More

    ಆಕರ್ಷಣೆ ಕೇಂದ್ರವಾದ ಶ್ವಾನ ಪ್ರದರ್ಶನ

    ಹೀರಾನಾಯ್ಕ ಟಿ.
    ವಿಜಯಪುರ : ಒಂದು ಇದ್ದಂತೆ ಮತ್ತೊಂದಿಲ್ಲ. ಒಂದರ ಆಹಾರ, ವಿಹಾರ ಮತ್ತೊಂದಕ್ಕೆ ಹೊಂದುವುದಿಲ್ಲ. ಕುಬ್ಜವಾಗಿದ್ದರೂ ಕೆಚ್ಚಿಗೆ ಕಡಿಮೆ ಇಲ್ಲ. ಬೃಹತ್ ಗಾತ್ರ ಇದ್ದರೂ ಮುನ್ನುಗ್ಗುವ ಛಾತಿ ಇಲ್ಲ…!

    ಹೌದು ವಿಜಯಪುರ ಹೊರವಲಯ ಹಿಟ್ನಳ್ಳಿಯ ಕೃಷಿ ಮಹಾವಿದ್ಯಾಲಯ ಆವರಣದಲ್ಲಿ ಆಯೋಜಿಸಿರುವ ಕೃಷಿಮೇಳದಲ್ಲಿ ಎರಡನೇ ದಿನ ಭಾನುವಾರ ಶ್ವಾನ ಪ್ರದರ್ಶನ ಜನರ ಆಕರ್ಷಣೆಯ ಕೇಂದ್ರವಾಗಿತ್ತು.

    ಶನಿವಾರ ನಿರೀಕ್ಷಿತ ಮಟ್ಟದಲ್ಲಿ ಜನರಿಲ್ಲದೆ ಸೊರಗಿದ್ದ ಕೃಷಿ ಮೇಳ ಭಾನುವಾರ ಜನಜಂಗುಳಿಯಿಂದ ತುಂಬಿತ್ತು. ರಜೆ ಹಿನ್ನೆಲೆ ಮಕ್ಕಳು, ಪಾಲಕರು, ರೈತರು, ಮಹಿಳೆಯರು ಹೀಗೆ ಜನರ ದಂಡು ಕೃಷಿಮೇಳದತ್ತ ಹರಿದು ಬಂದಿತ್ತು

    ಆಕರ್ಷಿಸಿದ ಶ್ವಾನಗಳು
    ಅಮೆರಿಕದ ತಳಿ ಕಾಕರ್ ಸ್ಪ್ಯಾನಿಯಲ್, ಟಿಬೆಟ್‌ನ ಲಾಸಾ ಆಪ್ಸೋ, ಜರ್ಮನಿಯ ರ‌್ಯಾಟ್ ವಿಲ್ಲರ್, ಇಂಗ್ಲೆಂಡ್‌ನ ಡ್ಯಾಸ್ಹಂಡ್, ಚೀನಾದ ಪಗ್, ಕ್ರೊಯೆಸಿಯಾದ ಡಾಲ್ಮೇಸಿಯನ್, ಇಂಗ್ಲೆಂಡ್‌ನ ಬುಲ್ ಮ್ಯಾಸ್ಟ್ೀ, ಮುಧೋಳ ಹೌಂಡ್ (ಮಿಶ್ರಿತ ತಳಿ), ಗ್ರೇಟ್ ಫೆಲ್, ಡಾಬರ್‌ಮನ್, ಜರ್ಮನ್ ಶಫರ್ಡ್, ಶಿಟ್‌ಜೂ, ರ‌್ಯಾಟ್ ವಿಲ್ಲರ್, ಅಮೆರಿಕನ್ ಬುಲ್ಲಿ ಡಾಗ್ ಸೇರಿ ಅನೇಕ ತಳಿಗಳ ಶ್ವಾನಗಳು ನೋಡುಗರ ಮನಸೂರೆಗೊಳಿಸಿದವು.

    ಗಾತ್ರ, ಬಣ್ಣ, ನಡಿಗೆ, ಚುರುಕುತನ, ದೃಷ್ಟಿ ಹೀಗೆ ಪ್ರತಿಯೊಂದರಲ್ಲೂ ಒಂದಕ್ಕಿಂತ ಒಂದು ಭಿನ್ನವಾಗಿದ್ದ ಶ್ವಾನಗಳು ತಮ್ಮ ಮಾಲೀಕರೊಂದಿಗೆ ಮೇಳಕ್ಕೆ ಆಗಮಿಸಿದ್ದು ಎಲ್ಲರ ಗಮನ ಸೆಳೆಯಿತು.

    ಸಾಕು ನಾಯಿ, ಬೇಟೆ ನಾಯಿ, ಕಾವಲು ನಾಯಿ, ಸೌಂದರ್ಯದ ನಾಯಿ, ಆಟದ ನಾಯಿ ಹೀಗೆ ವಿವಿಧ ಉದ್ದೇಶಗಳಿಗೆ ಬಳಕೆಯಾಗುವ ನಾಯಿಗಳನ್ನು ಕರೆತಂದಿದ್ದ ಮಾಲೀಕರು,ಅವುಗಳನ್ನು ಪ್ರದರ್ಶಿಸುವ ಮೂಲಕ ಸಂತಸಪಟ್ಟರು.

    ಬೆಳಗ್ಗೆಯಿಂದಲೇ ಕೃಷಿ ಮಹಾವಿದ್ಯಾಲಯ ಮೈದಾನದತ್ತ ಮಕ್ಕಳು ಮತ್ತು ಕುಟುಂಬದವರೊಂದಿಗೆ ಜನರು ಆಗಮಿಸಿ ಶ್ವಾನಗಳನ್ನು ವೀಕ್ಷಿಸಿ ಖುಷಿಪಟ್ಟರು. ಪ್ರದರ್ಶನದ ಅಂಗವಾಗಿ ನಿರ್ಮಿಸಿದ್ದ ಮಳಿಗೆಗಳಲ್ಲಿ ನಾಯಿಯ ಪೌಷ್ಟಿಕ ಆಹಾರ, ಮತ್ತಿತರ ಸಾಧನಗಳ ಮಾಹಿತಿ ಪಡೆದುಕೊಂಡರು. ಪ್ರತಿಯೊಂದು ತಳಿಯ ವಿಶೇಷತೆ ಬಗ್ಗೆ ವಿಜ್ಞಾನಿ ಡಾ.ಸಂಗೀತಾ ಜಾಧವ ಹಾಗೂ ಪಶುವೈದ್ಯಾಧಿಕಾರಿ ಡಾ.ರಮೇಶ ರಾಠೋಡ ಮಾಹಿತಿ ನೀಡಿದರು.

    ಪ್ರದರ್ಶನದಲ್ಲಿ 25 ವಿವಿಧ ತಳಿಯ ಶ್ವಾನಗಳು ಬಂದಿದ್ದವು. ಮಧ್ಯಾಹ್ನ 1 ಗಂಟೆಗೆ ಮುಗಿಯಬೇಕಿದ್ದ ಶ್ವಾನ ಪ್ರದರ್ಶನ 3ಗಂಟೆಗೆ ಮುಗಿಯಿತು. ಅಷ್ಟೊಂದು ಜನ ವೀಕ್ಷಣೆಗೆ ಆಗಮಿಸಿದ್ದರು. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
    ಡಾ.ಸಂಗೀತಾ ಜಾಧವ, ವಿಜ್ಞಾನಿ
    ಕೃಷಿ ಸಂಶೋಧನಾ ಕೇಂದ್ರ, ವಿಜಯಪುರ

    ಕಡಿಮೆ ಖರ್ಚಿನಲ್ಲಿ ಶೆಡ್ !
    ಕಡಿಮೆ ಖರ್ಚಿನಲ್ಲಿ ರೈತರು ಹೊಲಗಳಲ್ಲಿ ಶೆಡ್ ನಿರ್ಮಿಸಿಕೊಳ್ಳುವ ಬಗ್ಗೆ ರೈತ ಮುಖಂಡ ಕಲ್ಲಪ್ಪ ಕಡೆಚೂರ ಪ್ರಾತ್ಯಕ್ಷಿಕೆ ಮೂಲಕ ಗಮನ ಸೆಳೆದರು. 10×10 ಹಾಗೂ 10×20 ಜಾಗದಲ್ಲಿ ತಗಡಿನ ಶೆಡ್ ನಿರ್ಮಿಸಿಕೊಳ್ಳುವುದರ ಬಗ್ಗೆ ಕೃಷಿ ಮೇಳಕ್ಕೆ ಆಗಮಿಸಿದ್ದ ರೈತರಿಗೆ ಮಾಹಿತಿ ನೀಡಿದರು. 15 ಸಾವಿರ ರೂ. ಖರ್ಚಿನಲ್ಲಿ ತಗಡಿನ ಶೆಡ್ ನಿರ್ಮಿಸಿಕೊಳ್ಳುವ ವಿಧಾನದ ಬಗ್ಗೆ ಕಲ್ಲಪ್ಪ ರೈತರಿಗೆ ತಿಳಿಸಿದರು.

    ಕೃಷಿ ಪ್ರಯೋಗ ತಾಕುಗಳು
    ಕೃಷಿ ಮೇಳದ ಮತ್ತೊಂದು ವಿಶೇಷತೆ ಕೃಷಿ ಪ್ರಯೋಗ ತಾಕುಗಳ ನಿರ್ಮಾಣ. ಅದರಲ್ಲಿ ಎರೆಗೊಬ್ಬರ ತಯಾರಿಕೆಗೆ ಬೇಕಾದ ತ್ಯಾಜ್ಯ ವಸ್ತುಗಳ ಸಂಗ್ರಹ, ಎರೆಹುಳುಗಳ ಉತ್ಪತ್ತಿಗೆ ಬೇಕಾದ ಮಾಹಿತಿ, ಸಾವಯವ ಕೃಷಿ ಮಹತ್ವ, ಕೊಟ್ಟಿಗೆ ಗೊಬ್ಬರ ತಯಾರಿಕೆ, ಜೀವಾಮೃತ ತಯಾರಿಕೆ, ರಾಸಾಯನಿಕಮುಕ್ತ ತೋಟಗಾರಿಕೆ ಕೃಷಿ ಹೀಗೆ ಅನೇಕ ಕೃಷಿ ಪ್ರಯೋಗಗಳ ತಾಕುಗಳನ್ನು ನಿರ್ಮಿಸಲಾಗಿದ್ದು, ರೈತರು ಅವುಗಳಿಂದ ಪ್ರೇರಿತರಾದರು.

    ಕೃಷಿಮೇಳಕ್ಕೆ ತೆರೆ ಇಂದು
    ಜ.4ರಂದು ಪ್ರಾರಂಭಗೊಂಡ ಕೃಷಿಮೇಳ 6ರಂದು ತೆರೆಗೊಳ್ಳಲಿದೆ. ಬೆಳಗ್ಗೆ 9ರಿಂದ ಕುರಿ ಮತ್ತು ಆಡುಗಳ ಪ್ರದರ್ಶನ ಆಯೋಜಿಸಲಾಗಿದೆ. ಮಧ್ಯಾಹ್ನ 2 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಕೊಲ್ಹಾಪುರದ ಕನ್ಹೇರಿಮಠದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಎಸ್.ಬಿ.ಕಲಘಟಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಕೃಷಿ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಡಾ.ರಾಜೇಂದ್ರ ಸಣ್ಣಕ್ಕಿ, ಸುಶೀಲಕುಮಾರ ಬೆಳಗಲಿ, ಶಶಿಮೌಳಿ ಕುಲಕರ್ಣಿ, ಸುರೇಶ ಘೋಣಸಗಿ ಭಾಗವಹಿಸಲಿದ್ದಾರೆ. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts