ವಿಜಯಪುರ: ಕರೊನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಘೋಷಿಸಿದ ‘ವೀಕೆಂಡ್ ಕರ್ಫ್ಯೂ’ಗೆ ಗುಮ್ಮಟ ನಗರಿಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಶನಿವಾರ ಬೆಳಗ್ಗೆಯಿಂದಲೇ ಜನರ ಓಡಾಟ ವಿರಳವಾಗಿತ್ತು. ಅಲ್ಲೊಂದು ಇಲ್ಲೊಂದು ಬೈಕ್ ಮತ್ತಿತರ ವಾಹನ ಸಂಚಾರ ಹೊರತುಪಡಿಸಿ ಬಹುತೇಕ ಸಂಚಾರ ವ್ಯವಸ್ಥೆ ಬಂದ್ ಆಗಿತ್ತು. ಬೆಳಗ್ಗೆ 6 ರಿಂದ 10ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತಾದರೂ ಅಷ್ಟಾಗಿ ಜನದಟ್ಟಣೆ ಕಂಡು ಬರಲಿಲ್ಲ.
ಹಾಲು, ತರಕಾರಿ, ಮೀನು ಮತ್ತು ಮಾಂಸ ಖರೀದಿ ಬಿಟ್ಟರೆ ಬೇರೆಲ್ಲ ವಹಿವಾಟು ಸ್ಥಗಿತಗೊಂಡಿತ್ತು. ವಾರಾಂತ್ಯದಲ್ಲಿ ನಿಷೇಧ ಹೇರಿರುವುದನ್ನು ಮನಗಂಡ ಜನ ಮುಂಚಿತವಾಗಿಯೇ ಅಗತ್ಯ ವಸ್ತುಗಳನ್ನು ಖರೀದಿಸಿಟ್ಟುಕೊಂಡಿದ್ದರಿಂದ ಶನಿವಾರ ಬೆಳಗ್ಗೆ ಅಷ್ಟಾಗಿ ಜನದಟ್ಟಣೆ ಉಂಟಾಗಲಿಲ್ಲ. ಖರೀದಿ ಭರಾಟೆಯೂ ಅಷ್ಟಕ್ಕಷೆ ಇತ್ತು.
ಮುಂಚಿತವಾಗಿಯೇ ಬಂದ್
ಬೆಳಗ್ಗೆ 9.30ರಿಂದಲೇ ಅಲ್ಲಲ್ಲಿ ಪೊಲೀಸರು ಅಗತ್ಯ ವಸ್ತುಗಳ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುತ್ತಿರುವುದು ಕಂಡು ಬಂತು. 10 ಗಂಟೆಗೆ ಎಲ್ಲವೂ ಸ್ತಬ್ಧವಾಯಿತು. ಪೆಟ್ರೋಲ್ ಬಂಕ್, ಔಷಧ ಮಳಿಗೆಗಳು ತೆರೆಯಲಾಗಿದ್ದರೂ ಜನರ ಓಡಾಟ ಮತ್ತು ವಹಿವಾಟು ಇಲ್ಲದ ಕಾರಣ ಬಿಕೋ ಎನ್ನುತ್ತಿದ್ದವು. ಆಸ್ಪತ್ರೆ ಪಕ್ಕದ ಔಷಧ ಅಂಗಡಿಗಳು ಮಾತ್ರ ಗಿರಾಕಿಗಳಿಂದ ತುಂಬಿ ತುಳುಕುತ್ತಿರುವುದು ಕಂಡು ಬಂತು.
ಮಧ್ಯಾಹ್ನ ಇಡೀ ನಗರ ನಿಶಬ್ದವಾಗಿತ್ತು. ಜನ ಸ್ವಯಂ ಪ್ರೇರಿತವಾಗಿ ಮನೆಯಲ್ಲೇ ಉಳಿದಿದ್ದು ಈ ಬಾರಿ ಲಾಕ್‌ಡೌನ್ ಅಗತ್ಯವನ್ನು ತಳ್ಳಿಹಾಕಿತು. ಅಲ್ಲಲ್ಲಿ ಕೆಲವರು ಓಡಾಡಿದ್ದು ಬಿಟ್ಟರೆ ಪ್ರಮುಖ ರಸ್ತೆಗಳೆಲ್ಲ ಬಿಕೋ ಎನ್ನುತ್ತಿದ್ದವು. ಸಂಜೆಯಷ್ಟೊತ್ತಿಗೆ ಪೊಲೀಸರು ಸಹ ನೆರಳಾಶ್ರಯಿಸಿದ್ದರು.
ಜನರಿಂದ ವ್ಯಾಪಕ ಸ್ಪಂದನೆ
ಕಳೆದ ವರ್ಷ ಲಾಕ್‌ಡೌನ್ ಕಟ್ಟುನಿಟ್ಟಿನ ಜಾರಿ ನಡುವೆಯೂ ಜನ ಮನೆ ಬಿಟ್ಟು ಬೀದಿಗಿಳಿಯುತ್ತಿದ್ದರು. ಪೊಲೀಸರ ದಂಡ, ಲಾಠಿ ಏಟಿಗೂ ಜಗ್ಗದೆ ರಸ್ತೆಗಿಳಿದಿದ್ದು ಕಂಡು ಬಂದಿತ್ತು. ಆದರೆ, ಈ ಬಾರಿ ಜನರೇ ಸ್ವಯಂ ಪ್ರೇರಿತವಾಗಿ ಲಾಕ್‌ಡೌನ್ ಹೇರಿಕೊಂಡಂತಿತ್ತು. ಯಾರೊಬ್ಬರೂ ಮನೆ ಬಿಟ್ಟು ಹೊರಗೆ ಬರಲು ಹಿಂದೇಟು ಹಾಕಿದ್ದು ಕರೊನಾ ಭಯ ಎಷ್ಟು ಆವರಿಸಿದೆ ಎಂಬುದರ ಸಂಕೇತವಾಗಿತ್ತು.
ಕಳೆದ ವರ್ಷ ಅಂಗಡಿ ಮುಂಗಟ್ಟುಗಳು ತೆರೆಮರೆಯಲ್ಲಿ ವಹಿವಾಟು ನಡೆಸುತ್ತಿದ್ದವು. ಕದ್ದು ಮುಚ್ಚಿ ಮದ್ಯ ಮಾರಾಟ ನಡೆಯುತ್ತಿತ್ತು. ಗುಟಕಾ ಮಾರಾಟ ಸಹ ಎಗ್ಗಿಲ್ಲದೆ ನಡೆದಿತ್ತು. ಆದರೆ, ಈ ಬಾರಿ ಅಂಥ ಯಾವುದೇ ಲಕ್ಷಣಗಳು ಗೋಚರಿಸದಿರುವುದು ಸಮಾಧಾನಕರ ಸಂಗತಿ.
ಅನಗತ್ಯ ಓಡಾಟಕ್ಕೆ ಬ್ರೇಕ್
ನಗರದ ಪ್ರಮುಖ ರಸ್ತೆಗಳಾದ ಗಾಂಧಿವೃತ್ತ, ಕೇಂದ್ರ ಬಸ್ ನಿಲ್ದಾಣ ಮುಂಭಾಗದಲ್ಲಿ ಒಂದು ಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಿ ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕಲಾಗಿತ್ತು. ಪೊಲೀಸರು ಪೆಟ್ರೊಲಿಂಗ್ ಕರ್ತವ್ಯ ನಿಭಾಯಿಸಿ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಯಾರಾದರೂ ಹೊರಗಡೆ ಕಂಡರೆ ವಿಚಾರಿಸಿ ಕಳುಹಿಸುತ್ತಿದ್ದರು.
ಗಾಂಧಿ ವೃತ್ತದಲ್ಲಿ ಒಂದು ಬದಿಯ ರಸ್ತೆಗೆ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಒಂದು ಕಡೆ ಪೊಲೀಸ್ ಅಧಿಕಾರಿಗಳು ಬರುತ್ತಿದ್ದ ವಾಹನಗಳನ್ನು ತಪಾಸಣೆ ನಡೆಸಿದರು. ಯಾವ ಕಾರಣಕ್ಕೆ ಹೊರಗೆ ಹೋಗುತ್ತಿದ್ದೀರಿ, ಈಗ ಕರ್ಫ್ಯೂ ಇದೆ, ಯಾರೂ ಹೊರಗಡೆ ಹೋಗುವ ಹಾಗಿಲ್ಲ ಎಂದು ಹೇಳಿ ಮರಳಿ ಕಳುಹಿಸುತ್ತಿದ್ದರು. ಕೆಲವು ಸ್ವಯಂಸೇವಕರು ಪೊಲೀಸರಿಗೆ, ಮಾಧ್ಯಮ ಪ್ರತಿನಿಧಿಗಳಿಗೆ ಉಚಿತವಾಗಿ ಮಾಸ್ಕ್ ವಿತರಿಸಿದರು.
ತರಕಾರಿ ವ್ಯಾಪಾರಸ್ಥರ ಆಕ್ರೋಶ
ಮಹಾನಗರ ಪಾಲಿಕೆ ಸಿಬ್ಬಂದಿ ತರಕಾರಿ ಮಾರುಕಟ್ಟೆಯನ್ನು ಹಕ್ಕಿಂ ಚೌಕ್‌ನಿಂದ ಕಸ್ತೂರಿ ಕಾಲನಿಯ ಕೋಟೆಗೋಡೆ ಬದಿಯ ಮೈದಾನಕ್ಕೆ ಸ್ಥಳಾಂತರಿಸಿದ್ದು ವ್ಯಾಪಾರಸ್ಥರ ಆಕ್ರೋಶಕ್ಕೆ ಕಾರಣವಾಯಿತು. ಸದರಿ ಮಾರುಕಟ್ಟೆ ಸ್ಥಳಾಂತರಿಸಿದ್ದು ಗ್ರಾಹಕರಿಗೆ ಗೊತ್ತೇ ಇಲ್ಲ. ಹೀಗಾಗಿ ಗ್ರಾಹಕರು ಬರುತ್ತಿಲ್ಲ. ವ್ಯಾಪಾರ ವಹಿವಾಟು ಕುಂಠಿತಗೊಂಡಿದೆ ಎಂದು ವ್ಯಾಪಾರಸ್ಥರು ಗೋಳಾಡಿದರು. ಇದೇ ವೇಳೆ ಮಾರುಕಟ್ಟೆ ಸ್ಥಳಾಂತರ ವಿಷಯ ಅರಿಯದೆ ಗ್ರಾಹಕರು ಪರದಾಡಿದ್ದು ಕಂಡು ಬಂತು.
ದೂರದೂರಿಗೆ ಪ್ರಯಾಣ
ಕೇಂದ್ರ ಬಸ್ ನಿಲ್ದಾಣದಲ್ಲಿ ದೂರದ ಪ್ರದೇಶಗಳಿಗೆ ಹೋಗುವ ಜನರ ಗುಂಪು ಕಂಡು ಬಂತು. ಕೆಲವು ಬಸ್‌ಗಳನ್ನು ಸಹ ದೂರದ ಪ್ರದೇಶಗಳಿಗೆ ಓಡಿಸಲಾಯಿತು. ಇದರಿಂದಾಗಿ ಬಸ್ ನಿಲ್ದಾಣದಲ್ಲಿ ಸಣ್ಣ ಪ್ರಮಾಣದಲ್ಲಿ ಜನರ ಗುಂಪು ಕಂಡು ಬಂತು. ಕೆಲವರು ತಮ್ಮ ಮಾರ್ಗಕ್ಕೆ ಬಸ್ ಸೌಲಭ್ಯ ಇಲ್ಲದ್ದಕ್ಕೆ ಪರ್ಯಾಯ ಮಾರ್ಗ ಬಳಸಿ ತೆರಳುತ್ತಿರುವುದು ಕಂಡು ಬಂತು. ಮದುವೆ ಮತ್ತು ಶವಸಂಸ್ಕಾರದಂಥ ಕಾರ್ಯಗಳಿಗೆ ಜನ ಖಾಸಗಿ ವಾಹನದಲ್ಲಿ ತೆರಳಿದ್ದು ಮತ್ತು ಪೊಲೀಸರು ಅವರನ್ನು ವಿಚಾರಿಸಿ ಬಿಡುತ್ತಿದ್ದ ಚಿತ್ರಣ ಕಂಡು ಬಂತು.