More

    ಐಎಎಸ್ ಲಾಬಿಗೆ ಬೀಳುವುದೇ ಬ್ರೇಕ್?

    ಪರಶುರಾಮ ಭಾಸಗಿ
    ವಿಜಯಪುರ: ಆಲಮಟ್ಟಿಯಲ್ಲಿ ಖಾನಾವಳಿ ಇರಿಸಿ ಬೆಂಗಳೂರಲ್ಲಿ ಊಟದ ವ್ಯವಸ್ಥೆ ಮಾಡಿದಂತಿದೆ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ಸದ್ಯದ ಸ್ಥಿತಿ !

    ಹೌದು, ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳ ಅನುಷ್ಠಾನಗೊಳ್ಳಬೇಕಿರುವುದು ಉತ್ತರ ಕರ್ನಾಟಕದಲ್ಲಾದರೆ ಕೆಬಿಜೆಎನ್‌ಎಲ್ ಮುಖ್ಯ ಕಚೇರಿ ಇರುವುದು ಬೆಂಗಳೂರಿನಲ್ಲಿ. ಯಾವಾಗ ಕಚೇರಿ ಸ್ಥಳಾಂತರ ವಿಷಯ ಮುನ್ನೆಲೆಗೆ ಬರುತ್ತದೋ ಆಗ ಇಂಥ ಲೇವಡಿಗಳು ಕೃಷ್ಣಾ ಕೊಳ್ಳದಲ್ಲಿ ಪುನರುಚ್ಚರಿಸಲ್ಪಡುತ್ತಲೇ ಇವೆ.

    ಇದೀಗ ಸಿಎಂ ಯಡಿಯೂರಪ್ಪ ಅವರು ಆಲಮಟ್ಟಿಯಲ್ಲೇ ಮುಖ್ಯ ಕಚೇರಿ ಸ್ಥಾಪಿಸಲು ಫೆ. 17ರವರೆಗೆ ಗಡುವು ನೀಡಿದ್ದು ಮತ್ತೆ ಚರ್ಚೆ ಮುನ್ನೆಲೆಗೆ ಬಂದಿದೆ. ಆದರೆ ಅದು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತದೆ ಎಂಬುದೇ ಯಕ್ಷ ಪ್ರಶ್ನೆ.

    ನಿರ್ಣಯ ಹೊಸದೇನಲ್ಲ
    ಕಳೆದ 2019ರ ಸೆ. 18ರಂದು ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರದ ಸಂಪುಟದಲ್ಲೂ ಇಂಥದ್ದೇ ನಿರ್ಣಯ ಹೊರಬಿದ್ದಿತ್ತು. ಮುಖ್ಯ ಕಚೇರಿಯನ್ನು ಆಲಮಟ್ಟಿಗೆ ಸ್ಥಳಾಂತರಿಸಬೇಕೆಂದು ಕಟ್ಟು ನಿಟ್ಟಿನ ಸೂಚನೆ ನೀಡಲಾಗಿತ್ತು. ಅದಕ್ಕಾಗಿ ಸಮಿತಿ ರಚಿಸಿ ವರದಿ ಸಾಧಕ- ಬಾಧಕಗಳ ಕುರಿತು ವರದಿ ಒಪ್ಪಿಸಲು ಸಹ ತಿಳಿಸಲಾಗಿತ್ತು. ಆ ಬಳಿಕ ಸರ್ಕಾರವೇ ಬದಲಾಯಿತು ವಿನಃ ಕಚೇರಿ ಮಾತ್ರ ಬದಲಾಗಲಿಲ್ಲ.
    ಇದಕ್ಕೂ ಮೊದಲೇ ಸಾಕಷ್ಟು ಬಾರಿ ಕಚೇರಿ ಸ್ಥಳಾಂತರಕ್ಕೆ ಕಸರತ್ತು ನಡೆದಿದೆಯಾದರೂ ಐಎಎಸ್ ಅಧಿಕಾರಿಗಳ ಲಾಬಿಯಿಂದಾಗಿ ಕಾರ್ಯರೂಪಕ್ಕೆ ಬಂದಿಲ್ಲ. 1994ರಲ್ಲೇ ಕೆಬಿಜೆಎನ್‌ಎಲ್ ಸ್ಥಾಪನೆಯಾಗಿದ್ದು ಆರಂಭದಲ್ಲಿ ಹೋಗಿ ಬಂದು ಮಾಡುತ್ತಿದ್ದ ವ್ಯವಸ್ಥಾಪಕ ನಿರ್ದೇಶಕರು ಆ ಬಳಿಕ ಬರುವುದನ್ನೇ ನಿಲ್ಲಿಸಿದರು. ಅವಶ್ಯ ಬಿದ್ದಾಗ ಅಧಿಕಾರಿಗಳೇ ಬೆಂಗಳೂರಿಗೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.

    ಸಕಲ ಸೌಲಭ್ಯಗಳೂ ಉಂಟು
    ಮುಖ್ಯ ಕಚೇರಿಗೆ ಬೇಕಾದ ಎಲ್ಲ ಸೌಲಭ್ಯಗಳೂ ಆಲಮಟ್ಟಿಯಲ್ಲಿ ಕಲ್ಪಿಸಲಾಗಿದೆ. ವ್ಯವಸ್ಥಾಪಕ ನಿರ್ದೇಶಕರಿಗಾಗಿ ಭವ್ಯ ಕಚೇರಿಯನ್ನೇ ನಿರ್ಮಿಸಲಾಗಿದೆ. ವಸತಿ ವ್ಯವಸ್ಥೆ ಇದೆ. ಸದ್ಯ 700 ವಸತಿ ಗೃಹಗಳಿದ್ದು ಮುಖ್ಯ ಇಂಜಿನಿಯರ್ ಸೇರಿದಂತೆ ವಿವಿಧ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಸ್ಥಳಾಂತರಗೊಂಡರೆ ಕೆಲವು ಸಣ್ಣ ಪುಟ್ಟ ಬದಲಾವಣೆ ಮಾಡಿಕೊಳ್ಳುವುದು ಬಿಟ್ಟರೆ ಸಕಲ ಸೌಲಭ್ಯಗಳು ಸಿದ್ದವಾಗಿವೆ.

    ಆಲಮಟ್ಟಿ, ಭೀಮರಾಯನಗುಡಿ, ರಾಂಪುರ ಹಾಗೂ ನಾರಾಯಣಪುರ ಶಾಖೆಗಳಿಗೆ ಮುಖ್ಯ ಇಂಜಿನೀಯರ್‌ಗಳಿದ್ದಾರೆ. ಸದ್ಯ ಅವರೇ ಆಡಳಿತ ಯಂತ್ರ ನಿರ್ವಹಿಸುತ್ತಿದ್ದಾರೆ. ಆದರೆ, ಮುಖ್ಯ ಕಚೇರಿ ಬೆಂಗಳೂರಲ್ಲಿ ಇರುವ ಕಾರಣಕ್ಕೆ ವಾರದಲ್ಲಿ ಮೂರು ಬಾರಿ ಬೆಂಗಳೂರಿಗೆ ಹೋಗಿ ವರದಿ ಒಪ್ಪಿಸಬೇಕಾದ ಅನಿವಾರ್ಯತೆ ಇದೆ.

    ಅನುಕೂಲಗಳೇನು?
    ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಸ್ಥಳಾಂತರದಿಂದಾಗಿ ಹಣಕಾಸು, ಆಡಳಿತ, ತಾಂತ್ರಿಕ ವಿಭಾಗಗಳೆಲ್ಲವೂ ಆಲಮಟ್ಟಿಗೆ ಸ್ಥಳಾಂತರಗೊಳ್ಳಲಿವೆ. ಯೋಜನೆ ಅನುಷ್ಠಾನಕ್ಕೆ ವೇಗ ನೀಡಲು ಸಹಕಾರಿಯಾಗಲಿವೆ. ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 524.256 ಮೀಟರ್‌ಗೆ ಹೆಚ್ಚಿಸಬೇಕಿದ್ದು ಅದಕ್ಕಾಗಿ ಗ್ರಾಮಗಳ ಸ್ಥಳಾಂತರ, ಪುನರ್ವಸತಿ- ಪುನರ್ ನಿರ್ಮಾಣ ಕಾರ್ಯ ಕೈಗೊಳ್ಳಬೇಕಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ರಡಿ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸಾಕಷ್ಟು ಕಾಮಗಾರಿಗಳು ಕಾರ್ಯರೂಪಕ್ಕೆ ಬರಬೇಕಿವೆ. ನಿಗದಿತ ಅವಧಿಯಲ್ಲಿ ಯೋಜನೆ ಅನುಷ್ಠಾನವಾಗಬೇಕಾದರೆ ಮುಖ್ಯ ಕಚೇರಿ ಸ್ಥಳಾಂತರಗೊಳ್ಳಲೇಬೇಕೆಂಬುದು ಈ ಭಾಗದ ರೈತರ ಒಕ್ಕೋರಲ ಆಗ್ರಹ.

    ಕಚೇರಿ ಸ್ಥಳಾಂತರದ ಬಗ್ಗೆ ಸಿಎಂ ಅವರು ನಿರ್ಣಯ ತೆಗೆದುಕೊಂಡ ಬಗ್ಗೆ ಮಾಹಿತಿ ಇದೆ. ಶುಕ್ರವಾರ ನೀರಾವರಿ ಸಚಿವ ರಮೇಶ ಜಾರಕಿಹೊಳಿ ಅವರು ಮೊದಲ ಸಭೆ ಕರೆದಿದ್ದರು. ಕಚೇರಿ ಸ್ಥಳಾಂತರ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಮುಂದಿನ ದಿನಗಳಲ್ಲಿ ಯಾವ ತೀರ್ಮಾನ ಹೊರಬೀಳುತ್ತದೋ ಕಾದು ನೋಡಬೇಕು.
    ಆರ್.ಪಿ. ಕುಲಕರ್ಣಿ, ಮುಖ್ಯ ಅಭಿಯಂತರರು, ಕೆಬಿಜೆಎನ್‌ಎಲ್ ಆಲಮಟ್ಟಿ

    ನಿಗದಿತ ಅವಧಿಯಲ್ಲಿ ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಿಸದಿದ್ದರೆ ಹೂಳು ತುಂಬಿಕೊಳ್ಳಲಿದೆ. ಯುಕೆಪಿ ಹಂತ-3 ರ ತ್ವರಿತ ಅನುಷ್ಟಾನಕ್ಕಾಗಿ ಮುಖ್ಯ ಕಚೇರಿ ಆಲಮಟ್ಟಿಗೆ ಸ್ಥಳಾಂತರಗೊಳ್ಳಲೇಬೇಕು. ಈ ಕಾರ್ಯ ಎಂದೋ ಆಗಬೇಕಿದ್ದು ಅಧಿಕಾರಿಗಳ ಲಾಬಿ ಹಾಗೂ ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ಕಾರ್ಯ ಕೈಗೂಡುತ್ತಿಲ್ಲ. ಈಗಲಾದರೂ ಕಚೇರಿ ಸ್ಥಳಾಂತರಗೊಳ್ಳಲಿ ಎಂಬುದೇ ನಮ್ಮ ಆಶಯ.
    ಬಸವರಾಜ ಕುಂಬಾರ, ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ

    ಫೋಟೊ: ವಿಜೆಪಿ ಆಲಮಟ್ಟಿ ಎಂಡಿ ಆಫೀಸ್
    ಆಲಮಟ್ಟಿಯಲ್ಲಿ ನಿರ್ಮಿಸಲಾದ ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರ ಕಚೇರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts