More

    ಹೊರ್ತಿಯಲ್ಲಿ ಕೋಟಿ ಜಪಯಜ್ಞ

    ಹೊರ್ತಿ: ಮಹಾಶಿವರಾತ್ರಿ ದಿನದಂದು ಜಪ ತಪಗಳಂಥ ಪುಣ್ಯ ಕಾರ್ಯಗಳಲ್ಲಿ ಸಮಯ ಕಳೆದರೆ ಜನ್ಮ ಪಾವನವಾಗುತ್ತದೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.

    ಮಹಾಶಿವರಾತ್ರಿ ಅಂಗವಾಗಿ ಇಲ್ಲಿನ ರೇವಣಸಿದ್ಧೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆ ಹಮ್ಮಿಕೊಂಡಿದ್ದ ಕೋಟಿ ಜಪಯಜ್ಞ ಹಾಗೂ ಧರ್ಮಸಮಾರಂಭದಲ್ಲಿ ಅವರು ಮಾತನಾಡಿದರು.

    ಎಳ್ಳಿನಲ್ಲಿ ಎಣ್ಣೆ ಇರುತ್ತದೆ. ಆದರೆ ಅದು ನಮ್ಮ ಕೈಗೆ ಅಂಟುವುದಿಲ್ಲ. ಹಾಲಿನಲ್ಲಿ ತುಪ್ಪ ಇರುತ್ತದೆ. ಹಾಲಿನಲ್ಲಿ ಹುಡುಕಿದರೆ ಕಾಣುವುದಿಲ್ಲ. ಅದೇ ರೀತಿ ಶಿವ ಪ್ರತಿಯೊಂದು ಜೀವಿಯಲ್ಲೂ ಇರುತ್ತಾನೆ ಎಂಬುದನ್ನು ಎಲ್ಲರೂ ತಿಳಿಯಬೇಕು. ಪ್ರತಿ ದಿನದ ಕೆಲವು ನಿಮಿಷಗಳನ್ನಾದರೂ ಪೂಜೆ, ಜಪ, ತಪಗಳಿಗೆ ಮೀಸಲಿಡಬೇಕು ಎಂದರು.

    ಹೊರ್ತಿಯ ಮಹಿಮೆ ಅಪಾರವಾಗಿದೆ. ಇಲ್ಲಿ 136 ಅಡಿ ಎತ್ತರದ ಬೃಹತ್ ಶಿವಲಿಂಗ ಸ್ಥಾಪನೆ ಆಗುತ್ತಿರುವುದು ಹೆಮ್ಮೆಯ ಸಂಗತಿ. ಈ ಸಂಸ್ಥೆ ಕೈಗೊಳ್ಳುತ್ತಿರುವ ಕಾರ್ಯಗಳು ಶ್ಲಾಘನೀಯ. ಇಲ್ಲಿ ಜಪ ಮಾಡಿದವರ ಬದುಕು ಧನ್ಯವಾಗಿದೆ ಎಂದರು.

    ಕನ್ನೂರಿನ ಸೋಮನಾಥ ಶಿವಾಚಾರ್ಯರು ಮಾತನಾಡಿ, ಸರ್ವ ಜನಾಂಗದ ಶಾಂತಿಯ ತೋಟ ಎನಿಸಿದ ಭಾರತದಲ್ಲಿ ಹಿಂದುಗಳು ನಡೆಸುವ ಎಲ್ಲ ಆಚರಣೆಗಳು ಮಹತ್ವದ್ದಾಗಿವೆ. ವೇದ, ಪುರಾಣಗಳಲ್ಲಿ ಹೇಳಿದ ಅಂಶಗಳನ್ನು ಅನುಸರಿಸಿ ನಡೆದರೆ ಬದುಕು ಪಾವನವಾಗುತ್ತದೆ. ಸತ್ಸಂಗದಿಂದ ಎಲ್ಲ ಸಮಸ್ಯೆಗಳೂ ಪರಿಹಾರ ಸಿಗುತ್ತದೆ ಎಂದರು.

    ನಾಗಠಾಣದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ, ಶಿವರಾತ್ರಿ ಅತ್ಯಂತ ಮಹತ್ವದ ಹಾಗೂ ಪುಣ್ಯಪ್ರದ ದಿನವಾಗಿದೆ. ಈ ದಿನ ರಂಭಾಪುರಿ ಶ್ರೀಗಳ ದರ್ಶನ ಪಡೆದ ಭಕ್ತರೆಲ್ಲ ಧನ್ಯರು ಎಂದರು.

    ಅಧ್ಯಕ್ಷತೆ ವಹಿಸಿದ್ದ ರೇವಣಸಿದ್ಧೇಶ್ವರ ದೇವಸ್ಥಾನ ಸಂಸ್ಥೆ ಅಧ್ಯಕ್ಷ ಅಣ್ಣಪ್ಪ ಖೈನೂರ ಮಾತನಾಡಿ, ಮುಂದಿನ ದಿನಗಳಲ್ಲೂ ನಮ್ಮ ದೇವಸ್ಥಾನ ವತಿಯಿಂದ ನಿರಂತರ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

    ನಂತರ ನಡೆದ ಕೋಟಿ ಜಪಯಜ್ಞ, ಇಷ್ಟಲಿಂಗ ಪೂಜೆಯಲ್ಲಿ ಶಾಲೆ ವಿದ್ಯಾರ್ಥಿಗಳು ಸೇರಿ ಸಾವಿರಾರು ಜನ ಭಾಗವಹಿಸಿದ್ದರು. ಗುರುವಾರ ಸಂಜೆ ಗ್ರಾಮಕ್ಕೆ ಆಗಮಿಸಿದ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರನ್ನು ಸಾರೋಟ ಮೆರವಣಿಗೆ ಮೂಲಕ ಭವ್ಯವಾಗಿ ಸ್ವಾಗತಿಸಲಾಯಿತು.

    ಹತ್ತಳ್ಳಿ ಹಾವಿನಾಳದ ಗುರುಪಾದೇಶ್ವರ ಶಿವಾಚಾರ್ಯರು, ತಡವಲಗಾ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಬೆಳ್ಳಂಕಿ ಶಿವಲಿಂಗ ಶಿವಾಚಾರ್ಯರು, ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ಸಂಸದ ರಮೇಶ ಜಿಗಜಿಣಗಿ, ಬಿ.ಜಿ. ಸಾಹುಕಾರ, ಜೆ.ಎಸ್. ಪೂಜಾರಿ, ಕಾಸುಗೌಡ ಬಿರಾದಾರ, ಗ್ರಾಪಂ ಅಧ್ಯಕ್ಷೆ ಜಯಶ್ರೀ ಭೋಸಗಿ, ಶ್ರೀಮಂತ ಇಂಡಿ, ನಿಂಗಪ್ಪ ಪೂಜಾರಿ, ಗಂಗಯ್ಯ ಹಿರೇಮಠ, ಮಲ್ಲಪ್ಪ ಜಂಬಗಿ ಇತರರಿದ್ದರು. ಪ್ರಕಾಶ ಬಮ್ಮನಳ್ಳಿ ನಿರೂಪಿಸಿದರು. ಬಸವರಾಜ ಜಂಬಗಿ ಸ್ವಾಗತಿಸಿದರು. ರಾತ್ರಿ ಭಕ್ತಿ ಸಂಗೀತದ ಮೂಲಕ ಜಾಗರಣೆ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts