More

    ಆರಾಧ್ಯ ದೈವ ಕರಿಯಮ್ಮ, ಮಲ್ಲಿಗೆಮ್ಮ

    ಶೇಖರ್ ಸಂಕೋಡನಹಳ್ಳಿ ಅರಸೀಕೆರೆ
    ಭಕ್ತರ ಇಷ್ಟಾರ್ಥ ಕರುಣಿಸುವ ಗ್ರಾಮದೇವತೆ ಶ್ರೀಕರಿಯಮ್ಮ ಹಾಗೂ ಮಲ್ಲಿಗೆಮ್ಮ ದೇವಿಯರು ಅರಸೀಕೆರೆ ನಗರ ನಿವಾಸಿಗಳ ಆರಾಧ್ಯದೈವವಾಗಿವೆ. ಐದಾರು ಶತಮಾನಗಳ ಇತಿಹಾಸ ಹೊಂದಿರುವ ಧಾರ್ಮಿಕ ಸುಕ್ಷೇತ್ರವೆಂದೇ ಕ್ಷೇತ್ರ ಚಿರಪರಿಚಿತವಾಗಿದ್ದು, ಆಧ್ಯಾತ್ಮಿಕ ತಾಣವಾಗಿ ಗುರುತಿಸಿಕೊಂಡಿದೆ. ವರ್ಷಕ್ಕೊಮ್ಮೆ ನಡೆಯುವ ಮಹಾ ರಥೋತ್ಸವ ಸೇರಿದಂತೆ ನಿತ್ಯವೂ ನಡೆಯುವ ಹಲವು ಬಗೆಯ ಪೂಜಾ ಕೈಂಕರ್ಯಗಳಿಗೆ ರಾಜ್ಯದ ವಿವಿಧ ಭಾಗದಿಂದ ಭಕ್ತರು ಬರುತ್ತಾರೆ.

    ಪ್ರತಿ ಮಂಗಳವಾರ ಹಾಗೂ ಶುಕ್ರವಾರ ದೇವಿಯ ಉದ್ಭವಮೂರ್ತಿಗಳಿಗೆ ಅರಿಶಿಣ, ಬೆಣ್ಣೆ ಸೇರಿದಂತೆ ವಿವಿಧ ಬಗೆಯ ಅಲಂಕಾರ ಮಾಡಿ ಮಹಾಮಂಗಳಾರತಿ ನೆರವೇರಿಸಲಾಗುತ್ತದೆ. ಕಂಕಣ ಭಾಗ್ಯ, ಸಂತಾನ ಪ್ರಾಪ್ತಿ, ಆಸ್ತಿ, ವಿದ್ಯೆ, ಉದ್ಯೋಗ, ವ್ಯವಹಾರ ನಷ್ಟ, ಕೋರ್ಟ್ ವ್ಯಾಜ್ಯ, ರೋಗ ಬಾಧೆ ನಿವಾರಣೆ ಸೇರಿದಂತೆ ವಿವಿಧ ಸಮಸ್ಯೆ ನಿವಾರಣೆಗೆ ಭಕ್ತರು ಇಲ್ಲಿಗೆ ಬರುತ್ತಾರೆ.

    ಪಂಚಮಾತೃಕೆಯರು: ದೇವಾಲಯದ ಗಭಗುಡಿಯಲ್ಲಿ ಕರಿಯಮ್ಮ, ಉಡಿಸಲಮ್ಮ, ಚಿಕ್ಕಮ್ಮ, ದೊಡ್ಡಮ್ಮ ಹಾಗೂ ಪ್ಲೇಗಿನಮ್ಮ ಪಂಚಮಾತೃಕೆಯರ ಉದ್ಭವ ಮೂರ್ತಿಗಳಿವೆ. ಬೇವಿನ ಸೊಪ್ಪು, ಸೇವಂತಿಗೆ, ಕನಕಾಂಬರ ಸೇರಿ ಬಗೆ ಬಗೆಯ ಹೂಗಳಿಂದ ದೇವರನ್ನು ಅಲಂಕರಿಸಿ ಪೂಜಿಸಲಾಗುತ್ತಿದೆ.
    ಇಷ್ಟಾರ್ಥಗಳ ಈಡೇರಿಕೆಗೆ ಭಕ್ತರು ಮೊಗ್ಗು ಮುಡಿಸಿ ಅಪ್ಪಣೆ ಕೇಳಿ ಪರಿಹಾರ ಕಂಡುಕೊಳ್ಳುತ್ತಿರುವುದು ಅಮ್ಮನವರ ಮಹಿಮೆಗೆ ಸಾಕ್ಷಿಯಾಗಿದೆ. ದೋಷ ನಿವಾರಣೆ ಬಳಿಕ ಮತ್ತೊಮ್ಮೆ ದೇವಿಯರ ಸನ್ನಿಧಿಗೆ ಆಗಮಿಸಿ ಹರಕೆ ತೀರಿಸಲಾಗುತ್ತದೆ.

    ಉಭಯ ದೇವಿಯರ ರಥೋತ್ಸವ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಅದ್ದೂರಿಯಾಗಿ ಜರುಗುತ್ತದೆ. ಇದಕ್ಕೆ ಪೂರಕವಾಗಿ ದೇವಾಲಯ ವ್ಯವಸ್ಥಾಪನಾ ಸಮಿತಿ ಪ್ರತಿ ವರ್ಷವೂ ಸಕಲ ಸಿದ್ಧತೆಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿದೆ. ಮದುವೆ ಶಾಸ್ತ್ರ, ಹೆಣ್ಣುಮಕ್ಕಳು ಹರಕೆ ತೀರಿಸಲು ಉಪವಾಸ ವ್ರತಾಚರಣೆ ಮೂಲಕ ಕಳಶ ಹೊರುವುದು, ಗಂಗಾಸ್ನಾನ, ಮುತ್ತಿನ ಪಲ್ಲಕ್ಕಿ ಉತ್ಸವ ಸೇರಿದಂತೆ ಹಲವು ಬಗೆಯ ಕೈಂಕರ್ಯಗಳು ಶತಮಾನಗಳಿಂದ ನಿರ್ವಿಘ್ನವಾಗಿ ನಡೆದುಕೊಂಡು ಬರುತ್ತಿರುವುದು ಕರಿಯಮ್ಮ, ಮಲ್ಲಿಗೆಮ್ಮ ದೇವಿಯರ ಪವಾಡದ ಹೆಗ್ಗುರುತಾಗಿದೆ. ಇದಲ್ಲದೇ ಕೆಂಚರಾಯ, ಚೆಲುವರಾಯ ಹಾಗೂ ಧೂತರಾಯ ಸ್ವಾಮಿ ಕುಣಿತವೂ ಜನಮನಸೂರೆಗೊಳ್ಳುತ್ತಿದೆ.

    ಅಂಬಾರಿ ಉತ್ಸವ: ದೇವಿಯರ ರಥೋತ್ಸವ ಸಂಪನ್ನಗೊಂಡ ಬಳಿಕ ನಡೆಯುವ ಆನೆ ಅಂಬಾರಿ ಉತ್ಸವ ರಾಜ್ಯದ ಮನೆಮಾತಾಗಿದೆ. ದೇಗುಲದ ಆವರಣದಲ್ಲಿ ಸರ್ವಾಲಂಕೃತ ಗಜರಾಜನಮೇಲೆ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಚಾಲನೆ ನೀಡಲಾಗುತ್ತದೆ. ಮೈಸೂರು ದಸರಾ ಮಾದರಿಯಲ್ಲಿ ಪ್ರತಿ ವರ್ಷ ನಡೆಯುವ ನಡೆಯುವ ಆನೆ ಅಂಬಾರಿ ಉತ್ಸವ ಕಣ್ತುಂಬಿಕೊಳ್ಳಲು ಜನಸಮೂಹವೇ ಹರಿದು ಬರುತ್ತಿದೆ. ಸಾಯಿನಾಥ ರಸ್ತೆ, ರಾಷ್ಟ್ರೀಯ ಹೆದ್ದಾರಿ, ಹಾಸನ ರಸ್ತೆ ಸೇರಿದಂತೆ ಹಲವೆಡೆ ಸಂಚರಿಸಿ ಪುನಃ ಕರಿಯಮ್ಮ ದೇವಿ ದೇಗುಲದ ಅವರಣದಲ್ಲಿ ಮುಕ್ತಾಯಗೊಳ್ಳುತ್ತದೆ. ಚಿಟ್ಟಿಮೇಳ, ಡೊಳ್ಳುಕುಣಿತ, ವೀರಗಾಸೆ, ವೀರಭದ್ರನಕುಣಿತ, ಭಜನಾ ತಂಡ ಕರಡೇ ವಾದ್ಯ, ಡೊಳ್ಳು ಕುಣಿತ, ಕಹಳೆ ಅಂಬಾರಿ ಉತ್ಸವದ ಪ್ರಮುಖ ಆಕರ್ಷಣೆ.

    ನಗರದ ಬಹುತೇಕ ಬಡಾವಣೆಗಳಲ್ಲಿ ನಡೆಯುವ ಗೃಹಪ್ರವೇಶ ಸೇರಿದಂತೆ ಎಲ್ಲಬಗೆಯ ಆಚರಣೆಗಳಿಗೆ ಕರಿಯಮ್ಮ, ಮಲ್ಲಿಗೆಮ್ಮ, ಚೆಲುವರಾಯ ಹಾಗೂ ಧೂತರಾಯ ಸ್ವಾಮಿಯನ್ನು ಕರೆದೊಯ್ದು ಭಕ್ತಿ ಸಮರ್ಪಿಸುತ್ತಾರೆ. ವಿವಿಧ ಬಡಾವಣೆಗಳಲ್ಲಿ ಜರುಗುವ ಸಿಡಿಉತ್ಸವ, ಜಾತ್ರೆಗಳಿಗೂ ದೇವಿಯ ಸಾನ್ನಿಧ್ಯ ಅಗತ್ಯವೆಂದು ಭಕ್ತರು ಭಾವಿಸಿದ್ದು ಪಲ್ಲಕ್ಕಿಯಲ್ಲಿ ಕರೆದೊಯ್ದು ವಿಧಿವಿಧಾನಗಳನ್ನು ಪೂರ್ಣಗೊಳಿಸಿ ಒಳಿತಿಗೆ ಪ್ರಾರ್ಥಿಸುವ ಸಂಪ್ರದಾಯವಿದೆ.

    ಮಾರ್ಗ: ಅರಸೀಕೆರೆ ನಗರದ ಹೃದಯಭಾಗದಲ್ಲಿರುವ ಕರಿಯಮ್ಮ ದೇವಿ ದೇಗುಲ ತಲುಪಲು ಹಲವು ಮಾರ್ಗಗಳಿವೆ. ಗರುಡನಗಿರಿ, ಭೈರನಾಯ್ಕನಹಳ್ಳಿ, ಹುಳಿಯಾರು, ಸಂತೇಪೇಟೆ, ಸಾಯಿನಾಥ ರಸ್ತೆ ಹಾಗೂ ಶಾನುಭೋಗರ ಬೀದಿಯ ಪ್ರಮುಖ ಸಂಪರ್ಕ ರಸ್ತೆಗಳ ಮೂಲಕ ದೇವಾಲಯ ತಲುಪಬಹುದು. ಬಸ್ ನಿಲ್ದಾಣದಿಂದ ಆಟೋ ಸೌಕರ್ಯವಿದೆ. ಭಕ್ತರು ದ್ವಿಚಕ್ರ ವಾಹನ ಹಾಗೂ ಕಾರುಗಳ ಮೂಲಕವೂ ತೆರಳಲು ಸುಸಜ್ಜಿತ ರಸ್ತೆ ಸಂಪರ್ಕವಿದ್ದು ಸುತ್ತಮುತ್ತಲಿನ ಭಕ್ತರು ನಡೆದುಕೊಂಡೇ ದೇವಾಲಯಕ್ಕೆ ಆಗಮಿಸುತ್ತಾರೆ.

    ರಥೋತ್ಸವ: ಶ್ರೀಕರಿಯಮ್ಮ ಹಾಗೂ ಮಲ್ಲಿಗೆಮ್ಮ ದೇವಿಯರ ರಥೋತ್ಸವ ಈ ಬಾರಿ ಏ.28ರಿಂದ ಮೇ2ರವರೆಗೆ ಐದು ದಿನ ನಡೆಯಲಿದೆ. ರುದ್ರಾಭಿಷೇಕ, ಅಂಕುರಾರ್ಪಣೆ, ಮದುವಣಿಗೆ ಶಾಸ್ತ್ರ, ಬೇವಿ ಸೀರೆ, ಬಾಯಿಬೀಗ, ಹೆಣ್ಣುಮಕ್ಕಳ ಕಳಶ ಮಹೋತ್ಸವ, ಬಾನ, ಮುತ್ತಿನ ಪಲ್ಲಕ್ಕಿ ಉತ್ಸವ ಮೊದಲಾದ ಕಾರ್ಯಕ್ರಮಗಳು ರಥೋತ್ಸವಕ್ಕೆ ಮೆರಗು ನೀಡಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts