More

    ಜಾಗತಿಕವಾಗಿ ದೇಶದ ಹಿರಿಮೆ ಹೆಚ್ಚಿಸಲು ಶ್ರಮಿಸೋಣ

    ವಿಜಯಪುರ: ದೇಶದ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಹಾಗೂ ಪ್ರಜಾಸತ್ತಾತ್ಮಕ ಹಿರಿಮೆಯನ್ನು ಜಾಗತಿಕವಾಗಿ ಪ್ರಾಜ್ವಲ್ಯಮಾನ್ಯಗೊಳಿಸಲು ಪ್ರತಿಯೊಬ್ಬರೂ ಶ್ರಮಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
    ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿವಿ ಆವರಣದಲ್ಲಿ ಜಿಲ್ಲಾಡಳಿತದಿಂದ ಮಂಗಳವಾರ ಆಯೋಜಿಸಿದ್ದ 72ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
    ಪ್ರಧಾನಿ ನರೇಂದ್ರ ಮೋದಿಜಿ ಅವರ ಕನಸಿನ ಆತ್ಮನಿರ್ಭರ ಭಾರತ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ದಿವ್ಯ ಸಂಕಲ್ಪ ಮಾಡಬೇಕು. ಭಾವನಾತ್ಮಕ ಬೆಸುಗೆಯ ಮೂಲಕ ರಾಷ್ಟ್ರೀಯ ಭಾವೈಕ್ಯತೆಯನ್ನು ಮತ್ತಷ್ಟು ಗಟ್ಟಿಗೊಳಿಸಲು, ದೇಶದ ಸ್ವಾತಂತ್ರೃಕ್ಕಾಗಿ ತ್ಯಾಗ- ಬಲಿದಾನಗೈದ ಮಹಾನ್ ವ್ಯಕ್ತಿಗಳ ಕನಸುಗಳನ್ನು ಗೌರವಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾಯಾ-ವಾಚಾ-ಮನಸಾ ದುಡಿಯಬೇಕು. 21 ನೇ ಶತಮಾನದ ಬಲಿಷ್ಠ ಭಾರತ ನಿರ್ಮಾಣದ ನಿರೀಕ್ಷೆಯನ್ನು ನನಸು ಮಾಡುವ ನಿಟ್ಟಿನಲ್ಲಿ ಸಾಂಘಿಕವಾಗಿ ಶ್ರಮಿಸಬೇಕು. ಜಾತ್ಯತೀತ ಮೌಲ್ಯಗಳೊಂದಿಗೆ ಪ್ರಜಾಸತ್ತಾತ್ಮಕ ಗಣತಂತ್ರದ ಆದರ್ಶಗಳನ್ನು ಎತ್ತಿ ಹಿಡಿಯಬೇಕು ಎಂದರು.

    ಸಂವಿಧಾನದ ಶ್ರೇಷ್ಟತೆ

    ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಭಾರತೀಯ ಸಂವಿಧಾನ ವಿಶ್ವದಲ್ಲಿಯೇ ಅತ್ಯಂತ ಸುದೀರ್ಘವಾದ ಸಂವಿಧಾನವಾಗಿದೆ. ಕಾನೂನಿನ ಪ್ರಭುತ್ವ, ಕಾಯ್ದೆಯ ಆಳ್ವಿಕೆ, ನಮ್ಯತೆ- ನಿಷ್ಠುರತೆಗಳ ಅನನ್ಯ ಮಿಶ್ರಣ, ವ್ಯಕ್ತಿಗೆ ಪ್ರಾಮುಖ್ಯತೆ, ಕೇಂದ್ರಾಭಿಮುಖ ಬಲಿಷ್ಠ ಒಕ್ಕೂಟ ವ್ಯವಸ್ಥೆಗೆ ಮಹತ್ವ, ಸ್ವತಂತ್ರ್ಯ ನ್ಯಾಯಾಂಗ, ರಾಜ್ಯನಿರ್ದೇಶಕ ತತ್ವಗಳು, ಸಮಾನತೆ, ಮೂಲಭೂತ ಹಕ್ಕುಗಳು ಹೀಗೆ ಭಾರತೀಯ ಸಂವಿಧಾನದ ಈ ಎಲ್ಲ ಶ್ರೇಷ್ಠ ಆದರ್ಶಗಳು ವಿಶ್ವಕ್ಕೆ ಮಾದರಿಯಾಗಿವೆ ಎಂದರು.

    ಚಲನಶೀಲ ಸಂವಿಧಾನ

    ನಮ್ಮ ಘನ ಸಂವಿಧಾನ ನಿಂತ ನೀರಾಗದೇ ಚಲನಶೀಲತೆ ಹೊಂದಿದೆ. ಕಾಲಕಕ್ಕೆ ತಕ್ಕಂತೆ ಬದಲಾಗುತ್ತಿರುವ ಸಾಮಾಜಿಕ ಅವಶ್ಯಕತೆಗಳಿಗೆ ತಕ್ಕಂತೆ ಹಲವಾರು ತಿದ್ದುಪಡಿಗಳನ್ನು ಸಹ ಕಂಡಿದೆ. ಭಾಷೆ, ಧರ್ಮ, ಸಂಸ್ಕೃತಿ ಮತ್ತು ಭೌಗೋಳಿಕ ವೈವಿಧ್ಯತೆಗಳಿಂದಾಗಿ ವಿವಿಧತೆಯಲ್ಲಿ ಏಕತೆ ಸಾಧಿಸುತ್ತ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಜಗತ್ತಿನ ಬಲಾಢ್ಯ ರಾಷ್ಟ್ರಗಳ ಸಾಲಿನಲ್ಲಿ ಮುಂಚೂಣಿ ಸ್ಥಾನವನ್ನು ಅಲಂಕರಿಸಲು ಸರ್ವಶಕ್ತವಾಗಿರುವ ನಮ್ಮ ದೇಶವು ಸಂವಿಧಾನ ಮೌಲ್ಯಯುತ ಪರಂಪರೆಯನ್ನು, ಅಖಂಡತೆಯ ತತ್ವದಲ್ಲಿ ಪ್ರಬಲವಾದ ನಂಬಿಕೆಯನ್ನು ಹಾಗೂ ಜಾತ್ಯತೀತೆಯಲ್ಲಿ ಭವ್ಯತೆಯನ್ನು ಪಡೆದುಕೊಂಡಿದೆ ಎಂದು ಸಚಿವೆ ಜೊಲ್ಲೆ ವಿವರಿಸಿದರು.

    ಅಭಿವೃದ್ಧಿ ಹೆಜ್ಜೆ ಗುರುತು

    ತಮ್ಮ ಗಣರಾಜ್ಯೋತ್ಸವ ಸಂದೇಶದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾಮಗಾರಿ, ವಿವಿಧ ಇಲಾಖೆಯ ಪ್ರಗತಿಯ ಅಂಕಿ- ಅಂಶಗಳನ್ನು ಸಹ ಸಚಿವೆ ಜೊಲ್ಲೆ ವಿವರಿಸಿದರು.
    ನರೇಗಾ ಯೋಜನೆಯಡಿ ಶೇ. 100 ರಷ್ಟು ಸಾಧನೆ ಮಾಡಲಾಗಿದೆ. ಕರೊನಾ ಹಿನ್ನೆಲೆಯಲ್ಲಿ 53,537 ಕೂಲಿ ಕಾರ್ಮಿಕರು ಸ್ವಗ್ರಾಮಕ್ಕೆ ಆಗಮಿಸಿದ್ದು, ಆ ಪೈಕಿ 27421 ಕುಟುಂಬಗಳಿಗೆ ಹೊಸ ಉದ್ಯೋಗ ಚೀಟಿ ಒದಗಿಸಿ ವಿವಿಧ ರೀತಿಯ ಕಾಮಗಾರಿ ಹಂಚಿಕೆ ಮಾಡಲಾಗಿದೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 32834 ವೈಯಕ್ತಿಕ ಶೌಚಗೃಹ ನಿರ್ಮಾಣದ ಗುರಿ ಹೊಂದಲಾಗಿದ್ದು, ಈವರೆಗೆ 32,536 ಶೌಚಗೃಹಗಳನ್ನು ನಿರ್ಮಿಸಲಾಗಿದೆ. ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಕೈಗೊಂಡ 41 ಯೋಜನೆಗಳ ಪೈಕಿ 36 ಯೋಜನೆಗಳು ಪೂರ್ಣಗೊಂಡಿವೆ ಎಂದರು. ಅದೇ ತೆರನಾಗಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ 48.16 ಕೋಟಿ ರೂ. ಖರ್ಚು ಮಾಡಲಾಗಿದೆ. 60 ವರ್ಷ ಮೇಲ್ಪಟ್ಟ 1.54 ಲಕ್ಷ ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ವಿತರಿಸಲಾಗಿದೆ. 2020-21ನೇ ವರ್ಷದಲ್ಲಿ ಈವರೆಗೆ 385.40 ಕೋಟಿ ರೂ. ಆರ್ಥಿಕ ಪ್ರಗತಿಗೆ ಪೂರಕವಾಗಿ ಕಾಮಗಾರಿಗಳು ನಡೆದಿದ್ದು, ಬಳೂತಿ ಮುಖ್ಯಸ್ಥಾವರ, ಹನುಮಾಪುರ ಎರಡನೇಯ ಮುಖ್ಯ ಸ್ಥಾವರ, ತಿಡಗುಂದಿ ಶಾಖಾ ಕಾಲುವೆ ಸೇರಿದಂತೆ ಅನೇಕ ನೀರಾವರಿ ಯೋಜನೆಗಳು ಪೂರ್ಣಗೊಂಡಿದ್ದು, ಜಿಲ್ಲೆಯ ಬಹತೇಕ ಕೆರೆಗಳನ್ನು ಯಶಸ್ವಿಯಾಗಿ ತುಂಬಲಾಗಿದೆ ಎಂದು ಸಚಿವೆ ಜೊಲ್ಲೆ ಹರ್ಷ ವ್ಯಕ್ತಪಡಿಸಿದರು.
    ಶಾಸಕ ಬಸನಗೌಡ ಪಾಟೀಲ ಯತ್ನಾಳ, ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್, ಜಿಪಂ ಸಿಇಒ ಲಕ್ಷ್ಮಿಕಾಂತ ರೆಡ್ಡಿ, ಎಸ್‌ಪಿ ಅನುಪಮ ಅಗರವಾಲ್, ಎಡಿಸಿ ಡಾ. ಔದ್ರಾಮ, ತಹಸೀಲ್ದಾರ್ ಮೋಹನಕುಮಾರಿ, ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ, ಎಎಸ್‌ಪಿ ಡಾ. ರಾಮ ಅರಸಿದ್ಧಿ, ಡಿವೈಎಸ್‌ಪಿ ಕೆ.ಸಿ. ಲಕ್ಷ್ಮಿನಾರಾಯಣ ಮತ್ತಿತರರಿದ್ದರು.

    ಕರೊನಾ ಲಸಿಕೆ ಹಂಚಿಕೆ; ಶೇ. 66.15 ರಷ್ಟು ಗುರಿ ಸಾಧನೆ

    ಕರೊನಾ ನಿಯಂತ್ರಣಕ್ಕಾಗಿ ಜಿಲ್ಲೆಯ 5676 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವ ಗುರಿ ಪೈಕಿ ಒಟ್ಟು 3755 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದ್ದು, ಶೇ.66.15 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ಕರೊನಾ ಪ್ರಕರಣಗಳನ್ನು ಶೇ.98.19 ರ ಪ್ರಮಾಣದಲ್ಲಿ ಗುಣಪಡಿಸಿರುವ ಜಿಲ್ಲೆಯ ಸಮಸ್ತ ವೈದ್ಯರು ಹಾಗೂ ಸಿಬ್ಬಂದಿ ಪಾತ್ರ ಶ್ಲಾಘನೀಯ ಎಂದರು.ಕಳೆದ ವರ್ಷ ಸಂಭವಿಸಿದ ಭೀಕರ ಪ್ರವಾಹ ಹಾಗೂ ಅತಿವೃಷ್ಟಿಯಿಂದ ಕೃಷಿ ಹಾಗೂ ತೋಟಗಾರಿಕಾ ಬೆಳೆ ಹಾನಿ ಅನುಭವಿಸಿದ 1.59 ಲಕ್ಷ ರೈತರಿಗೆ 6 ಕಂತುಗಳಲ್ಲಿ 109 ಕೋಟಿ ರೂ. ಪರಿಹಾರ ಧನವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾವಣೆ ಮಾಡಲಾಗಿದೆ. ಪ್ರವಾಹದಿಂದ ಹಾನಿಗೀಡಾಗಿರುವ ಮೂಲಸೌಕರ್ಯಗಳ ಪುನರ್ ಸ್ಥಾಪನೆಗಾಗಿ 33 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ವಿವರಿಸಿದರು.
    ಅತಿವೃಷ್ಟಿ ಹಾಗೂ ನೆರೆಹಾವಳಿಯಿಂದ ಹಾಳಾಗಿರುವ ರಸ್ತೆ ಹಾಗೂ ಸೇತುವೆಗಳ ದುರಸ್ತಿಗಾಗಿ ಬಿಡುಗಡೆಗೊಂಡಿರುವ 27.61 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳಿಗೆ ಅನುಮೋದನೆ ದೊರಕಿದೆ. ಅದೇ ತೆರನಾಗಿ ನಿಯೋಜಿತ ವಿಮಾನ ನಿಲ್ದಾಣ ಕಾಮಗಾರಿಗಾಗಿ 220 ಕೋಟಿ ರೂ.ಗಳ ಅಂದಾಜು ಪತ್ರಿಕೆಗೆ ಸರ್ಕಾರದಿಂದ ಈಗಾಗಲೇ ಅನುಮೋದನೆ ದೊರಕಿದ್ದು, 95 ಕೋಟಿ ರೂ. ಮೊತ್ತದ ಕಾಮಗಾರಿಯನ್ನು ಈಗಾಗಲೇ ಮೆ.ಆಲೂರ ಅವರಿಗೆ ಟೆಂಡರ್ ಒದಗಿಸಲಾಗಿದೆ ಎಂದರು.

    ರಸ್ತೆ ಸುಧಾರಣೆಗೆ ಅಗತ್ಯ ಕ್ರಮ: ಸಚಿವೆ ಜೊಲ್ಲೆ

    ವಿಜಯಪುರ ನಗರದ ರಸ್ತೆಗಳ ಅವ್ಯವಸ್ಥೆ ನನ್ನ ಗಮನಕ್ಕೆ ಬಂದಿದ್ದು ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅಗತ್ಯ ಅನುದಾನ ಬಿಡುಗಡೆಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
    ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಗತ್ಯ ಅನುದಾನ ಬಿಡುಗಡೆ ಮಾಡಲು ಕೋರಿ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ, ಅಧಿವೇಶನ ಸಂದರ್ಭದಲ್ಲಿ ಮುಖ್ಯಮಂತ್ರಿಗಳೊಂದಿಗೆ ಈ ವಿಷಯವಾಗಿ ಚರ್ಚಿಸಿ ಅಗತ್ಯ ಅನುದಾನ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ವಿವರಿಸಿದರು.
    ಅಧಿವೇಶನ ಮುಗಿದ ನಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಮಾನ ನಿಲ್ದಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲು ಆಗಮಿಸಲಿದ್ದಾರೆ. ವಿಜಯಪುರ ಜಿಲ್ಲೆಯ ಪ್ರವಾಸೋದ್ಯಮ ಪ್ರಗತಿಗೂ ಆದ್ಯತೆ ನೀಡುವೆ ಎಂದರು.
    ಪ್ರವಾಹ ಪರಿಸ್ಥಿತಿ, ಕರೊನಾ ಹಾಗೂ ವೈಯಕ್ತಿಕವಾಗಿ ನಾನು ಸಹ ಕರೊನಾಗೆ ತುತ್ತಾದ ಕಾರಣದಿಂದಾಗಿ ಹೆಚ್ಚಿಗೆ ವಿಜಯಪುರ ಜಿಲ್ಲೆಗೆ ಭೇಟಿ ನೀಡಲು ಸಾಧ್ಯವಾಗಿಲ್ಲ, ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ. ಫೆಬ್ರವರಿಯಲ್ಲಿ ಸುದೀರ್ಘವಾಗಿ ಕೆಡಿಪಿ ಸಭೆ ನಡೆಸುವೆ ಎಂದರು.
    ಕರೊನಾ ಸಂಕಷ್ಟವನ್ನು ಕೇಂದ್ರ, ರಾಜ್ಯ ಸರ್ಕಾರಗಳು ಸಮರ್ಥವಾಗಿ ನಿರ್ವಹಿಸುವೆ. ಇದೀಗ ವ್ಯಾಕ್ಸಿನ್ ಕಂಡು ಹಿಡಿದು, ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ವಿತರಿಸಲಾಗಿದೆ. ಹಂತಹಂತವಾಗಿ ಪೊಲೀಸ್, ಕಂದಾಯ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗೆ ನೀಡಿ, ಸಾರ್ವಜನಿಕರಿಗೆ ವ್ಯಾಕ್ಸಿನ್ ನೀಡುವ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts