More

    ರೈತರ ಆದಾಯ ದ್ವಿಗುಣಗೊಳ್ಳಲಿ

    ವಿಜಯಪುರ: ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ನೀತಿಯನ್ವಯ ಕೃಷಿ ಹಾಗೂ ಸಂಬಂಧಿತ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಹಾಗೂ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ನಬಾರ್ಡ್ ಬ್ಯಾಂಕ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ವಿಕಾಸ ರಾಠೋಡ ಹೇಳಿದರು.

    ನಗರದ ಕೃಷಿ ಉಪ ನಿರ್ದೇಶಕರ-1 ಕಾರ್ಯಾಲಯದಲ್ಲಿ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಗುರುವಾರ ಹಮ್ಮಿಕೊಂಡಿದ್ದ ‘ ಮಹಿಳಾ ರೈತ ಆಸಕ್ತಿ ಗುಂಪುಗಳ ಸದಸ್ಯರಿಗಾಗಿ ರೈತ ಉತ್ಪಾದಕ ಸಂಸ್ಥೆ : ಅವಶ್ಯಕತೆ, ಸ್ಥಾಪನೆ ಹಾಗೂ ನಿರ್ವಹಣೆ’ ಕುರಿತು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ದೇಶದಲ್ಲಿ 10 ಸಾವಿರ ರೈತರದೇ ಆದ ರೈತ ಉತ್ಪಾದಕ ಸಂಸ್ಥೆ (ಎಫ್‌ಪಿಒ)ಗಳನ್ನು ಸ್ಥಾಪಿಸಲು ಹಲವಾರು ರೀತಿಯಲ್ಲಿ ಪ್ರೋತ್ಸಾಹ ನೀಡಲಾಗುತ್ತಿದೆ. ಅದರನ್ವಯ ನಬಾರ್ಡ್ ಬ್ಯಾಂಕ ಸಹ ರೈತ ಉತ್ಪಾದಕ ಸಂಸ್ಥೆಗಳನ್ನು ರಚಿಸುವಲ್ಲಿ ಮತ್ತು ಗ್ರಾಮೀಣ ಭಾಗಗಳಲ್ಲಿ ಸ್ವಸಹಾಯ ಹಾಗೂ ರೈತ ಆಸಕ್ತಿ ಗುಂಪುಗಳು ನೇರವಾಗಿ ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದಕ್ಕಾಗಿ ಗ್ರಾಮೀಣ ಮಾರುಕಟ್ಟೆಗಳನ್ನೂ ಸಹ ಆರಂಭಿಸಲು ಎಲ್ಲ ರೀತಿಯ ಸಹಾಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ರೈತರು ಸಂಘಟಿತರಾಗಿ ಈ ಎಲ್ಲ ಯೋಜನೆಗಳ ಪ್ರಯೋಜನ ಪಡೆದು ತಮ್ಮ ಆದಾಯ ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು.

    ಅಧ್ಯಕ್ಷತೆ ವಹಿಸಿದ್ದ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಡಾ. ರಾಜಶೇಖರ ವಿಲಿಯಮ್ಸ್ ಮಾತನಾಡಿ, ಕೇಂದ್ರ ಸರ್ಕಾರದ ಆತ್ಮ ನಿರ್ಭರ ಯೋಜನೆಯಡಿಯಲ್ಲಿ ಕೃಷಿ ಸಂಬಂಧಿತ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಹಾಗೂ ನೇರ ಮಾರಾಟ ವ್ಯವಸ್ಥೆ ಕಲ್ಪಿಸಲು ಕೃಷಿ ಹಾಗೂ ಸಂಬಂಧಿತ ಇಲಾಖೆಗಳಲ್ಲಿ ಸುಮಾರು ಒಂದು ಲಕ್ಷ ಕೋಟಿ ರೂಪಾಯಿಗಳ ಮೂಲ ಸೌಲಭ್ಯಗಳ ಅಭಿವೃದ್ಧಿ ನಿಧಿಯನ್ನು ಸ್ಥಾಪಿಸಿದ್ದು ಅದರ ಅಡಿಯಲ್ಲಿ ರೈತರಿಗೆ ಹಾಗೂ ರೈತರ ಸಂಘ ಸಂಸ್ಥೆಗಳಿಗೆ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತಿದೆ. ವಿಶೇಷವಾಗಿ ವಿಜಯಪುರ ಜಿಲ್ಲೆಯಲ್ಲಿ ‘ಒಂದು ಜಿಲ್ಲೆ ಒಂದು ಉತ್ಪನ್ನ’ ಯೋಜನೆಯಡಿಯಲ್ಲಿ ಲಿಂಬೆ ಬೆಳೆಯನ್ನು ಆಯ್ಕೆ ಮಾಡಿಕೊಂಡಿದ್ದು, ಲಿಂಬೆ ಹಣ್ಣಿನ ಸಂಸ್ಕರಣೆ, ಮೌಲ್ಯವರ್ಧನೆ ಹಾಗೂ ಮಾರಾಟ ವ್ಯವಸ್ಥೆ ಕಲ್ಪಿಸಲು ಸಹಾಯ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

    ಆತ್ಮ ಯೋಜನೆಯ ಉಪ ನಿರ್ದೇಶಕ ಡಾ. ಎಂ.ಬಿ. ಪಟ್ಟಣಶೆಟ್ಟಿ, ಕೃಷಿ ಉಪ ನಿರ್ದೇಶಕ ಚಂದ್ರಕಾಂತ ಪವಾರ, ಕೆ.ಎಸ್. ಅಗಸನಾಳ, ಸೀತಾ ದೊಡಮನಿ, ಸರೋಜಾ ಕವಲಾಪೂರ, ಮಹಾದೇವ ಅಂಬಲಿ, ಅರವಿಂದ ಕೊಪ್ಪ, ರಮಿಜಾ ನದಾ, ಮಧು ಪಾಟೀಲ, ಶರಣು ಉಕ್ಕಲಿ, ಅರವಿಂದ ಪಾಟೀಲ, ಮುದುಕು ಸಿಂದಗಿ ಇತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts