

ಬೆಂಗಳೂರು: ಭಾನುವಾರ (ಮಾರ್ಚ್ 17) ರಾಷ್ಟ್ರ ರಾಜಧಾನಿ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಎರಡನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಸ್ಮೃತಿ ಮಂದಾನ ನೇತೃತ್ವದ ಆರ್‌ಸಿಬಿ ತಂಡ ಭರ್ಜರಿ ಜಯ ದಾಖಲಿಸುವ ಮೂಲಕ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಈ ಗೆಲವು ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಹೊಸ ಇತಿಹಾಸ ಬರೆದಿದೆ.
ಆರ್‌ಸಿಬಿ ಅಭಿಮಾನಿಗಳ ಬಹುವರ್ಷಗಳ ಕನಸ್ಸನ್ನು ಆರ್‌ಸಿಬಿ ವನಿತೆಯರ ನನಸು ಮಾಡಿದ್ದು, ಸದ್ಯ ಈ ಗೆಲುವು ಫ್ಯಾನ್ಸ್ಗಳಲ್ಲಿ ಸಮಾಧಾನ ತಂದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಟ್ರೋಫಿ ಎತ್ತು ಸಂಭ್ರಮಿಸುತ್ತಿದ್ದಂತೆ ಆರ್‌ಸಿಬಿ ಅಭಿಮಾನಿಗಳಲ್ಲಿ ಹರ್ಷೋದ್ಘಾರ ಮನೆ ಮಾಡಿತು. ಇದರ ಬೆನ್ನಲ್ಲೇ ಈ ಬಾರಿಯ ಐಪಿಎಲ್ನಲ್ಲಿ ಪುರುಷರ ತಂಡವೂ ಗೆಲ್ಲುವುದು ಖಚಿತ ಎಂದೆಲ್ಲಾ ಹೇಳಲಾಗುತ್ತಿದೆ.
ಈ ಸಲ ಕಪ್ ನಮ್ದೇ ಎನ್ನುತ್ತಿರುವ ಆರ್‌ಸಿಬಿ ಫ್ಯಾನ್ಸ್, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಬೆಂಗಳೂರು ತಂಡ ಖಂಡಿತವಾಗಿ ಈ ಸಲ ಕಪ್ ಗೆಲ್ಲಲಿದೆ ಎಂದು ಭವಿಷ್ಯವಾಣಿ ನುಡಿಯುತ್ತಿದ್ದಾರೆ. ಆರ್‌ಸಿಬಿ ವುಮೆನ್ಸ್ ಟೀಮ್ ಗೆಲುವು ದಾಖಲಿಸುತ್ತಿದ್ದಂತೆ ಅಭಿನಂದನೆ ಟ್ವೀಟ್ ಮೂಲಕ ದಿಢೀರ್ ಪ್ರತ್ಯಕ್ಷವಾದ ಉದ್ಯಮಿ ವಿಜಯ್ ಮಲ್ಯ, ವನಿತೆಯರಿಗೆ ಶುಭಹಾರೈಸಿದ್ದಾರೆ.
"WPL ಗೆದ್ದ RCB ಮಹಿಳಾ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಆರ್‌ಸಿಬಿ ಪುರುಷರ ತಂಡವು ಸಹ ಐಪಿಎಲ್ ಪಟ್ಟ ಗೆದ್ದರೆ ಅದು ಡಬಲ್ ಗೆಲುವಾಗಿರುತ್ತದೆ. ಶುಭವಾಗಲಿ" ಎಂದು ವಿಜಯ್ ಮಲ್ಯ ಟ್ವೀಟ್ ಮಾಡಿ ಅಭಿನಂದನೆ ತಿಳಿಸಿದ್ದಾರೆ. ಈ ಟ್ವೀಟ್ ನೋಡುತ್ತಿದ್ದಂತೆ ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿರುವ ನೆಟ್ಟಿಗರು, ಹಾಸ್ಯಸ್ಪದವಾಗಿ ಕಮೆಂಟ್ ಮಾಡಿದ್ದಾರೆ.
"ಒಬ್ಬರು ಇಂದು ಭಾನುವಾರ ಬ್ಯಾಂಕ್ ರಜೆ" ಎಂದರೆ ಮತ್ತೊಬ್ಬರು, "ಒಂದು ಡೀಲ್ ಮಾಡಿಕೊಳ್ಳೋಣ, ಆರ್‌ಸಿಬಿ ಪುರಷರ ತಂಡ ಈ ಬಾರಿಯ ಐಪಿಎಲ್ ಗದ್ದರೆ ನೀವು ಭಾರತಕ್ಕೆ ಬರುತ್ತೀರಾ" ಎಂದು ಕಮೆಂಟ್ ಮಾಡಿದ್ದಾರೆ. ಸದ್ಯ ಇದೇ ರೀತಿಯಲ್ಲಿ ಭಾರೀ ಟ್ರೋಲ್ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.