More

    ಭಕ್ತರಿಂದ ಪರಶಿವಗೆ ಭಕ್ತಿನಮನ

    ವಿಜಯಪುರ: ಎಲ್ಲೆಡೆ ಘಂಟೆಯ ನಾದ, ಶಂಖ ವಾದ್ಯ, ಮಂಗಳಕರ ನಿನಾದ, ಮಂತ್ರಗಳ ಝೇಂಕಾರ. ಇದು ಮಹಾಶಿವರಾತ್ರಿಯಂದು ನಗರದ ಪ್ರತಿಯೊಂದು ಶಿವಾಲಯಗಳಲ್ಲಿ ಕಂಡುಬಂದ ದೃಶ್ಯಗಳಿವು.

    ನಗರದ ಪ್ರತಿಯೊಂದು ಶಿವಾಲಯದಲ್ಲಿ ಶಿವ ನಾಮಸ್ಮರಣೆ, ಪಂಚಾಕ್ಷರ-ಷಡಾಕ್ಷರ ಮಂತ್ರಗಳು ಕೇಳುಗರನ್ನು ಪುಳಕಿತಗೊಳುಸುತ್ತಿದ್ದವು. ಸರದಿಯಲ್ಲಿ ನಿಂತ ಪ್ರತಿಯೊಬ್ಬರು ಶಿವಲಿಂಗ ದರ್ಶನಕ್ಕೆ ಹಾತೊರೆಯುತ್ತಿದ್ದರು.

    ಇನ್ನು ದೇವಾಲಯಗಳಲ್ಲಿ ಶಿವಲಿಂಗಕ್ಕೆ ಜಲ, ಕ್ಷೀರ, ಪಂಚಾಮೃತ ಅಭಿಷೇಕ ಮಾಡಲಾಯಿತು. ಷೋಡಷೋಪಚಾರದ ನಂತರ ಬೆಳ್ಳಿ, ಪಂಚಲೋಹಗಳ ಮುಖವಾಡ ಹಾಕಿ ಥರೇವಾರಿ ಪುಷ್ಪಗಳಿಂದ ಅಲಂಕಾರಗೊಳಿಸಲಾಗಿತ್ತು. ಭಕ್ತರು ತಂದ ಹೂ ಹಾರಗಳಲ್ಲಿ ತ್ರೀ ನೇತ್ರ ಮುಳುಗಿಹೋಗಿದ್ದ.

    ನಗರದ ಉಕ್ಕಲ್ಲಿ ರಸ್ತೆಯಲ್ಲಿರುವ ಶಿವಗಿರಿಗೆ ಭಕ್ತರು ಹಿಂಡು ಹಿಂಡಾಗಿ ಹೋಗುತ್ತಿರುವ ದೃಶ್ಯಗಳು ಕಂಡ ಬಂದವು. ಬೆಳಗ್ಗೆಯಿಂದಲೇ ಸರದಿಯಲ್ಲಿ ನಿಂತ ಭಕ್ತರು ಶಿವನ ದರ್ಶನ ಪಡೆದು ಪುನೀತರಾದರು. ಕೆಲವರು ಸೂರ್ಯ ನೆತ್ತಿಗೇರುವುದರಲ್ಲಿ ಮನೆ ಸೇರಿಕೊಂಡರೇ, ಇನ್ನು ಕೆಲವರು ಉರಿ ಬಿಸಿಲನ್ನೂ ಲೆಕ್ಕಿಸದೇ ಪುಟಾಣಿ ಮಕ್ಕಳೊಂದಿಗೆ ಸರದಿಯಲ್ಲಿ ನಿಂತಿರುವುದು ಕಂಡುಬಂತು.

    ಜೋರಾಪುರ ಪೇಠದ ಶಂಕರಲಿಂಗ ದೇವಸ್ಥಾನದಲ್ಲಿ ನಸುಕಿನಿಂದಲೇ ಭಕ್ತರು ಮಡಿಯುಟ್ಟು ಸರದಿಯಲ್ಲಿ ನಿಂತು ಶಂಕರನ ದರ್ಶನ ಪಡೆದರು. ದೇವಸ್ಥಾನ ಆವರಣದಲ್ಲಿ ಧ್ವನಿವರ್ಧಕಗಳಲ್ಲಿ ಮೊಳಗುತ್ತಿದ್ದ ಶಿವನಾಮಸ್ಮರಣೆ, ಭಕ್ತಿಗೀತೆಗಳು ಭಕ್ತರನ್ನು ಪರವಶರನ್ನಾಗಿ ಮಾಡಿದ್ದವು.

    ಸುಂದರೇಶ್ವರ ದೇವಸ್ಥಾನ
    ಇಲ್ಲಿಯೂ ಸಹ ಅರ್ಧ ಕಿಮೀವರೆಗೆ ಭಕ್ತರು ಸರದಿಯಲ್ಲಿ ನಿಂತ ಫಾಲಾಕ್ಷನ ದರ್ಶನ ಪಡೆದರು. ಕೆಲವರೂ ಮನೆಯಿಂದ ತಂದ ಕ್ಷೀರ, ಜಲವನ್ನು ಅಭಿಷೇಕ ಮಾಡಿ ಪುಷ್ಪಗಳನ್ನು ಸಮರ್ಪಿಸಿದರೆ ಕೆಲವರು ತೆಂಗು- ಊದುಕಡ್ಡಿ- ಕರ್ಪೂರ- ಕಲ್ಲುಸಕ್ಕರೆ ಸಮರ್ಪಿಸಿದರು.

    ಲಿಂಗದ ಗುಡಿ
    ದೇವಸ್ಥಾನದ ಆವರಣದಲ್ಲಿ ಸಂಸ್ಥೆಯವರು ಪೆಂಡಾಲ್ ಹಾಕಿಸಿದ್ದರಿಂದ ಸರದಿಯಲ್ಲಿ ನಿಂತ ಭಕ್ತರು ತೆಂಗು-ಧೂಪ-ದೀಪ ಸಮರ್ಪಿಸಿ 770 ಲಿಂಗಗಳನ್ನು ಮುಟ್ಟಿ ನಮಸ್ಕರಿಸಿ ಕೃತಾರ್ಥರಾದರು.

    ಅಡವಿಶಂಕರಲಿಂಗ ದೇವಸ್ಥಾನ
    ಸೂರ್ಯನ ಪ್ರತಾಪ ಜಗ್ಗದೇ ಧಾವಿಸುತ್ತಿರುವುದು ಶಿವಭಕ್ತಿಗೆ ಸಾಕ್ಷಿಯಾಗಿತ್ತು. ಕೆಲವರು ಕುಟುಂಬ ಸಮೇತರಾಗಿ ಕಾರುಗಳಲ್ಲಿ ಬಂದರೆ, ಕೆಲವರು ಬೈಕ್‌ಗಳಲ್ಲಿ, ಕೆಲವರು ಆಟೋ-ಟಂಟಂಗಳಲ್ಲಿ ಆಗಮಿಸಿದರೇ, ಕೆಲವರು ಬರಿಗಾಲಲ್ಲಿ ಶಂಕರನ ದರ್ಶನಕ್ಕೆ ಬರುತ್ತಿರುವುದು ಕಂಡುಬಂದಿತು. ದೇವಸ್ಥಾನ ಆವರಣದಲ್ಲಿ ಸೇರಿದ್ದ ಭಕ್ತರಿಂದ ಅಲ್ಲೊಂದು ಜಾತ್ರೆ ವಾತಾವರಣ ನಿರ್ಮಾಣಗೊಂಡಿತ್ತು.
    ದಾನಿಗಳು ಹಾಗೂ ಶಿವಭಕ್ತರು ದೇವಸ್ಥಾನಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಬಾಳೆ, ತುಂಡರಿಸಿದ ಸೇಬು, ಸಾಬುದಾನಿ ನೀಡುವ ಮೂಲಕ ಹರಕೆ ತೀರಿಸಿದರು.

    ನಗರದ ಪ್ರತಿಯೊಂದು ಶಿವಾಲಯಗಳಲ್ಲಿ ಬೆಳಗ್ಗೆಯಿಂದ ಧಾರ್ಮಿಕ ಕಾರ್ಯಗಳು ನಡೆದಿದ್ದು, ಸಂಜೆಯಿಂದಲೇ ಭಜನೆ, ಜಾಗರಣೆ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

    ವಿಜಯಪುರದ ಅಡವಿ ಶಂಕರಲಿಂಗ ದೇವಸ್ಥಾನದಲ್ಲಿ ಶಿವರಾತ್ರಿಯಂದು ಶಿವನ ದರ್ಶನಕ್ಕೆ ಆಗಮಿಸಿದ್ದ ಮಹಾ ತಪಸ್ವಿ ಸೇವಾ ಪ್ರತಿಷ್ಠಾನದ ಅವಧೂತ ಕವಿ ಗುರುರಾಜ ಗುರೂಜಿ ಅವರ ಸಾವಿರ ವೃಕ್ಷ ಪ್ರಕೃತಿ ಸುಭಿಕ್ಷ ಅಭಿಯಾನದಡಿ ಭಕ್ತರಿಗೆ ಬಿಲ್ವಪತ್ರಿ ಸಸಿಗಳನ್ನು ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts