More

    ಬಲಿಷ್ಠ ಪ್ರಜಾಪ್ರಭುತ್ವಕ್ಕೆ ಮತ ಹಾಕಿ

    ಔರಾದ್: ಲೋಕಸಭೆ ಚುನಾವಣೆಗೆ ಮೇ ೭ರಂದು ಮತದಾನ ನಡೆಯಲಿದ್ದು, ಮತದಾರರು ಮತಗಟ್ಟೆ ಕೇಂದ್ರಗಳಿಗೆ ತೆರಳಿ ಹಕ್ಕು ಚಲಾಯಿಸಬೇಕು ಹಾಗೂ ಇತರರಿಗೂ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿಗಳೂ ಆದ ಜಿಲ್ಲಾ ಚುನಾವಣಾಧಿಕಾರಿ ಗೋವಿಂದರಡ್ಡಿ ಹೇಳಿದರು.

    ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ತಾಲೂಕು ಆಡಳಿತ ವತಿಯಿಂದ ಬುಧವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿ, ೧೮ ವರ್ಷ ದಾಟಿದ ಪ್ರಜೆಗಳಿಗೆ ಸಂವಿಧಾನ ಮತದಾನದ ಹಕ್ಕು ನೀಡಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬಲಗೊಳಿಸಲು ಕಡ್ಡಾಯವಾಗಿ ಮತಚಲಾಯಿಸಬೇಕು. ರಾಜಕೀಯ ಪಕ್ಷಗಳು, ಮುಖಂಡರ ಯಾವುದೇ ಆಸೆ, ಆಮಿಷ, ಒತ್ತಡಗಳಿಗೆ ಒಳಗಾಗದೆ ಮತ ಚಲಾಯಿಸಬೇಕು ಎಂದು ಹೇಳಿದರು.

    ಲೋಕಸಭೆ ಚುನಾವಣೆ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾರರಲ್ಲಿ ಅರಿವು ಮೂಡಿಸುವ ಅಭಿಯಾನ ಆರಂಭಿಸಲಾಗಿದೆ. ಜಿಲ್ಲೆಯ ಎಲ್ಲ ಅರ್ಹ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಮ್ಯಾರಾಥಾನ್, ಕ್ರಿಕೆಟ್ ಸೇರಿ ನಾನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

    ಜಿಪಂ ಸಿಇಒ ಡಾ.ಗಿರೀಶ್ ಬದೋಲೆ ಪ್ರತಿಜ್ಞಾವಿಧಿ ಬೋಧಿಸಿದರು. ಎಸ್ಪಿ ಚನ್ನಬಸವಣ್ಣ ಲಂಗೋಟಿ, ಚುನಾವಣಾಧಿಕಾರಿ ಕೆ. ಜಿಯಾವುಲ್ಲ, ಡಾ.ಗೌತಮ ಅರಳಿ, ತಹಸೀಲ್ದಾರ್ ನಾಗಯ್ಯ ಹಿರೇಮಠ, ಗ್ರೇಡ್ ೨ ತಹಸೀಲ್ದಾರ್ ಸಂಗಯ್ಯ ಸ್ವಾಮಿ, ಸಿಡಿಪಿಒ ಇಮಾಲಪ್ಪ ಡಿ.ಕೆ., ಸಿಪಿಐ ರಘುವೀರಸಿಂಗ್ ಠಾಕೂರ್, ಕಮಲನಗರ ಸಿಪಿಐ ಅಮರಪ್ಪ ಶಿವಬಲ್, ಟಿಎಚ್‌ಒ ಡಾ.ಗಾಯತ್ರಿ, ಡಾ.ಸಿದ್ಧಾರಡ್ಡಿ, ಕಂದಾಯ ನಿರೀಕ್ಷಕ ಬಾಲಾಜಿ ನೈಕವಾಡೆ, ರಾಜಕುಮಾರ ಉದಗಿರೆ, ಶಿವರಾಜ ಪಾಟೀಲ್, ಪಿಎಸ್‌ಐಗಳಾದ ಉಪೇಂದ್ರ, ರಾಹುಲ್ ಪವಾಡೆ, ಚಂದ್ರಕಾಂತ ಮೇಕಾಲೆ, ಪುಷ್ಪಾ, ವಾತ್ಸಲ್ಯ ಬಿರಾದಾರ್, ಆಶಾ ರಾಠೋಡ್ ಇತರರಿದ್ದರು.

    ಎರಡೂವರೆ ಗಂಟೆ ಕಾಲ್ನಡಿಗೆ: ಪಟ್ಟಣದ ಕನ್ನಡಾಂಬೆ ವೃತ್ತದಿಂದ ಆರಂಭವಾದ ಮತದಾನ ಜಾಥಾ ಪಪಂ ಕಚೇರಿ, ಬಸ್ ನಿಲ್ದಾಣ, ಹಳೆಯ ಬಿಇಒ ಕಚೇರಿ, ಸಾರ್ವಜನಿಕ ಆಸ್ಪತ್ರೆ, ಪೊಲೀಸ್ ಠಾಣೆ, ನ್ಯಾಯಾಲಯ, ಹಳೆಯ ಪಾಲಿಟೆಕ್ನಿಕ ಕಾಲೇಜ್ ಮೂಲಕ ಪುನಃ ತಹಸಿಲ್ ಕಚೇರಿಗೆ ಆಗಮಿಸಿ ಕೊನೆಗೊಂಡಿತು. ಜಿಲ್ಲಾಧಿಕಾರಿ, ಎಸ್ಪಿ, ಜಿಪಂ ಸಿಇಒ ಸೇರಿ ಎಲ್ಲ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಂಘ-ಸಂಸ್ಥೆಗಳ ಪ್ರಮುಖರು ಸುಮಾರು ಎರಡೂವರೆ ಗಂಟೆ ಕಾಲ್ನಡಿ ಮೂಲಕ ಮತದಾನದ ಕುರಿತು ಜಾಗೃತಿ ಮೂಡಿಸಿದರು. ದಾರಿ ಉದ್ದಕ್ಕೂ ಮತದಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗÊತಿ ಮೂಡಿಸುವ ಘೋಷಣೆ ಕೂಗಿದರು. ಜಾಥಾ ನಂತರ ಸೌಹಾರ್ದಯುತ ಕ್ರಿಕೆಟ್ ಪಂದ್ಯ ಜರುಗಿತು.

    ಕಡ್ಡಾಯವಾಗಿ ಮತಗಟ್ಟೆ ಕೇಂದ್ರಕ್ಕೆ ತೆರಳಿ ಮತದಾರರು ಹಕ್ಕು ಚಲಾಯಿಸಬೇಕು. ಕಳೆದ ಚುನಾವಣೆಗಿಂತ ಈ ಬಾರಿ ಹೆಚ್ಚು ಮತದಾನ ಆಗುವ ಮೂಲಕ ಪ್ರಜಾಪ್ರಭುತ್ವ ಸದೃಢಗೊಳಿಸಬೇಕು. ಮತದಾನ ಪ್ರಮಾಣ ಹೆಚ್ಚಿಸಲು ವಿವಿಧ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    | ಗೋವಿಂದರಡ್ಡಿ ಜಿಲ್ಲಾಧಿಕಾರಿ

    ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಜಾಗೃತಿ ಜಾಥಾ ಆಯೋಜಿಸಿ ಮತದಾನದ ಪ್ರಮಾಣ ಹೆಚ್ಚಳಕ್ಕಾಗಿ ಶ್ರಮಿಸಲಾಗುತ್ತಿದೆ. ಔರಾದ್, ಕಮಲನಗರ ತಾಲೂಕುಗಳಲ್ಲಿ ಕಳೆದ ಲೋಕಸಭೆಯಲ್ಲಿ ಕಡಿಮೆ ಮತದಾನವಾಗಿರುವ ಕಾರಣ ಈ ಭಾಗದಲ್ಲಿ ಅಧಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಮತದಾನ ಹೆಚ್ಚಳಕ್ಕಾಗಿ ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕು.
    | ಡಾ.ಗಿರೀಶ್ ಬದೋಲೆ ಜಿಪಂ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts