More

    ಅಖಾಡದಲ್ಲಿ ಅಲೆ, ಪರಿಹಾರ, ದಿವಾಳಿ ಜಟಾಪಟಿ

    ಬೆಂಗಳೂರು: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಆರೋಪ ಪ್ರತ್ಯಾರೋಪ ಸಾಮಾನ್ಯ ಸೋಮವಾರ ಮೋದಿ ಅಲೆ ಇಲ್ಲವೆಂಬ ಕಾಂಗ್ರೆಸ್ ನಾಯಕರ ಚುನಾವಣೆ ದಾಳಕ್ಕೆ ಬಿಜೆಪಿ ಪ್ರತಿರೋಧ ತೋರಿಸಿತು. ಅದೇ ರೀತಿ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂಬ ಬಿಜೆಪಿ ನಾಯಕರ ಟೀಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು.

    – ಮೋದಿ ಅಲೆ ಇಲ್ಲ

    ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರ ಹಾಗೂ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಮೋದಿ ಅಲೆ ಇಲ್ಲ ಎಂದು ಪದೇಪದೆ ಉಚ್ಛರಿಸಿದರು. ಇಡೀ ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಹತ್ತು ವರ್ಷದ ಕರ್ಮಕಾಂಡ ಕೊನೆಯಾಗಲಿದೆ ಎಂದು ಕುಟುಕಿದರು.

    ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿ, ಕೇರಳ ರಾಜ್ಯಕ್ಕೂ ಪ್ರಚಾರ ನಡೆಸಲು ಹೋಗಿದ್ದೆ, ಅಲ್ಲಿ ಸೇರಿದಂತೆ ಇಡೀ ದೇಶದಲ್ಲಿ ಮೋದಿ ಗಾಳಿಯೂ ಇಲ್ಲ, ಬಿಜೆಪಿ ಗಾಳಿಯೂ ಇಲ್ಲ. ಇರುವುದು ಕಾಂಗ್ರೆಸ್ ಗಾಳಿ ಮಾತ್ರ. ದೇಶದಲ್ಲಿ ಬಿಜೆಪಿ 200 ಸ್ಥಾನಗಳನ್ನೂ ಗೆಲ್ಲುವುದಿಲ್ಲ. ಬಿಜೆಪಿಗೆ ಸ್ವಂತ ಶಕ್ತಿ ಇಲ್ಲ ಅದಕ್ಕೆ ಕರ್ನಾಟಕದಲ್ಲಿ ಜೆಡಿಎಸ್ ಹಾಗೂ ಆಂಧ್ರದಲ್ಲಿ ಚಂದ್ರಬಾಬುನಾಯ್ಡು ಅವರ ಟಿಡಿಪಿ ಜತೆ ಹಾಗೂ ದೇಶದ ಅನೇಕ ಪಕ್ಷಗಳ ಜತೆ ಸೇರಿಕೊಂಡಿದ್ದಾರೆ. ಮೋದಿ ಅಲೆ ಇಲ್ಲ ಎನ್ನುವುದಕ್ಕೆ ಇದೆ ಉದಾಹರಣೆ ಎಂದರು.

    – ಬಿಜೆಪಿ ತಿರುಗೇಟು

    ಈ ಚುನಾವಣೆಯ ಬಳಿಕ ತಮ್ಮ ಖುರ್ಚಿ ಉಳಿಯುತ್ತದೋ, ಇಲ್ಲವೋ ಎಂಬ ಗ್ಯಾರಂಟಿ ಇಲ್ಲದ ಸಿದ್ದರಾಮಯ್ಯನವರು ದೇಶದಲ್ಲಿ ಮೋದಿ ಅಲೆಯೇ ಇಲ್ಲ  ಎಂದು ಪದೇ ಪದೆ ಹೇಳಿ ಮೋದಿ ಭಕ್ತಿ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ವಿ.ಸುನಿಲ್ ಕುಮಾರ್ ಟೀಕಿಸಿದರು.

    ‘ಎಲ್ಲಿರುವನು ನಿನ್ನ ಹರಿ…’ ಎಂದು ವಿರೋಧ ಭಕ್ತಿ ಪ್ರದರ್ಶನ ಮಾಡಿದವರ ರೀತಿ ಸಿದ್ದರಾಮಯ್ಯನವರ ಮೋದಿ ದ್ವೇಷ. ಕಾಂಗ್ರೆಸ್ ಅನ್ನು ಬುಡ ಸಮೇತ ಕಿತ್ತು ಹಾಕುವುದೇ ನಮ್ಮ ಉದ್ದೇಶ ಎಂದು ಘರ್ಜಿಸಿ ಆ ಬಳಿಕ ಬಾಯಿತಪ್ಪಿನಿಂದ ಹೇಳಿದೆ ಎಂದು ಸ್ಪಷ್ಟನೆ ನೀಡುತ್ತಿದ್ದ ಸಿದ್ದರಾಮಯ್ಯ ಪದೇ ಪದೆ ಮೋದಿ ಪ್ರಚಾರ ನಡೆಸುವ ಮೂಲಕ ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಸಾತ್ ನೀಡುತ್ತಿದ್ದಾರೆ. ಮೋದಿ ಅಲೆ ಇದೆಯೋ ಇಲ್ಲವೋ ಎಂಬುದನ್ನು ಖುದ್ದು ಪರಿಶೀಲಿಸುವುದಕ್ಕೆ ಕೌಂಟ್‌ಡೌನ್ ಪ್ರಾರಂಭಿಸಿ ಸಿದ್ದರಾಮಯ್ಯನವರೇ ಎಂದು ಸವಾಲು ಹಾಕಿದ್ದಾರೆ.

    – ದಿವಾಳಿ ಟೀಕೆ

    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ವಿಪರೀತ ಸಾಲ ಮಾಡಿದ್ದು, ದಿವಾಳಿಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದ್ದಾರೆ. ಅದೇ ರೀತಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೂಡ ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ವಿಶ್ಲೇಷಣೆ ನಡೆಸಿದ್ದಾರೆ.

    ಇದು ಸಿಎಂ ಸಿದ್ದರಾಮಯ್ಯರನ್ನು ಕೆರಳಿಸಿದೆ. ಸನ್ಮಾನ್ಯ ಬಿಜೆಪಿ ನಾಯಕರೇ, ನಮ್ಮ ಸರ್ಕಾರ ಸುಭದ್ರವಾಗಿದೆ, ದಿವಾಳಿಯಾಗಿರುವುದು ನಿಮ್ಮ ಬುದ್ಧಿಯೇ ಹೊರತು ನಮ್ಮ ರಾಜ್ಯ ಅಲ್ಲ. ದಿನಕ್ಕೊಂದು ಸುಳ್ಳು ಹೇಳುತ್ತಾ, ಆ ಸುಳ್ಳು ಬಯಲಾದಾಗ ಮತ್ತೆ ಅದನ್ನು ಸಮರ್ಥಿಸಲು ಇನ್ನೊಂದಿಷ್ಟು ಸುಳ್ಳುಗಳನ್ನು ಸೃಷ್ಟಿಸುತ್ತಾ ನಿಮ್ಮನ್ನು ನೀವೇ ಬತ್ತಲೆ ಮಾಡಿಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ.

    ಕಳೆದ ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 10 ಸಾವಿರ ಕೋಟಿ ರೂ. ಸಾಲ ಮಾಡಿದ್ದ ಕಾರಣಕ್ಕಾಗಿ ರಾಜ್ಯ ದಿವಾಳಿಯಾಗುತ್ತಿದೆ ಎಂದು ಬೊಬ್ಬಿಡುತ್ತಿರುವ ನೀವು, ನಿಮ್ಮ ಸರ್ಕಾರದ ಕಾಲದಲ್ಲಿನ ಸಾಲದ ಲೆಕ್ಕವನ್ನು ಪರಿಶೀಲಿಸುವ ಕಷ್ಟ ತೆಗೆದುಕೊಂಡಿದ್ದರೆ ಈ ರೀತಿ ನಮ್ಮ ಕೈಗೆ ಬಡಿಗೆ ಕೊಟ್ಟು ಹೊಡೆಸಿಕೊಳ್ಳುತ್ತಿರಲಿಲ್ಲ ಎಂದಿದ್ದಾರೆ.

    ಬಿಜೆಪಿ ನಾಯಕರೇ, ಈ ಆಡಳಿತ, ಆರ್ಥಿಕತೆ, ಅಭಿವೃದ್ದಿ ವಿಚಾರಗಳೆಲ್ಲ ನಿಮ್ಮ ಚಹದ ಬಟ್ಟಲಲ್ಲ, ಹಿಂದು-ಮುಸ್ಲಿಂ, ಕೋಮುವಾದ, ಪಾಕಿಸ್ತಾನ, ಮುಸ್ಲಿಂ ಲೀಗ್ ಮೊದಲಾದ ವಿಚಾರಗಳನ್ನು ಜನರ ತಲೆಗೆ ತುಂಬಿ ಸೌಹಾರ್ದತೆಯಿಂದ ಬಾಳುತ್ತಿದ್ದ ಜನರನ್ನು ಪರಸ್ಪರ ಸಂಘರ್ಷಕ್ಕಿಳಿಸಿ ರಾಜಕೀಯ ಲಾಭ ಪಡೆಯುವುದಕ್ಕಷ್ಟೇ ನೀವು ಸಮರ್ಥರು. ಯಾರು ಸುಳ್ಳು ರಾಮಯ್ಯ, ಯಾರು ಸತ್ಯ ರಾಮಯ್ಯ ಎನ್ನುವುದನ್ನು ರಾಜ್ಯದ ಜನ ತಿಳಿದುಕೊಂಡಿದ್ದಾರೆ. ಈ ಚುನಾವಣೆಯಲ್ಲಿ ಅವರು ನಿಮಗೆ ಉತ್ತರವನ್ನೂ ನೀಡಲಿದ್ದಾರೆ ಎಂದು ಹೇಳಿದ್ದಾರೆ.

    – ಬರ ಪರಿಹಾರ

    ಬರ ಪರಿಹಾರ ನೀಡಿಲ್ಲ ಎಂಬುದೂ ಸಹ ಚುನಾವಣೆ ಪ್ರಚಾರದಲ್ಲಿ ಪ್ರಧಾನ ಅಂಶವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಹುತೇಕ ಪ್ರಚಾರ ಸಭೆಯಲ್ಲಿ ಇದೇ ಅಂಶವನ್ನು ಪ್ರಸ್ತಾಪಿಸಿ ಕೇಂದ್ರವನ್ನು ಟೀಕಿಸಿದ್ದಾರೆ. ಇನ್ನೊಂದೆಡೆ ರೈತರಿಗೆ ಕೇವಲ 2 ಸಾವಿರ ಬರ ಪರಿಹಾರ ನೀಡಿದ್ದೀರಲ್ಲ ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ಬಿಜೆಪಿ ನಾಯಕರು ಸಿದ್ದರಾಮಯ್ಯರನ್ನು ಕೆಣಕಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts