More

    ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಒಗ್ಗಟ್ಟಿನ ಹೋರಾಟ

    ಅರಸೀಕೆರೆ: ಮೈತ್ರಿ ಅಭ್ಯರ್ಥಿ ಗೆಲುವಿಗೆ ಒಗ್ಗಟ್ಟಿನ ಹೋರಾಟ ನಡೆಸಲಾಗುವುದು ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು.

    ದೇಶವನ್ನು ಸಮರ್ಥವಾಗಿ ಮುನ್ನಡೆಸುವ ಜಾಣ್ಮೆ ಹಾಗೂ ಸಾಮರ್ಥ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗಿದೆ ಎನ್ನುವ ಕಾರಣದಿಂದಲೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಎನ್‌ಡಿಎ ಬೆಂಬಲಿಸಲು ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ನಮ್ಮ ಮೈತ್ರಿಗೆ ಗೆಲುವು ಲಭಿಸಲಿದೆ. ಸಂಸದರಾಗಿ ಕಳೆದ ಐದು ವರ್ಷದಿಂದ ಜನಪರ ಕೆಲಸ ಮಾಡಿಕೊಂಡು ಬಂದಿರುವ ಪ್ರಜ್ವಲ್ ರೇವಣ್ಣ ಜೆಡಿಎಸ್, ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಕಳಣಕ್ಕಿಳಿಯಲಿದ್ದಾರೆ. ಉಭಯ ಪಕ್ಷಗಳ ಮುಖಂಡರು ಚುನಾವಣಾ ರೂಪುರೇಷೆಗಳ ಕುರಿತು ಚರ್ಚಿಸಿ ಒಟ್ಟಾಗಿ ಪ್ರಚಾರ ನಡೆಸಲಿದ್ದು, ಎನ್‌ಡಿಎ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಮೂರು ಬಾರಿ ಜೆಡಿಎಸ್ ಟಿಕೆಟ್ ಪಡೆದು ಶಾಸಕರಾಗಿದ್ದವರು ಇದೀಗ ಜಿಲ್ಲೆಯನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ಹಿಡಿತದಿಂದ ಬಿಡಿಸುವ ಕುರಿತು ಮಾತನಾಡುತ್ತಿದ್ದು, ದೇವರು ಅವರಿಗೆ ಒಳ್ಳೆಯದು ಮಾಡಲಿ. ಸೋತು ಮನೆಯಲ್ಲಿದ್ದ ವ್ಯಕ್ತಿಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಯಾವ ರೀತಿ ಸಹಾಯ ಮಾಡಿದ್ದಾರೆ ಎಂಬುದನ್ನು ಸ್ಮರಿಸಿಕೊಳ್ಳಬೇಕು. ಎಚ್.ಡಿ.ದೇವೇಗೌಡರ ಆರೋಗ್ಯ ವಿಚಾರಿಸಲು ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಬಂದಿದ್ದರು. ಆದರೆ ನಮ್ಮಿಂದ ಬೆಳೆದ ವ್ಯಕ್ತಿ ಮನೆಗೆ ಬಂದು ನೋಡುವ ಸೌಜನ್ಯ ತೋರಲಿಲ್ಲ. ಎಲ್ಲವನ್ನೂ ಜೇನುಕಲ್ ಸಿದ್ದೇಶ್ವರನಿಗೆ ಬಿಡುತ್ತೇನೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

    ಜೆಡಿಎಸ್ ಚಿಹ್ನೆಯಡಿ ಸ್ಪರ್ಧಿಸಿ ಗೆಲುವು ಸಾಧಿಸಿರುವ ನಗರಸಭೆ ಕೆಲ ಸದಸ್ಯರು ಪಕ್ಷದ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಯಾವ ಕಾರಣಕ್ಕೆ, ಯಾರು ಭಯಪಡಿಸಿದ್ದಾರೋ ನನಗೆ ಗೊತ್ತಿಲ್ಲ. ತಾಲೂಕಿಗೆ ಮತ್ತೊಮ್ಮೆ ಭೇಟಿ ನೀಡಿದ ವೇಳೆ ಎಲ್ಲರನ್ನೂ ಕರೆದು ಮಾತನಾಡಿಸಿ ಸಮಸ್ಯೆ ಸರಿಪಡಿಸಲಾಗುವುದು. ಏಳು ಸದಸ್ಯರ ಸದಸ್ಯತ್ವ ತೆಗೆಯಲು ಕೆಲವರು ಪಣ ತೊಟ್ಟಿದ್ದನ್ನು ತಿಳಿಯದೇ ನಾನೂ ಕೂಡ ಸಹಮತ ವ್ಯಕ್ತಪಡಿಸಿದ್ದು, ಬೇಸರ ತರಿಸಿದೆ ಎಂದು ಹೇಳಿದರು.

    ಹೇಮಾವತಿ ನದಿ ಮೂಲದಿಂದ ನಗರ ಹಾಗೂ ಗ್ರಾಮೀಣ ಪ್ರದೇಶಕ್ಕೆ ಕುಡಿಯುವ ನೀರು, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ವಿದ್ಯುತ್ ವಿತರಣಾ ಉಪಕೇಂದ್ರ, ಸರ್ಕಾರಿ ಪ್ರೌಢಶಾಲೆ, ಪದವಿ ಪೂರ್ವ, ಪದವಿ ಕಾಲೇಜು, ಹಾಲಿನ ಡೇರಿ, ಸಹಸ್ರಾರು ರೈತರಿಗೆ ಐದು ಸಾವಿರ ರೂ.ಗಳಿಗೆ ವಿದ್ಯುತ್ ಪರಿವರ್ತಕ ವಿತರಣೆ, ತೆಂಗು ಬೆಳೆ ನಷ್ಟ ಪರಿಹಾರ ಕೊಡಿಸಿರುವುದು ಸೇರಿದಂತೆ ನಾವು ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟು ಮತಯಾಚನೆ ಮಾಡಲಿದ್ದೇವೆ. ಸರ್ಕಾರ ಬಂದು ಹತ್ತು ತಿಂಗಳು ಕಳೆದರೂ ಅಭಿವೃದ್ಧಿಗೆ ಬಿಡಿಗಾಸು ಅನುದಾನ ನೀಡದ ಕಾಂಗ್ರೆಸ್ ಮುಖಂಡರಿಗೆ ಮತದಾರರ ಬಳಿ ತೆರಳಿ ಮತಯಾಚನೆ ಮಾಡುವ ನೈತಿಕ ಹಕ್ಕಿದೆಯೇ ಎಂದು ಎಚ್.ಡಿ.ರೇವಣ್ಣ ಕಿಡಿಕಾರಿದರು.

    ಮುಖಂಡರಾದ ಎನ್.ಆರ್.ಸಂತೋಷ್, ಹೊಸೂರು ಗಂಗಾಧರ್, ಜಿಪಂ ಮಾಜಿ ಸದಸ್ಯ ಬಾಣಾವರ ಅಶೋಕ್, ಕೆಂಕೆರೆ ಕೇಶವಮೂರ್ತಿ, ಕುಡುಕುಂದಿ ಕುಮಾರ್, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸಯ್ಯದ್ ಸಿಕಂದರ್, ನಗರಸಭೆ ಸದಸ್ಯ ಜಾಕೀರ್ ಹುಸೇನ್, ಹರ್ಷವರ್ಧನ್‌ರಾಜ್, ಪುಟ್ಟಸ್ವಾಮಿ, ಬಿ.ಜಿ.ನಿರಂಜನ್, ರಮೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಮಂಜುನಾಥ್, ಗಣೇಶ್, ರವಿ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts