ವಿಜಯಪುರ : ನೂತನ ಪಿಂಚಣಿ ಯೋಜನೆಯನ್ನು (ಎನ್‌ಪಿಎಸ್) ರದ್ದುಗೊಳಿಸಿ, ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್) ಮರು ಜಾರಿಗೊಳಿಸುವಂತೆ ಒತ್ತಾಯಿಸಿ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಬುಧವಾರ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಸಂಘದ ವಿಜಯಪುರ ತಾಲೂಕು ಅಧ್ಯಕ್ಷ ಶಿವಾನಂದ ಹಿರೇಕುರಬರ ಮಾತನಾಡಿ, 2006 ರಿಂದ ಹೊಸದಾಗಿ ನೇಮಕಾತಿ ಹೊಂದಿದ ರಾಜ್ಯ ಸರ್ಕಾರಿ ನೌಕರರಿಗೆ ನೂತನ ಪಿಂಚಣಿ ಯೋಜನೆಯನ್ನು (ಎನ್‌ಪಿಎಸ್) ಜಾರಿಗೊಳಿಸಲಾಗಿದೆ. ಆದರೆ, ಅನುದಾನಿತ ಶಾಲಾ ನೌಕರರಿಗೆ ಯಾವುದೇ ಯೋಜನೆ ಜಾರಿಗೊಳಿಸಿಲ್ಲ. ಆದ್ದರಿಂದ ಹಳೆಯ ಪಿಂಚಣಿ ವ್ಯವಸ್ಥೆ ಒದಗಿಸಬೇಕೆಂದು ಅನೇಕ ವರ್ಷಗಳಿಂದ ಸರ್ಕಾರಕ್ಕೆ ಒತ್ತಾಯಿಸಲಾಗುತ್ತಿದೆ. ಆದರೆ, ಈ ವರೆಗೆ ಜಾರಿಯಾಗಿಲ್ಲ. ಪಿಂಚಣಿ ಯೋಜನೆ ಇಲ್ಲದೆ ಶಿಕ್ಷಕರ ಕುಟುಂಬಗಳ ಸ್ಥಿತಿ ಚಿಂತಾಜನಕವೆನಿಸುತ್ತಿದೆ. ದಕ್ಷತೆಯಿಂದ ಸೇವೆ ಸಲ್ಲಿಸುತ್ತಿರುವ ಸರ್ಕಾರಿ/ಅನುದಾನಿತ ನೌಕರರಲ್ಲಿ ನಿವೃತ್ತಿ ನಂತರ ಜೀವನದ ಬಗ್ಗೆ ಅಭದ್ರತೆ ಕಾಡುತ್ತಿದೆ ಎಂದರು.
ಜಿಲ್ಲಾ ಎಸ್‌ಸಿ, ಎಸ್‌ಟಿ ಸಮನ್ವಯ ನೌಕರರ ಸಂಘದ ಅಧ್ಯಕ್ಷ ಬಿ.ಎಚ್. ನಾಡಗೇರ ಮಾತನಾಡಿ, ಕೇಂದ್ರ ಸರ್ಕಾರವು ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವುದು. ಆಯಾ ರಾಜ್ಯಗಳ ವಿವೇಚನೆಗೆ ಬಿಟ್ಟ ವಿಷಯ ಎಂದು ಈಗಾಗಲೇ ರಾಜ್ಯ ಸರ್ಕಾರಗಳಿಗೆ ತಿಳಿಸಿದೆ. ಆದರೆ, ರಾಜ್ಯ ಸರ್ಕಾರ ಈ ಹಿಂದಿನ ಯೋಜನೆ ಮುಂದುವರಿಸಲು ನಿರ್ಲಕ್ಷೃ ವಹಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡರಾದ ಗಿರೀಶ ಬಿರಾದಾರ, ವಿಜು ವಪ್ಪರಿ, ಲಕ್ಷ್ಮ್ಮಣ ಹಂಚನಾಳ, ಚನ್ನು ಬಿರಾದಾರ, ವಿನೋದ ನಾಯಕ, ಶಿವಾನಂದ ಚೌಧರಿ, ಶಿವಾನಂದ ಎಸ್.ಪಾಟೀಲ, ಶಿವನಗೌಡ ಬಿರಾದಾರ, ಕೆ.ಎಂ. ಉಮದಿ, ಎಸ್.ಆರ್. ಪುಲಾರಿ, ಎಸ್.ಬಿ. ಬಿರಾದಾರ, ಜಿ.ಎಸ್.ಪಾಟೀಲ, ವಿ.ಎಲ್. ಲಮಾಣಿ, ಎ.ಇ. ಬರಪಟ್ಟಿ, ಆರ್.ಬಿ. ಬಿರಾದಾರ ಮತ್ತಿತರರಿದ್ದರು.