More

    ಸಂತ್ರಸ್ತರ ಬದುಕು ತತ್ತರ

    ಸದಲಗಾ: ಒಂದೆಡೆ ಕರೊನಾ ವೈರಸ್ ಭಯ. ಇನ್ನೊಂದೆಡೆ ವಾಸಕ್ಕೊಂದು ಸ್ವಂತ ಸೂರಿಲ್ಲ ಎನ್ನುವ ಚಿಂತೆ. ಮತ್ತೊಂದೆಡೆ, ಈ ವರ್ಷವೂ ಮತ್ತೆ ಕೃಷ್ಣಾ ನದಿಯಲ್ಲಿ ಪ್ರವಾಹ ಬರುತ್ತೋ ಎನ್ನುವ ಆತಂಕ. ಸಂಕಷ್ಟದಲ್ಲೇ ಬದುಕು ನಡೆಸುತ್ತಿರುವ ಸಂತ್ರಸ್ತರು. ಕೇಳುವವರಿಲ್ಲ ಇವರ ಗೋಳು…!

    ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಅಂಬೇಡ್ಕರ್ ನಗರದಲ್ಲೊಂದು ಸುತ್ತು ಹಾಕಿ ಬಂದರೆ ಇಂಥ ದೃಶ್ಯಾವಳಿಗಳು ಕಣ್ಣಿಗೆ ಬೀಳುತ್ತವೆ. 95ಕ್ಕೂ ಅಧಿಕ ಕುಟುಂಬಗಳ ವೇದನೆ ಗಮನಕ್ಕೆ ಬರುತ್ತದೆ. ಕಳೆದ ವರ್ಷ ಪ್ರವಾಹದಲ್ಲಿ ಆಸರೆಗಿದ್ದ ಮನೆಯನ್ನೂ ಕಳೆದುಕೊಂಡು ತಗಡಿನ ಶೆಡ್‌ಗಳಲ್ಲಿ ವಾಸಿಸುತ್ತಿರುವ ಸಂತ್ರಸ್ತರ ಸಂಕಷ್ಟ ಮನ ಕಲಕುತ್ತದೆ. ಇಂದೋ, ನಾಳೆಯೋ ಪೂರ್ಣ ಪರಿಹಾರ ಸಿಗುತ್ತದೆ ಎಂಬ ಆಶಾ ಭಾವನೆ ಹುಸಿಯಾಗಿದೆ. ಸಂತ್ರಸ್ತರ ಮೊಗದಲ್ಲಿ ಆತಂಕದ ಕಾರ್ಮೋಡ ಕವಿದಿದೆ. ಪರಿಹಾರಕ್ಕಾಗಿ ನಿತ್ಯವೂ ತಹಸೀಲ್ದಾರ್ ಕಚೇರಿಗೆ ಎಡತಾಕುತ್ತಿದ್ದರೂ ಅವರ ನೋವಿಗೆ ಸ್ಪಂದಿಸುವವರು ಯಾರೂ ಇಲ್ಲದಂತಾಗಿದೆ.

    ನಮ್ಮ ಜೀವಕ್ಕೆ ಬೆಲೆ ಇಲ್ಲೇನ್ರೀ..?: ಈಗ ಕರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಮನೆಯಿಂದ ಹೊರಬರಬೇಡಿ ಎಂದು ಎಲ್ಲೆಡೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಮನೆ ಕಳೆದುಕೊಂಡ ನಮ್ಮನ್ನು ಕಡೆಗಣಿಸುತ್ತಿದ್ದಾರೆ. ನಮ್ಮ ಕುಟುಂಬಗಳು ಬೀದಿಗೆ ಬಿದ್ದರೂ ಸಮಸ್ಯೆ ಆಲಿಸುತ್ತಿಲ್ಲ. ಹಾಗಾದರೆ, ನಮ್ಮ ಜೀವಕ್ಕೆ ಬೆಲೆ ಇಲ್ಲೇನ್ರೀ..? ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ನಮ್ಮ ಮನೆ ಕುಸಿದು 10 ತಿಂಗಳಾಗಿದೆ. ಈವರೆಗೆ ತಾತ್ಕಾಲಿಕವಾಗಿ ಪುಡಿಗಾಸು ನೀಡಿರುವುದನ್ನು ಬಿಟ್ಟರೆ ಏನೂ ಪರಿಹಾರ ಸಿಕ್ಕಿಲ್ಲ. ತಗಡಿನ ಶೆಡ್‌ನಲ್ಲೇ ಅನಾರೋಗ್ಯಕರ ಸ್ಥಿತಿಯಲ್ಲಿ ವಾಸಿಸುತ್ತಿರುವ ನಮ್ಮ ಗೋಳು ಕೇಳುವವರಿಲ್ಲ. ನಮ್ಮ ಜೀವಕ್ಕೆ ಕುತ್ತು ಬಂದರೂ ಅಚ್ಚರಿಯಿಲ್ಲ.
    | ಅಡಿವೆಪ್ಪ ಮಾಯನ್ನವರ ಸಂತ್ರಸ್ತ

    ಕಳೆದ ವರ್ಷ ಪ್ರವಾಹದಿಂದ ಮನೆ ಕಳೆದುಕೊಂಡ ಚಿಕ್ಕೋಡಿ ತಾಲೂಕು ವ್ಯಾಪ್ತಿಯ 1,117 ಸಂತ್ರಸ್ತರಿಗೆ ಪರಿಹಾರ ವಿತರಿಸಲಾಗಿದೆ. ಆದರೆ, ವಸತಿ ಯೋಜನೆಯ ಜಾಲತಾಣದ ತಾಂತ್ರಿಕ ಸಮಸ್ಯೆಯಿಂದಾಗಿ ಪರಿಹಾರ ಕೋರಿ ಕೆಲ ಸಂತ್ರಸ್ತರಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಸಂತ್ರಸ್ತರ ಸಂಕಷ್ಟ ಪರಿಹರಿಸಲು ಯತ್ನಿಸಲಾಗುವುದು.
    | ಸುಭಾಸ ಸಂಪಗಾವಿ ತಹಸೀಲ್ದಾರ್

    | ಗಜಾನನ ರಾಮನಕಟ್ಟಿ ಸದಲಗಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts