More

    ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ

    ಹುಣಸೂರು: ಮಹಾಶಿವರಾತ್ರಿಯ ಅಂಗವಾಗಿ ತಾಲೂಕಿನಾದ್ಯಂತ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ, ಹೋಮ,ಹವನಗಳು ಜರುಗಿದವು. ಶುಕ್ರವಾರ ಬೆಳಗ್ಗಿನಿಂದಲೇ ಭಕ್ತರು ಶಿವದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು.

    ಪಟ್ಟಣದ ಬ್ರಾಹ್ಮಣರ ಬೀದಿಯ ಲಕ್ಷ್ಮಣತೀರ್ಥ ನದಿತಟದಲ್ಲಿ ಪಶ್ಚಿಮಾಭಿಮುಖವಾಗಿ ಪ್ರತಿಷ್ಠಾಪಿಸಲಾಗಿರುವ ಚಂದ್ರಮೌಳೇಶ್ವರ ದೇವಾಲಯದಲ್ಲಿ ಧಾರ್ಮಿಕ ಕಾರ್ಯಗಳು ನಡೆದವು.

    ಮೈಸೂರು ರಸ್ತೆಯಲ್ಲಿರುವ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಭಕ್ತರು ಸಾಲುಗಟ್ಟಿನಿಂತಿದ್ದರು. ಗೋಪಾಲಕೃಷ್ಣ, ಶ್ರೀ ಆಂಜನೇಯ ಹಾಗೂ ಸರ್ಪ ಸಮೇತವಿರುವ ಸುಬ್ರಮಣ್ಯೇಶ್ವರ, ನವಗ್ರಹ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಮಂಜುನಾಥಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಹೋಮ-ಹವನದ ನಂತರ ಶ್ರೀ ಸತ್ಯನಾರಾಯಣಸ್ವಾಮಿ ಪೂಜೆ ನಡೆಸಲಾಯಿತು.

    ಹುಣಸೂರು-ಕೆ.ಆರ್.ನಗರ ಮುಖ್ಯರಸ್ತೆಯ ಕಲ್ಕುಣಿಕೆ ಬಳಿಯಿರುವ ಶ್ರೀ ಶನೈಶ್ಚರ, ಗಣಪತಿ ಹಾಗೂ ದುರ್ಗಾಪರಮೇಶ್ವರಿ ಅಮ್ಮನವರ ದೇವಾಲಯದ 9ನೇ ವರ್ಷದ ವಾರ್ಷಿಕೋತ್ಸವ ಮತ್ತು ಶಿವರಾತ್ರಿ ಸಂಭ್ರಮದ ಅಂಗವಾಗಿ ಬೆಳಗ್ಗಿನಿಂದ ವಿಶೇಷ ಪೂಜಾಕೈಂಕರ್ಯಗಳನ್ನು ನಡೆಸಲಾಯಿತು. ಶನಿ ಶಾಂತಿಹೋಮ, ಉತ್ಸವ ಮೂರ್ತಿ ಮೆರವಣಿಗೆ, ಕಲಶಾಭಿಷೇಕದ ನಂತರ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಕಟ್ಟೆಮಳಲವಾಡಿ, ಗಾವಡಗೆರೆ, ಕಲ್ಕುಣಿಕೆ ಮತ್ತು ಪಟ್ಟಣದ ವಿವಿಧ ಬಡಾವಣೆಗಳಿಂದ ಭಕ್ತರು ತಂಡೋಪತಂಡವಾಗಿ ಬಂದು ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.

    ಪಟ್ಟಣದ ಎಚ್.ಡಿ.ಕೋಟೆ ವೃತ್ತ ಹಾಗೂ ಸೇತುವೆ ಶ್ರೀ ಕನ್ನಿಕಾಪರಮೇಶ್ವರಿ ಅಮ್ಮನವರ ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ ನೆರವೇರಿಸಲಾಯಿತು. ಭಕ್ತರು ಬಿಲ್ವಪತ್ರೆಯೊಂದಿಗೆ ಪೂಜಾಕಾರ್ಯ ನೆರವೇರಿಸಲು ದೇವಾಲಯಗಳಿಗೆ ಆಗಮಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts