More

    ಕೈತೋಟದಲ್ಲಿ ಮಕ್ಕಳ ಖುಷಿ, ಆರೋಗ್ಯ

    ಔರಾದ್: ಮಕ್ಕಳ ದೈಹಿಕ ಬೆಳವಣಿಗೆಗೆ ಪೂರಕವಾಗಿ ಶಾಲಾ ಆವರಣದಲ್ಲಿಯೇ ವಿವಿಧ ತರಕಾರಿ, ಕಾಯಿ ಪಲ್ಲೆ ಬೆಳೆಸಿ ಬಿಸಿಯೂಟದಲ್ಲಿ ಉಣಬಡಿಸುವುದರಲ್ಲಿ ಇರುವ ಖುಷಿ ಮತ್ತೊಂದಿಲ್ಲ ಎಂದು ವನಮಾರಪಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಗುರು ಮಾಧವರಾವ್ ಭಾಲೇಕರ್ ತಿಳಿಸಿದರು.
    ವನಮಾರಪಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗಾಗಿ ಮಂಗಳವಾರ ಹಮ್ಮಿಕೊಂಡ ಶಾಲಾ ಕೈತೋಟ ಮತ್ತು ಪೋಷಕಾಂಶಗಳ ಮಹತ್ವದ ಬಗ್ಗೆ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿ, ಗಡಿ ಗ್ರಾಮದ ಶಾಲೆ ಆವರಣದಲ್ಲಿ ಎಲ್ಲ ಗ್ರಾಮಸ್ಥರ ಹಾಗೂ ಶಾಲೆ ಸಿಬ್ಬಂದಿ ನೆರವಿನಿಂದ ಎರಡು ವರ್ಷದಿಂದ ಪೋಷಕಾಂಶಗಳ ಕೊರತೆ ನೀಗಿಸಲು ಕಾಯಿಪಲ್ಲೆ, ಹಣ್ಣುಗಳನ್ನು ಬೆಳೆಯಲಾಗುತ್ತಿದೆ ಎಂದರು.
    ಸಾವಯವ ತಾಜಾ ತರಕಾರಿಗಳನ್ನು ಬೆಳೆಸಿ ಮಕ್ಕಳೊಂದಿಗೆ ಬೆರೆತು ರುಚಿಯಾದ ಊಟ ಮಾಡುತ್ತಿರುವುದು ಸಂತಸ ತಂದಿದೆ. ಶಾಲೆಯಲ್ಲಿ ೨೦೦ಕ್ಕೂ ಹೆಚ್ಚು ಮಕ್ಕಳು ನಿತ್ಯ ಶಾಲೆಗೆ ಬಂದು ಉತ್ತಮ ಕಲಿಕೆ ಜತೆಗೆ ಶಾಲೆ ಕೈತೋಟಕ್ಕೆ ನೀರುಣಿಸುತ್ತಾರೆ. ಮಕ್ಕಳೇ ಬೆಳೆಸಿದ ತರಕಾರಿಗಳನ್ನು ಅವರೇ ಊಟ ಮಾಡುವುದರಲ್ಲಿ ಹೆಚ್ಚಿನ ಖುಷಿ ಪಡುತ್ತಿದ್ದಾರೆ. ಇದರಿಂದ ಹೊರಗಿನಿಂದ ತರಕಾರಿ ತರುವುದು ತಪ್ಪಿದೆ. ಮಕ್ಕಳಿಗೆ ತಾಜಾ ತರಕಾರಿ ಊಟ ನೀಡಿ ದೈಹಿಕ, ಮಾನಸಿಕವಾಗಿ ಸದೃಢ ಮಾಡಲಾಗುತ್ತಿದೆ ಎಂದರು.
    ಶಿಕ್ಷಕಿ ಪಲ್ಲವಿ ಬಿರಾದಾರ ಶಾಲಾ ಕೈತೋಟದಲ್ಲಿ ಮಕ್ಕಳ ಬೆಳವಣಿಗೆಗೆ ಅಗತ್ಯ ಪೋಷಕಾಂಶಗಳು ಹಾಗೂ ಖನಿಜಾಂಶಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು.
    ಜೈಶ್ರೀ ಡೊಂಬಾಳೆ ಶಾಲೆ ಕೈತೋಟದಲ್ಲಿರುವ ತರಕಾರಿ, ಹಣ್ಣು ಗಿಡಗಳಲ್ಲಿ ದೊರೆಯುವ ಪ್ರಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ವೆಂಕಟ್ ಭಾಲ್ಕೆ, ದಿಗಂಬರ ಪಾಂಚಾಳ, ರುಕ್ಮಿಣಿಬಾಯಿ, ರಮಾ ಮೋರಖಂಡಿಕರ್, ಮಹೇಶ ಪೂಜಾರಿ, ಮೆಹೆಬೂಬ್ ಪಟೇಲ್, ಮಮತಾ, ವಿದ್ಯಾವತಿ, ಪ್ರಥಮ ದರ್ಜೆ ಗುತ್ತಿಗೆದಾರ ನಾಗನ್ನಾಥ ಮೋರ್ಗೆ, ಸೋಪಾನರಾವ ಶೇರಿಕಾರ, ಪ್ರಕಾಶ ವಾಘಮಾರೆ, ಎಸ್‌ಡಿ ಎಂಸಿ ಅಧ್ಯಕ್ಷ ಸಂಜು ಬಿರಾದಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts