More

    ಗೆಲುವು ಖುಷಿ ತಂದರೆ, ಸೋಲು ಅನುಭವ ನೀಡಿದೆ

    ಅರಕೇರಾ: ಶಾಸಕನಾಗಿದ್ದ ಸಮಯದಲ್ಲಿ ಸಾವಿರಾರು ಕೋಟಿ ರೂ. ಅನುದಾನ ತರುವ ಮೂಲಕ ಶಕ್ತಿ ಮೀರಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಜನಪರ ಕಾಳಜಿ ಜತೆ ಕಾರ್ಯಕರ್ತರ ಹಿತ ಕಾಯುವಲ್ಲಿ ಕಾರ್ಯ ನಿರ್ವಹಿಸಿದ್ದರೂ ವಿಧಾನಸಭೆ ಚುನಾವಣೆಯಲ್ಲಿ ಸೋಲಾಗಿದೆ ಎಂದು ಮಾಜಿ ಸಚಿವ ಕೆ.ಶಿವನಗೌಡ ನಾಯಕ ಹೇಳಿದರು.

    ಪಟ್ಟಣದ ಕೆ.ಎಚ್. ನಗರದ ಗೃಹ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ದೇವದುರ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದರು.

    ಇದನ್ನೂ ಓದಿ; ನಗರಸಭೆ ಚುನಾವಣೆ: ಬಿಜೆಪಿಯಲ್ಲಿ ಮುಗಿಯದ ಗೊಂದಲ

    ನನ್ನ ರಾಜಕೀಯ ಜೀವನದಲ್ಲಿ 7ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದು, 4 ಬಾರಿ ಗೆಲವು, 3 ಬಾರಿ ಸೋಲು ಕಂಡಿದ್ದೇನೆ. ಗೆಲುವು ಖುಷಿ ನೀಡಿದರೆ ಸೋಲು ಅನುಭವ ನೀಡಿದೆ. ಕ್ಷೇತ್ರದ ಅಭಿವೃದ್ಧಿ ಸಲುವಾಗಿ ನಮ್ಮ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಕಾಡಿ-ಬೇಡಿ ಅನುದಾನ ತಂದಿದ್ದೇನೆ. ಆದರೆ ಕ್ಷೇತ್ರದ ಜನರ ಮನ ಗೆಲ್ಲುವಲ್ಲಿ ಎಡವಿದ್ದು ನೋವುಂಟು ಮಾಡಿದೆ. ಕ್ಷೇತ್ರದ ಜನರ ತೀರ್ಪಿಗೆ ತಲೆಬಾಗುವೆ ಎಂದರು.

    ಕಾರ್ಯಕರ್ತರು ಧೃತಿಗೆಡಬೇಡಿ:

    ನಾವು ಘನತೆಗೆ ತಕ್ಕಂತೆ ರಾಜಕೀಯ ಮಾಡಿದವರು. ಕಾರ್ಯಕರ್ತರು ಧೃತಿಗೆಡದೆ ಪಕ್ಷ ಸಂಘಟನೆ ಮಾಡಿ, ಮುಂಬರುವ ತಾಪಂ, ಜಿಪಂ, ಲೋಕಸಭಾ ಚುನಾವಣೆಗಳಲ್ಲಿ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಅವರ ಗೆಲುವಿಗೆ ಶ್ರಮಿಸೋಣ. ಈಗಿನ ಸರ್ಕಾರ ಹಾಗೂ ನೂತನ ಜನಪ್ರತಿನಿಧಿಗಳು ಅದನ್ನು ಮುಂದುವರಿಸಿಕೊಂಡು ಹೋಗಲಿ ಎಂದು ಮಾಜಿ ಸಚಿವ ಕೆ.ಶಿವನಗೌಡ ನಾಯಕ ತಿಳಿಸಿದರು.

    ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಎಂ.ಪಾಟೀಲ್ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆ.ಶಿವನಗೌಡ ನಾಯಕ ಸೋತಿಲ್ಲ ಅಭಿವೃದ್ಧಿ ಸೋತಿದೆ ಎಂದರು.


    ಹಿರಿಯ ಮುಖಂಡ ಶ್ಯಾಮರಾವ್ ಕುಲಕರ್ಣಿ ಮಾತನಾಡಿ, ಕ್ಷೇತ್ರದ ಪ್ರತಿ ಹಳ್ಳಿಯಲ್ಲೂ ದೇಗುಲಗಳು, ಶಾಲೆಗಳು, ರಸ್ತೆಗಳ ನಿರ್ಮಾಣ ಹೀಗೆ ಹಲವು ಜನಪರ ಕಾರ್ಯಗಳನ್ನು ಮಾಡಿದ್ದಾರೆ. ಐಟಿಐ, ಡಿಪ್ಲೊಮಾ, ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜು ಮಂಜೂರು ಮಾಡಿಸಿದ ಕೀರ್ತಿ ಶಿವನಗೌಡಗೆ ಸಲ್ಲುತ್ತದೆ ಎಂದರು.


    ಪ್ರಮುಖರಾದ ಮಲ್ಲಿಕಾರ್ಜುನ ಪಾಟೀಲ ಅಂಚೆಸುಗೂರು, ಗೋಪಾಲಪ್ಪ ಗೌಡ ಚಿಂತಲಕುಂಟ, ಡಾ.ಎಚ್.ಎ.ನಾಡಗೌಡ, ಶರಣಗೌಡ ಬಿ.ಗಣೇಕಲ್, ಆರ್.ಎಸ್.ಪಾಟೀಲ್, ಅಮರೇಶ ಬಲ್ಲಿದವ್, ಶರಣಪ್ಪ ಕೊರವಿ ಗಬ್ಬೂರು ಇತರರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts