More

    ಅಗಲಿದ ಅಮ್ಮ, ಅಕ್ಕನಿಗೆ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಭಾವುಕ ಪತ್ರ

    ಬೆಂಗಳೂರು: ಕರೊನಾ ಸೋಂಕಿನಿಂದಾಗಿ ಇತ್ತೀಚೆಗೆ ಅಮ್ಮ ಮತ್ತು ಅಕ್ಕನನ್ನು ಕಳೆದುಕೊಂಡಿರುವ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಹಾಗೂ ಕನ್ನಡತಿ ವೇದಾ ಕೃಷ್ಣಮೂರ್ತಿ, ಅವರಿಬ್ಬರನ್ನು ನೆನೆದು ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪತ್ರ ಬರೆದಿದ್ದಾರೆ. ನನಗೆ ಇಬ್ಬರು ಅಮ್ಮಂದಿರು ಇದ್ದಾರೆ ಎಂದು ನಾನು ಯಾವಾಗಲೂ ಅಹಂನಲ್ಲಿದ್ದೆ. ಆದರೆ ಈಗ ಈ ಇಬ್ಬರು ಅಮ್ಮಂದಿರನ್ನೂ ಕಳೆದುಕೊಂಡಿರುವೆ ಎಂದು ವೇದಾ ಹೇಳಿದ್ದಾರೆ.

    ‘ನನ್ನ ಸುಂದರ ಅಮ್ಮ ಮತ್ತು ಅಕ್ಕನಿಗೆ’ ಎಂದು ಪತ್ರವನ್ನು ಆರಂಭಿಸಿರುವ 28 ವರ್ಷದ ವೇದಾ, ಕಳೆದ ಕೆಲದಿನಗಳಿಂದ ಮನೆಯಲ್ಲಿ ಎಲ್ಲರ ಹೃದಯ ಭಾರವಾಗಿದೆ. ನೀವಿಬ್ಬರೂ ನಮ್ಮ ಮನೆಯ ಆಧಾರಸ್ತಂಭವಾಗಿದ್ದಿರಿ. ನೀವಿಬ್ಬರೂ ಜತೆಗಿಲ್ಲದ ದಿನ ಬರುತ್ತದೆ ಎಂದು ನಾನೆಂದೂ ಕಲ್ಪನೆಯನ್ನೂ ಮಾಡಿರಲಿಲ್ಲ. ಇದು ನನ್ನ ಹೃದಯವನ್ನು ಭಗ್ನಗೊಳಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ಐಪಿಎಲ್​ನಲ್ಲಿ ಮಿಂಚಿದ್ದ ಯುವ ವೇಗಿಯ ತಂದೆ ಕೋವಿಡ್​ಗೆ ಬಲಿ

    ‘ಅಮ್ಮ ನೀನು ನನ್ನನ್ನು ದಿಟ್ಟ ಹುಡುಗಿಯಾಗಿ ಬೆಳೆಸಿದೆ. ಎಲ್ಲ ಪರಿಸ್ಥಿತಿಗಳನ್ನೂ ಕಾರ್ಯತಃ ಎದುರಿಸಲು ನೀನು ಕಲಿಸಿದೆ. ನನಗೆ ಗೊತ್ತಿರುವ ಅತ್ಯಂತ ಸುಂದರ, ಸಂತೋಷದ ಮತ್ತು ನಿಸ್ವಾರ್ಥ ವ್ಯಕ್ತಿ ನೀನಾಗಿದ್ದೆ. ಅಕ್ಕ ನನಗೆ ಗೊತ್ತು, ನಿನಗೆ ನಾನೇ ನೆಚ್ಚಿನ ವ್ಯಕ್ತಿಯಾಗಿದ್ದೆ. ನೀನೊಬ್ಬ ಹೋರಾಟಗಾರ್ತಿ. ಕೊನೇಕ್ಷಣದವರೆಗೂ ಹೋರಾಟ ಬಿಟ್ಟುಕೊಡದಿರುವುದಕ್ಕೆ ನೀನೇ ನನಗೆ ಸ್ಫೂರ್ತಿಯಾಗಿದ್ದೆ. ನಾನು ಮಾಡುವ ಎಲ್ಲ ಕೆಲಸದಲ್ಲೂ ಆನಂದವನ್ನು ಕಾಣುವ ವ್ಯಕ್ತಿಗಳಿಬ್ಬರು ನೀವಾಗಿದ್ದಿರಿ. ನಿಮ್ಮ ಜತೆ ಕಳೆದ ಇತ್ತೀಚೆಗಿನ ಕೆಲ ದಿನಗಳು ಅತ್ಯಂತ ನಿರಾಳವಾಗಿದ್ದವು. ನಾವೆಲ್ಲರೂ ಸಂತೋಷದಿಂದ ಇದ್ದೆವು. ಆದರೆ ಅದೇ ನಾವೆಲ್ಲರೂ ಜೊತೆಯಾಗಿ ಸಂತೋಷದಿಂದ ಇರುವ ಕೊನೇಕ್ಷಣಗಳಾಗಿದ್ದವು ಎಂಬ ಕಲ್ಪನೆಯೂ ಇರಲಿಲ್ಲ’ ಎಂದು ಭಾರತ ಪರ 48 ಏಕದಿನ ಮತ್ತು 74 ಟಿ20 ಪಂದ್ಯ ಆಡಿರುವ ಚಿಕ್ಕಮಗಳೂರು ಮೂಲದ ವೇದಾ ಹೇಳಿದ್ದಾರೆ.

    ಇತ್ತೀಚೆಗೆ ಎರಡೇ ವಾರದ ಅಂತರದಲ್ಲಿ ವೇದಾ ಅವರ ಅಮ್ಮ ಚೆಲುವಾಂಬ ದೇವಿ ಮತ್ತು ಅಕ್ಕ ವತ್ಸಲಾ ಕರೊನಾ ಸೋಂಕಿನಿಂದ ನಿಧನ ಹೊಂದಿದ್ದರು. ತಮ್ಮ ಕುಟುಂಬ ಕರೊನಾ ಸೋಂಕಿನ ವಿರುದ್ಧ ಎಲ್ಲ ನಿಯಮಗಳನ್ನೂ ಸರಿಯಾಗಿ ಪಾಲಿಸಿಕೊಂಡು ಬಂದಿದ್ದರೂ, ವೈರಸ್ ಅದನ್ನು ದಾಟಿ ಬಂದುಬಿಟ್ಟಿದೆ. ಹೀಗಾಗಿ ಎಲ್ಲರೂ ದಯವಿಟ್ಟು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿರಿ ಮತ್ತು ಎಲ್ಲ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ವೇದಾ ಹೇಳಿದ್ದಾರೆ.

    ಲಸಿಕೆ ಪಡೆದ ಕ್ರಿಕೆಟಿಗರು : ನೀವೂ ಬೇಗ ತೊಗೊಳ್ಳಿ ಎಂದ ಕೊಹ್ಲಿ, ಶರ್ಮ

    VIDEO: ಆನೆಯ ಅದ್ಭುತ ಬ್ಯಾಟಿಂಗ್ ಶೈಲಿಗೆ ಟ್ರೋಲ್ ಆದ ಕ್ರಿಕೆಟಿಗರು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts