆ ಮತ್ತು ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ, ವಿದ್ಯಾರ್ಥಿಗಳು ನಿರೀಕ್ಷೆಗೆ ತಕ್ಕಂತೆ ಆಗಮಿಸಲಿಲ್ಲ.
    ಆರೋಗ್ಯ ತಪಾಸಣೆ ಪತ್ರ, ಪಾಲಕರಿಂದ ಒಪ್ಪಿಗೆ ಪತ್ರ ತರುವುದು ಕಡ್ಡಾಯವಾದ್ದರಿಂದ ಬಹುತೇಕ ವಿದ್ಯಾರ್ಥಿಗಳು ಕಾಲೇಜಿನತ್ತ ಸುಳಿಯಲಿಲ್ಲ. ಆರೋಗ್ಯ ತಪಾಸಣೆಗೆ ಆಸ್ಪತ್ರೆಯತ್ತ ತೆರಳಲು ಹಿಂದೇಟು ಹಾಕುತ್ತಿರುವ ವಿದ್ಯಾರ್ಥಿಗಳು ಕಾಲೇಜಿನಿಂದ ಮೊದಲ ದಿನ ದೂರ ಉಳಿಯಲು ಕಾರಣ ಎಂದು ಸ್ನಾತಕೋತ್ತರ ವಿದ್ಯಾರ್ಥಿ ಸಿ.ಬಿ. ಹಿರೇಮಠ ಅಭಿಪ್ರಾಯ ಹಂಚಿಕೊಂಡರು.
    ಕೆಲ ಖಾಸಗಿ ಕಾಲೇಜುಗಳು ಎಂದಿನಂತೆ ತರಗತಿ ಆರಂಭಿಸಿದ್ದವಾದರೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿತ್ತು. ಕೆಲವು ವಿದ್ಯಾರ್ಥಿಗಳು ಪ್ರಮಾಣ ಪತ್ರದೊಂದಿಗೆ ಕಾಲೇಜಿಗೆ ಆಗಮಿಸಿದ್ದು ಕಂಡು ಬಂತು. ಇನ್ನು ಸರ್ಕಾರಿ ಕಾಲೇಜುಗಳತ್ತ ವಿದ್ಯಾರ್ಥಿಗಳು ಹಾಗೂ ಪ್ರಾಚಾರ್ಯರು ಸುಳಿಯದಿರುವುದು ಕಂಡು ಬಂತು. ನಗರದ ನವಬಾಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮಹಾತ್ಮ ಗಾಂಧಿ ವೃತ್ತದ ಬಳಿಯ ಬಾಲಕಿಯರ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಅಷ್ಟಾಗಿ ಕಂಡು ಬರಲಿಲ್ಲ. ಈವರೆಗೂ ಯಾರೂ ಪ್ರಮಾಣ ಪತ್ರ ತಂದಿಲ್ಲದ ಕಾರಣ ತರಗತಿ ನಡೆಸಲಾಗುತ್ತಿಲ್ಲವೆಂದು ಅಲ್ಲಿನ ಪ್ರಾಚಾರ್ಯರು ತಿಳಿಸಿದರು.

    ಕಾಲೇಜಿನಲ್ಲೇ ಆರೋಗ್ಯ ತಪಾಸಣೆ ಮಾಡಿ ಪ್ರಮಾಣ ಪತ್ರ ನೀಡುತ್ತಾರೆಂದುಕೊಂಡು ಬಂದೆವು. ಆದರೆ, ನಾವೇ ಆರೋಗ್ಯ ತಪಾಸಣೆ ಮಾಡಿಕೊಂಡು ಪ್ರಮಾಣ ಪತ್ರ ತೆಗೆದುಕೊಂಡು ಬರಬೇಕೆಂದು ಹೇಳಿದರು. ಎಲ್ಲ ಮಾರ್ಗಸೂಚಿ ಕೇಳಿ ತಿಳಿದುಕೊಂಡಿದ್ದೇವೆ. ಶೀಘ್ರದಲ್ಲೇ ಸೂಚನೆ ಪ್ರಕಾರ ಕಾಲೇಜಿಗೆ ಹಾಜರಾಗುತ್ತೇವೆ. ಕಾಲೇಜು ಆರಂಭಗೊಂಡಿದ್ದು ಖುಷಿ ತಂದಿದೆ.
    ಸುಪ್ರಿಯಾ ಹಿರೇಮಠ, ವಿದ್ಯಾರ್ಥಿನಿ

    ಸರ್ಕಾರದ ಆದೇಶದ ಪ್ರಕಾರ ಇಂದಿನಿಂದ ಕಾಲೇಜು ಆರಂಭಿಸಲಾಗಿದೆ. ಈಗಾಗಲೇ ವಿದ್ಯಾರ್ಥಿಗಳಿಗೆ ಮಾರ್ಗಸೂಚಿ ತಿಳಿಸಲಾಗಿದೆ. ಮೊದಲ ದಿನ ವಿದ್ಯಾರ್ಥಿಗಳು ಆರೋಗ್ಯ ತಪಾಸಣೆ ಪ್ರಮಾಣ ಪತ್ರ ಹಾಗೂ ಪಾಲಕರ ಒಪ್ಪಿಗೆ ಪತ್ರ ತಂದಿರಲಿಲ್ಲ. ಹೀಗಾಗಿ ಎಲ್ಲರಿಗೂ ಮನವರಿಕೆ ಮಾಡಿ ಕಳುಹಿಸಿಕೊಡಲಾಗಿದೆ.
    ಎಸ್.ಎಸ್. ರಾಜಮಾನೆ, ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನವಬಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts