More

    ಕಿರಿಯರ ವಿಶ್ವಕಪ್ ವಿಜೇತ ತಂಡದ 8 ಆಟಗಾರರು ಐಪಿಎಲ್ ಹರಾಜಿಗೆ ಅರ್ಹರಲ್ಲ!

    ನವದೆಹಲಿ: ಕಿರಿಯರ ವಿಶ್ವಕಪ್‌ನಲ್ಲಿ ಭಾರತ ತಂಡದ ಗೆಲುವಿಗೆ ನೆರವಾಗಿದ್ದ ಉಪನಾಯಕ ಶೇಕ್ ರಶೀದ್, ವೇಗಿ ರವಿಕುಮಾರ್, ವಿಕೆಟ್ ಕೀಪರ್ ದಿನೇಶ್ ಬಾನಾ, ಆಲ್ರೌಂಡರ್ ನಿಶಾಂತ್ ಸಂಧು ಸಹಿತ 8 ಆಟಗಾರರು ಮುಂಬರುವ ಐಪಿಎಲ್ ಆಟಗಾರರ ಹರಾಜಿನಲ್ಲಿ ಪಾಲ್ಗೊಳ್ಳುವಂತಿಲ್ಲ! ಹರಾಜಿನಲ್ಲಿ ಭಾಗವಹಿಸಲು ಅವರು ಅರ್ಹರಾಗದೇ ಇರುವುದು ಇದಕ್ಕೆ ಕಾರಣ.

    ಹರಾಜಿಗೆ ಒಳಪಡುವ ಆಟಗಾರರಿಗೆ ಬಿಸಿಸಿಐ ರೂಪಿಸಿರುವ ಮಾನದಂಡದ ಅನ್ವಯ, 19 ವರ್ಷ ಮೇಲ್ಪಟ್ಟವರು ಅಥವಾ ರಾಜ್ಯ ತಂಡಗಳ ಪರ ದೇಶೀಯ ಕ್ರಿಕೆಟ್‌ನಲ್ಲಿ ಆಡಿರುವವರು ಮಾತ್ರ ಅರ್ಹರಾಗಿರುತ್ತಾರೆ. ಇದರನ್ವಯ ಆರಂಭಿಕ ಅಂಗ್‌ಕ್ರಿಷ್ ರಘುವಂಶಿ, ಸಿದ್ಧಾರ್ಥ್ ಯಾದವ್, ಮಾನವ್ ಪರಖ್ ಮತ್ತು ಗರ್ವ್ ಸಂಗ್ವಾನ್ ಕೂಡ ಹರಾಜಿನಲ್ಲಿ ಪಾಲ್ಗೊಳ್ಳುವಂತಿಲ್ಲ. ಈ 8 ಆಟಗಾರರ ಪೈಕಿ ಕೆಲವರ ಖರೀದಿಗೆ ಫ್ರಾಂಚೈಸಿಗಳು ಈಗಾಗಲೆ ಆಸಕ್ತಿ ತೋರಿದ್ದು, ಬಿಸಿಸಿಐ ನಿಯಮಾವಳಿ ಸಡಿಲ ಮಾಡುವುದೇ ಎಂಬುದು ಸ್ಪಷ್ಟವಾಗಿಲ್ಲ.

    ರಣಜಿ ಟ್ರೋಫಿ ಫೆಬ್ರವರಿ 17ರಿಂದ ನಡೆಯಲಿದ್ದು, ಈ ಆಟಗಾರರಿಗೆ ತಮ್ಮ ರಾಜ್ಯ ತಂಡಗಳಲ್ಲಿ ಅವಕಾಶ ಲಭಿಸಿದರೂ, ಹರಾಜು ಪ್ರಕ್ರಿಯೆ ಅದಕ್ಕೆ ಮುನ್ನ ಅಂದರೆ ಫೆಬ್ರವರಿ 12-13ರಂದು ನಡೆಯಲಿದೆ. ಕರೊನಾ ಹಾವಳಿಯಿಂದಾಗಿ ಕಳೆದ ಮತ್ತು ಹಾಲಿ ದೇಶೀಯ ಕ್ರಿಕೆಟ್ ಋತುವಿನಲ್ಲಿ 19 ವಯೋಮಿತಿ ಮತ್ತು ಸೀನಿಯರ್ ಕ್ರಿಕೆಟ್ ಟೂರ್ನಿಗಳು ಏಕಕಾಲದಲ್ಲಿ ನಡೆದಿದ್ದು ಕೂಡ ಈ ಆಟಗಾರರಿಗೆ ಸೀನಿಯರ್ ತಂಡದಲ್ಲಿ ಆಡಲು ಅಡ್ಡಿಯಾಗಿತ್ತು. ಈ ಕಾರಣದಿಂದಾಗಿ ಬಿಸಿಸಿಐ ವಿನಾಯಿತಿ ನೀಡಬೇಕೆಂದು ವಾದಿಸಲಾಗುತ್ತಿದೆ.

    ತವರಿಗೆ ಮರಳಿದ ಯುವ ವಿಶ್ವ ಚಾಂಪಿಯನ್ಸ್
    ವೆಸ್ಟ್ ಇಂಡೀಸ್‌ನಲ್ಲಿ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್‌ನಲ್ಲಿ ಪ್ರಶಸ್ತಿ ಜಯಿಸಿದ ಯಶ್ ಧುಲ್ ಸಾರಥ್ಯದ ಭಾರತ ತಂಡ ತವರಿಗೆ ಮರಳಿದೆ. ಕೆರಿಬಿಯನ್‌ನಿಂದ ಆಮ್‌ಸ್ಟರ್‌ಡ್ಯಾಂ ಮತ್ತು ದುಬೈ ಮೂಲಕವಾಗಿ ಮಂಗಳವಾರ ಬೆಳಗ್ಗೆ ಬೆಂಗಳೂರಿಗೆ ಬಂದಿಳಿದ ತಂಡ ಸಂಜೆ ಅಹಮದಾಬಾದ್‌ಗೆ ಪ್ರಯಾಣಿಸಿತು. ಬುಧವಾರ ಬಿಸಿಸಿಐ ವತಿಯಿಂದ ಅಹಮದಾಬಾದ್‌ನಲ್ಲಿ ಸನ್ಮಾನ ಸಮಾರಂಭ ನಡೆಯಲಿದೆ. ತಂಡದ ಎಲ್ಲ ಆಟಗಾರರಿಗೆ ಬಿಸಿಸಿಐ ಈಗಾಗಲೆ ತಲಾ 40 ಲಕ್ಷ ರೂ. ಬಹುಮಾನ ಘೋಷಿಸಿದೆ. ತಂಡದ ಎಲ್ಲ ಆಟಗಾರರಿಗೆ ತವರಿಗೆ ಮರಳಲು ಐಸಿಸಿ, ಇಕಾನಮಿ ಕ್ಲಾಸ್ ಟಿಕೆಟ್ ವ್ಯವಸ್ಥೆ ಮಾಡಿತ್ತು. ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್, ಆಯ್ಕೆ ಸಮಿತಿ ಸದಸ್ಯರು ಮತ್ತು ಐವರು ಮೀಸಲು ಆಟಗಾರರು ಪ್ರತ್ಯೇಕ ವಿಮಾನದ ಮೂಲಕ ಮರಳಿದರು.

    ಮಯಾಂಕ್‌ಗೆ ನಾಯಕತ್ವ ನೀಡಲು ಪಂಜಾಬ್ ಕಿಂಗ್ಸ್ ಸಿದ್ಧ, ಆದರೆ ಷರತ್ತುಗಳು ಅನ್ವಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts