More

    ಲೋಕಲ್ ಫೈಟ್‌ಗೆ ಗುಮ್ಮಟನಗರಿ ಸಜ್ಜು !

    ವಿಜಯಪುರ: ಗ್ರಾಪಂ ಚುನಾವಣೆ ಘೋಷಣೆಗೆ ಮುನ್ನವೇ ಇತ್ತ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದ್ದರೆ ಅತ್ತ ಲೋಕಲ್ ಲೀಡರ್‌ಗಳು ಅಖಾಡ ಸಿದ್ಧಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ !
    ಈಗಾಗಲೇ ಮತದಾರರ ಪಟ್ಟಿ ಪರಿಷ್ಕರಣೆಯಾಗಿ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಆಕಾಂಕ್ಷಿಗಳು ಮತದಾರರ ಪಟ್ಟಿ ಹಿಡಿದುಕೊಂಡು ಮತಬೇಟೆಯ ಲೆಕ್ಕಾಚಾರ ಹಾಕುತ್ತಿದ್ದಾರೆ. ಇನ್ನೊಂದೆಡೆ ಸ್ಥಳೀಯ ಶಾಸಕರು ಮತ್ತು ಪಕ್ಷದ ಮುಖಂಡರನ್ನು ಭೇಟಿ ಮಾಡಿ ಬೆಂಬಲ ಕೇಳುತ್ತಿದ್ದಾರೆ. ಜಾತಿ, ಪಕ್ಷ, ಸಿದ್ಧಾಂತ ಹಾಗೂ ಶೈಕ್ಷಣಿಕ ಅರ್ಹತೆ ಆಧರಿಸಿ ಮತದಾರರನ್ನು ಹಿಡಿದಿಡುವ ತಂತ್ರಗಾರಿಕೆ ಆರಂಭಗೊಂಡಿದೆ.
    ಚುನಾವಣೆ ಯಾವಾಗ ಬೇಕಾದರೂ ಘೋಷಣೆಯಾಗಬಹುದಾದ ಹಿನ್ನೆಲೆ ಜಿಲ್ಲಾಡಳಿತ ಸಕಲ ಸನ್ನಾಹದಲ್ಲಿದೆ. ಈಗಾಗಲೇ ಪಂಚಾಯಿತಿಗಳ ವಿವರ, ವಾರ್ಡ್‌ಗಳ ಸಂಖ್ಯೆ, ಮೀಸಲಾತಿ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ, ಚುನಾವಣೆ ಅಧಿಕಾರಿಗಳ ನೇಮಕ, ಮತಪೆಟ್ಟಿಗೆ ವಿವರ, ಸಿಬ್ಬಂದಿಗೆ ತರಬೇತಿ, ಮಸ್ಟರಿಂಗ್-ಡಿಮಸ್ಟರಿಂಗ್ ಸ್ಥಳ ಗುರುತಿಸುವಿಕೆ, ಅನುದಾನದ ಅಗತ್ಯತೆ, ಪೊಲೀಸ್ ಬಂದೋಬಸ್ತ್, ಕರೊನಾ ಮುಂಜಾಗ್ರತೆ ಹೀಗೆ ಮುಂತಾದ ತಯಾರಿಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ.
    ಕರೊನಾ ಹಿನ್ನೆಲೆ ಎರಡು ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಸಲು ಈಗಾಗಲೇ ಚುನಾವಣೆ ಆಯೋಗಕ್ಕೆ ಮನವಿ ಮಾಡಿದೆ. ತಕ್ಷಣಕ್ಕೆ ಚುನಾವಣೆ ಘೋಷಣೆಯಾದರೂ ನಿಭಾಯಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಪೂರ್ವ ತಯಾರಿ ಮಾಡಿಕೊಂಡಿದೆ. ಇತ್ತ ರಾಜಕೀಯ ಪಕ್ಷಗಳು ತಮ್ಮ ಪಕ್ಷ ಬೆಂಬಲಿತರನ್ನು ಗುರುತಿಸಿ ಆರಿಸಿ ತರಲು ದಿನಕ್ಕೊಂದು ರೂಪುರೇಷೆ ಸಿದ್ಧಪಡಿಸುತ್ತಿವೆ. ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಅಖಾಡಕ್ಕಿಳಿದು ಪಕ್ಷದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ.

    ಪಂಚಾಯಿತಿಗಳ ವಿವರ

    ಜಿಲ್ಲೆಯಲ್ಲಿ 212 ಗ್ರಾಮ ಪಂಚಾಯಿತಿಗಳಿದ್ದು, ವಿವಿಧ ಕಾರಣಗಳಿಂದಾಗಿ 11 ಗ್ರಾಪಂಗಳಿಗೆ ಚುನಾವಣೆ ನಡೆಯುತ್ತಿಲ್ಲ. 12 ತಾಲೂಕುಗಳ 201 ಪಂಚಾಯಿತಿಗಳಿಗೆ ಮಾತ್ರ ಚುನಾವಣೆ ನಡೆಯುತ್ತಿದೆ. ಬಬಲೇಶ್ವರ, ಗಣಿ ಆರ್‌ಸಿ, ಯಲಗೂರ, ಬಳಬಟ್ಟಿ, ಅರಷಣಗಿ, ಸಿದ್ದನಾಥ ಆರ್.ಸಿ., ಚಾಂದಕವಟೆ, ಯರಗಲ್ ಬಿಕೆ, ಗುತ್ತರಗಿ, ಬಳಗಾನೂರ, ಇಂಗಳಗೇರಿ ಗ್ರಾಪಂಗಳಿಗೆ ಚುನಾವಣೆ ನಡೆಯುತ್ತಿಲ್ಲ. ಕಾರಣ ಕೆಲವು ಪಂಚಾಯಿತಿಗಳಿಗೆ ಇನ್ನೂ ಅವಧಿ ಮುಗಿದಿಲ್ಲ. ಇನ್ನೂ ಕೆಲವು ಪಂಚಾಯಿತಿಗಳು ನೂತನ ತಾಲೂಕು ರಚನೆಯಿಂದಾಗಿ ಪುನರ್ ವಿಂಗಡಣೆಯಾಗಿಲ್ಲ.

    ಚುನಾವಣೆ ಸಿಬ್ಬಂದಿ ನೇಮಕ

    201ಗ್ರಾಮ ಪಂಚಾಯಿತಿಗಳ ಚುನಾವಣೆಗೆ 224 ಚುನಾವಣೆ ಅಧಿಕಾರಿಗಳು ಹಾಗೂ 224 ಸಹಾಯಕ ಚುನಾವಣೆ ಅಧಿಕಾರಿಗಳನ್ನು ನೇಮಿಸಲಾಗಿದೆ. ಈಗಾಗಲೇ ಎಲ್ಲರಿಗೂ ತರಬೇತಿ ನೀಡಲಾಗಿದೆ. ವಿಜಯಪುರ-19, ಬಬಲೇಶ್ವರ-16, ತಿಕೋಟಾ-16, ಬ.ಬಾಗೇವಾಡಿ-17, ಕೊಲ್ಹಾರ-9, ನಿಡಗುಂದಿ-9, ಮುದ್ದೇಬಿಹಾಳ-22, ತಾಳಿಕೋಟೆ-16, ಇಂಡಿ-41, ಚಡಚಣ-15, ಸಿಂದಗಿ-28, ದೇ.ಹಿಪ್ಪರಗಿ-16 ಜನ ಚುನಾವಣೆ ಅಧಿಕಾರಿಗಳು ಹಾಗೂ ಸಹಾಯಕ ಚುನಾವಣೆ ಅಧಿಕಾರಿಗಳನ್ನು ನೇಮಿಸಲಾಗಿದೆ. 448 ಸಿಬ್ಬಂದಿಯನ್ನು ನೇಮಿಸಲಾಗಿದೆ.
    ಅಲ್ಲದೆ, 12336 ಸಿಬ್ಬಂದಿ ಮಾಹಿತಿ ತಯಾರಿಸಿಟ್ಟುಕೊಳ್ಳಲಾಗಿದೆ. 7668 ಸಿಬ್ಬಂದಿಯನ್ನು ಮತದಾನದ ದಿನದಂದು ಅವಶ್ಯಕತೆಗೆ ತಕ್ಕಂತೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಸಿಬ್ಬಂದಿ ಆಯಾ ಗ್ರಾಪಂ ವ್ಯಾಪ್ತಿ ನಾಮಪತ್ರ ಸ್ವೀಕಾರ ಹಾಗೂ ಪರಿಶೀಲನೆ ನಡೆಸಲಿದ್ದಾರೆ. ವಿದ್ಯುನ್ಮಾನ ಯಂತ್ರದ ಬದಲು ಮತಪತ್ರದ ಮೂಲಕ ಮತ ಚಲಾವಣೆಗೊಳ್ಳಲಿವೆ.

    ಮಸ್ಟರಿಂಗ್-ಡಿಮಸ್ಟರಿಂಗ್ ಕೇಂದ್ರಗಳ ವಿವರ

    ವಿಜಯಪುರದ ಡಿ.ಎನ್. ದರಬಾರ ಪ್ರೌಢಶಾಲೆ, ಬಬಲೇಶ್ವರದ ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆ, ತಿಕೋಟಾದ ಎ.ಬಿ. ಜತ್ತಿ ಪ್ರೌಢಶಾಲೆ ಹಾಗೂ ಪಪೂ ಕಾಲೇಜು, ಬ.ಬಾಗೇವಾಡಿಯ ಬಸವೇಶ್ವರ ಸರ್ಕಾರಿ ಪಪೂ ಕಾಲೇಜು, ಕೊಲ್ಹಾರದ ಸರ್ಕಾರಿ ಪ್ರೌಢಶಾಲೆ, ನಿಡಗುಂದಿಯ ಗ್ರಾ.ವಿ.ವಿ ಸಂಘದ ಸ್ವತಂತ್ರ ಪಪೂ ಕಾಲೇಜು, ಮುದ್ದೇಬಿಹಾಳದ ಎಂಜಿವಿಸಿ ಕಾಲೇಜು, ತಾಳಿಕೋಟೆ ಎಸ್.ಕೆ. ಪಪೂ ಕಾಲೇಜು, ಇಂಡಿ ಸರ್ಕಾರಿ ಆದರ್ಶ ಮಹಾವಿದ್ಯಾಲಯ ವಿದ್ಯಾಗಿರಿ, ಚಡಚಣದ ಮೋಹನ ಶಿಕ್ಷಣ ಸಂಸ್ಥೆ, ಸಿಂದಗಿಯ ಜಿ.ಪಿ. ಪೋರವಾಲ ಹಾಗೂ ಆರ್.ಡಿ. ಪಾಟೀಲ ಕಾಲೇಜು, ದೇ.ಹಿಪ್ಪರಗಿಯ ಎ.ಬಿ. ಸಾಲಕ್ಕಿ ಪಪೂ ಕಾಲೇಜಿನಲ್ಲಿ ಮಸ್ಟರಿಂಗ್ ಹಾಗೂ ಡಿ-ಮಸ್ಟರಿಂಗ್ ಕೇಂದ್ರ ಸ್ಥಾಪಿಸಲು ಸ್ಥಳ ನಿಗದಿಪಡಿಸಲಾಗಿದೆ.

    ಗ್ರಾಪಂ ಚುನಾವಣೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ತಕ್ಷಣಕ್ಕೆ ಚುನಾವಣೆ ಘೋಷಣೆಯಾದರೂ ಜಿಲ್ಲಾಡಳಿತ ಸಮರ್ಪಕವಾಗಿ ನಿಭಾಯಿಸಲು ಬೇಕಾದ ತಯಾರಿ ಮಾಡಿಕೊಂಡಿದೆ. ಭದ್ರತೆಗೆ ಅಗತ್ಯ ಪೊಲೀಸ್ ಸಿಬ್ಬಂದಿಯನ್ನೂ ಬಳಸಿಕೊಳ್ಳಲಾಗುತ್ತಿದೆ.
    ಪಿ.ಸುನೀಲಕುಮಾರ, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts