More

    ಕಲಂ 371(ಜೆ) ಅಡಿ ನೇಮಕಾತಿಯ ಸಮಗ್ರ ತನಿಖೆಯಾಗಲಿ

    ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಕಲಂ 371 (ಜೆ) ಅಡಿಯಲ್ಲಿ ಮಾಡಿಕೊಳ್ಳಲಾದ ನೇಮಕ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದ್ದು ಸಮಗ್ರ ತನಿಖೆಗೆ ಆಗ್ರಹಿಸಿ ಪಾಲಿಕೆ ಮಾಜಿ ಸದಸ್ಯ ರಾಜಶೇಖರ ಮಗಿಮಠ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
    ವಿವಿ ಕುಲಪತಿ ಪ್ರೊ. ಸಬಿಹಾ ಭೂಮಿಗೌಡ, ಕುಲಸಚಿವೆ ಡಾ. ಆರ್. ಸುನಂದಮ್ಮ, ಪಿಎಂಇ ಬೋರ್ಡ್ ನಿರ್ದೇಶಕ ಪ್ರೊ. ಎ. ಖಾಜಿ, ನೇಮಕಾತಿ ಸಮಿತಿಯ ಸದಸ್ಯ ಸಂಚಾಲಕ ಪ್ರೊ. ಪಿ.ಜಿ. ತಡಸದ ಹಾಗೂ ನೇಮಕಾತಿ ಸಂಯೋಜಕ ಪ್ರೊ. ಓಂಕಾರಗೌಡ ಕಾಕಡೆ ಇವರ ಮೇಲೆ ದೂರು ಸಲ್ಲಿಸಲಾಗಿದೆ.

    ದೂರಿನ ವಿವರಣೆ

    ಮಹಿಳಾ ವಿಶ್ವವಿದ್ಯಾಲಯದಲ್ಲಿ 371 (ಜೆ) ಅಡಿಯಲ್ಲಿ ಬೋಧಕೇತರ ಸಿಬ್ಬಂದಿ ನೇಮಕಾತಿ ಮಾಡುವಾಗ ಅರ್ಹ ಪಜಾ/ಪಪಂ ಅಭ್ಯರ್ಥಿಗಳಿಗೆ ನೇಮಕಾತಿ ಮಾಡಿಕೊಳ್ಳದೇ ಅನ್ಯ ವರ್ಗಕ್ಕೆ ಆದ್ಯತೆ ನೀಡಲಾಗಿದೆ. ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ತಮ್ಮ ಮನಸ್ಸಿಗೆ ಬಂದಂತೆ ನೇಮಕ ಮಾಡಿಕೊಳ್ಳಲಾಗಿದೆ. ಸದರಿ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು ಈ ಬಗ್ಗೆ ತನಿಖೆಯಾಗಬೇಕಿದೆ. ಜತೆಗೆ ಅಕ್ರಮದಲ್ಲಿ ಭಾಗಿಯಾದ ಆರು ಜನರನ್ನೂ ಸೇವೆಯಿಂದ ಅಮಾನತ್ತು ಮಾಡಬೇಕೆಂದು ಮಗಿಮಠ ಮನವಿ ಮಾಡಿದ್ದಾರೆ.

    ಪ್ರಕರಣದ ಹಿನ್ನೆಲೆ

    ನೇಮಕಾತಿಯಲ್ಲಿ ಸಾಕಷ್ಟು ಅಕ್ರಮ ನಡೆದಿದೆ ಎಂಬುದು ಮಗಿಮಠ ಅವರ ಆರೋಪವಾಗಿದ್ದು ಅದಕ್ಕಾಗಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೂ ಮನವಿ ಸಲ್ಲಿಸಿದ್ದರು. ಎಸ್‌ಎಸಿ-ಎಸ್‌ಟಿಗೆ ಮೀಸಲಾದ ಹುದ್ದೆಗಳಿಗೆ ಸಾಮಾನ್ಯ ವರ್ಗದವರನ್ನು ಭರ್ತಿ ಮಾಡಿಕೊಂಡು ಕಾಯ್ದೆ ಉಲ್ಲಂಘಿಸಲಾಗಿದೆ. ಹೀಗಾಗಿ ಈ ಕೂಡಲೇ ತನಿಖೆ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.

    ನೇರ ನೇಮಕಾತಿ ಮಾಡುವಾಗ ಪ್ರತಿಯೊಂದು ಹುದ್ದೆ ಮುಂದೆ ಮೀಸಲಾತಿ ವರ್ಗೀಕರಿಸಿದ ಹುದ್ದೆಯನ್ನು ಆ ಹುದ್ದೆಯ ಮುಂದೆ ಮೀಸಲಾತಿ ಸ್ಪಷ್ಟವಾಗಿ ತೋರಿಸಿ ಆ ಪ್ರಕಾರವೇ ನೇಮಕಾತಿ ಅಧಿಸೂಚನೆ ಹೊರಡಿಸಬೇಕೆಂದು ಸ್ಪಷ್ಟ ನಿಯಮವಿದ್ದರೂ ಅದನ್ನು ಗಾಳಿಗೆ ತೂರಲಾಗಿದೆ. ನೇಮಕಾತಿ ಅಧಿಸೂಚನೆಯಲ್ಲಿ ಮೀಸಲಾತಿಯನ್ನು ಪ್ರತಿಯೊಂದು ಹುದ್ದೆಗಳ ಮುಂದೆ ತೋರಿಸದೇ ಒಟ್ಟಾಗಿ (ಪೋಲ್) ತೋರಿಸಿರುತ್ತಾರೆ. ನೇಮಕಾತಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವ ಹುದ್ದೆಗೆ ಯಾವ ಮೀಸಲಾತಿ ಅನ್ನುವುದು ತಿಳಿಯದ ಹಾಗೆ ಗೊಂದಲ ಸ್ಪಷ್ಟಿಸಿದ್ದಾರೆ ಎಂಬುದು ಮಗಿಮಠ ವಾದ.

    371ಜೆ ನೇಮಕಾತಿ ಅಧಿಸೂಚನೆಯಲ್ಲಿ ಹೊರಡಿಸಿರುವ ಮೀಸಲಾತಿಯೇ ಬೇರೆ, ನೇಮಕಾತಿಯಲ್ಲಿ ಆಯ್ಕೆಗೊಂಡಿರುವ ಅಭ್ಯರ್ಥಿಗಳ ಮೀಸಲಾತಿಯೇ ಬೇರೆ. ಸಿ ಮತ್ತು ಡಿ ವರ್ಗದ ಹುದ್ದೆಗಳಿಗೆ ಪರೀಕ್ಷೆಯಲ್ಲಿ ತೆಗೆದುಕೊಂಡ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡದೇ ತಮಗೆ ಬೇಕಾದವರನ್ನು ನೇಮಕಾತಿ ಮಾಡಿಕೊಳ್ಳುವ ದುರುದ್ದೇಶದಿಂದ ಸಂದರ್ಶನ ನಡೆಸಿ, ಅನರ್ಹರಿಗೆ ಹೆಚ್ಚಿನ ಅಂಕ ನೀಡಿ ಆಯ್ಕೆ ಮಾಡಲಾಗಿದೆ. ಬೋಧಕೇತರ ನೇಮಕಾತಿಯಲ್ಲಿ ಎಸ್‌ಸಿ-ಎಸ್‌ಟಿಗೆ ಮೀಸಲಿದ್ದ ಹುದ್ದೆಗಳನ್ನು ಬೇರೆ ಅಭ್ಯರ್ಥಿಗಳಿಗೆ ನೀಡಲಾಗಿದೆ ಎಂದು ಆರೋಪಿಸಿದ್ದರು. ಜತೆಗೆ ಸಹಾಯಕ ಕುಲಸಚಿವರ ಹುದ್ದೆ ಮತ್ತು ಇನ್ನಿತರ ಹುದ್ದೆಗಳ ನೇಮಕಾತಿಯಲ್ಲೂ ಇಂಥದ್ದೇ ಗೊಂದಲ ಎದ್ದು ಕಾಣುತ್ತಿದ್ದು ಸಮಗ್ರ ತನಿಖೆಗೆ ಒತ್ತಾಯಿಸಿದ್ದರು. ಮಗಿಮಠ ಅವರ ಆರೋಪವನ್ನು ಕುಲಪತಿ ಸಬಿಹಾ ಸಾರಾಸಗಟಾಗಿ ತಳ್ಳಿ ಹಾಕಿದ್ದರು.
    ಹೀಗಾಗಿ ಮಗಿಮಠ ಅವರು ಇದೀಗ ಲೋಕಾಯುಕ್ತಕ್ಕೆ ದೂರು ನೀಡಿದ್ದು ಪ್ರಕರಣ ಎಲ್ಲಿಗೆ ತಲುಪಲಿದೆ ಎಂಬುದನ್ನು ಕಾದು ನೋಡಬೇಕು.

    ಅಕ್ರಮ ನೇಮಕಾತಿಯಲ್ಲಿ ಭಾಗವಹಿಸಿದ ವಿಶ್ವವಿದ್ಯಾಲಯದ ಅಧಿಕಾರಿಗಳನ್ನು ವಿಶ್ವವಿದ್ಯಾಲಯದ ಯಾವುದೇ ಉನ್ನತ ಹುದ್ದೆ ಅಥವಾ ಪ್ರಭಾರ ಹುದ್ದೆ ನೀಡಬಾರದು. ಹಾಗೊಂದು ವೇಳೆ ಪ್ರಭಾರ ಹುದ್ದೆ ನೀಡಿದಲ್ಲಿ ವಿಜಯಪುರ ಪ್ರಗತಿಪರ ಸಂಘಟನೆಗಳೊಂದಿಗೆ ಹೋರಾಟ ಮಾಡಲಾಗುವುದು.
    ರಾಜಶೇಖರ ಮಗಿಮಠ, ಪಾಲಿಕೆ ಮಾಜಿ ಸದಸ್ಯ (ಲೋಕಾಯುಕ್ತಕ್ಕೆ ದೂರು ನೀಡಿದವರು)

    ಕಲಂ 371(ಜೆ) ಅಡಿ ನೇಮಕಾತಿಯ ಸಮಗ್ರ ತನಿಖೆಯಾಗಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts