More

    ಬಂಗಾರದ ಬೆಲೆ ಏರಿಕೆ ‘ಕಾರ್ಮಿಕರಲ್ಲಿ ಸಂತಸ’

    ಹಟ್ಟಿಚಿನ್ನದಗಣಿ: ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ತೀವ್ರವಾಗಿ ಏರಿಕೆಯಾಗುತ್ತಿದೆ. ಭಾರತದಲ್ಲಿ 10 ಗ್ರಾಂ ಹಳದಿ ಲೋಹ 70 ಸಾವಿರ ರೂ. ಗಡಿ ದಾಟಿರುವುದು ಹಟ್ಟಿಚಿನ್ನದಗಣಿ ಕಂಪನಿ ಆಡಳಿತ, ಸಿಬ್ಬಂದಿ ಹಾಗೂ ಕಾರ್ಮಿಕರಲ್ಲಿ ಹರ್ಷ ಮೂಡಿಸಿದೆ.

    ಹಟ್ಟಿಚಿನ್ನದಗಣಿ ಕಂಪನಿ ಉತ್ಪಾದಿಸುವ 24 ಕ್ಯಾರಟ್ ಚಿನ್ನದ ದರ ಮಾರುಕಟ್ಟೆಯಲ್ಲಿ 72 ಸಾವಿರ ರೂ. ಬೆಲೆಯಲ್ಲಿ ಸ್ವಲ್ಪ ಏರಿಳಿತವಾದರೂ ತಿಂಗಳಿಗೆ ಸರಾಸರಿ 65 ರಿಂದ 70 ಕೆ.ಜಿ ಚಿನ್ನ ಉತ್ಪಾದಿಸಿದರೆ ಅಧಿಕ ಲಾಭ ಗಳಿಸಬಹುದೆಂಬ ಹುಮ್ಮಸ್ಸು ಮೂಡಿದೆ. ಕಳೆದ ವರ್ಷದ ಲಾಭಕ್ಕೆ ಕಡಿಮೆಯಾಗದಂತೆ ಗಣಿಯ ಕಾರ್ಯಕ್ಷಮತೆ ಹೆಚ್ಚಿಸುವತ್ತ ಆಡಳಿತ ವರ್ಗ ಹೆಜ್ಜೆ ಇಟ್ಟಿದೆ.

    2023ರ ಏಪ್ರಿಲ್‌ನಿಂದ 2024ರ ಡಿಸೆಂಬರ್‌ವರೆಗೆ 1192 ಕೆ.ಜಿ ಚಿನ್ನ ಉತ್ಪಾದನೆ ಗುರಿ ಹೊಂದಿದ್ದು, 926.198 ಕೆ.ಜಿ ಚಿನ್ನ ಹೊರ ತೆಗೆಯಲಾಗಿದೆ. ಉತ್ಪಾದನೆಯಲ್ಲಿ 266 ಕೆ.ಜಿ ಹಿನ್ನಡೆಯಾಗಿದ್ದರೂ ದರ ಹೆಚ್ಚಳ ಕಂಪನಿಯನ್ನು ನಿರಾಳವಾಗಿಸಿದೆ. ಪ್ರತಿ ಟನ್ ಅದಿರಿನಲ್ಲಿ 2.81 ಗ್ರಾಂ ಉತ್ಪಾದನೆ ಗುರಿ ಹೊಂದಲಾಗಿದೆ. ಹಟ್ಟಿ, ದೇವದುರ್ಗ ತಾಲೂಕಿನ ಊಟಿ ಹಾಗೂ ಸಿರವಾರ ತಾಲೂಕಿನ ಹೀರಾ-ಬುದ್ಧಿನ್ನಿ ಗಣಿಯಿಂದ ಟನ್‌ಗೆ ಸರಾಸರಿಯಾಗಿ 2.63 ಗ್ರಾಂ. ಹಳದಿ ಲೋಹ ತೆಗೆಯಲಾಗುತ್ತಿದೆ.

    ಗಣಿ ಕಂಪನಿ 2021-22 ನೇ ಆರ್ಥಿಕ ಸಾಲಿನಲ್ಲಿ 180 ಕೋಟಿ ಲಾಭ ಗಳಿಸಿತ್ತು. ಈ ಪೈಕಿ 130 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. 2022-23 ನೇ ಸಾಲಿನಲ್ಲಿ 150 ಕೋಟಿ ರೂ. ಲಾಭ ಗಳಿಸಿತ್ತು. ಚಿನ್ನದ ದರ ಹೀಗೆ ಮುಂದುವರಿದರೆ ಕಳೆದ ಬಾರಿಗಿಂತ ಹೆಚ್ಚಿನ ಲಾಭ ಗಳಿಕೆಯ ನಿರೀಕ್ಷೆ ಕಂಪನಿಯದಾಗಿದೆ.

    ಕಳೆದ ನಾಲ್ಕು ವರ್ಷಗಳಿಂದ ಹೊಸ ವೇತನ ಒಪ್ಪಂದ ನಿರೀಕ್ಷೆಯಲ್ಲಿರುವ ಸಿಬ್ಬಂದಿ ಹಾಗೂ ಕಾರ್ಮಿಕರಿಗೆ ಚಿನ್ನದ ದರ ಏರಿಕೆ ಹೆಚ್ಚಿನ ನಿರೀಕ್ಷೆ ಹುಟ್ಟಿಸಿದೆ. ವೇತನದೊಂದಿಗೆ ಉತ್ತಮ ಬೋನಸ್ ಹಾಗೂ ಇತರ ಸೌಲಭ್ಯಗಳ ನಿರೀಕ್ಷೆಯಲ್ಲಿ ಕಾರ್ಮಿಕರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts