More

    ಹುಣಸೂರಿನಲ್ಲಿ ಮತದಾನ ಜಾಗೃತಿ ಜಾಥಾ

    ಹುಣಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕು ಸ್ವೀಪ್ ಸಮಿತಿ, ವಿಶೇಷಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ನಗರಸಭೆ ಸಹಯೋಗದಲ್ಲಿ ಬುಧವಾರ ಸ್ಕೂಟರ್ ರ‌್ಯಾಲಿ ಮೂಲಕ ಮತದಾನ ಜಾಗೃತಿ ಜಾಥಾ ನಡೆಸಲಾಯಿತು.


    ತಾಲೂಕು ಪಂಚಾಯಿತಿ ಆವರಣದಲ್ಲಿ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ ತಾ.ಪಂ. ಇಒ ಶಿವಕುಮಾರ್, ಏ.26ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತಗಟ್ಟೆಗಳಿಂದ ಹೊರಗೆ ಉಳಿಯದೆ ಹಾಗೂ ಯಾವುದೇ ಆಮಿಷಗಳಿಗೆ ಬಲಿಯಾಗದೆ ನಿಷ್ಪಕ್ಷಪಾತದಿಂದ ದೇಶದ ಸುಭದ್ರ ಭವಿಷ್ಯಕ್ಕಾಗಿ ಮತ ಚಲಾಯಿಸಬೇಕು ಎಂದು ಸಲಹೆ ನೀಡಿದರು.


    ತಾಲೂಕಿನಲ್ಲಿ ಶೇ.95ರಷ್ಟು ಅಂಗವಿಕಲರು ಮತಗಟ್ಟೆಗೆ ಬಂದು ಮತ ಹಾಕುವುದಾಗಿ ತಿಳಿಸಿದ್ದು, ವಿಆರ್‌ಡಬ್ಲುೃ(ಗ್ರಾಮೀಣ ಪುನರ್ವಸತಿ ನೌಕರರು)ಗಳು ಮತದಾನದ ದಿನ ಸರ್ಕಾರದ ಸೌಲಭ್ಯಗಳಾದ ವ್ಹೀಲ್‌ಚೇರ್ ವ್ಯವಸ್ಥೆ, ರ‌್ಯಾಂಪ್ ಹಾಗೂ ಪ್ರತ್ಯೇಕ ಪ್ರವೇಶ ವ್ಯವಸ್ಥೆ ಸೇರಿದಂತೆ ಇನ್ನಿತರ ಸೌಲಭ್ಯದ ಕುರಿತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅಂಗವಿಕಲರಿಗೆ ತಿಳಿಸುವಂತೆ ಹಾಗೂ 18 ವರ್ಷ ಮೇಲ್ಪಟ್ಟ ಅಂಗವಿಕಲರು ಕಡ್ಡಾಯವಾಗಿ ಮತದಾನ ಮಾಡುವಂತೆ ಗಮನಿಸಬೇಕು. ಚುನಾವಣಾ ಸಂದರ್ಭದಲ್ಲಿ ನಡೆಯಲಿರುವ ಅಕ್ರಮಗಳನ್ನು ತಡೆಯಲು ಸಿ-ವಿಜಿಲ್ ಆ್ಯಪ್ ಬಳಕೆ ಮಾಡಿಕೊಳ್ಳುವಂತೆ ಹಾಗೂ ಸಕ್ಷಮ್ ಆ್ಯಪ್ ಬಳಕೆ ಮೂಲಕ ಮತದಾನದ ದಿನದಂದು ಅವಶ್ಯಕವಿರುವ ಸಹಾಯವನ್ನು ಕೋರಲು ಮತ್ತು ಮತಕೇಂದ್ರಗಳ ಬಗ್ಗೆ ತಿಳಿದುಕೊಳ್ಳಲು ಹಾಗೂ ಸೇರ್ಪಡೆಗೊಂಡಿರುವ ಹೆಸರನ್ನು ಪರಿಶೀಲಿಸಲು ವೋಟರ್ ಹೆಲ್ಪ್ ಲೈನ್ ಆ್ಯಪ್ ಬಳಸುವಂತೆ ತಿಳಿಸಿದರು.


    ಇಲಾಖೆ ಸಹಾಯಕ ನಿರ್ದೇಶಕ(ಗ್ರಾ.ಉ)ಗಿರಿಧರ್, ತಾಲೂಕು ಯೋಜನಾಧಿಕಾರಿ ರಾಜೇಶ್, ಸಂಯೋಜಕ ದೇವರಾಜ್, ನಗರಸಭೆ ಇಂಜಿನಿಯರ್ ಸೋಮಸುಂದರಂ, ಸಂತೋಷ್ ಇತರರು ಇದ್ದರು.


    ಅಂಗವಿಕಲರು ತ್ರಿಚಕ್ರ ವಾಹನದಲ್ಲಿ ಕುಳಿತು ಪೋಸ್ಟರ್‌ಗಳನ್ನು ಹಿಡಿದು ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ ಗಮನ ಸೆಳೆದರು. ಜಾಗೃತ ಮತದಾರ ಪ್ರಜಾಪ್ರಭುತ್ವದ ನೇತಾರ, ಪುರುಷರಿರಲಿ-ಮಹಿಳೆಯರಿರಲಿ ಮತ ಹಾಕುವುದು ಎಲ್ಲರ ಜವಾಬ್ದಾರಿ, ಯುವ ಜನತೆಯಿಂದ ಮತದಾನ ನವಭಾರತದ ನಿರ್ಮಾಣ ಎಂಬಿತ್ಯಾದಿ ಘೋಷಣೆಗಳನ್ನು ಮೊಳಗಿಸಿದರು. ಸಂವಿಧಾನ ವೃತ್ತದಲ್ಲಿ ಬೈಕ್‌ಗಳ ಸರಪಳಿ ರಚಿಸಿ ಗಮನಸೆಳೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts