More

  ಫಲಪುಷ್ಪ ಪ್ರದರ್ಶನಕ್ಕೆ 2.80 ಲಕ್ಷಕ್ಕೂ ಅಧಿಕ ಮಂದಿ ಭೇಟಿ: ನಾಳೆ ತೆರೆ

  ಬೆಂಗಳೂರು: ಗಣರಾಜ್ಯೋತ್ಸವ ನಿಮಿತ್ತ ತೋಟಗಾರಿಕೆ ಇಲಾಖೆ ಲಾಲ್‌ಬಾಗ್‌ನಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಇದುವರೆಗೆ 2.80 ಲಕ್ಕಕ್ಕೂ ಅಧಿಕ ಮಂದಿ ಭೇಟಿ ನೀಡಿ ವೀಕ್ಷಿಸಿದ್ದಾರೆ. ಅಂದಾಜು 1.5 ಕೋಟಿ ರೂ.ಗೂ ಹೆಚ್ಚು ವಹಿವಾಟು ನಡೆದಿದೆ. ಭಾನುವಾರ ಫಲಪುಷ್ಪ ಪ್ರದರ್ಶನಕ್ಕೆ ತೆರೆ ಬೀಳಲಿದ್ದು, ವಾರಾಂತ್ಯ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆ ಇದೆ.

  ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಜ.18ರಂದು ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದ್ದರು. ಬಸವಣ್ಣ ಆದಿಯಾಗಿ ವಚನಕಾರರು ಸಮಾಜಕ್ಕೆ ನೀಡಿರುವ ಕೊಡುಗೆ, ಅನುಭವ ಮಂಟಪ ಮತ್ತು ವಚನ ಸಾಹಿತ್ಯದ ಹಿರಿಮೆಯನ್ನು ನಾಡಿನ ಜನರಿಗೆ ಪರಿಚಯಿಸುವುದು 215ನೇ ಫಲಪುಷ್ಪ ಪ್ರದರ್ಶನದ ವೈಶಿಷ್ಟ್ಯವಾಗಿದೆ. ಲಾಲ್‌ಬಾಗ್‌ನ ಗಾಜಿನಮನೆಯ ಕೇಂದ್ರ ಭಾಗದಲ್ಲಿ 34 ಅಡಿ ಅಗಲ ಮತ್ತು 30 ಅಡಿ ಎತ್ತರದ ಅನುಭವ ಮಂಟಪದ ಪುಷ್ಪಮಾದರಿ ಆಕರ್ಷಣೀಯವಾಗಿದೆ. ವಿವಿಧ ವರ್ಣಗಳ 1.5 ಲಕ್ಷ ಗುಲಾಬಿ, 1.55 ಲಕ್ಷ ಹಳದಿ, ಪಿಂಕ್ ಮತ್ತು ಶ್ವೇತವರ್ಣದ ಸೇವಂತಿಗೆ, 1.85 ಲಕ್ಷ ಗುಂಡುರಂಗು (ಗಾಂಫ್ರಿನಾ) ಹೂಗಳನ್ನು ಬಳಸಲಾಗಿದೆ. ನುರಿತ 30 ಪುಷ್ಪ ಪರಿಣಿತರ 15 ದಿನಗಳ ಕಾಲ ನಿರಂತರ ಶ್ರಮದಿಂದ ಅನುಭವ ಮಂಟಪ ನಿರ್ಮಾಣಗೊಂಡಿದೆ.

  ಗಾಜಿನಮನೆ ಹಿಂಬದಿಯ ಆವರಣದಲ್ಲಿ ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಹಡಪದ ಅಪ್ಪಣ್ಣ, ಕುಂಬಾರ ಗುಂಡಣ್ಣ, ಅಕ್ಕ ನಾಗಲಾಂಬಿಕೆ, ಮಡಿವಾಳ ಮಾಚಿದೇವ, ಸಮಗಾರ ಹರಳಯ್ಯ, ಬಾಚಿಕಾಯಕದ ಬಸವಣ್ಣ, ಶರಣೆ ಸತ್ಯಕ್ಕನವರ ಪ್ರತಿಮೆಗಳನ್ನು ನಿರ್ಮಿಸಲಾಗಿದೆ. ಜತೆಗೆ ಅನುಭವ ಮಂಟಪದ ನಾಲ್ಕು ಮೂಲೆಗಳಲ್ಲೂ ಬರುವಂತೆ ಅಲ್ಲಮಪ್ರಭು, ಸಿದ್ಧರಾಮ ಮತ್ತು ಚೆನ್ನಬಸವಣ್ಣ ಅವರ ಪ್ರತಿಮೆಗಳನ್ನು ಅನಾವರಣಗೊಳಿಸಲಾಗಿದೆ. ಗಾಜಿನಮನೆಯ ಕೇಂದ್ರಭಾಗದ ಎಡಬದಿಗೆ 1 ಲಕ್ಷ ಗಿಡಗಳಿಂದ ಆಕರ್ಷಕ ವರ್ಟಿಕಲ್ ಗಾರ್ಡನ್ ರೂಪುಗೊಂಡಿದ್ದು, ಅದರ ಮೇಲೆ ಬಸವಣ್ಣ ಅವರ ಸೃಷ್ಟಿ 18 ಅಡಿ ಉದ್ದದ, 3 ಅಡಿ ಎತ್ತರ ಹಾಗೂ 12 ಅಡಿ ಅಗಲವಿರುವ ಇಷ್ಟಲಿಂಗ ಪರಿಕಲ್ಪನೆಯ ಕಲಾಕೃತಿ ರೂಪಿಸಲಾಗಿದೆ.

  ಬಿಗ್​ಬಾಸ್​ ಫೈನಲ್​:​ ಕಿಚ್ಚ ಸುದೀಪ್​ ಮಾತಿಗೆ ವರ್ತೂರ್ ಸಂತೋಷ್​ ತಾಯಿ ಕಣ್ಣೀರು!

  ಬಸವಣ್ಣನ ಪಾತ್ರದಿಂದ ಬದಲಾವಣೆ:
  1983ರಲ್ಲಿ ‘ಕ್ರಾಂತಿಯೋಗಿ ಬಸವಣ್ಣ’ ಚಿತ್ರದಲ್ಲಿ ಬಸವಣ್ಣನ ಪಾತ್ರ ಮಾಡಬೇಕಾಗಿ ಬಂದಾಗ, ದೊಡ್ಡ ಕ್ರಾಂತಿಯೇ ನಡೆಯಿತು. ಆ ಅವಕಾಶ ಬಂದಾಗ ಅವರ ವ್ಯಕ್ತಿತ್ವದ ಪ್ರೇರಣೆಯಿಂದ ಚೆನ್ನಾಗಿ ನಟಿಸಿದೆ ಎಂದು ಹಿರಿಯ ನಟ ಅಶೋಕ್ ಹೇಳಿದ್ದಾರೆ. ಲಾಲ್‌ಬಾಗ್‌ನಲ್ಲಿ ಆಯೋಜಿಸಿದ್ದ ಗಿಡಗಳ ಪ್ರದರ್ಶನ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಅಂದಿನ ದಿನದಲ್ಲಿ ಸಿಕ್ಕ ಅವಕಾಶದಿಂದ ನನ್ನ ಜೀವನದಲ್ಲಿ ದೊಡ್ದ ಬದಲಾವಣೆ ಕಂಡೆ ಎಂದು ಸ್ಮರಿಸಿದರು. ಬಸವಣ್ಣನವರ ಪಾತ್ರ ಮಾಡಿದ ಮೇಲೆ ಚಲನಚಿತ್ರ ಕಾರ್ಮಿಕರ ಸಂಘದ ಚುಕ್ಕಾಣಿ ಹಿಡಿದು ಅವರ ಜೀವನದಲ್ಲಿ ಸಾಕಷ್ಟು ಬದಲಾವಣೆ ತಂದೆ. ಈ ಹಿನ್ನಲೆಯಲ್ಲಿ ಫಲಪುಷ್ಪ ಪ್ರದರ್ಶನ ಅಥವಾ ಚಲನಚಿತ್ರವಾಗಲಿ ಯಶಸ್ಸು ಕಾಣಲು ಕಾರ್ಮಿಕರ ಪಾತ್ರ ಬಹುಮುಖ್ಯ. ಈ ಮಿಡಿತವನ್ನು ಬಸವಣ್ಣನವರ ಜೀವನದಿಂದ ಪಡೆದಿದ್ದೇನೆ ಎಂದರು.

  ಬಹುಮಾನ ವಿತರಣೆ:
  ಫಲಪುಷ್ಪ ಪ್ರದರ್ಶನದಲ್ಲಿ ಗಾಜಿನ ಮನೆಯ ಪ್ರದರ್ಶಿಕೆಗಳು, ತೋಟಗಳ ಸ್ಪರ್ಧೆಗಳು, ಇಕೆಬಾನ, ಪುಷ್ಪ ಭಾರತಿ, ಪುಷ್ಪ ರಂಗೋಲಿ, ತರಕಾರಿ ಕೆತ್ತನೆ, ಡಚ್ ಹೂವಿನ ಜೋಡಣೆ, ಒಣ ಹೂವಿನ ಜೋಡಣೆ, ಥಾಯ್ ಆರ್ಟ್, ಜಾನ್ರೂ ಬೋನ್ಸಾಯ್ ಗಿಡಗಳ ಪ್ರದರ್ಶನ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

  ಫಲಪುಪ್ಪ ಪ್ರದರ್ಶನದಲ್ಲಿ ಜಗದ್ಗುರು ಬಸವಣ್ಣನವರ ಜೀವನ ಹಾಗೂ ವಚನ ಸಾಹಿತ್ಯದಲ್ಲಿ ಅವರು ನೀಡಿರುವ ಕೊಡುಗೆ ಬಗ್ಗೆ ಸಾರ್ವಜನಿಕರಿಗೆ ತಿಳಿಸುವ ಕೆಲಸವನ್ನು ತೋಟಗಾರಿಕೆ ಇಲಾಖೆ ಮಾಡಿರುವುದು ಶ್ಲಾಘನೀಯ. ಲಕ್ಷೋಪಲಕ್ಷ ಜನರು ಭೇಟಿ ನೀಡಿ ಬಸವಣ್ಣನವರ ಜೀವನದ ಬಗ್ಗೆ ತಿಳಿದುಕೊಂಡಿದ್ದಾರೆ. ಇದು ನಮಗೆಲ್ಲರಿಗೂ ಸಾರ್ಥಕ ಸಂಗತಿ.
  | ಅರವಿಂದ ಜತ್ತಿ, ಬಸವ ಸಮಿತಿ ಅಧ್ಯಕ್ಷ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts