More

    ವಿದ್ಯೆಗೆ ಕಟ್ಟಬೇಕಿಲ್ಲ ತೆರಿಗೆ

    ಔರಾದ್: ವಿದ್ಯೆ ಎಂಬುದು ಯಾರೂ ಕದಿಯಲಾಗದ ಸಂಪತ್ತು. ಅದಕ್ಕೆ ತೆರಿಗೆ ಕಟ್ಟಬೇಕಿಲ್ಲ. ಎಷ್ಟು ಖರ್ಚು ಮಾಡಿದರೂ ಖಾಲಿಯಾಗಲ್ಲ ಎಂದು ಬಸವಕಲ್ಯಾಣದ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

    ಪಟ್ಟಣದ ಅಮರೇಶ್ವರ ಕಲ್ಯಾಣ ಮಂಟಪದಲ್ಲಿ ವಿದ್ಯಾರ್ಥಿ ಬಂಧುತ್ವ ವೇದಿಕೆ, ಸುಭಾಷಚಂದ್ರ ಬೋಸ್ ಯುವಕ ಸಂಘದಿಂದ ಮಂಗಳವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಫಲಿತಾಂಶ ಸುಧಾರಣೆ ಕಾರ್ಯಾಗಾರದಲ್ಲಿ ಸನ್ಮಾನ ಸ್ವೀಕರಿಸಿ ಆರ್ಶೀವಚನ ನೀಡಿದ ಅವರು, ಬದುಕಿನ ಕೊನೇ ಉಸಿರಿನವರೆಗೆ ವಿದ್ಯೆಯನ್ನು ಸಂಪಾದಿಸುತ್ತಲೇ ಇರಬೇಕು. ಕಲಿತ ವಿದ್ಯೆಯನ್ನು ಸಮಾಜದ ಹಿತಕ್ಕೆ ಬಳಸಿದಾಗಲೇ ಜೀವನದ ಸಾರ್ಥಕ್ಯ ಸಿಗಲಿದೆ ಎಂದರು.

    ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಏಕಾಗ್ರತೆಯಿಂದ ಜ್ಞಾನಾರ್ಜನೆ ಮಾಡಬೇಕು. ವಿದ್ಯಾರ್ಥಿ ಜೀವನ ಕಾಲಹರಣ ಮಾಡುವ ಅವಧಿಯಲ್ಲ. ಅದೊಂದು ಮಹತ್ತರ ಜವಾಬ್ದಾರಿ ನಿರ್ವಹಿಸುವ ಘಟ್ಟ. ನಮ್ಮ, ಕುಟುಂಬ, ಸಮಾಜ ಮತ್ತು ದೇಶದ ಭವಿಷ್ಯವನ್ನು ನಿರ್ಧರಿಸುವ ಸಮಯ. ಆದ್ದರಿಂದ ವಿದ್ಯಾರ್ಥಿಗಳು ಹೊಣೆಗಾರಿಕೆಯಿಂದ ವಿದ್ಯೆ ಕಲಿತು ಸಮಾಜಕ್ಕೆ ಉಪಯೋಗಿಯಾಗಿ ಬೆಳೆಯಬೇಕು. ಹಣ, ಆಸ್ತಿಗಿಂತ ವಿದ್ಯಾ ಸಂಪತ್ತು ಶಾಶ್ವತವಾಗಿರುತ್ತದೆ ಎಂದು ತಿಳಿಹೇಳಿದರು.

    ವಿದ್ಯಾರ್ಥಿ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ತೋಳಿ ಭರಮಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ರತ್ನದೀಪ ಕಸ್ತೂರೆ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿದರು. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ.ಚಂದ್ರಕಾಂತ ಗದ್ದಗಿ, ಪಪಂ ಮಾಜಿ ಅಧ್ಯಕ್ಷ ಸುನೀಲಕುಮಾರ ದೇಶಮುಖ, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ಭಾರತೀಯ ಬಸವ ಬಳಗ ಜಿಲ್ಲಾಧ್ಯಕ್ಷ ಡಾ.ಸಂಜೀವಕುಮಾರ ಜುಮ್ಮಾ, ಪ್ರಮುಖರಾದ ಬಸವರಾಜ ದೇಶಮುಖ, ಬಂಡೆಪ್ಪ ಕಂಟೆ, ರವೀಂದ್ರ ಮೀಸೆ, ಶರಣಪ್ಪ ಪಾಟೀಲ್ ಇತರರಿದ್ದರು.
    ಶಿಕ್ಷಕ ಮಹಾದೇವ ಚಿಟಗೀರೆ ಸ್ವಾಗತಿಸಿದರು. ಶಿಕ್ಷಕ ಕೃಷ್ಣ ಪಾಟೀಲ್ ನಿರೂಪಣೆ ಮಾಡಿದರು. ಆನಂದ ರಾಠೋಡ್ ವಂದಿಸಿದರು. ಡಾ.ಚಿನ್ನಮ್ಮ ಗದ್ದಗಿ ಅವರನ್ನು ಸನ್ಮಾನಿಸಲಾಯಿತು.

    ಸನ್ಮಾನದ ಸುರಿಮಳೆ: ಅಭಿನಂದನಾ ಸಮಾರಂಭದಲ್ಲಿ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರಿಗೆ ಸನ್ಮಾನಗಳ ಸುರಿಮಳೆಯೇ ನಡೆಯಿತು. ಕನ್ನಡಪರ ಸಂಘಟನೆಗಳು, ಉದ್ಯಮಿಗಳು, ಅಧಿಕಾರಿಗಳು, ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಮಹಿಳಾ ಕದಳಿ ವೇದಿಕೆ, ಸರ್ಕಾರಿ ನಿವೃತ್ತ ನೌಕರರ ಸಂಘ, ಪಿಡಿಒ ಒಕ್ಕೂಟ, ವಿಶ್ವಕಲ್ಯಾಣ ಚಾರಿಟೇಬಲ್ ಟ್ರಸ್ಟ್, ರಾಷ್ಟ್ರೀಯ ಬಸವದಳ, ಖಾಸಗಿ ಅನುದಾನರಹಿತ ಶಾಲಾ ಸಂಘ, ಎನ್‌ಪಿಎಸ್ ನೌಕರರ ಸಂಘ, ಕುಂಬಾರ ಸಮಾಜ ಸೇರಿ ಅನೇಕ ಸಂಘ-ಸಂಸ್ಥೆಗಳಿಂದ ಶ್ರೀಗಳನ್ನು ಸತ್ಕರಿಸಿ ಗೌರವಿಸಲಾಯಿತು.

    ಭವ್ಯ ಮೆರವಣಿಗೆ: ಅಲಂಕೃತ ಸಾರೋಟದಲ್ಲಿ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಭ್ರಮದ ಜರುಗಿತು. ನಾನಾ ಶಾಲಾ ಮಕ್ಕಳಿಂದ ಕೋಲಾಟ ಕಳೆಗಟ್ಟಿತ್ತು. ಯುವಕರು ಕುಣಿದು ಕುಪ್ಪಳಿಸಿದರು. ಜೆಸಿಬಿ ಮೂಲಕ ಹೂಮಾಲೆ ಹಾಕಿರುವುದು ಗಮನ ಸೆಳೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts